ಕಲಬುರಗಿ (ನ.15): ರಾಜ್ಯದ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ 7601 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುವ ‘ವಿವೇಕ’ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ತಾಲೂಕಿನ ಮಾಡಿಯಾಳ್ ತಾಂಡಾದಲ್ಲಿ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಎಲ್ಲ ಕೊಠಡಿಗಳು ಇದೇ ವರ್ಷ ನಿರ್ಮಾಣವಾಗಲಿವೆ. ಮುಂದಿನ ವರ್ಷಗಳ ಕಾಲ ತಲಾ 8000 ಶಾಲಾ ಕೊಠಡಿ ನಿರ್ಮಿಸಲಾಗುವುದು ಎಂದು ಘೋಷಿಸಿದರು.
7601 ಶಾಲಾ ಕೊಠಡಿ ನಿರ್ಮಿಸುವ ‘ವಿವೇಕ’ ಯೋಜನೆಗೆ ಕಲಬುರಗಿ ಜಿಲ್ಲೆಯ ಮಾಡಿಯಾಳ್ ತಾಂಡಾದಲ್ಲಿ ಸೋಮವಾರ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಲಾ ವಿದ್ಯಾರ್ಥಿನಿಗೆ ಸಿಹಿ ತಿನ್ನಿಸಿದರು.
ವಿವಾದ ನಡುವೆಯೇ ಶಿಕ್ಷಣ ಇಲಾಖೆಯ "ವಿವೇಕ" ಯೋಜನೆಗೆ ಸಿಎಂ ಚಾಲನೆ
ಶೌಚಾಲಯ ಕೊರತೆಯಿಂದಾಗಿ ರಾಜ್ಯದಲ್ಲಿ ಮಹಿಳಾ ಶಿಕ್ಷಣಕ್ಕೆ ತೀವ್ರ ಹಿನ್ನಡೆ ಉಂಟಾಗುತ್ತಿದೆ ಎಂದು ಕಳವಳ, ಆತಂಕ ಹೊರಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ.15ರ ಒಳಗಾಗಿ ರಾಜ್ಯದಲ್ಲಿರುವ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಜತೆಗೆ, ಇದಕ್ಕಾಗಿ ಈಗಾಗಲೇ .250 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯ ಮಡಿಯಾಳ ತಾಂಡಾದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ರಾಜ್ಯಾದ್ಯಂತ ವಿವೇಕ ಶಾಲಾ ಕೊಠಡಿಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಜನತಾ ದರ್ಶನದ ವೇಳೆ ಪೋಷಕರೊಬ್ಬರು ತಮ್ಮ ಮಗಳೊಂದಿಗೆ ಬಂದು ಶೌಚಾಲಯ ಸಮಸ್ಯೆ ತಮ್ಮ ಮಗಳ ಶಿಕ್ಷಣವನ್ನೇ ಹಾಳುಗೆಡವಿದ ಹಾಗೂ ಆಕೆಯ ಕಿಡ್ನಿ ಮೇಲಾಗಿರುವ ಸಮಸ್ಯೆ ಕುರಿತು ವಿವರಿಸಿ ಕಣ್ಣೀರು ಹಾಕಿದ್ದರು. ಜತೆಗೆ ರಾಜ್ಯಾದ್ಯಂತ ಶಾಲೆಗಳಲ್ಲಿ ಮೊದಲು ಶೌಚಾಲಯ ನಿರ್ಮಿಸುವಂತೆ ನೋವಿನಿಂದಲೇ ಮನವಿ ಮಾಡಿದ್ದರು. ಆ ಪ್ರಸಂಗದಿಂದ ಪ್ರೇರಿತನಾಗಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ, ಅದರಲ್ಲೂ ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯ ನಿರ್ಮಿಸುವ ಸಂಕಲ್ಪ ಮಾಡಿದ್ದೇನೆ ಎಂದರು.
ಈಗಾಗಲೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ವಿಶಾಲ್ ನೇತೃತ್ವದಲ್ಲಿ ಅಧಿಕಾರಿಗಳ 2 ಸಭೆಗಳಲ್ಲಿ ಈ ಸಮಸ್ಯೆ ಕುರಿತು ವಿಸ್ತೃತ ಚರ್ಚೆ ಆಗಿದೆ. ಈ ಯೋಜನೆ ಆದಷ್ಟುಶೀಘ್ರ ಜಾರಿಗೆ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಏಕರೂಪದ ವಿವೇಕ ಬಣ್ಣ: ಮತ್ತೆ ಕೇಸರಿ ವಾಗ್ವಾದ ಶುರುವಾಗುವ ಸಾಧ್ಯತೆ
ಮುಂದಿನ ವರ್ಷದಿಂದ ಯೋಗ ಜಾರಿ:
ಜಾಗತೀಕರಣದ ಫಲವಾಗಿ ವಿದೇಶದ ಮಕ್ಕಳೊಂದಿಗೆ ನಮ್ಮ ಮಕ್ಕಳು ಪೈಪೋಟಿ ನಡೆಸಬೇಕು. ಆ ನಿಟ್ಟಿನಲ್ಲಿ ಅವರ ಬುದ್ಧಿಶಕ್ತಿ ಹೆಚ್ಚಿಸಬೇಕಾಗಿದೆ. ಉತ್ತಮ ದೇಹ, ಮನಸ್ಥಿತಿ ಇದ್ದರೆ ಶಿಕ್ಷಣ ಪಡೆಯಲು ಸಾಧ್ಯ. ಇದಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಯೋಗ ಮತ್ತು ಧ್ಯಾನ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದು ಇದೇ ವೇಳೆ ಬೊಮ್ಮಾಯಿ ಹೇಳಿದರು.