
ಬೆಂಗಳೂರು (ಅ.10): ಇಂದಿನಿಂದ ಆ್ಯಪ್ ನಲ್ಲಿ ಓಲಾ,ಉಬರ್ ಆಟೋರಿಕ್ಷಾ ಸಿಗೋದು ಅನುಮಾನ. ಸರ್ಕಾರ ನೀಡಿರುವ ನೋಟಿಸ್‌ಗೆ ಈ ಮೂರು ಕಂಪನಿಗಳು ಉತ್ತರ ನೀಡಲು ವಿಫಲವಾದ ಬೆನ್ನಲ್ಲಿಯೇ, ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಅನಧಿಕೃತ ಆಟೋ ರಿಕ್ಷಾಗಳಿಗೆ ಕಡಿವಾಣ ಹೇರಳು ಸಾರಿಗೆ ಇಲಾಖೆ ಪ್ಲ್ಯಾನ್ ಮಾಡಿದೆ. ಸಾರಿಗೆ ಇಲಾಖೆ ವಾರ್ನಿಂಗ್ ನಡುವೆಯೂ ಸೇವೆ ನೀಡುತ್ತಿರೋ ಆಟೋ ರಿಕ್ಷಾ ಇಂದೇ ಸೀಜ್ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ ಇಂದಿನಿಂದ ಓಲಾ, ಉಬರ್ ಹಾಗೂ ರಾಪಿಡೋ ಆಟೋರಿಕ್ಷಾ ಸೇವೆ ಕಂಪ್ಲೀಟ್ ಬಂದ್ ಆಗಲಿವೆಯೇ ಎನ್ನುವ ಅನುಮಾನ ಕಾಡಿದೆ. ಸಾರಿಗೆ ಇಲಾಖೆ ವಾರ್ನಿಂಗ್ ಬೆನ್ನಲ್ಲೇ ಆಟೋ ಚಾಲಕರಿಗೆ ಕೂಡ ಟೆನ್ಶನ್ ಶುರುವಾಗಿದೆ. ಆ್ಯಪ್ ಆಧಾರಿತ ಆಟೋ ಹಾಗೂ ಬೈಕ್ ಟ್ಯಾಕ್ಸಿ ನಿಲ್ಲಿಸುವಂತೆ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಸರ್ಕಾರದ ಕಟ್ಟುನಿಟ್ಟಿನ ಸೂಚನೆ ನಡುವೆ ಬೆಂಗಳೂರಿನಲ್ಲಿ ಒಲಾ, ಓಬರ್ ಹಾಗೂ ರಾಪಿಡೋ ಸೇವೆ ನೀಡುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಇವುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.ಪ್ರಯಾಣದ ದೂರವು ಎರಡು ಕಿಲೋಮೀಟರ್ (ಕಿಮೀ) ಗಿಂತ ಕಡಿಮೆಯಿದ್ದರೂ ಸಹ ಓಲಾ ಮತ್ತು ಉಬರ್ ಕನಿಷ್ಠ 100 ರೂ.ಗಳನ್ನು ವಿಧಿಸುತ್ತಿರುವ ಬಗ್ಗೆ ಹಲವಾರು ಪ್ರಯಾಣಿಕರು ಸಾರಿಗೆ ಇಲಾಖೆಗೆ ದೂರು ದಾಖಲು ಮಾಡಿದ್ದರು.
ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರವನ್ನು ಮೊದಲ ಎರಡು ಕಿಮೀಗೆ 30 ರೂ. ಮತ್ತು ನಂತರದ ಪ್ರತಿ ಕಿ.ಮೀಗೆ 15 ರೂ ನಿಗದಿ ಮಾಡಲಾಗಿದೆ. ಆದರೆ, ಇವನ್ನು ಮೀರಿ ಈ ಕಂಪನಿಗಳು ವಿಪರೀತ ಸುಲಿಗೆಗೆ ಇಳಿದಿದ್ದವು. ಆದ್ದರಿಂದಾಗಿ ಇಂದೇ ಓಲಾ ಉಬರ್ ಕಂಪನಿಗಳ ಆಟೋಟೋಪಕ್ಕೆ ಸಾರಿಗೆ ಇಲಾಖೆ ಬ್ರೇಕ್ ಹಾಕಲು ತೀರ್ಮಾನಿಸಿದೆ. ಓಲಾ ಉಬರ್ ಕಂಪನಿಗಳಿಗೆ ನೀಡಿರೋ ಡೆಡ್‌ಲೈನ್ ಅಂತ್ಯ ಹಿನ್ನೆಲೆ ಆಗಿರುವುದರಿಂದ ಇಂದಿನಿಂದ ಆಟೋ ರಿಕ್ಷಾಗಳನ್ನು ಸೀಜ್ ಮಾಡಲು ತೀರ್ಮಾನಿಸಲಾಗಿದೆ. ಅಕ್ರಮವಾಗಿ ಓಡಾಡ್ತಿರೋ ಆಟೋ ರಿಕ್ಷಾಗಳು ಎಲ್ಲೆಂದರಲ್ಲಿ ಸೀಜ್ ಮಾಡೋ ಸಾಧ್ಯತೆ ಇದೆ, ಸಾರಿಗೆ ಸಚಿವ ಶ್ರೀರಾಮುಲು ಸೂಚನೆ ಮೇರೆಗೆ ಇಂದು ನಗರದಲ್ಲಿ ಆಟೋ ರಿಕ್ಷಾಗಳು ಮೇಲೆ ಸಾರಿಗೆ ಇಲಾಖೆ ಸೀಜ್ ಆಪರೇಷನ್ ಶುರುವಾಗಲಿದೆ.
ಓಲಾ, ಉಬರ್, ರಾಪಿಡೋ ಆಪ್ ಸ್ಥಗಿತಗೊಳಿಸುವಂತೆ ಚಾಲಕರ ಒತ್ತಾಯ: ಈ ನಡುವೆ ಬೆಂಗಳೂರಿನಲ್ಲಿ ಓಲಾ, ಉಬರ್, ರಾಪಿಡೋ ಸೇವೆಯನ್ನು ಸ್ಥಗಿತ ಮಾಡುವಂತೆ ಆಟೋ ಚಾಲಕರು ಒತ್ತಾಯ ಮಾಡಿದ್ದಾರೆ. ಆಪ್ ಆಧಾರಿತ ಆಟೋ ಸೇವೆಯಿಂದ ನಮಗೇನು ಲಾಭವಿಲ್ಲ. ದರ ದುಪ್ಪಟ್ಟು ನಿಗದಿ ಮಾಡೋದು ಅಗ್ರಿಗೇಟರ್ಸ್ ಕಂಪೆನಿಗಳಾದ ಓಲಾ (Ola), ಉಬರ್ (Uber) ಹಾಗೂ ರಾಪಿಡೋ (Rapido) ಕಂಪನಿಗಳು. ನಾವು ನಿತ್ಯದ ಜೀವನಕ್ಕಾಗಿ ಆಫ್ ಆಧಾರಿತ ಆಟೋ ಅವಲಂಬಿಸುತ್ತಿದ್ದೇವೆ. ಓಲಾ ಉಬರ್ ದರ ದುಪ್ಪಟ್ಟು ಅಂತ ಗೊತ್ತಿದ್ರೂ ಜನ ಆಪ್ ಮೂಲಕವೇ ಆಟೋ ಸೇವೆ ಪಡಿತಿದ್ದಾರೆ. 30 ರೂ ಬದಲು ತನಗಿಷ್ಟ ಬಂದಂತೆ 100ರ ಮೇಲ್ಪಟ್ಟು ದರ ನಿಗದಿ ಮಾಡುವ ಮೂಲಕ ಜನರ ಪ್ರಾಣ ಹಿಂಡುತ್ತಿದ್ದಾರೆ.
ನಿಜಸ್ಥಿತಿ ಗೊತ್ತಿದ್ದೂ ಗೊತ್ತಿಲ್ಲದಂತೆ ಸಾರಿಗೆ ಇಲಾಖೆ, ಸರ್ಕಾರ ವರ್ತಿಸುತ್ತಿದೆ ಇದಕ್ಕೆಲ್ಲ ನೇರ ಹೊಣೆ ಸರ್ಕಾರ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಎಂದು ಚಾಲಕರು (Auto Rickshaw Drivers) ಆರೋಪಿಸಿದ್ದಾರೆ. ಮೂರು ದಿನ ನೋಟಿಸ್ ಕೊಡ್ತಾರೆ ಬಳಿಕ ಸೂಟ್ ಕೇಸ್ ಕಳಿಸ್ತಾರೆ. ಅಷ್ಟರಲ್ಲಿ ಎಲ್ಲವೂ ತಣ್ಣಗಾಗುತ್ತೆ, ಮತ್ತೆ ಎಂದಿನಂತೆ ಓಲಾ ಉಬರ್ ಓಡಾಟ ಶುರುವಾಗುತ್ತದೆ. ಆಟೋ ಸೀಜ್ ಮಾಡುವ ಬದಲು ಆಪ್ ಸ್ಥಗಿತಗೊಳಿಸಿ ಎಂದು ಚಾಲಕರು ಒತ್ತಾಯಿಸಿದ್ದಾರೆ.
ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್!
ಮುಂದುವರಿದ ಸೇವೆ: ಆಟೋ ಜಪ್ತಿ ಮಾಡೋದಾಗಿ ಸರ್ಕಾರ ಹೇಳಿದ್ದರೂ, ಕಂಪನಿಗಳು ಮಾತ್ರ ಇದನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಎಂದಿನಂತೆ ಬೆಂಗಳೂರಿನಲ್ಲಿ ಇವುಗಳ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಕೆಲವೆಡೆ, ಚಾಲಕರು ಆಟೋಗಳ ಮೇಲಿರುವ ಓಲಾ, ಉಬರ್ ಎಂಬ ಫಲಕ, ಚಿಹ್ನೆಗಳನ್ನು ತೆಗೆದು ಹಾಕುತ್ತಿದ್ದು, ಕೆಲವರು ಆ್ಯಪ್‌ಗಳ ಜತೆಗಿನ ಒಪ್ಪಂದವನ್ನೇ ಕಡಿದುಕೊಳ್ಳಲು ಚಿಂತಿಸುತ್ತಿದ್ದಾರೆ. ಇತ್ತ ಆಟೋರಿಕ್ಷಾ (Auto) ಜಪ್ತಿ ಮಾಡುವ ವಿಚಾರ ಕುರಿತು ಆಟೋ ಚಾಲಕರ ಸಂಘಗಳು ಸರ್ಕಾರದ ಮೇಲೆ ಹರಿಹಾಯ್ದಿದ್ದು, ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆಯಂತಾಗಿದೆ. ಆ್ಯಪ್ ನಡೆಸುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡು ಸ್ಥಗಿತಗೊಳಿಸುವುದನ್ನು ಬಿಟ್ಟು ಬಡವರ ಆಟೋರಿಕ್ಷಾ ಜಪ್ತಿ ಮಾಡುತ್ತಿರುವುದೇಕೆ’ ಎಂದು ಪ್ರಶ್ನಿಸಿದ್ದಾರೆ.
ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ
ಆಟೋ ಸೀಜ್ ಮಾಡ್ತೀವಿ ಅನ್ನೋದು ಸರಿಯಲ್ಲ: ಈ ನಡುವೆ ಓಲಾ ಉಬರ್ ಚಾಲಕರು ಮಾಲಿಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ಹೇಳಿಕೆ ನೀಡಿದ್ದು, ಆಪ್ ಆಧಾರಿತ ಆಟೋ ಸೇವೆ ಕೊಡೋದು ನಮ್ಮ ಚಾಲಕರ ದುಡಿಮೆ. ಆಪ್ ಸ್ಥಗಿತಗೊಳಿಸೋದು ಬಿಟ್ಟು ಆಟೋ ಸೀಜ್ ಮಾಡ್ತಿವಿ ಅನ್ನೋದು ಸರಿಯಲ್ಲ. ಆಟೋ ಸೀಜ್ ಮಾಡೋ ಹಕ್ಕು ರೋಡ್ ಟ್ರಾನ್ಸ್ ಪೋರ್ಟ್ ಗಿದೆ. ಆದ್ರೆ ಲಾಭ ಮಾಡೊ ಕಂಪೆನಿಗೆ ಶಿಕ್ಷೆ ನೀಡದೆ ಬಡ ಚಾಲಕರಿಗೆ ಅನ್ಯಾಯ ಮಾಡೋದು ಸರಿಯಲ್ಲ. ಅಸೋಸಿಯೇಷನ್ ನಿಂದ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ