
ವಿಶೇಷ ವರದಿ
ಬೆಂಗಳೂರು (ಅ.10) : ರಾಜಧಾನಿ ಬೆಂಗಳೂರಿನ ಉಸ್ತುವಾರಿ ಹೊತ್ತಿರುವ ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಬರೋಬ್ಬರಿ ಅರ್ಧ ಡಜನ್‌ಗೂ ಅಧಿಕ ಸಚಿವರ ದಂಡು ಇದ್ದರೂ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಮಾತ್ರ ಗುಂಡಿ ಮುಕ್ತವಾಗುತ್ತಿಲ್ಲ. ನಗರದ ಯಾವುದೇ ಭಾಗಕ್ಕೆ ತೆರಳಿದರೂ ಅಲ್ಲಿನ ಹದಗೆಟ್ಟರಸ್ತೆಗಳೇ ಸ್ವಾಗತಿಸುತ್ತವೆ.
Bengaluru: ಇನ್ನೂ 1051 ರಸ್ತೆ ಗುಂಡಿ ಭರ್ತಿ ಬಾಕಿ: ತ್ವರಿತವಾಗಿ ಮುಚ್ಚುವಂತೆ ರಾಕೇಶ್ ಸಿಂಗ್ ಸೂಚನೆ
ಬೆಂಗಳೂರಿನ ರಸ್ತೆಗಳು ದುರಸ್ತಿಗೊಳ್ಳಬೇಕಾದಲ್ಲಿ ಶೀಘ್ರ ಬಿಬಿಎಂಪಿ ಚುನಾವಣೆ ಎದುರಾಗುವುದೊಂದೇ ಉಳಿದಿರುವ ಪರಿಹಾರ. ಚುನಾವಣೆ ನಡೆಯುವುದು ನಿಶ್ಚಿತವಾಗದ ಹೊರತು ರಸ್ತೆಗಳ ಅವ್ಯವಸ್ಥೆಗೆ ಮುಕ್ತಿಯೇ ಇಲ್ಲ ಎನ್ನುವ ಪರಿಸ್ಥಿತಿಯಿದೆ. ಸ್ಥಳೀಯ ಸಚಿವರು, ಶಾಸಕರು ಮಾತ್ರ ರಸ್ತೆಗೂ ಮತ್ತು ತಮಗೂ ಸಂಬಂಧವೇ ಇಲ್ಲ. ಅದೇನಿದ್ದರೂ ಬಿಬಿಎಂಪಿ ಕೆಲಸ ಎಂಬ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.
ನಿತ್ಯ ವಾಹನ ಸವಾರರು ಗುಂಡಿಗಳಿರುವ ರಸ್ತೆಗಳಲ್ಲಿ ಪರದಾಟದ ಜತೆಗೆ, ಅಪಘಾತಕ್ಕೆ ಒಳಗಾಗಿ ಮೈ-ಕೈ ಮುರಿದುಕೊಳ್ಳುತ್ತಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಅಥವಾ ಗುಂಡಿಯಿಂದಾಗಿ ಉಂಟಾಗುವ ಅಪಘಾತದಿಂದ ಸಂಭವಿಸುವ ಸಾವುಗಳ ಬಗ್ಗೆ ಮಾತ್ರ ಅಧಿಕೃತವಾಗಿ ಮಾಹಿತಿ ಲಭ್ಯವಾಗುತ್ತದೆ. ಆದರೆ, ಬಿದ್ದು ಎದ್ದು ಗಾಯವಾಗಿ ನೋವು ಅನುಭವಿಸುವ ಸವಾರರ ಬಗ್ಗೆ ಮಾಹಿತಿ ಹೊರಬೀಳುವುದೇ ಅಪರೂಪ.
ಬೆಂಗಳೂರಿನ ಮೂಲಸೌಕರ್ಯ ಒದಗಿಸುವ ಜವಾಬ್ದಾರಿ ಹೊಂದಿರುವ ಬಿಬಿಎಂಪಿಗೆ ಚುನಾವಣೆ ನಡೆಯದ ಕಾರಣಕ್ಕೆ ರಾಜ್ಯ ಸರ್ಕಾರವು ಹಿರಿಯ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಯನ್ನು ಆಡಳಿತಾಧಿಕಾರಿ ಹುದ್ದೆಗೆ ನೇಮಿಸಿದೆ. ಜತೆಗೆ ಮುಖ್ಯ ಆಯುಕ್ತರು, ವಲಯಕ್ಕೆ ಒಬ್ಬ ವಿಶೇಷ ಆಯುಕ್ತರು, ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವುದಕ್ಕೆ ಜಂಟಿ ಆಯುಕ್ತರು, ಎಂಜಿನಿಯರ್ ಸೇರಿದಂತೆ ನೂರಾರು ಮಂದಿ ಅಧಿಕಾರಿಗಳಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಅಧಿಕಾರಿ ವರ್ಗವಿದ್ದರೂ ರಸ್ತೆ ಗÜುಂಡಿ ಸಮಸ್ಯೆಯೊಂದನ್ನು ಪರಿಹಾರ ಮಾಡುವುದಕ್ಕೆ ಘನ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಏಕೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.
ಕಳೆದ ನಾಲ್ಕೈದು ತಿಂಗಳಿನಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಇದರಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಈವರೆಗೆ ಸುಮಾರು 25 ಸಾವಿರ ರಸ್ತೆ ಗುಂಡಿ ಗುರುತಿಸಲಾಗಿದ್ದು, ಕೆಲವೇ ಸಂಖ್ಯೆಯ ರಸ್ತೆ ಗುಂಡಿ ಮುಚ್ಚುವುದು ಬಾಕಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ವಾಸ್ತವಾಂಶವೇ ಬೇರೆ. ಸಾವಿರಾರು ಸಂಖ್ಯೆಯ ರಸ್ತೆ ಗುಂಡಿಗಳನ್ನು ಮುಚ್ಚುವುದು ಇನ್ನೂ ಬಾಕಿದೆ. ಕೆಲವು ಕಡೆ ರಸ್ತೆ ಗುಂಡಿ ಮುಚ್ಚಿದ ವಾರದಲ್ಲಿಯೇ ಮತ್ತೆ ಗುಂಡಿಗಳು ಸೃಷ್ಟಿಯಾಗಿವೆ.
ಇದಕ್ಕೆ ತಾಜಾ ಉದಾರಣೆ ಎಂಬಂತೆ ಮಲ್ಲೇಶ್ವರದ ಐದನೇ ಮುಖ್ಯ ರಸ್ತೆ, ಐದನೇ ಅಡ್ಡ ರಸ್ತೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ಡಾಂಬಾರೀಕರಣ ಮಾಡಲಾಗಿದೆ. ಆದರೆ, ಕಾಮಗಾರಿ ಮುಗಿದು ಕೆಲವೇ ದಿನದಲ್ಲಿ ರಸ್ತೆ ಉದ್ದಕ್ಕೂ ಗುಂಡಿಗಳು ಬಿದ್ದಿವೆ. ಜತೆಗೆ, ಓಎಫ್‌ಸಿ ಕೇಬಲ್ ಹಾಕುವುದಕ್ಕೆ ರಸ್ತೆಯನ್ನು ಕತ್ತರಿಸಲಾಗಿದೆ. ಇನ್ನು ಕೆಲವು ರಸ್ತೆಗಳಲ್ಲಿ ಗುಂಡಿ ಪಕ್ಕದಲ್ಲಿ ಗುಂಡಿ ಇದ್ದರೂ, ಒಂದು ಗುಂಡಿ ಮುಚ್ಚಿ ಮತ್ತೊಂದು ಗುಂಡಿಯನ್ನು ಮುಚ್ಚದೇ ಬಿಟ್ಟಿರುವುದು ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಸ್ತೆಯಲ್ಲಿ ಕಂಡು ಬಂದಿವೆ.
ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ನಾಗರಬಾವಿಯ ನಮ್ಮೂರ ತಿಂಡಿ ಹೋಟೆಲ್‌ನಿಂದ ಅಂಬೇಡ್ಕರ್ ಕಾಲೇಜುವರೆಗಿನ ರಸ್ತೆ ಸಂಪೂರ್ಣವಾಗಿ ಗುಂಡಿ ಬಿದ್ದಿವೆ. ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಇಟ್ಟುಕೊಂಡು ಓಡಾಡಬೇಕಾದ ಸ್ಥಿತಿ ಇದೆ. ನಾಯಂಡಹಳ್ಳಿ, ವಿನಾಯಕ ನಗರ ಭಾಗದ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯ ರಸ್ತೆ ಗುಂಡಿಗಳಿವೆ. ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ರಸ್ತೆಗಳಲ್ಲಿ ಸ್ಥಿತಿ ಅಂತ್ಯ ಶೋಚನೀಯವಾಗಿವೆ. ನಗರದ ಕೇಂದ್ರ ಭಾಗದಲ್ಲಿರುವ ಕೆ.ಆರ್.ಮಾರುಕಟ್ಟೆಯಿಂದ ಸಿರ್ಸಿ ವೃತ್ತದ ಕಡೆ ಸಾಗುವ ಫ್ಲೈಓವರ್ ಕೆಳಭಾಗದ ರಸ್ತೆಯು ಗುಂಡಿಯಲ್ಲಿಯೇ ನಿರ್ಮಿಸಿದಂತಿದೆ.
ರಾಜಾಜಿನಗರ, ಗಾಂಧಿನಗರ, ಪದ್ಮನಾಭನಗರ, ಮಹಾಲಕ್ಷ್ಮೇಲೇಔಟ್, ಗೋವಿಂದರಾಜನಗರ, ರಾಜರಾಜೇಶ್ವರಿನಗರ, ಕೆ.ಆರ್.ಪುರ, ಬ್ಯಾಟರಾಯನಪುರ, ಹೆಬ್ಬಾಳ,ಯಲಹಂಕ, ಚಾಮರಾಜಪೇಟೆ, ಚಿಕ್ಕಪೇಟೆ, ಜಯನಗರ, ಬಿಟಿಎಂ, ಬೊಮ್ಮನಹಳ್ಳಿ, ಸಿವಿ ರಾಮನ್ ನಗರ, ಮಹದೇವಪುರ, ಶಿವಾಜಿನಗರ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರದ ವಾರ್ಡ್ ರಸ್ತೆಗಳಲ್ಲಿ ದೊಡ್ಡ ಸಂಖ್ಯೆಯ ಗುಂಡಿಗಳಿವೆ. ಕೆಲವು ಕಡೆ ರಸ್ತೆಯ ಮೇಲ್ಪದರವೇ ಕಿತ್ತುಹೋಗಿದೆ.
ಕೋಟಿ ಕೋಟಿ ವೆಚ್ಚ
ರಸ್ತೆ ಗುಂಡಿ ಮುಚ್ಚುವುದಕ್ಕೆ ಪ್ರತಿ ವರ್ಷ ಕೋಟ್ಯಂತರ ರು. ವೆಚ್ಚ ಮಾಡಲಾಗುತ್ತದೆ. ಅದರೊಂದಿಗೆ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಪ್ರತ್ಯೇಕ ಹಣ ವೆಚ್ಚ ಮಾಡಲಾಗುತ್ತದೆ. ಆದರೂ ಬೆಂಗಳೂರಿನ ರಸ್ತೆಗಳು ಮಾತ್ರ ಸಂಚಾರ ಯೋಗ್ಯ ರಸ್ತೆಗಳಾಗುತ್ತಿಲ್ಲ. ಕಳೆದ ಐದು ವರ್ಷದಲ್ಲಿ (2017-18ರಿಂದ 2021-22ವರೆಗೆ) ಬರೋಬ್ಬರಿ .215.24 ಕೋಟಿ ವೆಚ್ಚ ಮಾಡಲಾಗಿದೆ.
ಅವೈಜ್ಞಾನಿಕ ಕ್ರಮದಿಂದ ವಿಳಂಬ?
ಬಿಬಿಎಂಪಿಯ ಫಿಕ್ಸ್ ಮೈಸ್ಟ್ರೀಟ್ ಆ್ಯಪ್‌ನಲ್ಲಿ ಗುರುತಿಸಿದ ರಸ್ತೆ ಗುಂಡಿಗಳ ಹೊರತಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ರಸ್ತೆ ಗುಂಡಿ ಮುಚ್ಚಿದರೆ ಅದಕ್ಕೆ ಹಣ ನೀಡುವುದಿಲ್ಲ ಎಂದು ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಎಂಜಿನಿಯರ್ ಪ್ರಹ್ಲಾದ್ ಅವರು ಆದೇಶಿಸಿದ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕೆಲಸ ವಿಳಂಬವಾಗುತ್ತಿದೆ ಎಂಬ ಆರೋಪ ಬಿಬಿಎಂಪಿಯ ಇತರೆ ಎಂಜಿನಿಯರ್‌ಗಳಿಂದಲೇ ಕೇಳಿಬರುತ್ತಿದೆ.
ದುಡ್ಡು ಇಸ್ಕಂಡು ಇಟ್ಕಂಡ್ರೆ ಗುಂಡಿ ಮುಚ್ಚೋರು ಯಾರು?
ಐದು ವರ್ಷದಲ್ಲಿ 12 ಸಾವು
ರಸ್ತೆ ಗುಂಡಿಯಿಂದ ನಿತ್ಯ ಹತ್ತಾರು ಮಂದಿ ಬಿದ್ದು ಮೈ-ಕೈ ಗಾಯ ಮಾಡಿಕೊಳ್ಳುತ್ತಾರೆ. ಆದರೆ. ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತದಲ್ಲಿ ಅನೇಕರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಕಳೆದ ಐದು ವರ್ಷದಲ್ಲಿ ಒಟ್ಟು 12 ಮಂದಿ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನ ರಸ್ತೆ ಮತ್ತು ವಾಹನ ವಿವರ
ಬ್ಯಾಡರಹಳ್ಳಿ ಡಬ್ಬಲ್ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುವಾಗ ರಸ್ತೆ ಗುಂಡಿಯಿಂದ ಬಿದ್ದು, ಕೈ,ಕಾಲು ಹಾಗೂ ಹೊಟ್ಟೆಭಾಗದಲ್ಲಿ ಗಾಯವಾಗಿದೆ. ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಬೇಜಾಬ್ದಾರಿಯಿಂದ ರಸ್ತೆ ಕಿತ್ತು ಹೋಗಿ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ.
-ರವಿ ಕಿರಣ, ರಸ್ತೆ ಗುಂಡಿಯಿಂದ ಅಪಘಾತಕ್ಕೀಡಾದವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ