ಮತ್ತೆ ಕೊರೋನಾ ಹೆಚ್ಚಳ: ಆಸ್ಪತ್ರೆಗೆ ಸೇರುವ ಸೋಂಕಿತರ ಸಂಖ್ಯೆ ಏರಿಕೆ

By Kannadaprabha News  |  First Published Aug 9, 2021, 7:10 AM IST

*  ಸಕ್ರಿಯ ಪ್ರಕರಣದಲ್ಲಿ ಹೆಚ್ಚಳ
* ಆಸ್ಪತ್ರೆವಾಸಿಗಳಲ್ಲಿ ಶೇ.42 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ
* ಸಾಮಾನ್ಯ ವಾರ್ಡ್‌ಗೆ ದಾಖಲಾಗುವ ಕೋವಿಡ್‌ ಪೀಡಿತರ ಸಂಖ್ಯೆ 2-3 ದಿನಗಳಿಂದ ಹೆಚ್ಚಳ
 


ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಆ.09):  ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌-19 ಸಕ್ರಿಯ ಪ್ರಕರಣ ಏರುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚಳ ಕಾಣುತ್ತಿದೆ. ಆತಂಕದ ಸಂಗತಿಯೆಂದರೆ, ಈ ಪೈಕಿ ಶೇ.42 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos

undefined

ರಾಜ್ಯದಲ್ಲಿ ಗುರುವಾರದ ಹೊತ್ತಿಗೆ 2,722 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 1,151 ಮಂದಿ ತೀವ್ರ ನಿಗಾ ವಿಭಾಗದಲ್ಲಿದ್ದಾರೆ. 1,563 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಆಗಸ್ಟ್‌ 3ರಂದು ವೆಂಟಿಲೇಟರ್‌ರಹಿತ ಐಸಿಯುನಲ್ಲಿ 243 ಮಂದಿ, ವೆಂಟಿಲೇಟರ್‌ಸಹಿತ ಐಸಿಯುವಿನಲ್ಲಿ 237 ಮಂದಿ ಮತ್ತು ಆಮ್ಲಜನಕ ಬೆಡ್‌ (ಎಚ್‌ಡಿಯು)ನಲ್ಲಿ 677 ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಆಗಸ್ಟ್‌ 5 ರಂದು ವೆಂಟಿಲೇಟರ್‌ರಹಿತ ಬೆಡ್‌ನಲ್ಲಿ 247, ವೆಂಟಿಲೇಟರ್‌ಸಹಿತ ಬೆಡ್‌ನಲ್ಲಿ 218 ಮಂದಿ ಮತ್ತು ಆಮ್ಲಜನಕ ಬೆಡ್‌ನಲ್ಲಿ 691 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಾರ್ಡ್‌ನಲ್ಲಿನ ಸಂಖ್ಯೆ ಇಳಿಕೆ:

ವಾರದ ಹಿಂದೆ ಸಾಮಾನ್ಯ ವಾರ್ಡ್‌ನಲ್ಲಿನ ರೋಗಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದ್ದು, ತೀವ್ರ ನಿಗಾ ವಿಭಾಗದಲ್ಲಿನ ರೋಗಿಗಳ ಸಂಖ್ಯೆ ಏರಿಕೆ ಕಂಡಿತ್ತು. ಆದರೆ ಕಳೆದ ಎರಡು- ಮೂರು ದಿನಗಳಿಂದ ತೀವ್ರ ನಿಗಾ ವಿಭಾಗದಲ್ಲಿನ ರೋಗಿಗಳ ಸಂಖ್ಯೆ ಹೆಚ್ಚೂ ಕಮ್ಮಿ ಸ್ಥಿರವಾಗಿದೆ. ಆದರೆ ಸಾಮಾನ್ಯ ವಾರ್ಡ್‌ನಲ್ಲಿರುವ ರೋಗಿಗಳ ಸಂಖ್ಯೆ ಏರುತ್ತಿದೆ. ಇದೇ ವೇಳೆ ಜುಲೈ 27ರಂದು 2,600 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆಗಸ್ಟ್‌ 4ರಂದು 2,722 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾಗೆ ದೇಶದಲ್ಲಿ 491 ಸಾವು, ಹೊಸ ಸೋಂಕಿತರ ಸಂಖ್ಯೆ 39 ಸಾವಿರ!

ಜನರ ನಿರ್ಲಕ್ಷ್ಯದಿಂದಲೇ ಐಸಿಯು ದಾಖಲಾತಿ ಹೆಚ್ಚಳ

ಕೋವಿಡ್‌ ದೃಢಪಟ್ಟು ಸೋಂಕು ಲಕ್ಷಣ ಉಲ್ಬಣಿಸಿದ ಬಳಿಕ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯವಾಗುತ್ತದೆ. ಹೋಮ್‌ ಐಸೋಲೇಷನ್‌ನಲ್ಲಿರುವವರು ಆಕ್ಸಿಜನ್‌ ಮಟ್ಟದ ಮೇಲೆ ನಿಗಾ ಇಡುತ್ತಿಲ್ಲ. ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸುತ್ತಿಲ್ಲ. ಇದರಿಂದಾಗಿ ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ, ವೈರಾಣು ತಜ್ಞ ಡಾ. ವಿ. ರವಿ ಅಭಿಪ್ರಾಯಪಡುತ್ತಾರೆ.

ಕೋವಿಡ್‌ ಪ್ರಕರಣಗಳ ಇಳಿಕೆ ಮತ್ತು ಲಾಕ್‌ಡೌನ್‌ ನಿಯಮದ ಸಡಿಲಿಕೆಯಿಂದ ಜನರು ಕೋವಿಡ್‌ ಇಲ್ಲ ಎಂಬಂತೆ ಜನ ವರ್ತಿಸುತ್ತಿದ್ದಾರೆ. ಆದ್ದರಿಂದ ಕೋವಿಡ್‌ ಗುಣಲಕ್ಷಣ ಕಂಡು ಬಂದರೂ ಜನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸೋಂಕು ವಿಷಮಿಸಿದಾಗ ಆಸ್ಪತ್ರೆಗೆ ಓಡುತ್ತಾರೆ. ಈ ಸಂದರ್ಭದಲ್ಲಿ ತೀವ್ರ ನಿಗಾ ವಿಭಾಗಕ್ಕೆ ದಾಖಲಿಸುವುದು ಅನಿವಾರ್ಯ ಆಗುತ್ತದೆ. ಜನರ ಈ ಮನೋಭಾವದಿಂದಾಗಿಯೇ ಸೋಂಕಿನ ಪ್ರಮಾಣ ಕಳೆದೆರಡು ತಿಂಗಳಿನಿಂದ ಕಡಿಮೆ ಆಗಿದ್ದರೂ ಮರಣ ದರ ಅಪಾಯದ ಮಟ್ಟದಲ್ಲಿಯೇ ಇದೆ ಎಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಇನ್ನೋರ್ವ ಸದಸ್ಯ ಅಭಿಪ್ರಾಯಪಡುತ್ತಾರೆ.
 

click me!