
ಹುಬ್ಬಳ್ಳಿ (ಜು.12): ದೇಶದಲ್ಲಿ ನಾನೇ ಸಿಎಂ, ನಾನೇ ಸಿಎಂ ಎಂದು ಹೇಳಿಕೊಳ್ಳುವ ಅನಿವಾರ್ಯ ಯಾವ ರಾಜ್ಯದಲ್ಲೂ ಇಲ್ಲ. ಆದರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗೆ ನಾನೇ ಸಿಎಂ ಎಂದು ಹೇಳಿಕೊಳ್ಳುವಂತಹ ದುಸ್ಥಿತಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ದೆಹಲಿಗೆ ಹೋಗಿ ತಮ್ಮ ಕುರ್ಚಿ ಉಳಿಸಿಕೊಳ್ಳುವ ಮತ್ತು ರಾಹುಲ್ ಗಾಂಧಿ ಭೇಟಿಗೆ ಸಮಯ ವ್ಯರ್ಥ ಮಾಡುವ ಬದಲು ರಾಜ್ಯದ ಆಡಳಿತ ಸುಧಾರಣೆಯತ್ತ ಗಮನಹರಿಸಲಿ. ಎಷ್ಟು ದಿನ ಸಿಎಂ ಆಗಿರುತ್ತೀರೋ ಅಲ್ಲಿವರೆಗೆ ಆಡಳಿತ ಸುಧಾರಣೆ ಮಾಡಿ ಎಂದರು.
ಪವರ್ ಶೇರಿಂಗ್ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾದರೂ ಆ ಇಬ್ಬರಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಜನರಿಗೆ ತಿಳಿಸಲಿ. ಸಿಎಂಗೆ ಮತ್ತು ಡಿಸಿಎಂಗೆ ಎಷ್ಟು ಶಾಸಕರ ಬೆಂಬಲವಿದೆ ಎನ್ನುವುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಗಾಂಧಿ ಕುಟುಂಬದ ಅಹಂಕಾರ: ದೇಶದ ಪ್ರಮುಖ ರಾಜ್ಯ ಕರ್ನಾಟಕ. ರಾಜ್ಯದ ಮುಖ್ಯಮಂತ್ರಿ ಭೇಟಿಗೆ ರಾಹುಲ್ ಗಾಂಧಿ ಅವಕಾಶ ಸಿಗಲಿಲ್ಲ. ಇದರಿಂದ ನಕಲಿ ಗಾಂಧಿ ಕುಟುಂಬದ ಅಹಂಕಾರ ಎಷ್ಟಿದೆ ಮತ್ತು ರಾಜ್ಯ ನಾಯಕರ ಸ್ಥಿತಿ ಹೇಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಕಾಂಗ್ರೆಸ್ ನಾಯಕರು ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಇತ್ತೀಚಿಗೆ ಜೈಲಿನಲ್ಲಿದ್ದ ಭಯೋತ್ಪಾದಕರಿಗೆ ಕರ್ನಾಟಕ ದ ಜೈಲು ಸ್ವರ್ಗವಾಗಿವೆ ಎನ್ನುದಕ್ಕೆ ಅಲ್ಲಿ ಪೂರೈಕೆಯಾಗುತ್ತಿದ್ದ ಮೊಬೈಲ್‌ಗಳು ಮತ್ತು ಕೈದಿಗಳಿಗೆ ಸಿಗುತ್ತಿದ್ದ ಆತಿಥ್ಯವೇ ಸಾಕ್ಷಿ, ಇದು ಪಕ್ಕಾ ಆಡಳಿತ ವ್ಯವಸ್ಥೆಯ ವೈಫಲ್ಯ. ರಾಜ್ಯದಲ್ಲಿ ದೇಶದ್ರೋಹ ಪ್ರಕರಣಗಳು ನಡೆಯುತ್ತಿದ್ದರೂ ಇವರಿಗೆ ಗೊತ್ತಾಗುವುದಿಲ್ಲ. ಕೇಂದ್ರ ಹೇಳಿದ ನಂತರ ನಾವು ತನಿಖೆ ಮಾಡುತ್ತೇವೆ ಎನ್ನುತ್ತಾರೆ. ಹೀಗಾಗಿ, ಭಯೋತ್ಪಾದನಾ ಚಟುವಟಿಕೆಗೆ ಕರ್ನಾಟಕ ಸ್ಲೀಪರ್ ಸೆಲ್ ಆಗಿದೆ. ಹೀಗಾಗಿ, ಸಿಎಂ ಆಂತರಿಕ ಭದ್ರತೆಗೆ ಒತ್ತು ನೀಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಹುಮತವಿತ್ತು. ಹೀಗಾಗಿ, ಅಲ್ಲಿ ಬೇರೆ ಪಕ್ಷಗಳ ಸಹಕಾರದಿಂದ ಅಧಿಕಾರಕ್ಕೆ ಬಂದೆವು. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದು, ಇಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಅಧಿಕಾರಕ್ಕೇರುವ ಪ್ರಯತ್ನ ಮಾಡಲ್ಲ. ಕಾಂಗ್ರೆಸ್ ಸರಿಯಾಗಿ ಅಧಿಕಾರ ನಡೆಸಲಿ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಚುನಾವಣೆ ನಡೆಸಿಯೇ ಆಯ್ಕೆ ಮಾಡಲಾಗುವುದು. ಚುನಾವಣೆ ಪ್ರಕ್ರಿಯೆ ವಿಳಂಬವಾಗಿದೆ ಎಂದ ಅವರು, ಬಿ.ವೈ ವಿಜಯೇಂದ್ರ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದಾಗಿ ಎಲ್ಲಿಯೂ ಹೇಳಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ