
ಶಶಿಕುಮಾರ ಪತಂಗೆ
ಅಳ್ನಾವರ: "ಸಾಹೇಬ್ರ ನಮ್ ಮಕ್ಕಳ ಕೈಯಾಗ ಜೀವಾ ಹಿಡಕೊಂಡ್ ಸಾಲ್ಯಾಗ ಕುಂಡ್ರತಾವ್ರಿ... ಅವರಿಗೆ ಹೆಚ್ಚು ಕಡಿಮಿ ಆದರ ಯಾರ ಜವಾಬ್ದಾರ್ರಿ..? "
ತಾಲೂಕಿನ ಕುಂಬಾರಕೊಪ್ಪ ಗ್ರಾಮದ ಉರ್ದು ಶಾಲೆಯ ಪಾಲಕ ಆರ್ತನಾದವಿದು.
ಕಳೆದ ಎರಡು ವರ್ಷದ ಹಿಂದೆಯೇ ಇಲ್ಲಿನ ಸರ್ಕಾರಿ ಉರ್ದು ಶಾಲೆಯು ಶಿಥಿಲಾವಸ್ಥೆಯಲ್ಲಿರುವ ಕಾರಣ ತರಗತಿಯನ್ನು ನಡೆಸಲು ಯೋಗ್ಯವಾಗಿಲ್ಲವೆಂದು ಎಂಜನೀಯರೇ ಕಟ್ಟಡ ತೆರವುಗೊಳಿಸಲು ಸೂಚಿಸಿದ್ದಾರೆ. ಆದರೆ, ಈ ಶಾಲೆಯ ದುರಾದೃಷ್ಟವೂ ಅಧಿಕಾರಿಗಳ ನಿರ್ಲಕ್ಷವೋ ಶಾಲೆ ಮಾತ್ರ ತೆರವುಗೊಳ್ಳದೆ ಅದೇ ಹಾಳಾದ ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ.
ಶಿಕ್ಷಕರು ಮಾತ್ರ ಭಯದಲ್ಲಿಯೇ ವಿದ್ಯಾರ್ಥಿಗಳನ್ನು ಶಾಲೆಯ ಮುಂಭಾಗದಲ್ಲಿ ಕೂಡ್ರಿಸಿ ಪಾಠ ಮಾಡುತ್ತಿದ್ದಾರೆ. ಜೋರು ಮಳೆ, ಗಾಳಿ ಬೀಸಿದರೆ ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ಅಂಗಳಕ್ಕೆ ಬಂದು ನಿಲ್ಲುವ ಸನ್ನಿವೇಶಗಳು ಇಲ್ಲಿ ನಿತ್ಯ ನಡೆಯುತ್ತಿವೆ.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಈ ಶಾಲೆಯ ನಿರ್ಮಾಣಕ್ಕಾಗಿ ಗ್ರಾಮದಲ್ಲಿ ಸರ್ಕಾರಿ ಜಾಗ ಸಿಗದ ಕಾರಣ ಗ್ರಾಮಸ್ಥರು ಹಣ ಸಂಗ್ರಹಿಸಿ ಜಾಗ ಖರೀದಿಸಿ ಸರ್ಕಾರದಿಂದ ಶಾಲೆ ತೆರೆಯಲು ಸಹಕರಿಸಿದ್ದಾರೆ.
ಕುಂಬಾರಕೊಪ್ಪ ಗ್ರಾಮದಲ್ಲಿನ ಈ ಉರ್ದು ಶಾಲೆಯ ಗೋಡೆಗಳು ಬೀಳುವ ಹಂತದಲ್ಲಿವೆ. ಈಗಾಗಲೆ ತಳಪಾಯವು ಕುಸಿದಿದ್ದು ಗ್ರಾಮಸ್ಥರೇ ಅದಕ್ಕೆ ಮಣ್ಣು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ಚಾವಣಿ ಬೀಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರೇ ಹಣ ಕೂಡಿಸಿ ಕಾಲಮ್ಮಿನ ಕಂಬ ಹಾಕಿದ್ದಾರೆ.
ಇಷ್ಟೆಲ್ಲ ಸಮಸ್ಯೆಗಳ ಕುರಿತು ಗ್ರಾಮಸ್ಥರು ಸಚಿವರು, ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದರೂ ಸಹ ಇಂದಿಗೂ ಸಮಸ್ಯೆಗೆ ಮಾತ್ರ ಪರಿಹಾರ ದೊರೆತಿಲ್ಲ. ಇನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಂತೂ ಇತ್ತಕಡೆ ತಿರುಗಿಯೂ ನೋಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಶಾಲೆಯಲ್ಲಿ 1ರಿಂದ 5ರ ವರೆಗೆ ತರಗತಿಗಳು ನಡೆಯುತ್ತಿವೆ. ಈ ಹಿಂದೆ 25 ರಿಂದ 30 ವಿದ್ಯಾರ್ಥಿಗಳಿದ್ದು ಮೂವರು ಶಿಕ್ಷಕರಿದ್ದರು. ಆದರೆ, ಈ ಶಾಲೆಯ ಪರಿಸ್ಥಿತಿ ಕಂಡ ಮೇಲೆ ಇಲ್ಲಿನ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಈಗ ಕೇವಲ 10 ಮಕ್ಕಳು ಕಲಿಯುತ್ತಿದ್ದು, ಬಂದ್ ಆಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ಆರೋಪಿಸುತ್ತಾರೆ ಮೆಹಬೂಬ ಕಲಕೇರಿ.
ಶೌಚಾಲವೂ ಇಲ್ಲ:
ಇಲ್ಲಿನ ಶಿಕ್ಷಕರು ಶೌಚಕ್ಕಾಗಿ ಶಾಲೆಯ ಅಕ್ಕಪಕ್ಕದಲ್ಲಿರುವ ಮನೆಗಳನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಶೌಚಾಲಯ ಕಟ್ಟಲು ಪ್ರಾರಂಭಿಸಿದ್ದರು. ಆದರೆ, ಅದು ಇಂದಿಗೂ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ.
ಈ ಉರ್ದು ಶಾಲೆ ಕಟ್ಟಡ ತೆರುವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಆದೇಶ ಬಂದರೂ ಸಹ ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಸಂಬಂಧಿಸಿದ ಸಚಿವರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ನಮ್ಮ ಧ್ವನಿಗೆ ಸ್ಪಂದಿಸುತ್ತಿಲ್ಲ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಬೂಬಸುಭಾನಿ ನಿಚ್ಚನಕಿ ಹೇಳಿದರು.
ನಮ್ಮ ಉರ್ದು ಶಿಕ್ಷಣವನ್ನು ನಿರ್ಮೂಲನೆ ಮಾಡಬೇಕು ಎನ್ನುವ ಉದ್ದೇಶದಿಂದಲೆ ಈ ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಶಾಲೆಯ ಉಳಿವಿಗಾಗಿ ಗ್ರಾಮಸ್ಥರೆಲ್ಲರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರಾದ ಸುಭಾನಿ ಅಮಿನಬಾವಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ