ಕೇಂದ್ರ ಸರ್ಕಾರದ ನಿಯಮ ಬಳಸಿ ಓಲಾ, ಉಬರ್‌ನಿಂದ ಭಾರೀ ಸುಲಿಗೆ..!

Published : Oct 14, 2022, 06:59 AM ISTUpdated : Oct 14, 2022, 11:23 AM IST
ಕೇಂದ್ರ ಸರ್ಕಾರದ ನಿಯಮ ಬಳಸಿ ಓಲಾ, ಉಬರ್‌ನಿಂದ ಭಾರೀ ಸುಲಿಗೆ..!

ಸಾರಾಂಶ

50%ನಿಂದ 150%ವರೆಗೂ ದರ ಏರಿಳಿಕೆಗೆ ಕೇಂದ್ರದ ಮಾರ್ಗಸೂಚಿಯಲ್ಲಿ ಅವಕಾಶ, ಕಡಿವಾಣ ಹಾಕಲು ರಾಜ್ಯಕ್ಕಿದೆ ಅಧಿಕಾರ, ಬದ್ಧತೆ ತೋರುವುದೇ ರಾಜ್ಯ ಸರ್ಕಾರ?

ಜಯಪ್ರಕಾಶ್‌ ಬಿರಾದಾರ್‌ 

ಬೆಂಗಳೂರು(ಅ.14):  ‘ಅಗ್ರಿಗೇಟರ್‌ಗಳು ಟ್ಯಾಕ್ಸಿ ದರವನ್ನು ಶೇ.50ರಿಂದ ಶೇ.150ರಷ್ಟುಏರಿಳಿಕೆ ಮಾಡಬಹುದು’ ಎಂದು ಕೇಂದ್ರ ಸಾರಿಗೆ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ನೇ ಬಂಡವಾಳವಾಗಿಟ್ಟುಕೊಂಡು ಓಲಾ, ಉಬರ್‌ ಕಂಪನಿಗಳು ಪ್ರಯಾಣಿಕರ ಸುಲಿಗೆಗೆ ನಿಂತಿವೆ. ಇದನ್ನು ತಡೆಯಬೇಕಾದ ರಾಜ್ಯ ಸರ್ಕಾರ ಕೇಂದ್ರದ ನೀತಿಯ ನೆಪ ಹೇಳಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ಆದರೆ, ಈ ಸುಲಿಗೆಯನ್ನು ನಿಲ್ಲಿಸಬೇಕು ಎಂಬ ಬದ್ಧತೆ ರಾಜ್ಯ ಸರ್ಕಾರಕ್ಕೆ ಇದ್ದರೆ ಮಾರ್ಗಸೂಚಿಯ ಹೊರತಾಗಿಯೂ ಸೂಕ್ತ ದರ ನಿಗದಿ ಮಾಡಿ ಅದನ್ನು ಪಾಲಿಸುವಂತೆ ಓಲಾ, ಉಬರ್‌ನಂತಹ ಕಂಪನಿಗಳನ್ನು ಕಾನೂನಾತ್ಮಕವಾಗಿಯೇ ಕಟ್ಟಿಹಾಕಬಹುದು. ಏಕೆಂದರೆ, ಕೇಂದ್ರ ಸರ್ಕಾರವು ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಯನ್ನು ರಾಜ್ಯ ಸರ್ಕಾರಗಳು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಆಗ್ರಿಗೇಟರ್ಸ್‌ ಮಾರ್ಗಸೂಚಿ ನೀಡಿದೆಯೇ ಹೊರತು ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೇನೂ ನಿರ್ಬಂಧಿಸಿಲ್ಲ. ಹೀಗಾಗಿ ರಾಜ್ಯಗಳು ಮಾರ್ಗಸೂಚಿಯಲ್ಲಿನ ಕೆಲ ಅಂಶಗಳನ್ನು ಬದಲಾಯಿಸಿ ತಮ್ಮ ರಾಜ್ಯಗಳ ಪ್ರಯಾಣಿಕರ ಹಿತ ಕಾಪಾಡುವ ಎಲ್ಲ ಅವಕಾಶವಿದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

ಆಟೋ ಹತ್ತಿದ್ರೆ 100 ರೂಪಾಯಿ, ಜನರ ರಕ್ತ ಹೀರುವ ಓಲಾ, ಊಬರ್‌ಗೆ ಸಾರಿಗೆ ಇಲಾಖೆ ನೋಟಿಸ್‌!

‘ಕೇಂದ್ರ ಸರ್ಕಾರದ ಮೋಟರ್‌ ವಾಹನ ಅಗ್ರಿಗೇಟರ್ಸ್‌ ಮಾರ್ಗಸೂಚಿ-2020’ರಂತೆ ಅಗ್ರಿಗೇಟರ್ಸ್‌ಗಳಿಗೆ ಶೇ.50 ರಿಂದ ಶೇ.150ರಷ್ಟುದರ ಏರಿಳಿಕೆ ಮಾಡುವ ಅವಕಾಶವಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಓಲಾ, ಉಬರ್‌ ಸೇರಿದಂತೆ ಆಗ್ರಿಗೇಟರ್ಸ್‌ ಆ್ಯಪ್‌ಗಳು ಆಟೋ ರಿಕ್ಷಾ, ಕಾರುಗಳ ದರವನ್ನು ಸಾಕಷ್ಟು ಏರಿಕೆ ಮಾಡಿ ಪ್ರಯಾಣಿಕರಿಂದ ಹೆಚ್ಚಿನ ದರವನ್ನು ಪಡೆಯುತ್ತಿವೆ. ರಾಜ್ಯದಲ್ಲಿ ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ-2016’ರ ಕಾಯ್ದೆಯಡಿ ಈ ಆ್ಯಪ್‌ಗಳು ಅನುಮತಿ ಪಡೆದಿದ್ದರೂ, ಕೇಂದ್ರದ ನೂತನ ಮಾರ್ಗಸೂಚಿ ತೋರಿಸಿ ಪ್ರಯಾಣಿಕರ ಸುಲಿಗೆ ಮಾಡುತ್ತಿವೆ.

ಆದರೆ, ಕೇಂದ್ರ ಸರ್ಕಾರವು ಕೇವಲ ಮಾರ್ಗಸೂಚಿಯನ್ನು ನೀಡಿದ್ದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಂಡು ಅಗ್ರಿಗೇಟರ್ಸ್‌ಗಳ ದರ ನಿಗದಿ ಮಾಡುವ, ರಾಜ್ಯಕ್ಕೆ ತಕ್ಕಂತೆ ಬಲಿಷ್ಠ ಕಾಯ್ದೆಯನ್ನು ರೂಪಿಸುವ ಶಕ್ತಿ ರಾಜ್ಯ ಸರ್ಕಾರಗಳಿಗಿದೆ ಎಂದು ತಜ್ಞರು ಹೇಳುತ್ತಾರೆ.

ಆಟೋರಿಕ್ಷಾ ಪ್ರತಿ ಕಿ.ಮೀ.ಗೆ ಗರಿಷ್ಠ .37.5!:

ಕೇಂದ್ರ ಸರ್ಕಾರವು ಮಾರ್ಗಸೂಚಿಯಲ್ಲಿ ಸ್ಥಳೀಯ ಆಡಳಿತ ನಿಗದಿ ಮಾಡಿರುವ ಟ್ಯಾಕ್ಸಿ ದರವನ್ನು ಶೇ.50 ರಿಂದ ಶೇ.150ರಷ್ಟು ಏರಿಳಿಕೆ ಮಾಡುವ ಅವಕಾಶ ನೀಡಿದೆ. ಜತೆಗೆ ಜಿಎಸ್‌ಟಿ, ರಾಜ್ಯ ಸರ್ಕಾರದ ಕಮಿಷನ್‌(ಶೇ.2) ಸೇರಿಸಬಹುದು. ಆ ಪ್ರಕಾರ ಪ್ರತಿ ಕಿ.ಮೀ.ಗೆ ಗರಿಷ್ಠ 37.5 ರು. ಪಡೆಯಲು ಆ್ಯಪ್‌ ಕಂಪನಿಗಳಿಗೆ ಅವಕಾಶವಿದೆ. ಕನಿಷ್ಠ (2 ಕಿ.ಮೀ.) ಪ್ರಯಾಣ ದರವನ್ನು 75 ರು.ವರೆಗೂ ಹೆಚ್ಚಿಸಬಹುದಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಜಿಲ್ಲಾಡಳಿತದಿಂದ ಆಟೋರಿಕ್ಷಾ ಪ್ರಯಾಣದರ ಪ್ರತಿ ಕಿ.ಮೀ 15 ರು. ಇದ್ದು ಆ ದರಕ್ಕೆ ಹೋಲಿಸಿದರೆ ಕೇಂದ್ರದ ಮಾರ್ಗಸೂಚಿ ಗರಿಷ್ಠ ದರವು ದುಪ್ಪಟ್ಟಿಗಿಂತಲೂ ಅಧಿಕವಿದೆ.

ಪ್ರಯಾಣಿಕರ ಸುಲಿಗೆಗೆ ಬೆಲೆತೆತ್ತ ಓಲಾ, ಉಬರ್‌: ಚಾಲಕರು, ಪ್ರಯಾಣಿಕರು ಇಬ್ಬರಿಗೂ ಅನ್ಯಾಯ

ಆ್ಯಪ್‌ಗಳು ಯಾವುದಾದರೂ ನಗರದಲ್ಲಿ ಹೊಸದಾಗಿ ಟ್ಯಾಕ್ಸಿ ಸೇವೆ ಆರಂಭಿಸಿದರೆ ಪ್ರಯಾಣಿಕರನ್ನು ಆಕರ್ಷಿಸಲು ಈ ಮಾರ್ಗಸೂಚಿಯನ್ನೇ ಬಳಸಿ ಪ್ರಯಾಣ ದರವನ್ನು ಅರ್ಧಕ್ಕರ್ಧ ಕಡಿಮೆ ಮಾಡುತ್ತಿದ್ದವು. ಬೆಂಗಳೂರಿನಲ್ಲಿ ಕಳೆದ ವರ್ಷ ಆಟೋ ಸೇವೆ ಆರಂಭಿಸಿದ ಉಬರ್‌ ಸಂಸ್ಥೆಯು ಕೂಡ ಆಟೋರಿಕ್ಷಾ ದರದಲ್ಲಿ ವಿಶೇಷ ರಿಯಾಯಿತಿ ನೀಡಿತ್ತು. ಈಗ ಪ್ರಯಾಣಿಕರು ಕುದುರಿಕೊಂಡ ನಂತರ ದುಬಾರಿ ದರ ವಿಧಿಸುತ್ತಿದೆ. ಇದನ್ನು ತಡೆಗಟ್ಟುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ ಎಂದೇ ತಜ್ಞರು ಹೇಳುತ್ತಾರೆ.

ಓಲಾ, ಉಬರ್‌ ಕೇಸ್‌ ಈಗ ಹೈಕೋರ್ಟ್‌ಗೆ

ಬೆಂಗಳೂರು: ಆಟೋ ರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ವಿರುದ್ಧ ಓಲಾ ಹಾಗೂ ಉಬರ್‌ ಕಂಪನಿಗಳು ಹೈಕೋರ್ಟ್‌ ಮೆಟ್ಟಿಲೇರಿವೆ. ಈ ಎರಡೂ ಕಂಪನಿಗಳ ಜತೆ ಸಭೆ ನಡೆಸಿ ನ್ಯಾಯಯುತ ದರ ವಿಧಿಸುವ ಬಗ್ಗೆ ಒಮ್ಮತಕ್ಕೆ ಬರಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

*ಕೇಂದ್ರ ಸರ್ಕಾರದ ಮಾರ್ಗಸೂಚಿ ಬಳಸಿಯೇ ಆ್ಯಪ್‌ಗಳು ಹೆಚ್ಚು ದರ ವಸೂಲಿ ಮಾಡುತ್ತಿವೆ. ಆ ಮಾರ್ಗಸೂಚಿಯನ್ನೇ ಸಂಪೂರ್ಣ ಒಪ್ಪಿಕೊಳ್ಳಬೇಕು ಎಂಬ ನಿಯಮವಿಲ್ಲ. ಸ್ಥಳೀಯವಾಗಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡು ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪನಿಗೆ ಬೆಲೆ ನಿಗದಿ ಮಾಡಬಹುದು. ಆಗ ರಾಜ್ಯದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದಾದರೆ ಆ ಆ್ಯಪ್‌ ಕಂಪನಿಗಳು ಇಲ್ಲಿನ ಕಾನೂನು ಪಾಲಿಸುತ್ತವೆ ಅಂತ ಕರ್ನಾಟಕ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ