
ಬೆಂಗಳೂರು(ಅ.14): ರಾಜ್ಯದ ಹಲವೆಡೆ ಗುರುವಾರವೂ ಮಳೆಯಾಗಿದ್ದು, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳಲ್ಲಿ ಮಳೆಗೆ ಮನೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಬಾಗಲಕೋಟೆಯ ಕಿಲ್ಲಾ ಗಲ್ಲಿಯಲ್ಲಿ ಮನೆಯ ಛಾವಣಿ ಕುಸಿದು ಸುಧಾಬಾಯಿ ಪ್ರಹ್ಲಾದರಾವ್ ಕಾವೇರಿ (81) ಎಂಬುವರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆ ಬೆಟಗೇರಿಯ ಕನ್ಯಾಳ ಅಗಸಿಯಲ್ಲಿ ಮನೆಯ ಗೋಡೆ ಕುಸಿದು ಸುಶೀಲವ್ವ ಅಡಿವಯ್ಯ ಕಲ್ಮಠ (60) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ, ಅಡಿವಯ್ಯ ಹಾಗೂ ಬಸಮ್ಮ ಎಂಬುವರು ಗಾಯಗೊಂಡಿದ್ದಾರೆ.
ಈ ಮಧ್ಯೆ, ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಯತ್ನಿಸಿದಾಗ, ಬೈಕ್ ಸವಾರನೊಬ್ಬ ಕೊಚ್ಚಿಕೊಂಡು ಹೋಗಿದ್ದು, ಸ್ಥಳೀಯರು ಆತನನ್ನು ರಕ್ಷಣೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಬಂಡರಗಲ್ ಗ್ರಾಮದಲ್ಲಿ ಹಳ್ಳ ದಾಟಲು ಗ್ರಾಮಸ್ಥರು ಜೆಸಿಬಿ ಮೊರೆಹೋಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ, ರಾಯಚೂರು ನಗರದ ಸಿಯಾತಲಾಬ್ ಬಡಾವಣೆ ಜಲಾವೃತಗೊಂಡು ಅಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಶಸ್ತ್ರಚಿಕಿತ್ಸೆಗೊಳಗಾಗಿರುವ ಬಾಣಂತಿ, ಪಲ್ಲವಿ ಎಂಬುವರು ನವಜಾತ ಶಿಶುವಿನೊಂದಿಗೆ ಬುಧವಾರ ಇಡೀ ರಾತ್ರಿ ಮಂಚದ ಮೇಲೆಯೇ ಇರುವ ದು:ಸ್ಥಿತಿ ನಿರ್ಮಾಣಗೊಂಡಿತ್ತು.
Davanagere Rains: ಭಾರೀ ಮಳೆಗೆ ಹಳ್ಳ, ರಸ್ತೆಗಳು ಮುಳುಗಡೆ
ಸಿರವಾರ ತಾಲೂಕಿನ ಕೆ.ತುಪ್ಪದೂರು ಗ್ರಾಮದ ಹಳ್ಳ ಭರ್ತಿಯಾಗಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ. ಈ ವೇಳೆ, ಗ್ರಾಮದ ಗರ್ಭಿಣಿಯೊಬ್ಬಳಿಗೆ ನೋವು ಕಾಣಿಸಿಕೊಂಡಿದ್ದರಿಂದ ಎತ್ತಿನ ಬಂಡಿಯಲ್ಲಿ ಆಕೆಯನ್ನು ಸಿರವಾರದ ಆಸ್ಪತ್ರೆಗೆ ಸಾಗಿಸಲಾಯಿತು. ಇದೇ ವೇಳೆ, ಚಳ್ಳಕೆರೆಯ ಪಿ.ಗೌರಿಪುರದ ಹೊರಭಾಗದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಮಳೆ ಹಿನ್ನೆಲೆಯಲ್ಲಿ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 1.86 ಲಕ್ಷ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ನದಿ ತೀರದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ. ಇದೇ ವೇಳೆ, ರಾಜಧಾನಿ ಬೆಂಗಳೂರು, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಇತರೆಡೆಯೂ ಮಳೆಯಾದ ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ