* 'ನಮ್ಮ ಬೆಂಗಳೂರು ಫೌಂಡೇಷನ್' ಆಯೋಜಿಸಿದ್ದ 'ಬೆಂಗಳೂರು ಪೈಟ್ಸ್ ಕೊರೋನಾ' ವೆಬಿನಾರ್
* ತುರ್ತು ಸಂದರ್ಭದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಒಂದೇ ಡೋಸ್ ಲಸಿಕೆ ಬಳಸಲು ಒಪ್ಪಿಗೆ ಸಿಕ್ಕಿದೆ
* ಶೇ.70ರಷ್ಟು ಜನರು ಮೊದಲ ಡೋಸ್ ಪಡೆದ ಬೆಂಗಳೂರಿಗರು
ಬೆಂಗಳೂರು(ಆ.09): ಕೊರೋನಾ ಮೂರನೇ ಅಲೆ ಎದುರಿಸಲು ರಾಜಧಾನಿಯ ಜನತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಬೇಕು. ಕೊರೋನಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮನವಿ ಮಾಡಿದ್ದಾರೆ.
'ನಮ್ಮ ಬೆಂಗಳೂರು ಫೌಂಡೇಷನ್' ಆಯೋಜಿಸಿದ್ದ 'ಬೆಂಗಳೂರು ಪೈಟ್ಸ್ ಕೊರೋನಾ' ವೆಬಿನಾರ್‌ನಲ್ಲಿ ವೈದ್ಯರು, ಸಾರ್ವಜನಿಕರು ಮುಂತಾದವರ ಜೊತೆ ಮಾತನಾಡಿದ ಅವರು, ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಕಳೆದ 18-19 ತಿಂಗಳಲ್ಲಿ ಸಾಕಷ್ಟು ಸಂಕಷ್ಟ ಅನುಭವಿಸಿ ಪಾಠ ಕಲಿತಿದ್ದೇವೆ. ಆದ್ದರಿಂದ ಭವಿಷ್ಯದಲ್ಲಿ ಸಮಸ್ಯೆಗಳು ಉದ್ಭವವಾಗದಂತೆ ನೋಡಿಕೊಳ್ಳಬೇಕು. ಹಿಂದಿನ ತಪ್ಪುಗಳು ಮರುಕಳಿಸಿದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕೊರೋನಾ ಮೊದಲನೇ ಅಲೆಯಿಂದ ಪಾಠ ಕಲಿತ ನಾವು, 2 ನೇ ಅಲೆಯ ಏಪ್ರಿಲ್-ಮೇ ತಿಂಗಳುಗಳಲ್ಲಿ ಮುನ್ನೆಚ್ಚರಿಕೆ ವಹಿಸಿದ್ದೇವೆ. 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಇನ್ನಷ್ಟು ಜಾಗರೂಕರಾಗಿರಬೇಕು. ದೇಶದಲ್ಲಿ ಇಂದು ವ್ಯಾಕ್ಸಿನೇಷನ್ ನೀಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ತುರ್ತು ಸಂದರ್ಭದಲ್ಲಿ ಜಾನ್ಸನ್ ಆಂಡ್ ಜಾನ್ಸನ್ ಒಂದೇ ಡೋಸ್ ಲಸಿಕೆ ಬಳಸಲು ಒಪ್ಪಿಗೆ ಸಿಕ್ಕಿದೆ ಎಂದು ಅವರು ವಿವರಿಸಿದರು.
ಸಾಮಾಜಿಕ ಜಾಲತಾಣ ಬ್ಲಾಕ್ ಮಾಡುವ ಚಿಂತನೆ ಇಲ್ಲ: RC
ಎಚ್‌ಸಿಜಿ ಆಸ್ಪತ್ರೆ ಮುಖ್ಯಸ್ಥ ಡಾ. ವಿಶಾಲ್ ರಾವ್ ಮಾತನಾಡಿ, ಎರಡನೇ? ಅಲೆಯಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಶೇ.5 ರಷ್ಟಿದ್ದ ಸೋಂಕು ನಾಲ್ಕನೇ ವಾರದ ಹೊತ್ತಿಗೆ ಶೇ.25ಕ್ಕೆ ಏರಿಕೆಯಾಗಿತ್ತು. ಸೋಂಕು ಹೆಚ್ಚಳವಾದರೆ ಎಲ್ಲರಿಗೂಆರೋಗ್ಯ ಸೌಲಭ್ಯ ಕಲ್ಪಿಸಲು ಯಾವ ಸರ್ಕಾರಕ್ಕೂ ಸಾಧ್ಯವಾಗುವುದಿಲ್ಲ ಎಂಬುದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.
ಪೋರ್ಟಿಸ್ ಆಸ್ಪತ್ರೆಯ ಡಾ.ವಿವೇಕ್ ಮಾತನಾಡಿ, ಸಂಬಂಧಿಕರನ್ನು ಕಳೆದುಕೊಂಡರೆ ಎಷ್ಟು ನೋವಾಗುತ್ತದೆ ಎಂಬುದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು. ಸಮಾಧಾನಕರ ಸಂಗತಿ ಎಂದರೆ ಬೆಂಗಳೂರಿನಲ್ಲಿ ಶೇ.70ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. ಮಾಸ್ಕ್ ಬಳಸುವುದರಿಂದ ಸೋಂಕು ಹರಡುವುದನ್ನು ಶೇ.70 ರಷ್ಟು ತಡೆಗಟ್ಟಬಹುದು. ಕೊರೋನಾ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ತಿಳಿಸಿದರು.