ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಜಾಗವೇ ಸಿಗುತ್ತಿಲ್ಲ!

Published : Oct 10, 2022, 10:28 AM ISTUpdated : Oct 10, 2022, 10:31 AM IST
ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ಜಾಗವೇ ಸಿಗುತ್ತಿಲ್ಲ!

ಸಾರಾಂಶ

ಕಲಾಸಿಪಾಳ್ಯ ಮಾರುಕಟ್ಟೆಸ್ಥಳಾಂತರಕ್ಕೆ ಜಾಗವೇ ಸಿಗುತ್ತಿಲ್ಲ! ಮತ್ತೆ ವಿಘ್ನ ಗುಳಿಮಂಗಲ ಬಳಿ ಗುರುತಿಸಿದ್ದ ಜಾಗ ಹೈಕೋರ್ಟಲ್ಲಿ ರದ್ದು ಇದರಿಂದ ಸಗಟು ವ್ಯಾಪಾರಿಗಳು, ರೈತರು, ಗ್ರಾಹಕರು ಅತಂತ್ರ

ಮಯೂರ ಹೆಗಡೆ

ಬೆಂಗಳೂರು (ಅ.10) : ನಗರದ ಕೇಂದ್ರ ಭಾಗದ ಕಿಷ್ಕಿಂದೆಯಂತಹ ಜಾಗದಲ್ಲಿರುವ ಕಲಾಸಿಪಾಳ್ಯ ಮಾರುಕಟ್ಟೆಯನ್ನು ಆನೇಕಲ್‌ ಬಳಿಯ ಗುಳಿಮಂಗಲಕ್ಕೆ ಸ್ಥಳಾಂತರಿಸುವ ಯೋಜನೆಗೆ ಮತ್ತೆ ವಿಘ್ನ ಎದುರಾಗಿದೆ. ಮಾರುಕಟ್ಟೆಸ್ಥಳಾಂತರಿಸಲು ಉದ್ದೇಶಿಸಿ ಸರ್ಕಾರವು ಗುಳಿಮಂಗಲದಲ್ಲಿ ಸ್ವಾಧೀನಪಡಿಸಿಕೊಂಡಿದ್ದ 42.31 ಎಕರೆ ಭೂಸ್ವಾಧೀನವನ್ನು ಹೈಕೋರ್ಚ್‌ ರದ್ದುಪಡಿಸಿದೆ. ತನ್ಮೂಲಕ ಹೊಸ ಮಾರುಕಟ್ಟೆಹಾಗೂ ಮೂಲ ಸೌಕರ್ಯಗಳ ನಿರೀಕ್ಷೆಯಲ್ಲಿದ್ದ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು, ರೈತರು ಹಾಗೂ ಗ್ರಾಹಕರು ಮತ್ತೆ ಅತಂತ್ರ ಸ್ಥಿತಿ ಎದುರಾಗಿದೆ.

ಕಲಾಸಿಪಾಳ್ಯದಲ್ಲಿ ಜನ ದಟ್ಟಣೆ ತಡೆಗೆ ಮಾರುಕಟ್ಟೆ ಸ್ಥಳಾಂತರ

ಕಲಾಸಿಪಾಳ್ಯದ ಎರಡೂ ಮುಕ್ಕಾಲು ಎಕರೆಯ ಇಕ್ಕಟ್ಟಾದ ಸ್ಥಳದಲ್ಲಿರುವ ಮಾರುಕಟ್ಟೆಯನ್ನು ಆನೇಕಲ್‌ನ ಸಿಂಗೇನ ಅಗ್ರಹಾರ ಬಳಿಯ ಗುಳಿಮಂಗಲ ಗ್ರಾಮದ 42.31 ಎಕರೆಯ ವ್ಯಾಪ್ತಿಯ ವಿಶಾಲ ಜಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

ಇದಕ್ಕಾಗಿ ಸರ್ಕಾರವು 2002-03ರಲ್ಲೇ ಭೂಸ್ವಾಧೀನ ನಡೆಸಿದ್ದರೂ ಭೂಮಿ ನೀಡಿದ ರೈತರಿಗೆ ನಿಗದಿತ ಅವಧಿಯಲ್ಲಿ ಪರಿಹಾರ ನೀಡಿರಲಿಲ್ಲ. ಇದೇ ಕಾರಣಕ್ಕೆ ಹೈಕೋರ್ಚ್‌ ಸೆಪ್ಟೆಂಬರ್‌ನಲ್ಲಿ ಭೂಸ್ವಾಧೀನವನ್ನೇ ರದ್ದುಪಡಿಸಿದೆ. ಹೀಗಾಗಿ ಕಲಾಸಿಪಾಳ್ಯ ಮಾರುಕಟ್ಟೆಸ್ಥಳಾಂತರಕ್ಕೆ ಮತ್ತೆ ಬ್ರೇಕ್‌ ಬಿದ್ದಿದೆ. ಪ್ರಸ್ತುತ ಕಲಾಸಿಪಾಳ್ಯದಲ್ಲಿ ಬಿಬಿಎಂಪಿ ಒಡೆತನದ ಎರಡೂಕ್ಕಾಲು ಎಕರೆಯಲ್ಲಿ ಹಣ್ಣು, ಹೂವು ಮತ್ತು ತರಕಾರಿ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಇದೆ. ಮೂರು ಘಟಕದಲ್ಲಿ 382 ಮಳಿಗೆಗಳಿದ್ದು, ಅದನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರಿಗಳು ರಸ್ತೆಯಲ್ಲಿ ವ್ಯವಹಾರ ನಡೆಸಬೇಕಾಗಿದೆ.

ಲೋಡ್‌, ಅನ್‌ಲೋಡ್‌ ಸೇರಿ ಎಲ್ಲ ಪ್ರಕ್ರಿಯೆ ತೀರಾ ಇಕ್ಕಟ್ಟಾದ ಸ್ಥಳದಲ್ಲಿ ನಡೆಸಬೇಕಾಗಿದೆ. ಸಗಟು ವ್ಯಾಪಾರಿಗಳಿಗೆ, ರೈತರು ಹಾಗೂ ಗ್ರಾಹಕರಿಗೆ ನಿರಂತರ ಕಿರಿಕಿರಿ ಉಂಟಾಗುತ್ತಿದೆ. ಪಾರ್ಕಿಂಗ್‌, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳಂತೂ ಮರೀಚಿಕೆಯಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಹಲವು ಸ್ಥಳಾಂತರ ಯತ್ನಗಳು ವಿಫಲ

ಈ ಹಿಂದೆಯೂ ಸ್ಥಳಾಂತರ ಯತ್ನ ಕೈಗೂಡದ ಉದಾಹರಣೆಗಳಿವೆ. ಇದಕ್ಕಾಗಿಯೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಬ್ಯಾಟರಾಯನಪುರದಲ್ಲಿ 30 ಎಕರೆ ಭೂಸ್ವಾದೀನ ಆಗಿತ್ತು. ಪಿಪಿಪಿ ಮಾದರಿಯಲ್ಲಿ ಇಲ್ಲಿ ಕಟ್ಟಡ ನಿರ್ಮಿಸಲು ಶೋಭಾ ಡೆವಲಪರ್ಸ್‌ ಮುಂದೆ ಬಂದಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ನಿಂತಿತ್ತು. ಬಳಿಕ ಮಾಗಡಿ ರಸ್ತೆಯ ಭಾಗಕ್ಕೆ ಸ್ಥಳಾಂತರಿಸುವ ನಿರ್ಧಾರವೂ ಫಲಿಸಲಿಲ್ಲ. ಈಗಿನ ಎಲೆಕ್ಟ್ರಾನಿಕ್‌ ಸಿಟಿ ಹಣ್ಣಿನ ಮಾರುಕಟ್ಟೆಗೆ ಸ್ಥಳಾಂತರಿಸಲು ಮುಂದಾದಾಗ ಸೂಕ್ತ ಸ್ಥಳವಲ್ಲ ಎಂದು ಸಗಟು ವ್ಯಾಪಾಸ್ಥರೇ ನಿರಾಕರಿಸಿದರು.

ಬಿಬಿಎಂಪಿ ಒಡೆತನದ ಕಲಾಸಿಪಾಳ್ಯ ಪ್ರದೇಶದಲ್ಲಿ ಮಾರುಕಟ್ಟೆನಡೆಸಲು ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ವಾರ್ಷಿಕ .42 ಲಕ್ಷ ಬಾಡಿಗೆ ಪಾವತಿಸುತ್ತಿದೆ. 2018ರಲ್ಲಿ ಈ ಮಾರುಕಟ್ಟೆಅಭಿವೃದ್ಧಿಗೆ ಬಿಬಿಎಂಪಿ .9.29 ಕೋಟಿ ಮಂಜೂರು ಮಾಡಿ ಕಾಮಗಾರಿ ಕೈಗೆತ್ತಿಕೊಂಡಿದೆ. ಚಾವಣಿ ದುರಸ್ತಿ ಹಾಗೂ ಮರು ನಿರ್ಮಾಣ, ಶೌಚಾಲಯ, ಕುಡಿವ ನೀರು, ಒಳಚರಂಡಿ, ಬೋರ್‌ವೆಲ್‌ ನಿರ್ಮಾಣಕ್ಕೆ ಮುಂದಾಗಿದೆ. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ.

 

ಮಾರುಕಟ್ಟೆ ತೆರೆದರೂ ಗ್ರಾಹಕರ ಸುಳಿವಿಲ್ಲ: ಸಂಕಷ್ಟದಲ್ಲಿ ವ್ಯಾಪಾರಿಗಳು

‘1983ರಲ್ಲಿ ಕೆ.ಆರ್‌.ಮಾರ್ಕೆಟ್‌ನಿಂದ ಬೇರೆಯಾಗಿ ಕಲಾಸಿಪಾಳ್ಯಕ್ಕೆ ಬಂದು ಸಗಟು ಮಾರುಕಟ್ಟೆನಡೆಸುತ್ತಿದ್ದೇವೆ. ಸುಮಾರು 500 ಸಗಟು ವ್ಯಾಪಾರಿಗಳಿದ್ದೇವೆ. ಹಲವು ಬಾರಿ ಮನವಿ ಮಾಡಿದರೂ ಸ್ಥಳಾಂತರ ಬೇಡಿಕೆ ಈಡೇರುತ್ತಿಲ್ಲ’ ಎಂದು ಕಲಾಸಿಪಾಳ್ಯ ತರಕಾರಿ, ಹಣ್ಣು ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ ಆರ್‌.ವಿ.ಗೋಪಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಳೆದ 20 ವರ್ಷದಿಂದ ಕಲಾಸಿಪಾಳ್ಯ ಮಾರುಕಟ್ಟೆಸ್ಥಳಾಂತರ ಬೇಡಿಕೆ ಇದೆ. ಒಂದಲ್ಲಾ ಒಂದು ಅಡ್ಡಿ ಎದುರಾಗುತ್ತಿದೆ. ಸರ್ಕಾರ ಸಮರ್ಪಕ ನಿರ್ಧಾರ ತೆಗೆದುಕೊಂಡು ಕ್ರಮ ಜರುಗಿಸಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಬೇಕು.

-ಆರ್‌.ವಿ.ಗೋಪಿ, ತರಕಾರಿ-ಹಣ್ಣು ಸಗಟು ಮಾರಾಟಗಾರರ ಸಂಘದ ಅಧ್ಯಕ್ಷ

ಭೂಸ್ವಾಧೀನ ಅಧಿಸೂಚನೆ ರದ್ದತಿ ಕುರಿತು ಹೈಕೋರ್ಚ್‌ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಅಲ್ಲಿ ಸಮಸ್ಯೆ ಪರಿಹರಿಸಿಕೊಂಡು ಮಾರುಕಟ್ಟೆಸ್ಥಳಾಂತರಿಸುತ್ತೇವೆ.

-ವಿ.ರಾಜಣ್ಣ, ಎಪಿಎಂಸಿ ವಿಶೇಷ ಕಾರ್ಯದರ್ಶಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!