
ಬೆಂಗಳೂರು (ಜುಲೈ.29): ದಲಿತ ಸಿಎಂ ಕುರಿತ ಚರ್ಚೆ ಆರಂಭವಾಗಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟವಾಗಿ ಈ ಬಗ್ಗೆ ಮಾತನಾಡಬಾರದೆಂದು ಹೇಳಿದ್ದಾರೆ. ಸಿದ್ದರಾಮಯ್ಯನವರನ್ನು 5 ವರ್ಷಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಅವರೇ ಮುಂದುವರಿಯಲ್ಲಿದ್ದಾರೆ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಂಡರೆ ಮಾತ್ರ ಸಿಎಂ ಬದಲಾವಣೆ ಚರ್ಚೆ ಸಾಧ್ಯ. ಆದರೆ ಈಗ ಅಂತಹ ಸಂದರ್ಭವೂ ಇಲ್ಲ, ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ, ಬದಲಾವಣೆ ಚರ್ಚೆಯೂ ಇಲ್ಲ," ಎಂದು ರಾಯರೆಡ್ಡಿ ತಿಳಿಸಿದ್ದಾರೆ.
ಯಾರು ಬೇಕಾದ್ರೂ ಸಿಎಂ ಆಗಬಹುದು:
ಕೆಲವರು ವೈಯಕ್ತಿಕವಾಗಿ ಚರ್ಚೆ ಮಾಡಬಹುದು ಎಂದು ಒಪ್ಪಿಕೊಂಡ ಅವರು, ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ಆದರೆ ಈಗ ಆ ಸಂದರ್ಭ ಬಂದಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡಿದ ರಾಯರೆಡ್ಡಿ, ಖರ್ಗೆ 1994-99ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಮುಖ್ಯಮಂತ್ರಿಯಾಗಲು ಅರ್ಹರಾಗಿದ್ದರು, ಆದರೆ ಆಗ ತಪ್ಪಿತು ಎಂಬ ನೋವು ಅವರಿಗಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾಗಬೇಕೆಂದು ನಾನೇ ಬಯಸಿದವನು. ಸಮಯ ಬಂದರೆ ಅವರು ಪ್ರಧಾನಮಂತ್ರಿಯೂ ಆಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಮೋದಿಯವರ 75 ವರ್ಷದ ನಿವೃತ್ತಿ ನಿಯಮದ ಬಗ್ಗೆ ಉಲ್ಲೇಖಿಸಿದ ಅವರು, ಸೆಪ್ಟೆಂಬರ್‌ನಲ್ಲಿ ಮೋದಿಯವರಿಗೆ 75 ವರ್ಷ ತುಂಬಲಿದೆ. ಆಗ ಕಾಂಗ್ರೆಸ್‌ಗೆ ಅವಕಾಶ ಸಿಗಬಹುದು. ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ನಮ್ಮ ಜೊತೆ ಬಂದರೆ ಸರ್ಕಾರ ರಚನೆ ಸಾಧ್ಯ. ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಮಂತ್ರಿ ಅವಕಾಶ ಸಿಗಬಹುದು ಎಂದು ರಾಯರೆಡ್ಡಿ ಭವಿಷ್ಯ ನುಡಿದರು.
ಗಾಂಧಿ ಕುಟುಂಬ ತ್ಯಾಗ ಮಾಡಿದ ಉದಾಹರಣೆ ಇದೆ. ರಾಜಕಾರಣದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಿದ್ದರಾಮಯ್ಯನವರನ್ನು 5 ವರ್ಷಕ್ಕೆ ಆಯ್ಕೆ ಮಾಡಲಾಗಿದೆ, ಈಗ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ