ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್ ಆವರಣದಲ್ಲಿನ ಹಾಲ್ಟ್ ನಿಲ್ದಾಣಕ್ಕೆ ರೈಲು ಸಂಚಾರ | ದರ ಕೇವಲ .10 ರೂ. | ಸೋಮವಾರ ಬೆಳಗ್ಗೆ 4.45ಕ್ಕೆ ಮೊದಲ ಟ್ರೈನ್ ಪ್ರಯಾಣ | ಅಲ್ಲಿಂದ ಬಿಎಂಟಿಸಿ ಫೀಡರ್ ಬಸ್‌ನಲ್ಲಿ ಹೋಗಿ | ಒಂದೂವರೆ ತಾಸಿನಲ್ಲಿ ಏರ್‌ಪೋರ್ಟ್‌ಗೆ ತಲುಪಿ
ಬೆಂಗಳೂರು(ಜ.03): ವಿಮಾನ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ತೆರಳುವುದು ಒಂದು ಸಾಹಸವೆ.. ಅನುಭವಿಸಿದವರಿಗೆ ಗೊತ್ತು ಅದರ ಪಾಡು.. ಬುಕ್ ಮಾಡಿದ್ದ ಕ್ಯಾಬ್ ಹತ್ತು ನಿಮಿಷ ತಡ ಆದರೆ ಎದೆ ಢವ ಢವ ಎಂದು ಹೊಡೆದುಕೊಳ್ಳಲು ಶುರುವಾಗುತ್ತದೆ. ಇದಕ್ಕೆಲ್ಲ ಒಂದು ಪರಿಹಾರ ಈಗ ಸಿಕ್ಕಿದೆ. ಮೆಜೆಸ್ಟಿಕ್ ನಿಂದ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಆರಂಭವಾಗಿದೆ.
ರೈಲು ಜ.4ರಂದು ಮುಂಜಾನೆ 4.45ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣದಿಂದ ಕೆಐಎ ಹಾಲ್ಟ್ ರೈಲು ನಿಲ್ದಾಣದತ್ತ ತೆರಳಲಿದೆ. ತನ್ಮೂಲಕ ಪ್ರಯಾಣಿಕರು ಇನ್ನು ಮುಂದೆ ನಗರದ ಕೇಂದ್ರ ಭಾಗದಿಂದ ಕೆಐಎ ವಿಮಾನ ನಿಲ್ದಾಣಕ್ಕೆ ಒಂದೂವರೆ ತಾಸಿನಲ್ಲಿ ಪ್ರಯಾಣಿಸಬಹುದಾಗಿದೆ.
ಮೆಜೆಸ್ಟಿಕ್ ನಿಂದ ರೈಲು ಏರಿ ಹೊರಟರೆ ವಿಮಾನ ನಿಲ್ದಾಣ ಅಲ್ಲಿಂದ ಬಿಎಂಟಿಸಿ ಫೀಡರ್ ಬಸ್ ನಲ್ಲಿ 15 ನಿಮಿಷಕ್ಕೆ ನಿಮ್ಮ ಜಾಗ . ಟ್ರಾಫಿಕ್ ಜಂಜಾಟವಿಲ್ಲ.. ಸಿಗ್ನಲ್ ಗಳ ಕಿರಿಕಿರಿ ಇಲ್ಲ..
ಮೆಜೆಸ್ಟಿಕ್ ನಿಂದ ರೈಲು ಸೇವೆ.. ಲಾಭಗಳ ಸರಳ ಪಟ್ಟಿ
* ಸಮಯಕ್ಕೆ ಸರಿಯಾಗಿ ಜಾಗ ತಲುಪಿ; ರೈಲಿನ ಮೂಲಕ ತೆರಳುವುದರಿಂದ ಪಕ್ಕಾ ಸಮಯ ಲೆಕ್ಕ ಮಾಡಬಹುದು. ಟ್ರಾಫಿಕ್ ಕಿರಿಕಿರಿ ಇಲ್ಲದಿರುವ ಕಾರಣ ಆರಾಮದಾಯಕ ಪ್ರಯಾಣ ನಿಮ್ಮದಾಗುತ್ತದೆ.
*ಕಡಿಮೆ ಖರ್ಚು; ಕ್ಯಾಬ್ ಬುಕ್ ಮಾಡಿಕೊಂಡು ಸಾವಿರಾರು ರೂ. ನೀಡುವ ಅಗತ್ಯ ಇಲ್ಲಿರುವುದಿಲ್ಲ. ಹಣದ ಉಳಿತಾಯ ಜತೆಗೆ ಸಮಯದ ಉಳಿತಾಯ ಸಾಧ್ಯ. ಕ್ಯಾಬ್ ಬುಕ್ ಮಾಡಿ ಕಾಯುತ್ತ ಕುಳಿತು ಸಾವಿರಾರು ರೂ. ನೀಡುವ ಬದಲು ಇಲ್ಲಿ 10 ರಿಂದ 15 ರೂ. ನಲ್ಲಿ ಪ್ರಯಾಣ ಮುಗಿದುಹೋಗುತ್ತದೆ.
* ಜಂಜಾಟವಿಲ್ಲ; ಕ್ಯಾಬ್ ಗೆ ಲಗೇಜ್ ಏರಿಸುವುದು ಒಂದು ಜಂಜಾಟವೇ.. ಎರಡು ಅಥವಾ ಮೂರು ಜನರು ತೆರಳುವುದಾದರೆ ಕ್ಯಾಬ್ ಗೆ ಲಗೇಜ್ ತುಂಬುವ ಜಂಜಾಟ ಯಾರಿಗೂ ಬೇಡ.. ರೈಲಿನಲ್ಲಿ ಆದರೆ ತಾಪತ್ರಯ ಇಲ್ಲ.