ರೈತನ ಮಗಳು, ಕಂಡಕ್ಟರ್‌ ಪುತ್ರ ಐಎಎಸ್‌ ಪಾಸ್‌: ರಾಜ್ಯದ 35 ಮಂದಿ ತೇರ್ಗಡೆ

By Kannadaprabha NewsFirst Published May 24, 2023, 9:30 AM IST
Highlights

ಕೇಂದ್ರ ಲೋಕ ಸೇವಾ ಆಯೋಗದ ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆಗಳ 2022ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 35ಕ್ಕೂ ಅಧಿಕ ಅಭ್ಯರ್ಥಿಗಳು ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. 

ಬೆಂಗಳೂರು (ಮೇ 24, 2023): ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್‌ಸಿ) ಬಹುನಿರೀಕ್ಷಿತ ನಾಗರಿಕ ಸೇವಾ ಪರೀಕ್ಷೆಗಳ 2022ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ 35ಕ್ಕೂ ಅಧಿಕ ಅಭ್ಯರ್ಥಿಗಳು ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. 

4ನೇ ಪ್ರಯತ್ನದಲ್ಲಿ ಸೌರಭ್‌ಗೆ 198ನೇ ರ‍್ಯಾಂಕ್‌
ಧಾರವಾಡ: ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿದ್ದುಕೊಂಡೇ ಯುಪಿಎಸ್ಸಿ ಪರೀಕ್ಷೆಯಲ್ಲಿ ನಾಲ್ಕನೇ ಪ್ರಯತ್ನದಲ್ಲಿ ಧಾರವಾಡದ ಸೌರಭ್‌ ನರೇಂದ್ರ ಅವರು 198ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.

ಇದನ್ನು ಓದಿ: ಯುಪಿಎಸ್ಸಿಯಲ್ಲಿ ರಾಜ್ಯದ 35 ಮಂದಿ ಪಾಸ್‌: ದೇಶಕ್ಕೆ 55ನೇ ರ‍್ಯಾಂಕ್‌ ಪಡೆದ ಭಾವನಾ ರಾಜ್ಯಕ್ಕೆ ನಂ. 1

ಚೆನ್ನಬಸವೇಶ್ವರ ನಗರದ ನಿವಾಸಿಯಾಗಿರುವ ಸೌರಭ್‌ ಅವರ ತಂದೆ ಅಮೃತ್‌ ಅವರು ಇನ್ಸುರೆನ್ಸ್‌ ಕನ್ಸಲ್ಟಂಟ್‌ ಆಗಿದ್ದು, ತಾಯಿ ಸುನೀತಾ ಗೃಹಿಣಿ. ಇಲ್ಲಿನ ಬಾಸೆಲ್‌ ಮಿಶನ್‌ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ-ಪ್ರೌಢ ಶಿಕ್ಷಣ ಮುಗಿಸಿರುವ ಸೌರಭ್‌, ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಪಿಯುಸಿ ಹಾಗೂ ಮೈಸೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಬಿ.ಇ. ಮೆಕ್ಯಾನಿಕಲ್‌ ಎಂಜಿನಿಯರ್‌ ಮುಗಿಸಿ ದೆಹಲಿಯ ವಾಜಿರಾಮ ತರಬೇತಿ ಸಂಸ್ಥೆಯಲ್ಲಿ ಯುಪಿಎಸ್ಸಿ ತರಬೇತಿ ಪಡೆದಿದ್ದರು. ಈ ಹಿಂದೆ ಅವರು ಮೂರು ಬಾರಿ ಪರೀಕ್ಷೆ ಬರೆದಿದ್ದು, ಕಡಿಮೆ ರ‍್ಯಾಂಕ್‌ ಬಂದಿದ್ದರಿಂದ ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಸದ್ಯ ಪುದುಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೌರಭ್‌ ಅವರು ನಾಲ್ಕನೇ ಪ್ರಯತ್ನದಲ್ಲಿ ಉತ್ತಮ ರ‍್ಯಾಂಕ್‌ ಪಡೆದಿದ್ದಾರೆ.

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಳಗಾವಿಯ ಶೃತಿ ಯರಗಟ್ಟಿ; ವಿಜಯಪುರ ತಾಂಡಾ ಹುಡುಗನಿಂದ್ಲೂ ಸಾಧನೆ

ಕೆಲಸ ಬಿಟ್ಟು ಐಪಿಎಸ್‌ ಪಾಸಾದ ರೈತನ ಮಗಳು
ಚನ್ನಪಟ್ಟಣ: ಈ ಬಾರಿಯ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಬೊಂಬೆನಾಡಿನ ರೈತ ಕುಟುಂಬದ ದಾಮಿನಿ ಎಂ.ದಾಸ್‌ 345ನೇ ರ‍್ಯಾಂಕ್‌ ಪಡೆಯುವ ಮೂಲಕ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ತಾಲೂಕಿನ ಮಳೂರುಪಟ್ಟಣದ ರೈತ ಮೋಹನ್‌ ದಾಸ್‌ ಪುತ್ರಿ ದಾಮಿನಿ ಎಂ.ದಾಸ್‌ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 345ನೇ ರ‍್ಯಾಂಕ್‌ ಪಡೆಯುವ ಮೂಲಕ ಜಿಲ್ಲೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ದಾಮಿನಿ ಮೂಲತಃ ಮಳೂರು ಪಟ್ಟಣದವರಾದರೂ ಓದಿದ್ದೆಲ್ಲ ಬೆಂಗಳೂರಿನಲ್ಲಿ. ತಮ್ಮ ದೊಡ್ಡಮ್ಮನ ಮನೆಯಲ್ಲಿದ್ದು ವಿದ್ಯಾಭ್ಯಾಸ ಮಾಡಿದರು. ಬೆಂಗಳೂರಿನ ಪ್ರೆಸಿಡೆನ್ಸಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಬಸವೇಶ್ವರ ನಗರದ ವಿದ್ಯಾವರ್ಧಕ ಕಾಲೇಜಿನಲ್ಲಿ ಪಿಯುಸಿ, ಬಿಐಟಿ ಕಾಲೇಜಿನಲ್ಲಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿಯರಿಂಗ್‌ ಮಾಡಿದರು. ಬಳಿಕ ಒಂದು ವರ್ಷ ಮೈಕ್ರೋ ಫೋಕಸ್‌ ಸಾಫ್ಟವೇರ್‌ ಕಂಪನಿಯಲ್ಲಿ ಕೆಲಸ ಮಾಡಿದ ಅವರು, ಕೆಲಸಕ್ಕೆ ರಾಜೀನಾಮೆ ಕೊಟ್ಟು, ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ನಡೆಸಿದರು.

ಇದನ್ನೂ ಓದಿ: UPSC Civil Services: ಯುಪಿಎಸ್‌ಸಿ ಫಲಿತಾಂಶ ಪ್ರಕಟ: ಟಾಪ್‌ 4 ರ‍್ಯಾಂಕ್‌ ಮಹಿಳೆಯರ ಪಾಲು

ಯುಪಿಎಸ್‌ಸಿ ಪರೀಕ್ಷೆ ಮೊದಲ ಯತ್ನದಲ್ಲಿ ಪ್ರಿಲಿಮ್ಸ್‌ನಲ್ಲಿ ಪಾಸಾದರಾದರೂ ನಂತರದ ಮೇನ್ಸ್‌ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಇದರಿಂದ ಎದೆಗುಂದದ ಅವರು, ತಮ್ಮ ಪ್ರಯತ್ನವನ್ನು ಗಟ್ಟಿಗೊಳಿಸಿದರು. ಎರಡನೇ ಯತ್ನದಲ್ಲಿ 345ನೇ ರ‍್ಯಾಂಕ್‌ ಪಡೆದು ತೇರ್ಗಡೆಯಾಗಿದ್ದಾರೆ.

ಕೇಬಲ್‌ ಟಿವಿ ನೌಕರನ ಪುತ್ರಿ ಕೋಚಿಂಗ್‌ ಪಡೆಯದೆ ಸಾಧನೆ!
ಮೈಸೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ 2022ರ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಮೈಸೂರಿನ ಕುವೆಂಪುನಗರದ ಎಂ. ಪೂಜಾ ಅವರು 390ನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಯಾವುದೇ ಕೋಚಿಂಗ್‌ ಸೆಂಟರ್‌ಗೆ ಹೋಗದೆ ಅವರು ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: 15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್‌ ಹಾಕಿದ ಉದ್ಯೋಗಿ! 

ಸ್ಥಳೀಯ ಯಶ್‌ಟೆಲ್‌ ಕೇಬಲ್‌ ಚಾನೆಲ್‌ನ ನೌಕರ ಮುಕುಂದ ರಾವ್‌ ಬೇದ್ರೆ ಹಾಗೂ ಎಂ. ಪದ್ಮಾವತಿ ಅವರ ಪುತ್ರಿಯಾದ ಪೂಜಾ ಅವರು, ಯಾವುದೇ ರೀತಿಯ ತರಬೇತಿ ಪಡೆಯದೇ ದೇಶದ ಅತ್ಯುನ್ನತ ನಾಗರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ. ಕಳೆದ ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದ ಪೂಜಾ ಅವರು, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಇದೀಗ ಎರಡನೇ ಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಪೂಜಾ ಅವರು ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1 ರಿಂದ 10ನೇ ತರಗತಿ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯುಸಿ, ಗೋಕುಲಂ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬಿ.ಇ ಪದವಿಯನ್ನು 2019ರಲ್ಲಿ ಮುಗಿಸಿದ್ದಾರೆ.

ಇದನ್ನೂ ಓದಿ:  ದಿನಕ್ಕೆ 1 ಗಂಟೆ ಈ ವಿಡಿಯೋಗಳನ್ನ ನೋಡಲು 8 ಸಾವಿರಕ್ಕೂ ಹೆಚ್ಚು ಹಣ ನೀಡುತ್ತೆ ಕಂಪನಿ!

ಅಂಗನವಾಡಿ ಕಾರ್ಯಕರ್ತೆ ಪುತ್ರಗೆ 448ನೇ ರ‍್ಯಾಂಕ್‌
ಮೈಸೂರು: ಮೈಸೂರಿನ ಅಂಗನವಾಡಿ ಕಾರ್ಯಕರ್ತೆ ಪುತ್ರ ಡಾ.ಜೆ.ಭಾನುಪ್ರಕಾಶ್‌ ಯುಪಿಎಸ್ಸಿ ಪರೀಕ್ಷೆಯಲ್ಲಿ 448ನೇ ರ‍್ಯಾಂಕ್‌ ಪಡೆದಿದ್ದಾರೆ. ಮೈಸೂರಿನ ಬೆಳವಾಡಿ ನಿವಾಸಿಯಾಗಿರುವ ಡಾ.ಜೆ.ಭಾನುಪ್ರಕಾಶ್‌ ಅವರು ಮೂಲತಃ ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕು ಕೆಸ್ತೂರು ಕೊಪ್ಪಲು ಗ್ರಾಮದವರು. ಜಯರಾಮೇಗೌಡ, ಅಂಗನವಾಡಿ ಕಾರ್ಯಕರ್ತೆ ಗಿರಿಜಮ್ಮ ದಂಪತಿ ಪುತ್ರ. ಸದ್ಯ ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿಯಲ್ಲಿ ಯಶಸ್ಸು ಕಂಡಿದ್ದಾರೆ.

ಡಾ.ಭಾನುಪ್ರಕಾಶ್‌ ಅವರು 5ನೇ ತರಗತಿವರೆಗೆ ಬೆಳವಾಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದ್ದು, 12ನೇ ತರಗತಿವರೆಗೆ ಚಾಮರಾಜನಗರದ ಹೊಂಡರಬಾಳಿನ ಜವಾಹರ್‌ ನವೋದಯ ವಿದ್ಯಾಲಯ, ನಂತರ ಮಂಡ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನಲ್ಲಿ ಎಂಬಿಬಿಎಸ್‌ ಹಾಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂ.ಡಿ ಪಿಡಿಯಾಟ್ರಿಕ್ಸ್‌ ಮುಗಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗದ ಟೆನ್ಷನ್‌ ಬೇಡ್ವೆಂದು ಕೆಲಸ ತೊರೆದು ಆರಾಮಾಗಿ ಟೆಂಟ್‌ನಲ್ಲಿ ರಿಲ್ಯಾಕ್ಸ್‌ ಮಾಡ್ತಿರೋ ಯುವಕ!

ಕಂಡಕ್ಟರ್‌ ಪುತ್ರ, ಧಾರವಾಡ ಹೈದ ಯುಪಿಎಸ್‌ಸಿ ಪಾಸ್‌
ಹುಬ್ಬಳ್ಳಿ: ತಂದೆ, ಸಹೋದರರೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಲೇ ಶಾಲೆ ಕಲಿತು ಎಂಜಿನಿಯರ್‌ ಆದ ವಿದ್ಯಾರ್ಥಿ ಇದೀಗ ಯುಪಿಎಸ್ಸಿಯಲ್ಲೂ 589ನೆಯ ರ‍್ಯಾಂಕ್‌ ಪಡೆದು ಸೈ ಎನಿಸಿಕೊಂಡಿದ್ದಾನೆ. ಸಾಫ್ಟವೇರ್‌ ಎಂಜಿನಿಯರ್‌ ಆಗಿರುವ ಸಿದ್ದಲಿಂಗಪ್ಪ ಕೆಲಸ ಮಾಡುತ್ತಲೇ ಎರಡನೆಯ ಪ್ರಯತ್ನದಲ್ಲಿ ಯುಪಿಎಸ್ಸಿ ಪಾಸಾಗಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಕುರುಬಗೇರಿ ಓಣಿಯ ನಿವಾಸಿ ಸಿದ್ದಲಿಂಗಪ್ಪ ಕರಸಿದ್ದಪ್ಪ ಪೂಜಾರ ಎಸ್ಸೆಸ್ಸೆಲ್ಸಿವರೆಗೂ ಅಣ್ಣಿಗೇರಿ ಖಾಸಗಿ ಶಾಲೆಯಲ್ಲೇ ಕನ್ನಡ ಮಾಧ್ಯಮದಲ್ಲೇ ಓದಿದವರು. ಧಾರವಾಡದ ಜೆಎಸ್‌ಎಸ್‌ನಲ್ಲಿ ಪಿಯುಸಿ, ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್‌ನಲ್ಲಿ ಎಂಜಿನಿಯರಿಂಗ್‌, ನಂತರ 2015 - 16ರಲ್ಲಿ ಎಂಟೆಕ್‌ ಪದವಿ ಮುಗಿಸಿದ ಸಿದ್ದಲಿಂಗಪ್ಪ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಾವುದೇ ಕೋಚಿಂಗ್‌ಗೂ ಹೋಗದೇ ಎರಡನೆಯ ಪ್ರಯತ್ನದಲ್ಲೇ ಯುಪಿಎಸ್ಸಿಯಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

click me!