
ಬೆಂಗಳೂರು: ಪತಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ತಬು ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪತಿ ದಿನೇಶ್ ಗುಂಡೂರಾವ್ ಅವರ ಕೆಲಸಗಳನ್ನು ಉಲ್ಲೇಖಿಸಿ ಸಾಲು ಸಾಲು ಪೋಸ್ಟ್ ಮಾಡಿರುವ ತಬು ರಾವ್, ಕೊನೆಗೂ ಜಾತಿಯೇ ಮುಖ್ಯವಾಯ್ತು ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಕೆಲವು ಸ್ನೇಹಿತರು, ಅಧಿಕಾರಿಗಳು, ವೈದ್ಯರು ಮತ್ತು ಪ್ರಮುಖವಾಗಿ ಕ್ಷೇತ್ರದ ಜನರು ದಿನೇಶ್ ಗುಂಡೂರಾವ್ ಅವರಿಗೆ ಏಕೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೇಳುತ್ತಿದ್ದಾರೆ ಎಂಬ ಮಾಹಿತಿಯನ್ನು ತಬು ಅವರು ಹಂಚಿಕೊಂಡಿದ್ದಾರೆ.
ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದಿನೇಶ್ ಗುಂಡೂರಾವ್, ಸಚಿವರಾಗಿ ಆರೋಗ್ಯ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಪಕ್ಷದ ಕೆಟ್ಟ ದಿನಗಳಲ್ಲಿಯೂ ಪಕ್ಷಕ್ಕೆ ನಿಷ್ಠರಾಗಿದ್ದರು. ಪಕ್ಷದ ಕೆಲಸಗಳನ್ನು ಮಾಡಲು ಬದ್ಧರಾಗಿರುವ ಕೆಲವೇ ಜನರಲ್ಲಿ ದಿನೇಶ್ ಸಹ ಒಬ್ಬರಾಗಿದ್ದಾರೆ. ಹಾಗಾದ್ರೆ ಸಂಪುಟದಿಂದ ಅವರನ್ನು ಕೈ ಬಿಡಲು ಕಾರಣ ಏನು? ನಿಮ್ಮಂತೆಯೇ ನನಗೂ ಸಹ ಆಶ್ಚರ್ಯವಾಗಿದೆ. ಕೊನೆಗೂ ಜಾತಿಯೇ ಲೆಕ್ಕಕ್ಕೆ ಬರುತ್ತೆಯೇ ಹೊರತು ಕೆಲಸವಲ್ಲ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಬು ರಾವ್ ಬರೆದುಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ 34 ವರ್ಷಗಳನ್ನು ಕಳೆದಿರುವ ದಿನೇಶ್ ಗುಂಡೂರಾವ್, ತುಂಬಾನೇ ಸವಾಲಿನ ಕ್ಷೇತ್ರದಲ್ಲಿ ಆರು ಬಾರಿ ಗೆದ್ದಿದ್ದಾರೆ. ಕಳೆದ ಬಾರಿ ಪಕ್ಷದ ಕೆಲಸಗಳಿಂದ ಕ್ಷೇತ್ರದಲ್ಲಿ ಗೆಲ್ಲೋದು ಬಹುತೇಕ ವಿಫಲವಾಗಿತ್ತು. ಯಾರು ಇಲ್ಲದಿದ್ದಾಗ ಯುವ ಕಾಂಗ್ರೆಸ್ ಅಧ್ಯಕ್ಷ, ಡಿಸಿಸಿ ಅಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಮೂರು ವರ್ಷಗಳ ನಂತರ ಆಹಾರ ಸಚಿವ ಸ್ಥಾನದಿಂದ ತೆಗೆದು ಹಾಕಲಾಯ್ತು. ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾಗ ರಾಜ್ಯದ ಪ್ರವಾಸ ಮಾಡಿದರು. ನಂತರ ತಮಿಳುನಾಡು, ಪಾಂಡಿಚೇರಿ ಮತ್ತು ಗೋವಾ ರಾಜ್ಯಗಳಿಗೆ ಉಸ್ತುವಾರಿಯನ್ನಾಗಿ ಮಾಡಲಾಯ್ತು. ಆರೋಗ್ಯ ಸಚಿವರಾಗಿ ಮತ್ತು ದಕ್ಷಿಣ ಕನ್ನಡ ಉಸ್ತುವಾರಿಯಾಗಿಯೂ ದಿನೇಶ್ ಗುಂಡೂರಾವ್ ಉತ್ತಮವಾಗಿ ಕೆಲಸ ಮಾಡಿದ್ದಾರೆ.
ಕಾರಣವಿಲ್ಲದೇ ಸಂಪುಟದಿಂದ ಹೊರಗಿಟ್ಟಿರೋದುಮ ನಾವು ಹುಡುಕುತ್ತಿರುವ ಉತ್ತರವೇ? ಅಥವಾ ಪಕ್ಷ ಈ ಕೆಲಸಗಳಿಗಿಂತ ಹೆಚ್ಚು ನಿರೀಕ್ಷೆ ಮಾಡುತ್ತಿದೆಯಾ? ಕೆಲಸ ಮಾಡಿದ ನಂತರವೂ ನಮಗೆ ಯಾವುದೇ ಉತ್ತರಗಳು ಸಿಗದಿರೋದು ನೆಗೆಪಾಟಲಿಗೆ ಈಡಾಗುತ್ತಿದೆ. ಇಲ್ಲಿಯವರೆಗೆ 56 ವರ್ಷದವರು ಚಿಕ್ಕವರೇ ಅಥವಾ ಹಿರಿಯರೇ ಎಂಬುವುದು ಗೊತ್ತಾಗುತ್ತಿಲ್ಲವೇ ಎಂದು ತಬು ಪ್ರಶ್ನೆ ಮಾಡಿದ್ದಾರೆ.
ನನ್ನ ರಾಜಕೀಯ ಜೀವನದುದ್ದಕ್ಕೂ ಕರ್ನಾಟಕದ ಜನರ ಸೇವೆ ಮಾಡುವ ಅವಕಾಶ ದೊರೆತಿರುವುದಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಶಾಸಕನಾಗಿ ಹಾಗೂ ಸಚಿವನಾಗಿ ಕಾರ್ಯನಿರ್ವಹಿಸುತ್ತಾ, ಜನರಜೀವನದಲ್ಲಿ ಬದಲಾವಣೆ ತರಬಹುದಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆರು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದು ಜನರು ನನ್ನ ಮೇಲೆ ನಿರಂತರವಾಗಿ ತೋರಿದ ಅಪಾರ ಪ್ರೀತಿ ಮತ್ತು ವಿಶ್ವಾಸದಿಂದ ಸಾಧ್ಯವಾಗಿದೆ. ಆ ವಿಶ್ವಾಸವೇ ನನಗೆ ಎಲ್ಲಕ್ಕಿಂತ ಅಮೂಲ್ಯವಾಗಿದೆ.
ಕಾಂಗ್ರೆಸ್ ಪಕ್ಷದ ಮೇಲಿನ ನನ್ನ ಬದ್ಧತೆ ಮತ್ತು ನನ್ನ ಕ್ಷೇತ್ರದ ಜನರ ಮೇಲಿನ ನನ್ನ ನಿಷ್ಠೆ ಎಂದಿಗೂ ಅಚಲವಾಗಿಯೇ ಉಳಿದಿದೆ. ಯುವ ಕಾಂಗ್ರೆಸ್‌ನಿಂದ ಆರಂಭಿಸಿ, ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ ಹಾಗೂ ಎಐಸಿಸಿ ವರೆಗೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷಕ್ಕೆ ಅಚಲ ನಿಷ್ಠೆ ತೋರಿದ್ದೇನೆ. ಸೈದ್ಧಾಂತಿಕವಾಗಿ ಸ್ಪಷ್ಟ ನಿಲುವು ಹೊಂದಿದ್ದೇನೆ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟ ಜನರಿಗಾಗಿ ನನ್ನ ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದೇನೆ. ಅದೇ ನನಗೆ ಅತ್ಯಂತ ಮುಖ್ಯವಾದ ಸಂಗತಿ.
ಉತ್ತಮ ಆಡಳಿತ, ಉತ್ತಮ ಮೌಲ್ಯಗಳು ಮತ್ತು ಸಾರ್ವಜನಿಕ ಸೇವೆಯೇ ನನ್ನನ್ನು ಸದಾ ಮುನ್ನಡೆಸುವ ಶಕ್ತಿ. ನಾನು ಇದುವರೆಗೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಮುಂದೆಯೂ ಅದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ.
ಯಾವುದೇ ಕಾರಣ ತಿಳಿಸದ್ದಕ್ಕೆ ಬೇಸರ ಅಂದ್ರು
ರಾಜ್ಯ ಮತ್ತು ಪಕ್ಷಕ್ಕೆ ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರವೂ, ಈ ಬಾರಿ ಸಚಿವ ಸಂಪುಟದಲ್ಲಿ ನನಗೆ ಅವಕಾಶ ನೀಡದಿರುವುದು ನನಗೆ ತೀವ್ರ ನಿರಾಶೆ ತಂದಿದೆ. ನನ್ನನ್ನು ಸಚಿವ ಸಂಪುಟದಿಂದ ಹೊರಗಿಡಲು ಯಾವುದೇ ಕಾರಣವನ್ನು ತಿಳಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಇನ್ನಷ್ಟು ಬೇಸರ ತಂದಿದೆ.
ಆದಾಗ್ಯೂ, ನನ್ನ ಕ್ಷೇತ್ರದ ಜನರ ಸೇವೆ ಹಾಗೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಇದೇ ಬದ್ಧತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯೊಂದಿಗೆ ಮುಂದೆಯೂ ಕೆಲಸ ಮಾಡುತ್ತೇನೆ.
ಇದನ್ನೂ ಓದಿ: ಪಕ್ಷ, ಭವಿಷ್ಯ ಮುಖ್ಯ ಅಂದುಕೊಂಡವರು ಇರಲಿ, ರಾಜೀನಾಮೆ ನೀಡಿದರೆ 5 ನಿಮಿಷದಲ್ಲೇ ಅಂಗೀಕಾರ: ಸಿಎಂ ಖಡಕ್ ವಾರ್ನಿಂಗ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ