
ಮಂಜುನಾಥ ಕೆ.ಎಂ.
ಬಳ್ಳಾರಿ (ಜುಲೈ.29): ಯೂರಿಯಾಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಅಂಗಡಿ ಮಾಲೀಕರು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದ್ದು, ಯೂರಿಯಾ ಸಿಗದೆ ರೈತರು ಒದ್ದಾಟ ಅನುಭವಿಸುವಂತಾಗಿದೆ.
ರಾಜ್ಯದಲ್ಲಿ ಯೂರಿಯಾ ಅಭಾವ ಸೃಷ್ಟಿಯಾಗಿದ್ದರೂ ಬಳ್ಳಾರಿ ಜಿಲ್ಲೆಯಲ್ಲಿ ಅಗತ್ಯದಷ್ಟು ಪೂರೈಕೆಯಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಟಿಗೆ ಮುಂದಾಗಿದ್ದಾರೆ. ಈ ಮೂಲಕ ರೈತರಿಂದ ನಿಗದಿತ ದರಕ್ಕಿಂತ ಎರಡು ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೈತರು ಆಪಾದಿಸುತ್ತಿದ್ದಾರೆ.
ಯೂರಿಯಾ ಜತೆಗೆ ಇತರೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಪ್ರೇರೇಪಿಸಬೇಕು ಎಂಬ ಕೇಂದ್ರ ಸರ್ಕಾರದ ಸೂಚನೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ಅಂಗಡಿ ಮಾಲೀಕರು ಯೂರಿಯಾವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಏತನ್ಮಧ್ಯೆ ಕೇಂದ್ರ ಸರ್ಕಾರದ ಸಲಹೆಯನ್ನು ದುರಪಯೋಗ ಮಾಡಿಕೊಳ್ಳಬಾರದು. ಯೂರಿಯಾ ಜೊತೆ ಇತರೆ ಉತ್ಪನ್ನಗಳ ಖರೀದಿಗೆ ಒತ್ತಾಯ ಮಾಡುವಂತಿಲ್ಲ ರೈತರನ್ನು ಒತ್ತಾಯಿಸುವಂತಿಲ್ಲ ಎಂದು ಬರೀ ಬಾಯಿ ಮಾತಿನಲ್ಲಿ ಹೇಳುವ ಕೃಷಿ ಇಲಾಖೆ ಅಧಿಕಾರಿಗಳು, ಈಗಾಗಲೇ ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ ಮಾಡುವವರ ವಿರುದ್ಧ ಕೈಗೊಂಡಿರುವ ಕ್ರಮ ಏನು? ಎಂಬುದರ ಬಗ್ಗೆ ಸ್ಪಷ್ಟ ಉತ್ತರ ನೀಡುತ್ತಿಲ್ಲ.
ಈ ಕುರಿತು ಕನ್ನಡಪ್ರಭದ ಜೊತೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ್, ನಮ್ಮಲ್ಲಿಯೇ ಜಿಲ್ಲಾ ಮಟ್ಟದಲ್ಲಿ ವಿಜಿಲೆನ್ಸ್ (ಜಾಗೃತದಳ)ಇದೆ. ಸಹಾಯಕ ಕೃಷಿ ಅಧಿಕಾರಿಗಳು ವಿಜಿಲಿನ್ಸ್ ನಲ್ಲಿದ್ದು ಅನೇಕ ಬಾರಿ ತಪಾಸಣೆ ಮಾಡಿದ್ದಾರೆ. ಆದರೆ, ಈವರೆಗೆ ಎಲ್ಲೂ ಸಹ ಯೂರಿಯಾವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಿಲ್ಲ ಎಂದು ಹೇಳುತ್ತಾರೆ.
ರೈತರು ದುಬಾರಿ ಬೆಲೆಯ ಯೂರಿಯಾ ಬಗ್ಗೆ ಧ್ವನಿ ಎತ್ತುತ್ತಿರುವುದು ಏಕೆ ? ರೈತರಿಗೆ ಸಮರ್ಪಕವಾಗಿ ನಿಗದಿತ ದರಕ್ಕೆ ಯೂರಿಯಾ ಸಿಗುವಂತಿದ್ದರೆ, ರೈತರು ಮಾಧ್ಯಮಗಳ ಮುಂದೆ ಬಂದು ಅಳಲು ತೋಡಿಕೊಳ್ಳುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸೋಮಸುಂದರ್, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿಯನ್ನು ಸಹ ಖರೀದಿಸುವಂತೆ ಕೇಂದ್ರ ಸರ್ಕಾರ ಕಂಪನಿಗಳಿಗೆ ಸೂಚನೆ ನೀಡಿದೆ.
ಹೀಗಾಗಿಯೇ ಕಂಪನಿಯವರು, ಡೀಲರ್‌ಗಳಿಗೆ, ಡೀಲರ್‌ಗಳು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಆದಾಗ್ಯೂ ಎಲ್ಲೂ ಒತ್ತಾಯದಿಂದ ಯೂರಿಯಾ ಜತೆಗೆ ಬೇರೆ ಉತ್ಪನ್ನಗಳನ್ನು ಲಿಂಕ್ ಮಾಡುವಂತಿಲ್ಲ ಎನ್ನುತ್ತಿದ್ದಾರಾದರೂ ಅಂಗಡಿ ಮಾಲೀಕರ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರ ಅಂಗಡಿ ಮಾಲೀಕರ ಜೊತೆ ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ