ಪಾಕಿಸ್ತಾನ ಪ್ರಜೆಗಳು ಭಾರತಕ್ಕೆ ನುಸುಳಲು ಕೇಂದ್ರ ಏಜೆನ್ಸಿ ಕಾರಣ ಎಂಬ ಗೃಹ ಸಚಿವ ಜಿ ಪರಮೇಶ್ವರ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದು, ದೇಶದ ಭದ್ರತೆ ವಿಚಾರದಲ್ಲಿ ಇಂಥ ಚಿಲ್ಲರೆ ಮಾತನಾಡುವುದು ನಿಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ (ಅ.5): ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರ ಪರ ಹೇಳಿಕೆ ನೀಡಿದ್ದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ನಡೆ ಬಗ್ಗೆ ಜೆಡಿಎಸ್ ನಾಯಕರು ಕಿಡಿಕಾರಿದ್ದಾಯ್ತು. ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಹ ಪ್ರತಿಕ್ರಿಯೆ ನೀಡಿದ್ದು,'ಮೊನ್ನೆವರೆಗೆ ಸಿದ್ದರಾಮಯ್ಯರ ವಿರುದ್ಧ ಮಾತನಾಡುತ್ತಿದ್ದರು. ಈಗ ಏಕಾಏಕಿ ಸಿದ್ದರಾಮಯ್ಯರ ಪರ ಮಾತನಾಡಿದ್ದಾರೆ. ರಾಜಕಾರಣದಲ್ಲಿ ಕೆಲವರಿಗೆ ತಮಗೆ ಬೇಕಾದ ಸ್ಥಾನಮಾನ ಸಿಗದೆ ಇದ್ದಲ್ಲಿ ಪಕ್ಷ ವಿರುದ್ಧ ಮಾತನಾಡುವುದು, ಪಕ್ಷ ತೊರೆಯುವುದು ಮಾಡುತ್ತಾರೆ ಎಂದು ಜಿಟಿಡಿ ಹೇಳಿಕೆಗೆ ಕಿಡಿಕಾರಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಯಿಂದ ಬಿಜೆಪಿಗೆ ಏನೂ ಡ್ಯಾಮೇಜ್ ಆಗಲ್ಲ. ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅದರದ್ದೇ ಆದ ವಿಚಾರಧಾರೆ ಇರುತ್ತದೆ. ತಮ್ಮ ಸ್ವಂತದ ಅಧಿಕಾರ, ಸ್ಥಾನಮಾನಕ್ಕಾಗಿ ಬಡಿದಾಡಿಕೊಳ್ಳುವವರು ಜಾಸ್ತಿ ಆಗಿದೆ. ಈವರೆಗೂ ಮುಖ್ಯಮಂತ್ರಿ ವಿರುದ್ಧ ಜಿ.ಟಿ.ದೇವೇಗೌಡ ಮಾತನಾಡಿದ್ದರು. ಈಗ ಅಚಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಏನು ಘಟಾನಾವಳಿಗಳು ಆಗಿವೆ ಎಂಬುದನ್ನ ನೋಡಿಕೊಳ್ಳಬೇಕು. ಅದು ಅವರ ಪಕ್ಷದ ಆಂತರಿಕ ವಿಚಾರ ಅದರ ಬಗ್ಗೆ ನಾವು ಮಾತನಾಡೊಲ್ಲ. ಈಗ ರಾಜ್ಯ ಸರ್ಕಾರದ ವಿರುದ್ಧ ಮುಡಾ ಮತ್ತು ವಾಲ್ಮೀಕಿ ಹಗರಣ ಬಂದಿವೆ. ಇಂತಹ ಸಮಯದಲ್ಲಿ ಜಿ.ಟಿ.ದೇವೇಗೌಡ್ರ ಸಿದ್ದರಾಮಯ್ಯ ಪರ ಹೇಳಿಕೆ ನೀಡುವುದು ಸರಿಯಲ್ಲ. ಅದು ತಮ್ಮ ಮೇಲೆಯೂ ಅನುಮಾನಕ್ಕೆ ಕಾರಣವಾಗಬಹುದು ಎಂದರು.
ಸಿಎಂ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್: ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ ವ್ಯಂಗ್ಯ
ಗೃಹ ಸಚಿವರ ವಿರುದ್ಧ ಕಿಡಿ:
ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ಕಿಡಿಕಾರಿದ ಸಚಿವರು, ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಗೃಹ ಮಂತ್ರಿಯಾಗಿ ಜೆ.ಪರಮೇಶ್ವರ ಕೆಲಸ ಮಾಡಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ಚಿಲ್ಲರೆ ವಿಚಾರಗಳನ್ನು ಮಾತನಾಡುವುದು ಬಿಡಬೇಕು ಎಂದು ಎಚ್ಚರಿಸಿದರು. ರಾಜ್ಯದಲ್ಲಿ ನಡೆದಿರುವು ಕೋಮುಗಲಭೆ, ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಏನೇ ಕೇಳಿದ್ರೂ ಗೊತ್ತಿಲ್ಲ, ಮಾಹಿತಿ ಇಲ್ಲ, ಕೇಳಿ ಹೇಳುತ್ತೇನೆ ಎನ್ನುವ ಗೃಹ ಸಚಿವ ದೇಶದ ವಿಚಾರಗಳ ಬಗ್ಗೆ ಎಷ್ಟು ಗೊತ್ತಿದ್ದೀತು? ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೊರರು ಭಾರತಕ್ಕೆ ಬಂದಿದ್ದರು? ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ? ಎಲ್ಲೆಲ್ಲಿ ಬಾಂಬ್ ಬ್ಲಾಸ್ಟ್‌ಗಳಾಗಿ ಎಂಬುದನ್ನು ತಿಳಿದು ಮಾತನಾಡಲಿ ಎಂದು ತಿರುಗೇಟು ನೀಡಿದರು.