
ಕಲಬುರಗಿ (ಜುಲೈ.29): ಇಲ್ಲಿನ ಶ್ರೀ ಶರಣಬಸವೇಶ್ವರರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸಪ್ಪ ಅಪ್ಪ (91) ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಶ್ವಾಸಕೋಶದಲ್ಲಿನ ಸೋಂಕಿನಿಂದಾಗಿ ಡಾ. ಅಪ್ಪ ಅವರನ್ನು 2 ದಿನಗಳ ಹಿಂದಷ್ಟೇ ಇಲ್ಲಿನ ಚಿರಾಯು ಆಸ್ಪತ್ರೆ ಐಸಿಯುಗೆ ದಾಖಲಿಸಲಾಗಿತ್ತು.
ಕಳೆದ 2 ದಿನಗಳಿಗಿಂತ ಸೋಮವಾರ ಅಪ್ಪಾಜಿ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ ಎಂದು ಮಹಾ ದಾಸೋಹ ಪೀಠದ ಮೂಲಗಳು ಹೇಳಿವೆ.
ಕಲಬುರಗಿ ನಗರದ ಚಿರಾಯು ಆಸ್ಪತ್ರೆಯಲ್ಲಿ ಡಾ ಶರಣಬಸಪ್ಪ ಅಪ್ಪಾ ಅವರಿಗೆ ಚಿಕಿತ್ಸೆ ಮುಂದುವರಿದಿದೆ. 91 ವರ್ಷ ವಯಸ್ಸಿನ ಡಾ.ಶರಣಬಸವಪ್ಪ ಅಪ್ಪಾ ಅವರು ಶ್ವಾಸಕೋಶ ಸೋಂಕೆಂದು ಆಸ್ಪತ್ರೆಗೆ ದಾಖಲಾದಾಗ ಭಕ್ತರಲ್ಲಿ ಆತಂಕ ಮನೆ ಮಾಡಿತ್ತು. ಅಪ್ಪಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲವೆಂದು ದಾಸೋಹ ಪೀಠದ ಮೂಲಗಳು ಸ್ಪಷ್ಟಪಡಿಸಿವೆ.
ಕಲಬುರಗಿ ಶರಣಬಸವನ ಹಾಡಿಗೆ ಅಪ್ಪಾಜಿ ಆನಂದಭಾಷ್ಪ
ಶ್ರಾವಣ ಮಾಸದ ಸೋಮವಾರದ ಬೆಳಗಿನ ಜಾವ ಚಿರಾಯು ಆಸ್ಪತ್ರೆಗೆ ಭೇಟಿ ನೀಡಿದ್ದ ಮಹಾ ದಾಸೋಹ ಪೀಠದ 9 ನೇ ಪೀಠಾಧಿಪತಿ, ಚಿ. ದೊಡ್ಡಪ್ಪ ಅಪ್ಪಾಜಿ ಕಲಬುರಗಿ, ಶರಣಬಸವೇಶ್ವರರ ಕುರಿತಾದ ಜನಪದ ಗೀತೆಯನ್ನ ಅಪ್ಪಾಜಿ ಮುಂದೆಯೇ ಪ್ರಸ್ತುತ ಪಡಿಸಿದಾಗ ಅದನ್ನು ಕೇಳಿ ಅವರು ಬಲು ಆನಂದದಿಂದ ತಮ್ಮ ಪುತ್ರನ ತಲೆ ಮೇಲೆ ಕೈ ಸವರುತ್ತ ಹರಸಿದರು.
ತಮ್ಮ ಸಹೋದರಿ ಕೋಮಲ, ಭವಾನಿ ಹಾಗೂ ತಮ್ಮ ತಾಯಿ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿಯವರೊಂದಿಗೆ ಚಿರಾಯು ಆಸ್ಪತ್ರೆ ಐಸಿಯುಗೆ ಆಗಮಿಸಿದ್ದ ಚಿ. ದೊಡ್ಡಪ್ಪ ಅಪ್ಪ ಅವರು ತಂದೆಯ ಬೆಡ್ ಬಳಿ ನಿಂತು ತಮ್ಮ ಬಾಲ ಕಂಠ, ತೊದಲು ನುಡಿಯಿಂದ ಕಲಬುರಗಿ ಶರಣಬಸವೇಶ್ವರರನ್ನು ಕೊಂಡಾಡುವ ಜನಪದರ ಗೀತೆಯನ್ನು ಹೇಳಿದಾಗ ಅಲ್ಲಿ ಭಾವುಕ ಕ್ಷಣ ಸೃಷ್ಟಿಯಾಗಿತ್ತು.
ಹಾಡು ಕೇಳುತ್ತಿದ್ದಂತೆಯೇ ಮತ್ತಷ್ಟೂ ಚುರುಕಾದ ಡಾ. ಅಪ್ಪಾಜಿ ಕೈ ಮುಂದೆ ಮಾಡಿ ಚಿ. ದೊಡ್ಡಪ್ಪ ಅಪ್ಪಾ ಅವರಿಗೆ ತಮ್ಮ ಮಡಿಲಲ್ಲಿ ಹಿಡಿದು ಮುದ್ದಿಸಿದರು. ದೊಡ್ಡಪ್ಪ ಅವರು ತಂದೆಗೆ ಮುದ್ದು ಕೊಟ್ಟು ಇಡೀ ಹಾಡನ್ನು ತಮ್ಮತೊದಲು ನುಡಿಯಲ್ಲಿ ಬಾಲ ಬಾಷೆಯಲ್ಲಿ ಹೇಳಿ ಮುಗಿಸಿದರು.
ಅಪ್ಪಾಜಿ ದಾಖಲಾಗಿರುವ ಆಸ್ಪತ್ರೆಯ ಐಸಿಯೂ ಬೆಡ್ ಬಳಿ ನಿಂತು ಚಿ. ದೊಡ್ಡಪ್ಪ ಅಪ್ಪ ಅವರು ಕಲಬುರಗಿ ಶರಣಬಸವೇಶ್ವರರ ಕೀರ್ತಿ ಸಾರುವ ಹಾಡನ್ನು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ