ಟಿಬಿ ಡ್ಯಾಂನಲ್ಲಿ 68 ಟಿಎಂಸಿ ನೀರು ಉಳಿಸಿದ ತಜ್ಞ ಕನ್ಹಯ್ಯಾ ನಾಯ್ಡು, 3 ರಾಜ್ಯದ ಸಮಸ್ಯೆ ಸುಖಾಂತ್ಯ

By Gowthami K  |  First Published Aug 17, 2024, 2:17 PM IST

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿ 68 ಟಿಎಂಸಿ ನೀರು ಉಳಿಸುವಲ್ಲಿ ಪರಿಣತರು ಯಶಸ್ವಿಯಾಗಿದ್ದಾರೆ. ಪ್ರವಾಹದ ಹಿನ್ನೆಲೆಯಲ್ಲಿ 76 ಟಿಎಂಸಿ ನೀರು ಉಳಿಸುವ ಮೊದಲ ಯೋಜನೆ ಯಶಸ್ವಿಯಾಗಲಿಲ್ಲ. ಈಗ ಪ್ಲಾನ್‌ "ಬಿ" ಫಾರ್ಮುಲಾ ಯಶಸ್ವಿಯಾಗಿದ್ದು, ರೈತರಿಗೆ ಅನುಕೂಲವಾಗಲಿದೆ.


ಕೃಷ್ಣ ಎನ್‌. ಲಮಾಣಿ

ಹೊಸಪೇಟೆ (ಆ.17): ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿ ಈಗ 68 ಟಿಎಂಸಿ ನೀರು ಉಳಿಸುವ ಪ್ಲಾನ್‌ "ಬಿ " ಸಕ್ಸಸ್ ಆಗಿದೆ. ಹೈದರಾಬಾದ್‌ ಮೂಲದ ಪರಿಣತ ತಜ್ಞ ಕನ್ಹಯ್ಯ ನಾಯ್ಡು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಟ್ಟ ವಚನದಂತೇ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಎಲಿಮೆಂಟ್ ಇಳಿಸಿ ಸಕ್ಸಸ್‌ ಕಂಡಿದ್ದಾರೆ.

Latest Videos

undefined

ಜಲಾಶಯದ ಮಟ್ಟ 1625 ಅಡಿಯಲ್ಲಿದ್ದಾಗ ಎಲಿಮೆಂಟ್‌ ಇಳಿಸುವ ಪ್ಲಾನ್‌ಅನ್ನು ಕನ್ಹಯ್ಯ ನಾಯ್ಡು ಮಾಡಿದ್ದರು. ಆಗ 76.48 ಟಿಎಂಸಿ ನೀರು ಉಳಿಯುತ್ತಿತ್ತು. ಆದರೆ, ಪ್ರವಾಹದಲ್ಲೇ ಎಲಿಮೆಂಟ್‌ ಇಳಿಸುವ ಕಾರ್ಯಕ್ಕೆ ತಾಂತ್ರಿಕ ತೊಡಕುವುಂಟಾದ ಹಿನ್ನೆಲೆಯಲ್ಲಿ ಈಗ ಪ್ಲಾನ್‌ "ಬಿ " ಫಾರ್ಮುಲಾ ಯಶಸ್ವಿಗೊಳಿಸಿ 68 ಟಿಎಂಸಿ ನೀರು ಉಳಿಸಿದ್ದಾರೆ.

ಟಿಬಿ ಡ್ಯಾಂ ದುರಂತ ಬಳಿಕ ಹೈ ಅಲರ್ಟ್‌, ಬಸವಸಾಗರ ಜಲಾಶಯದಲ್ಲಿ 2006ರ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ!

ಪ್ಲಾನ್‌ "ಬಿ " ಯಶಸ್ಸಿಗೆ ಸಜ್ಜು:
ತುಂಗಭದ್ರಾ ಜಲಾಶಯದಲ್ಲಿ 76 ಟಿಎಂಸಿ ನೀರು ಉಳಿಸಿದರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ರೈತರಿಗೆ ಹಾಗೂ ಕುಡಿಯುವ ನೀರು ಮತ್ತು ಕೈಗಾರಿಕೆಗಳಿಗೂ ಯಾವುದೇ ತೊಂದರೆ ಆಗುವುದಿಲ್ಲ. ಇದರಿಂದ ರೈತರು ಎರಡನೇ ಬೆಳೆಗೂ ನೀರು ಪಡೆಯಬಹುದು ಎಂಬ ಲೆಕ್ಕಾಚಾರ ಹೊಂದಲಾಗಿತ್ತು. ಆದರೆ, ಜಲಾಶಯದ ಕ್ರಸ್ಟ್ ಗೇಟ್‌ ನಂಬರ್‌ 19ಕ್ಕೆ ಸ್ಟಾಪ್‌ ಲಾಗ್ ಗೇಟ್‌ ಅಳವಡಿಸಲು ಹೋದಾಗ ತಾಂತ್ರಿಕ ತೊಡಕು ಉಂಟಾದ್ದರಿಂದ ಪ್ರಕ್ರಿಯೆ ಸ್ಥಗಿತಗೊಳಿಸಲಾಯಿತು. ಇದರಿಂದ 76 ಟಿಎಂಸಿ ನೀರು ಉಳಿಸುವ ಸೂತ್ರ ಸಫಲವಾಗಿರಲಿಲ್ಲ. ಈಗ ಪ್ಲಾನ್‌ "ಬಿ " ಯಶಸ್ವಿಗಾಗಿ ಸ್ಕೈ ವಾಕರ್‌, ಬಿಮ್‌, ಕೇಬಲ್‌ ವೈಯರ್‌ಗಳನ್ನು ತೆರವು ಮಾಡಿ, ನೀರು ಉಳಿಸಿದ್ದಾರೆ.

ತುಂಗಭದ್ರಾ ನೀರು ಉಳಿಸಲು ಗ್ರೇಟ್‌ ಐಡಿಯಾ ಕೊಟ್ಟ ತಜ್ಞ ಕನ್ನಯ್ಯ, ನೀರು ಪೋಲಾಗುತ್ತಿರುವುದಕ್ಕೆ ಮರುಕ

65 ಟಿಎಂಸಿ ಉಳಿವಿಗೆ ಪ್ಲಾನ್‌:
ಜಲಾಶಯದ ನೀರಿನ ಮಟ್ಟ 1621 ಅಡಿಗೆ ಬಂದಾಗ ಇಳಿಸಿದರೆ ಜಲಾಶಯದಲ್ಲಿ 64.16 ಟಿಎಂಸಿ ನೀರು ಉಳಿಯಲಿದೆ. ಈ ಫಾರ್ಮುಲಾ ಯಶಸ್ಸಿಗಾಗಿ ಸಿದ್ಧತೆಯೂ ನಡೆಸಿದ್ದರೂ, ಆದರೆ ಅವರು ಇನ್ನೂ ನಾಲ್ಕು ಟಿಎಂಸಿ ನೀರು ಹೆಚ್ಚಿಗೆ ಉಳಿಸಿದ್ದಾರೆ.

ಈ ಕಾರ್ಯ ಕೈಗೂಡಿರುವುದರಿಂದ ಮೂರು ರಾಜ್ಯಗಳ 13 ಲಕ್ಷ ಎಕರೆ ನೀರಾವರಿಗೆ ತೊಂದರೆ ಆಗುವುದಿಲ್ಲ ಎಂಬ ಲೆಕ್ಕಾಚಾರ ಹಾಕಿದ್ದರು. ರೈತರ ಬೆಳೆ ಉಳಿಸಲು ಈ ಕಾರ್ಯ ಕೈಗೂಡಲಿ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ, ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಆಂಧ್ರಪ್ರದೇಶದ ನೀರಾವರಿ ಇಲಾಖೆಯ ಅಧಿಕಾರಿಗಳು ಕೂಡ ಜಲಾಶಯದಲ್ಲೇ ಬೀಡುಬಿಟ್ಟು ಪರಿಣತ ತಜ್ಞ ಕನ್ಹಯ್ಯ ನಾಯ್ಡು ಬಳಿ ಚರ್ಚಿಸಿದ್ದರು.

ಜಲಾಶಯದ ಕ್ರಸ್ಟ್‌ ಗೇಟ್‌ ನಂಬರ್‌ 19ಕ್ಕೆ ಸ್ಟಾಪ್‌ ಲಾಗ್‌ ಗೇಟ್‌ ನಿರ್ಮಾಣ ಮಾಡಿದರೆ ಜಲಾಶಯದಲ್ಲಿ 65 ಟಿಎಂಸಿ ನೀರು ದೊರೆಯಲಿದೆ ಎಂದು ಎಣಿಕೆ ಹಾಕಲಾಗಿತ್ತು. ಈಗ 68 ಟಿಎಂಸಿ ನೀರು ಉಳಿಸಿದ್ದಾರೆ. ಇದರಿಂದ ರೈತರಿಗೆ ಅನುಕೂಲ ಆಗಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದು.

ಜಲಾಶಯದಲ್ಲಿ ನೀರು ಉಳಿಸುವ ಸ್ಟಾಪ್‌ ಲಾಗ್‌ ಗೇಟ್‌ನ ಎಲಿಮೆಂಟ್‌ ನಿರ್ಮಾಣ ಸೇರಿದಂತೆ ಅಳವಡಿಕೆ ಕಾರ್ಯದಲ್ಲೂ ನೂರಾರು ಕಾರ್ಮಿಕರು ಹಗಲಿರುಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯ ಯಶಸ್ವಿಯಾದರೆ, ಕಾರ್ಮಿಕರಿಗೆ ತಲಾ ₹50 ಸಾವಿರ ವೈಯಕ್ತಿಕವಾಗಿ ಬಹುಮಾನ ನೀಡಲು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್ ಘೋಷಿಸಿದ್ದರು.

40 ಟಿಎಂಸಿ ನೀರು ನದಿ ಪಾಲು:
ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದ ಹಿನ್ನೆಲೆಯಲ್ಲಿ ಜಲಾಶಯದ ಗೇಟ್‌ ತೆರೆದು ನದಿಗೆ ನೀರು ಹರಿಸಿದ್ದರಿಂದ ಈಗಾಗಲೇ 40 ಟಿಎಂಸಿ ನೀರು ನದಿ ಪಾಲಾಗಿದೆ. ಈ ಬಾರಿ ಜಲಾಶಯ ಬೇಗನೆ ಭರ್ತಿಯಾಗಿದ್ದರಿಂದ ರೈತರು ಖುಷಿಯಾಗಿದ್ದರು. ಆದರೆ, ಗೇಟ್‌ ಒಡೆದು ನದಿಗೆ ನೀರು ಹರಿಸುವ ಸ್ಥಿತಿ ಬಂದೊದಗಿರುವ ಹಿನ್ನೆಲೆ ರೈತರು ಕೂಡ ಚಿಂತಾಕ್ರಾಂತರಾಗಿದ್ದರು. ಜಲಾಶಯದಲ್ಲಿ ಈಗ ಮೊದಲ ಎಲಿಮೆಂಟ್‌ ಇಳಿಸಲಾಗಿದ್ದು, ಇನ್ನೂ ಎರಡು ಎಲಿಮೆಂಟ್‌ ಇಳಿಸಿ 68 ಟಿಎಂಸಿ ನೀರನ್ನು ರೈತರಿಗೆ ಕನ್ನಯ್ಯ ನಾಯ್ಡು ಉಳಿಸಲಿದ್ದಾರೆ.

ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಕಾರ್ಯ ಕೈಗೂಡಿದರೆ ರೈತರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಪರಿಣತರು ಶ್ರಮ ವಹಿಸಿದ್ದಾರೆ. ಜಲಾಶಯದ ನೀರು ನದಿ ಪಾಲು ಆಗುವ ಮೊದಲೇ ಗೇಟ್‌ ಅಳವಡಿಕೆ ಕಾರ್ಯ ಆಗಲಿ ಎನ್ನುತ್ತಾರೆ ರೈತ ನಾಗರಾಜ.

click me!