
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜು.20) : ಐವರು ಎಲ್‌ಇಟಿ ಶಂಕಿತರ ಬಂಧನ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ನಾಡಿನಲ್ಲಿ ಕಾರಾಗೃಹಗಳಲ್ಲಿ ಮುಸ್ಲಿಂ ಸಮುದಾಯದ ಯುವಕರಿಗೆ ‘ಜಿಹಾದಿ’ ಬೋಧಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರನ್ನಾಗಿ ತಯಾರುಗೊಳಿಸಲಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಕೊಲೆ, ಸುಲಿಗೆ ಹಾಗೂ ದರೋಡೆ ಹೀಗೆ ಅಪರಾಧ ಕೃತ್ಯಗಳನ್ನು ಎಸಗಿ ಜೈಲು ಸೇರುವ ಸ್ಥಳೀಯ ಮುಸ್ಲಿಂ ಸಮುದಾಯದ ಕೆಲ ಯುವಕರ ತಲೆಗೆ ಇಸ್ಲಾಂ ಮೂಲಭೂತವಾದ ತುಂಬಿ ಭಯೋತ್ಪಾದಕ ಸಂಘಟನೆಗಳಿಗೆ ಜೈಲಿನಲ್ಲಿರುವ ಶಂಕಿತ ಉಗ್ರರು ನೇಮಕಗೊಳಿಸುತ್ತಿರುವ ಆಘಾತಕಾರಿ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈಗ ಬೆಂಗಳೂರಿನ ಬಂಧಿತರಾದ ಐವರು ಹಾಗೂ ಕಳೆದ ವರ್ಷ ಶಿವಮೊಗ್ಗದ ಬ್ಲಾಸ್ಟ್ ತಯಾರಿ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಶಿವಮೊಗ್ಗದ ಜಬೀವುಲ್ಲಾ ಸೇರಿ ಆರು ಮಂದಿ, ಅಪರಾಧ ಕೃತ್ಯದಲ್ಲಿ ಜೈಲು ಸೇರಿದ್ದಾಗಲೇ ಶಂಕಿತರ ಉಗ್ರರ ಸಂಪರ್ಕಕ್ಕೆ ಬಂದಿದ್ದರು. ಪರಿಣಾಮ ಜೈಲಿನಿಂದ ಹೊರಬಂದಾಗ ಈ ಆರು ಮಂದಿ ಶಂಕಿತ ಉಗ್ರರಾಗಿ ರೂಪಾಂತರವಾಗಿದ್ದರು.
ಕುರಿ ವ್ಯಾಪಾರಿಯೀಗ ಮೋಸ್ಟ್ ವಾಂಟೆಡ್ ಉಗ್ರ: ಬೆಂಗ್ಳೂರಲ್ಲಿ ಬಂಧಿತ ಉಗ್ರರಿಗೆ ಇವನೇ ಗುರು..!
ಕಾರಾಗೃಹಗಳಲ್ಲಿ ವಿಚಾರಣಾಧೀನ ಕೈದಿಗಳ ವಿಭಾಗದಲ್ಲಿ ವಿವಿಧ ಭಯೋತ್ಪಾದಕ ಕೃತ್ಯದ ಬಂಧಿತರಾಗಿರುವ ಆರೋಪಿಗಳನ್ನು ಇಡಲಾಗಿದೆ. ಹೀಗಾಗಿ ಕೊಲೆ, ಸುಲಿಗೆ ಹಾಗೂ ದರೋಡೆ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲು ಸೇರುವ ಆರೋಪಿಗಳು ಕೂಡ ಅದೇ ವಿಭಾಗದಲ್ಲೇ ಇರುತ್ತಾರೆ. ದಿನದ 24 ತಾಸುಗಳು ವಿಚಾರಣಾಧೀನ ಕೈದಿಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಬ್ಯಾರಕ್‌ಗಳಿಂದ ಬೆಳಗ್ಗೆ-ಸಂಜೆ ಹೊರಬಂದಾಗ ಪರಸ್ಪರ ಪರಿಚಯವಾಗಿ ಸಂಪರ್ಕ ಬೆಳೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೈಲಿನಲ್ಲೇ ತರಬೇತಿ:
ಬೆಂಗಳೂರಿನ ವಿವಿಧೆಡೆ ಬಾಂಬ್ ಸ್ಫೋಟಿಸಲು ಸಜ್ಜಾಗಿದ್ದಾಗ ಶಂಕಿತ ಉಗ್ರರಾದ ಆರ್.ಟಿ.ನಗರ ಸಮೀಪದ ಸುಲ್ತಾನ್ ಪಾಳ್ಯದ ಸುಹೇಲ್ ಅಹಮದ್, ಮೊಹಮದ್ ಫೈಜಲ್ ರಬ್ಬಾನಿ, ಡಿ.ಜೆ.ಹಳ್ಳಿಯ ಮಹಮದ್ ಉಮರ್, ಸೈಯದ್ ಮುದಾಸೀರ್ ಹಾಗೂ ಜಾಹೀದ್ ತಬ್ರೇಜ್ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪ್ರಮುಖ ಶಂಕಿತ ಉಗ್ರ ಮಹಮ್ಮದ್ ಜುನೈದ್ ಪತ್ತೆಗೆ ತನಿಖೆ ನಡೆದಿದೆ. ಸ್ಥಳೀಯವಾಗಿ ಪಾತಕ ಲೋಕದಲ್ಲಿ ಸಕ್ರಿಯವಾಗಿದ್ದ ಈ ಆರು ಮಂದಿಗೆ ಇಸ್ಲಾಂ ಮೂಲಭೂತವಾದ ಬೋಧಿಸಿ ಎಲ್‌ಇಟಿ ಸಂಘಟನೆಗೆ ನೇಮಕಗೊಳಿಸಿದ್ದು 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಕೇರಳ ಮೂಲದ ಶಂಕಿತ ಉಗ್ರ ಟಿ.ನಾಸೀರ್ ಎಂಬ ಮಹತ್ವದ ಸಂಗತಿಯನ್ನು ಸಿಸಿಬಿ ಬಯಲುಗೊಳಿಸಿದೆ.
2010ರಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಸೀರ್‌ನನ್ನು ಸಿಸಿಬಿ ಬಂಧಿಸಿ ಜೈಲಿಗೆ ಕಳುಹಿಸಿತ್ತು. ಅಂದಿನಿಂದ ಜೈಲಿನಲ್ಲೇ ಇರುವ ನಾಸೀರ್, ಕತ್ತಲಕೋಣೆಯಲ್ಲಿದ್ದುಕೊಂಡೇ ಹೊರ ಜಗತ್ತಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಶಂಕಿತ ಉಗ್ರರನ್ನು ಸಜ್ಜುಗೊಳಿಸುತ್ತಿದ್ದ. 2017ರಲ್ಲಿ ಜೆ.ಸಿ.ನಗರದ ನೂರ್ ಅಹಮ್ಮದ್ ಕೊಲೆ ಪ್ರಕರಣದಲ್ಲಿ ಮಹಮ್ಮದ್ ಜುನೈದ್ ಹಾಗೂ ಆತನ ಸಹಚರರನ್ನು ಬಂಧಿಸಿ ಆರ್.ಟಿ.ನಗರದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಆಗ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಜುನೈದ್ ಹಾಗೂ ನಾಸೀರ್ ಮಧ್ಯೆ ಸಂಪರ್ಕ ಬೆಳೆದಿದೆ. ಈ ಗೆಳೆತನದಲ್ಲಿ ತನ್ನ ಬ್ಯಾರಕ್‌ಗೆ ಕರೆಸಿಕೊಂಡು ಜುನೈದ್ ಹಾಗೂ ಆತನ ಸಹಚರರಿಗೆ ನಾಸೀರ್ ಜಿಹಾದಿ ಪಾಠ ಮಾಡಿದ್ದ. ಇದಾದ ನಂತರ 2020ರಲ್ಲಿ ರಕ್ತಚಂದನ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿದಾಗಲೂ ಜುನೈದ್ ಹಾಗೂ ಆತನ ಐವರು ಸಹಚರರರು ನಾಸೀರ್‌ನಿಂದ ಮುಸ್ಲಿಂ ಮೂಲಭೂತವಾದ ಕಡೆಗೆ ಪ್ರಭಾವಿತರಾಗಿದ್ದರು. ಕೆಲ ತಿಂಗಳ ಬಳಿಕ ಕಾರಾಗೃಹದಿಂದ ಹೊರಬಂದ ನಂತರ ಭಯೋತ್ಪಾದಕ ಕೃತ್ಯಗಳಲ್ಲಿ ಅವರು ತೊಡಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೆಜೆಸ್ಟಿಕ್‌ನ ಬಸ್, ರೈಲ್ವೆ ನಿಲ್ದಾಣ ಜನಸಂದಣಿ ಹೆಚ್ಚಿರುವ ಕಡೆ ಸ್ಫೋಟಕ್ಕೆ ಉಗ್ರರು ಸಂಚು?
ಜಬೀಬುಲ್ಲಾಗೆ ಬ್ರೈನ್‌ವಾಶ್
2022ರಲ್ಲಿ ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಚೂರಿ ಇರಿತ ಪ್ರಕರಣದಲ್ಲಿ ಜಬೀವುಲ್ಲಾನನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯವಾಗಿ ವಾಹನ ಕಳ್ಳನಾಗಿದ್ದ ಜಬೀವುಲ್ಲಾನನ್ನು 2019ರಲ್ಲಿ ವಾಹನ ಕಳವು ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಬಂಧಿಸಿ ಬೆಳಗಾವಿಗೆ ಜೈಲಿಗೆ ಕಳುಹಿಸಿದ್ದರು. ಆಗ ಆತನಿಗೆ ಬೆಳಗಾವಿಯ ಹಿಂಡಲಾಗ ಕೇಂದ್ರ ಕಾರಾಗೃಹದಲ್ಲಿರುವ ಶಂಕಿತರ ಉಗ್ರರರ ಪರಿಚಯವಾಗಿದೆ. ಜೈಲಿನಲ್ಲೇ ಜಬೀವುಲ್ಲಾನಿಗೆ ಶಂಕಿತ ಉಗ್ರರು ಜಿಹಾದಿ ಪಾಠ ಮಾಡಿದ್ದರು. ಬಳಿಕ 2020ರಲ್ಲಿ ಜಾಮೀನು ಪಡೆದು ಹೊರ ಬಂದಾಗ ಜಬೀವುಲ್ಲಾ ಮುಸ್ಲಿಂ ಮೂಲಭೂತವಾದಿಯಾಗಿ ಪರಿವರ್ತನೆಗೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ