Muda Scam prosecution ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ರಾಜ್ಯಪಾಲರ ವಿರುದ್ಧ ಸಿಎಂ ಸಿದ್ಧರಾಮಯ್ಯ ಹರಿಹಾಯ್ದಿದ್ದಾರೆ. ಇದು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಎಂದು ಹೇಳಿದ್ದಾರೆ.
ಬೆಂಗಳೂರು (ಆ.17): ಅಕ್ರಮವಾಗಿ ಮುಡಾದಿಂದ 14 ಸೈಟ್ ಪಡೆದುಕೊಂಡಿರುವ ಆರೋಪದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇದು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ. ರಾಜ್ಯಪಾಲರು ಕಾನೂನುಬಾಹಿರ ವರ್ತನೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಎಚ್‌ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಮೇಲೆಯೂ ಪ್ರಾಸಿಕ್ಯೂಷನ್ ರಿಕ್ವೆಸ್ಟ್ ಇದೆ. ಆದರೆ, ನನ್ನ ಪ್ರಕರಣದಲ್ಲಿ ಮಾತ್ರವೇ ಅವರು ಅನುಮತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಹಲವು ನಾಯಕರ ಮೇಲೆ ಪ್ರಾಸಿಕ್ಯೂಷನ್ ರಿಕ್ವೆಸ್ಟ್‌ಗಳಿವೆ. ಆದರೆ, ಇವರೆಲ್ಲರನ್ನೂ ಬಿಟ್ಟು ನನ್ನ ಮೇಲೆಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ ಅಂದರೆ ಏನರ್ಥ. ನವೆಂಬರ್ ತಿಂಗಳಲ್ಲಿ ಸ್ವತಃ ಲೋಕಾಯುಕ್ತ ಅವರು ಪ್ರಾಸಿಕ್ಯೂಷನ್ ರಿಕ್ವೆಸ್ ಕೇಳಿದ್ದಾರೆ. ಆದರೆ, ಅದಕ್ಕೆ ಈವರೆಗೂ ಅನುಮತಿ ನೀಡಿಲ್ಲ. ಇದು ನನ್ನ ಸರ್ಕಾರವನ್ನು ಉರುಳಿಸಲು ಮಾಡುತ್ತಿರುವ ದೊಡ್ಡ ಷಡ್ಯಂತ್ರ. ಚುನಾಯಿತ ಸರ್ಕಾರಗಳನ್ನು ಕಿತ್ತುಹಾಕುವ ನಿಟ್ಟಿನಲ್ಲಿ ಇಂಥ ಪ್ರಯತ್ನವನ್ನು ಅವರು ಅನೇಕ ರಾಜ್ಯಗಳಲ್ಲಿ ಮಾಡಿದ್ದಾರೆ. ಇದು ಹೊಸದೇನಲ್ಲ. ಸರ್ಕಾರವನ್ನು ಅಭದ್ರಗೊಳಿಸಲು, ಅಸ್ಥಿರ ಮಾಡಲು ಒಂದು ಷಡ್ಯಂತ್ರ ರೂಪಿತವಾಗಿದೆ.
ಬಿಜೆಪಿ ಜೆಡಿಎಸ್ ಮತ್ತು ಬೇರೆ ಅವರೆಲ್ಲಾ ಇದರಲ್ಲಿ ಸೇರಿಕೊಂಡು ಷಡ್ಯಂತ್ರ ಮಾಡುತ್ತಿದ್ದಾರೆ. ಯಾರೂ ನೀಡಿದ ದೂರಿನ ಮೇಲೆ ರಾಜ್ಯಪಾಲರು ತೆಗೆದುಕೊಂಡ ನಿರ್ಧಾರ ಸಂವಿಧಾನ ಬಾಹಿರವಾಗಿದೆ. ಕಾನೂನಿಗೆ ವಿರುದ್ಧವಾಗಿದೆ. ಇದನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದೇವೆ. ಕಾನೂನು ರೀತಿಯಲ್ಲಿ ಸಾಗಲಿದ್ದೇವೆ. ಹೈಕಮಾಂಡ್ ನನ್ನೊಂದಿಗೆ ಇದೆ. ಇಡೀ ಸಚಿವ ಸಂಪುಟ ಕೂಡ ನನ್ನ ಜೊತೆ ಇದೆ. ಸರ್ಕಾರ ಕೂಡ ನನ್ನೊಂದಿಗೆ ಇದೆ. ಎಲ್ಲಾ ಶಾಸಕರು ಕೂಡ ನನ್ನೊಂದಿಗೆ ಇದ್ದಾರೆ. ಎಲ್ಲಾ ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ನನ್ನ ಜೊತೆ ಇದ್ದಾರೆ. ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ನನ್ನೊಂದಿಗೆ ಇದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವುದು ಅವರು ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಮುಡಾ ಹಗರಣ? ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಗಾಳಕ್ಕೆ ಸಿಕ್ಕಿಬಿದ್ದಿದ್ದು ಹೇಗೆ?
ರಾಜಭವನವನ್ನು ಅವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
Muda Scam: ಸಿದ್ದರಾಮಯ್ಯ ರಾಜೀನಾಮೆ ನೀಡಲ್ಲ, ರಾಜ್ಯಪಾಲರು ಕೇಂದ್ರದ ಕೈಗೊಂಬೆ: ಸಿಎಂ ಪರ ಎಂಬಿ ಪಾಟೀಲ್ ಬ್ಯಾಟಿಂಗ್!