ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ, ಇಬ್ಬರ ಸಾವು: ಕರಾವಳಿಯಲ್ಲಿ 3 ದಿನ ಭಾರೀ ಮಳೆ ಸಾಧ್ಯತೆ

Published : May 24, 2023, 06:22 AM IST
ರಾಜ್ಯದಲ್ಲಿ ಮುಂದುವರಿದ ಮಳೆಯಬ್ಬರ, ಇಬ್ಬರ ಸಾವು: ಕರಾವಳಿಯಲ್ಲಿ 3 ದಿನ ಭಾರೀ ಮಳೆ ಸಾಧ್ಯತೆ

ಸಾರಾಂಶ

ಬೆಂಗಳೂರು ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಂಗಳವಾರವೂ ಕೆಲಕಾಲ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಧಾರವಾಡ, ಹಾವೇರಿ, ಬಳ್ಳಾರಿ, ತುಮಕೂರು, ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಕಾಲ ಸೋಮವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ.  

ಹುಬ್ಬಳ್ಳಿ (ಮೇ.24): ಬೆಂಗಳೂರು ಸೇರಿ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಂಗಳವಾರವೂ ಕೆಲಕಾಲ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಧಾರವಾಡ, ಹಾವೇರಿ, ಬಳ್ಳಾರಿ, ತುಮಕೂರು, ಬೆಂಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಕಾಲ ಸೋಮವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನತೆಗೆ ತಂಪಿನ ಅನುಭವ ನೀಡಿತು. ಈ ಮಧ್ಯೆ, ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ತಾಲೂಕಿನ ಮಹಾರಾಜಪೇಟೆಯಲ್ಲಿ ಕುರಿ ಮೇಯಿಸಲು ಹೋದ ನಾಗರಾಜ ಲಕ್ಕಪ್ಪ ಮುತ್ನಾಳ (22) ಸಿಡಿಲಿಗೆ ಬಲಿಯಾಗಿದ್ದಾರೆ.

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಗಾದಿಲಿಂಗಪ್ಪ(26) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಮಹಾನಗರದಲ್ಲಿ ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಮಳೆಯಬ್ಬರ ಮಂಗಳವಾರವೂ ಮುಂದುವರಿದಿದೆ. ರಾತ್ರಿ ಸುರಿದ ದಿಢೀರ್‌ ಆಲಿಕಲ್ಲು ಸಹಿತ ಮಳೆಗೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಿದ್ದರೂ ಭಾರೀ ಗಾಳಿಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ.

ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

3 ದಿನ ಮಳೆ: ಕರಾವಳಿಯಲ್ಲಿ ಬುಧವಾರದಿಂದ ಮೂರು ದಿನಗಳ ಕಾಲ ಭಾರೀ ಗಾಳಿ-ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಸುಳಿಗಾಳಿ ಬೀಸುವ ಸಾಧ್ಯತೆ ಇದೆ. ಜೊತೆಗೆ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.

ಮಳೆ ಸಂಬಂಧಿತ ಅನಾಹುತ ತಡೆಯಲು ಕಾರ್ಯಪಡೆ: ಮಳೆಗಾಲಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಳೆ ಸಂಬಂಧಿತ ಅನಾಹುತಗಳ ತಡೆಗೆ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನೊಳಗೊಂಡ ವಿಪತ್ತು ನಿರ್ವಹಣೆ ಕಾರ್ಯಪಡೆ ರಚಿಸಿದೆ. ಈ ಕಾರ್ಯಪಡೆಗೆ ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಮಳೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಅನಾಹುತವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆಯನ್ನೂ ನೀಡಿದೆ.

ಈ ಕುರಿತು ಪಾಲಿಕೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿರುವ ಆಯುಕ್ತ ಡಾ. ಗೋಪಾಲಕೃಷ್ಣ ಬಿ., ವಿಪತ್ತು ನಿರ್ವಹಣಾ ಕಾರ್ಯಪಡೆಯ ಧಾರವಾಡದ ಹೊಣೆಯನ್ನು ಪ್ರಭಾರ ಹೆಚ್ಚುವರಿ ಆಯುಕ್ತ ಸತ್ಯಪ್ಪ ನರಗಟ್ಟಿಹಾಗೂ ಹುಬ್ಬಳ್ಳಿ ಜವಾಬ್ದಾರಿಯನ್ನು ಅಧೀಕ್ಷಕ ಎಂಜಿನಿಯರ್‌ ಇ. ತಿಮ್ಮಪ್ಪ ಅವರಿಗೆ ವಹಿಸಿದ್ದಾರೆ. ಧಾರವಾಡ ವಿಭಾಗ, ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರಗಳ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ವಲಯ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪ್ರಥಮ ದರ್ಜೆ ಸಹಾಯಕರು, ಪರಿಸರ ಎಂಜಿನಿಯರ್‌, ಆರೋಗ್ಯ ನಿರೀಕ್ಷಕರು, ತುರ್ತು ಕಾರ್ಮಿಕರು ಕಾರ್ಯಪಡೆಯಲ್ಲಿದ್ದಾರೆ.

ಕಾರ್ಯಪಡೆಯಲ್ಲಿರುವವರು ತಮ್ಮ ಸಂಪರ್ಕ ಸಂಖ್ಯೆಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು. ಮರ, ವಿದ್ಯುತ್‌ ಕಂಬ ಬೀಳುವುದು, ಮನೆಗೆ ನೀರು ನುಗ್ಗುವುದು, ರಸ್ತೆ ಜಲಾವೃತಗೊಳ್ಳುವುದು, ವಾಹನಗಳು ಜಖಂಗೊಳ್ಳುವುದು ಸೇರಿದಂತೆ ಮಳೆಗೆ ಸಂಬಂಧಿಸಿದ ಅನಾಹುತಗಳ ಕುರಿತು ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಾರ್ಯಪಡೆ ಕೆಲಸಗಳೇನು?: ಪಾಲಿಕೆ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿಗೆ ಸೇರಿದ ಹಳೆ ಶಿಥಿಲ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಬೇಕು. ಅಂತಹ ಕಟ್ಟಡ ಮತ್ತು ಮನೆಗಳ ವಲಯವಾರು ಸಮೀಕ್ಷೆ ನಡೆಸಬೇಕು. ಖಾಸಗಿಯವರು ತೆರವಿಗೆ ನಿರಾಕರಿಸಿದರೆ, ಅಧಿಕಾರಿಗಳೇ ಕಾನೂನು ಪ್ರಕಾರ ತೆರವಿಗೆ ಕ್ರಮ ಕೈಗೊಳ್ಳಬೇಕು. ರಸ್ತೆಗಳ ತಗ್ಗು-ಗುಂಡಿಗಳನ್ನು ಮುಚ್ಚಬೇಕು. ಮ್ಯಾನ್‌ಹೋಲ್‌, ಗಟಾರ, ಒಳ ಚರಂಡಿ, ರಾಜಕಾಲುವೆಗಳಲ್ಲಿ ಮಳೆ ನೀರು ಕಟ್ಟಿಕೊಳ್ಳದಂತೆ 15 ದಿನದೊಳಗೆ ಹೂಳು ತೆಗೆದು, ಸ್ವಚ್ಛಗೊಳಿಸಬೇಕು. 

ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ: ಮಾಗಡಿ ಶಾಸಕ ಬಾಲ​ಕೃಷ್ಣ

ವಾಣಿಜ್ಯ ಮಳಿಗೆಗಳ ನೆಲಮಾಳಿಗೆಯಲ್ಲಿ ಸಂಗ್ರಹಗೊಳ್ಳುವ ನೀರನ್ನು ತಕ್ಷಣ ಹೊರಹಾಕಲು ಮೋಟಾರು ಯಂತ್ರವನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಕಟ್ಟಡಗಳ ಮಾಲೀಕರಿಗೆ ಸೂಚಿಸಬೇಕು. ತುರ್ತು ನಿರ್ವಹಣೆಗೆ ಅಗತ್ಯವಿರುವ ರೇನ್‌ಕೋಟ್‌, ಲೈಫ್‌ ಜಾಕೆಟ್‌, ಹಗ್ಗ ಸೇರಿದಂತೆ ತುರ್ತು ಸಾಧನಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕು. ಕುಸಿದ ಕಟ್ಟಡಗಳ ತೆರವಿಗೆ ಜೆಸಿಬಿ ವಾಹನ, ಜೆಟ್ಟಿಂಗ್‌ ಯಂತ್ರ, ಹೂಳು ತೆರವು ಯಂತ್ರವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟುಕೊಳ್ಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌