ರಾಗಾ ವಿರುದ್ಧ ಟ್ವೀಟ್‌: ಮಾಳವಿಯ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ

Published : Jul 20, 2023, 05:44 AM IST
ರಾಗಾ ವಿರುದ್ಧ ಟ್ವೀಟ್‌: ಮಾಳವಿಯ ವಿರುದ್ಧ ವಿಚಾರಣೆಗೆ ಹೈಕೋರ್ಟ್ ತಡೆ

ಸಾರಾಂಶ

 ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರ ವಿರುದ್ಧ ಅನಿಮೇಟೆಡ್‌ ವಿಡಿಯೋ ಟ್ವೀಟ್‌ ಮಾಡಿದ್ದ ಆರೋಪ ಸಂಬಂಧ ಬಿಜೆಪಿ ಐಟಿ ಘಟಕದ ಉಸ್ತುವಾರಿ ಅಮಿತ್‌ ಮಾಳವಿಯ ವಿರುದ್ಧದ ಎಫ್‌ಐಆರ್‌ ಮತ್ತು ಬೆಂಗಳೂರಿನ ಎಸಿಎಂಎಂ ಕೋರ್ಟ್ ವಿಚಾರಣೆಗೆ ಹೈಕೋರ್ಟ್ ಜು.27ರವರೆಗೆ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು (ಜು.20) :  ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರ ವಿರುದ್ಧ ಅನಿಮೇಟೆಡ್‌ ವಿಡಿಯೋ ಟ್ವೀಟ್‌ ಮಾಡುವ ಮೂಲಕ ಸಮಾಜದಲ್ಲಿ ವಿವಿಧ ವರ್ಗಗಳ ನಡುವೆ ದ್ವೇಷ ಬಿತ್ತುವ ಹಾಗೂ ಕೋಮು ಸೌಹಾರ್ದತೆ ಕದಡುವ ಕೃತ್ಯ ಎಸಗಿದ ಆರೋಪ ಸಂಬಂಧ ಬಿಜೆಪಿ ಐಟಿ ಘಟಕದ ಉಸ್ತುವಾರಿ ಅಮಿತ್‌ ಮಾಳವಿಯ ವಿರುದ್ಧದ ಎಫ್‌ಐಆರ್‌ ಮತ್ತು ಬೆಂಗಳೂರಿನ ಎಸಿಎಂಎಂ ಕೋರ್ಟ್ ವಿಚಾರಣೆಗೆ ಹೈಕೋರ್ಟ್ ಜು.27ರವರೆಗೆ ಮಧ್ಯಂತರ ತಡೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತದರ 8ನೇ ಎಸಿಎಂಎಂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಅಮಿತ್‌ ಮಾಳವಿಯ(Amit malaviya) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ರಾಹುಲ್ ಅವಹೇಳನ: ಜೆಪಿ ನಡ್ಡಾ, ಮಾಳವೀಯ ವಿರುದ್ಧ ಕಾಂಗ್ರೆಸ್ ದೂರು!

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್ ವಕೀಲರೂ ಆದ ಸಂಸದ ತೇಜಸ್ವಿ ಸೂರ್ಯ ವಾದ ಮಂಡಿಸಿ, ಮಾಳವಿಯ ವಿರುದ್ಧ ರಾಜಕೀಯ ಪ್ರೇರಿತವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಅವರಿಗೆ ಬಂಧನದ ಭೀತಿ ಇದೆ. ಟ್ವೀಟ್‌ ಮಾಡಲಾಗಿರುವ ವಿಡಿಯೋಗೆ ನೀಡಿರುವ ವಿವರಣೆಯನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದು ಯಾವುದೇ ರೀತಿಯಲ್ಲೂ ವಿವಿಧ ಸಮುದಾಯಗಳ ನಡುವೆ ಭಾಷೆ, ಧರ್ಮದ ಆಧಾರದಲ್ಲಿ ದ್ವೇಷ ಉಂಟಾಗುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದ್ದರಿಂದ ಎಫ್‌ಐಆರ್‌ ಮತ್ತು ಪ್ರಕರಣ ಕುರಿತ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕು ಎಂದು ವಿವರಿಸಿದರು.

ಈ ವಾದವನ್ನು ಆಕ್ಷೇಪಿಸಿದ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎ.ಬೆಳ್ಳಿಯಪ್ಪ, ಮಾಳವಿಯ ಅವರು ಟ್ವೀಟ್‌ ಮಾಡಿರುವ ವಿಡಿಯೋದಲ್ಲಿ ಇಸ್ಲಾಂ ನಂಬುಗೆಯ ಜನರೊಂದಿಗೆ ರಾಹುಲ್‌ ಗಾಂಧಿ ಅವರನ್ನು ತಪ್ಪಾಗಿ ನಿರೂಪಿಸಲಾಗಿದೆ. ರಾಹುಲ್‌ ಗಾಂಧಿ ಅವರನ್ನು ದೇಶ ವಿರೋಧಿ ಎಂಬಂತೆ ಬಿಂಬಿಸುವ ಅಂಶಗಳಿವೆ. ಈ ಅವಹೇಳನಕಾರಿ ಚಿತ್ರಣವು ನಿಸ್ಸಂದೇಹವಾಗಿ ವಿವಿಧ ವರ್ಗಗಳ ಮಧ್ಯೆ ದ್ವೇಷವನ್ನು ಬಿತ್ತುತ್ತದೆ ಮತ್ತು ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತದೆ ಎಂದು ವಾದಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠ, ಆರೋಪಿ ಮಾಡಿರುವ ಟ್ವೀಟ್‌ ಧರ್ಮ, ಜಾತಿ, ಹುಟ್ಟು ಅಥವಾ ವಾಸಸ್ಥಳದ ಆಧಾರದಲ್ಲಿ ಹೇಗೆ ವಿಭಿನ್ನ ಸಮುದಾಯ ಅಥವಾ ಗುಂಪುಗಳ ನಡುವೆ ಅಶಾಂತಿ ಅಥವಾ ಹಗೆತನವನ್ನು ಸೃಷ್ಟಿಸುತ್ತದೆ ಎಂಬುದನ್ನು ದೂರಿನಲ್ಲಿ ವಿವರಿಸಲಾಗಿಲ್ಲ. ಟ್ವೀಟ್‌ ಸಮೂಹಗಳ ನಡುವೆ ಹೇಗೆ ದ್ವೇಷ ಸೃಷ್ಟಿಸಿದೆ ಎಂಬ ಬಗ್ಗೆ ವಿವರಣೆ ಇಲ್ಲ ಎಂದು ಅಭಿಪ್ರಾಯಪಟ್ಟು, ವಿಚಾರಣಾ ನ್ಯಾಯಾಲಯ ವಿಚಾರಣಾ ಪ್ರಕ್ರಿಯೆಗೆ ಜು.27ರವರೆಗೆ ತಡೆ ನೀಡಿ ವಿಚಾರಣೆ ಮುಂದೂಡಿತು.

Viral video: ಪತ್ರಕರ್ತರಿಗೆ ಡಿಕೆ ಶಿವಕುಮಾರ ಬೆದರಿಕೆ, ಮಾಳವೀಯ ಆರೋಪ

ಅರ್ಜಿದಾರರು ತಮ್ಮ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅನಿಮೇಟೆಡ್‌ ವಿಡಿಯೋದಲ್ಲಿ ಕಾಂಗ್ರೆಸ್‌ ಪಕ್ಷ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ. ರಾಹುಲ್‌ ಗಾಂಧಿ ಅವರು ವಿದೇಶಕ್ಕೆ ಹೋಗಿ ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ ಅಂಶಗಳು ಇವೆ ಎಂದು ಆಕ್ಷೇಪಿಸಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್‌ ಬಾಬು ಬೆಂಗಳೂರಿನ ಹೈಗ್ರೌಂಡ್‌್ಸ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಬಿಡಿಎ ಸೈಟ್ ತಗೊಂಡ್ರೆ ಚಿಪ್ಪೇ ಗತಿ; ಕೆಂಪೇಗೌಡ ಲೇಔಟ್ ಸೈಟ್ ತಗೊಂಡು 10 ವರ್ಷವಾದ್ರೂ ಸೈಟೂ ಇಲ್ಲ, ಸಾಲನೂ ಸಿಗ್ತಿಲ್ಲ!