ದುಬಾರಿ ಜೀವನ: ಸಾರಿಗೆ ಸಿಬ್ಬಂದಿಗೆ ಸಾಕಪ್ಪ ಸಾಕೆನಿಸಿದೆ ಬೆಂಗ್ಳೂರು..!

Kannadaprabha News   | Asianet News
Published : Aug 09, 2021, 07:28 AM ISTUpdated : Aug 09, 2021, 07:32 AM IST
ದುಬಾರಿ ಜೀವನ: ಸಾರಿಗೆ ಸಿಬ್ಬಂದಿಗೆ ಸಾಕಪ್ಪ ಸಾಕೆನಿಸಿದೆ ಬೆಂಗ್ಳೂರು..!

ಸಾರಾಂಶ

* ಅಂತರ ನಿಗಮ ವರ್ಗಾವಣೆಯಡಿ 7354 ಅರ್ಜಿ * ಉತ್ತರ ಕರ್ನಾಟಕಕ್ಕೆ ವರ್ಗಾವಣೆ ಬೇಡಿಕೆ * ರಾಜಧಾನಿಯ ಜೀವನ ದುಬಾರಿ ಎಂಬ ಕಾರಣಕ್ಕೆ ನಿರ್ಧಾರ  

ಮೋಹನ ಹಂಡ್ರಂಗಿ

ಬೆಂಗಳೂರು(ಆ.09): ರಾಜ್ಯ ಸಾರಿಗೆ ನೌಕರರ ಅಂತರ್‌ ನಿಗಮ ವರ್ಗಾವಣೆ ಅಡಿಯಲ್ಲಿ ನಾಲ್ಕು ಸಾರಿಗೆ ನಿಗಮಗಳಿಂದ 7,354 ಮಂದಿ ಅಂತರ್‌ ನಿಗಮ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಬೆಂಗಳೂರಿನಿಂದ ರಾಜ್ಯದ ಇತರೆ ಸ್ಥಳಗಳಿಗೆ ವರ್ಗಾವಣೆ ಕೋರಿ 4,448 ಮಂದಿ ಅರ್ಜಿ ಸಲ್ಲಿಸಿದ್ದಾರೆ..!

ರಾಜ್ಯ ಸರ್ಕಾರದ ಆದೇಶದ ಮೇರೆಗೆ ಕಳೆದ ಮಾರ್ಚ್ 23ರಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರೆ ಆಡಳಿತ ಸಿಬ್ಬಂದಿಗಳಿಗೆ ಅಂತರ್‌ ನಿಗಮ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ನಾಲ್ಕು ಸಾರಿಗೆ ನಿಗಮಗಳಿಂದ ಒಟ್ಟು 7,354 ಮಂದಿ ಅಂತರ್‌ ನಿಗಮ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಗಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 4,448 ಮಂದಿ ವಾಯವ್ಯ ಸಾರಿಗೆ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಹುದ್ದೆ ಖಾಲಿ ಇದ್ದಲ್ಲಿ ವರ್ಗಾವಣೆ:

ಅಂತರ್‌ ನಿಗಮ ವರ್ಗಾವಣೆ ಮಾರ್ಗಸೂಚಿಯ ಪ್ರಕಾರ ನೌಕರರು ಕನಿಷ್ಠ 10 ವರ್ಷ ಸೇವೆ ಪೂರೈಸಿರಬೇಕು. ನೌಕರನ ವಿರುದ್ಧ ಇಲಾಖಾ ಮಟ್ಟದ ತನಿಖೆ ಬಾಕಿ ಇರಬಾರದು ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ. ನೌಕರ ವರ್ಗಾವಣೆ ಬಯಸುವ ನಿಗಮದಲ್ಲಿ ಹುದ್ದೆಗಳು ಖಾಲಿ ಇರಬೇಕು. ಆಗ ಸೇವಾ ಜೇಷ್ಠತೆ ಆಧಾರದ ಮೇಲೆ ಅರ್ಹ ನೌಕರರ ವರ್ಗಾವಣೆ ಮಾಡಲಾಗುತ್ತದೆ. ಉಳಿದ ಅರ್ಹ ನೌಕರರನ್ನೂ ಖಾಲಿ ಹುದ್ದೆಗಳ ಆಧಾರದಡಿ ವರ್ಗಾವಣೆ ಮಾಡಲಾಗುತ್ತದೆ. ಸದ್ಯ ವರ್ಗಾವಣೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಶೀಘ್ರದಲ್ಲೇ ಅರ್ಹ ನೌಕರರ ವರ್ಗಾವಣೆಗೆ ಚಾಲನೆ ನೀಡಲು ಸಿದ್ಧತೆ ನಡೆಸಲಾಗಿದೆ.

KSRTC ನೌಕರರಿಗೆ ಗುಡ್ ನ್ಯೂಸ್

ನಾಲ್ಕು ವರ್ಷದ ಹಿಂದೆ 3,971 ಮಂದಿ ವರ್ಗ:

ಸಾರಿಗೆ ನೌಕರರ ಬಹು ವರ್ಷಗಳ ಅಂತರ್‌ ನಿಗಮ ವರ್ಗಾವಣೆ ಬೇಡಿಕೆಗೆ ಸ್ಪಂದಿಸಿದ್ದ ರಾಜ್ಯ ಸರ್ಕಾರ, ಒಂದು ಬಾರಿಗೆ ಮಾತ್ರ ಎಂಬ ಷರತ್ತು ವಿಧಿಸಿ 2017ರಲ್ಲಿ ಮೊದಲ ಬಾರಿಗೆ ಅಂತರ್‌ ನಿಗಮ ವರ್ಗಾವಣೆಗೆ ಅವಕಾಶ ನೀಡಿತ್ತು. ಈ ವೇಳೆ ನಾಲ್ಕು ಸಾರಿಗೆ ನಿಗಮಗಳ 18,978 ಮಂದಿ ಅಂತರ್‌ ನಿಗಮ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 14,418 ಅರ್ಜಿಗಳು ವರ್ಗಾವಣೆಗೆ ಅರ್ಹವಾಗಿದ್ದವು. ಈ ಪೈಕಿ ಇತರೆ ನಿಗಮಗಳಲ್ಲಿ ಖಾಲಿ ಹುದ್ದೆಗಳ ಲಭ್ಯತೆ ಆಧಾರದ ಮೇಲೆ 3,971 ನೌಕರರನ್ನು ವರ್ಗಾವಣೆ ಮಾಡಲಾಗಿತ್ತು.

ಕಾರಣ ಏನು?

ಬಿಎಂಟಿಸಿಯಲ್ಲಿರುವ ಚಾಲಕ ಹಾಗೂ ನಿರ್ವಾಹಕರ ಪೈಕಿ ಶೇ.60ರಷ್ಟು ಮಂದಿ ಉತ್ತರ ಕರ್ನಾಟಕ ಭಾಗದವರು. ಬೆಂಗಳೂರು ನಗರದಲ್ಲಿ ಜೀವನ ನಿರ್ವಹಣೆ ದುಬಾರಿ, ಮಕ್ಕಳ ವಿದ್ಯಾಭ್ಯಾಸ, ವಯಸ್ಸಾದ ಪೋಷಕರು ಹೀಗೆ ನಾನಾ ಕಾರಣಗಳಿಂದ ಬಹುತೇಕ ನೌಕರರು ತಮ್ಮ ಕುಟುಂಬಗಳನ್ನು ಊರುಗಳಲ್ಲೇ ಇರಿಸಿದ್ದಾರೆ. ರಜೆ ಇತರೆ ಸಂದರ್ಭಗಳಲ್ಲಿ ಆಗಾಗ ಊರಿಗೆ ಹೋಗಿಬರುತ್ತಾರೆ. ಇದೀಗ ಅಂತರ್‌ ನಿಗಮ ವರ್ಗಾವಣೆ ಮುಖಾಂತರ ತವರು ಜಿಲ್ಲೆ ಅಥವಾ ನೆರೆಯ ಜಿಲ್ಲೆಗಳಿಗೆ ತೆರಳಲು ಅವಕಾಶವಿರುವುದರಿಂದ ಆ ಭಾಗದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್