CM Basavaraj Bommai on Nandini Milk Price Hike: ಹಾಲಿನ ದರ ಏರಿಕೆ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ದರ ಏರಿಕೆ ನಿರ್ಧಾರವನ್ನು ಹಿಂಪಡೆಯಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ ಬಳಿಕ ಕೆಎಂಎಫ್ ಈ ಕುರಿತು ಸ್ಪಷ್ಟನೆ ನೀಡಿದೆ.
ಬೆಂಗಳೂರು(ನ.14): ರಾಜ್ಯದಲ್ಲಿ ನಾಳೆಯಿಂದ ಹಾಲಿನ ದರ ಪ್ರತಿ ಲೀಟರ್‌ಗೆ 3 ರೂಪಾಯಿ ಏರಿಕೆ ಮಾಡಲಾಗುವುದು ಎಂಬ ಕರ್ನಾಟಕ ಹಾಲು ಒಕ್ಕೂಟದ ಘೋಷಣೆಗೆ ಬಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಾಲು ಒಕ್ಕೂಟ ಹಾಲಿನ ದರ ಏರಿಕೆಗೆ ಬ್ರೇಕ್ ಹಾಕಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ಬಳಿಕ ಇದೀಗ ಹಾಲಿನ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಿದೆ. ಆದರೆ ತಿಂಗಳ ಅಂತ್ಯದಲ್ಲಿ ಗ್ರಾಹಕರಿಗೆ ಮತ್ತೆ ಶಾಕ್ ಎದುರಾಗುವ ಸಾಧ್ಯತೆ ಇದೆ. ಹಾಲಿನ ದರ ಏರಿಕೆ ಸಂಬಂಧ ನವೆಂಬರ್ 20 ರಂದು ಹಾಲು ಒಕ್ಕೂಟ ಸಭೆ ಸೇರಲಿದೆ. ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟ ಸ್ಪಷ್ಟಪಡಿಸಿದೆ. ಹಾಲು ಒಕ್ಕೂಟದ ನಿರ್ಧಾರದಿಂದ ಗ್ರಾಹಕರು ನಿಟ್ಟುಸಿರುಬಿಟ್ಟಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಪ್ರತಿ ಲೀಟರ್ ಹಾಲಿನ ಬೆಲೆ 37 ರೂಪಾಯಿ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಗ್ಗದ ಬೆಲೆಯಲ್ಲಿ ಹಾಲು ಲಭ್ಯವಾಗುತ್ತಿದೆ. ಇದರಿಂದ ಹಾಲು ಉತ್ಪಾದಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಈ ಕುರಿತು ಕಳೆದೊಂದು ವರ್ಷದಿಂದ ಬೆಲೆ ಏರಿಕೆಗೆ ಚರ್ಚೆ ನಡೆದಿತ್ತು. ಹೀಗಾಗಿ ಪ್ರತಿ ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲು ಕರ್ನಾಟಕ ಹಾಲು ಒಕ್ಕೂಟ ನಿರ್ಧರಿಸಿತ್ತು. ಇದರ ಜೊತೆಗೆ ಪ್ರತಿ ಲೀಟರ್ ಮೊಸರಿನ ಬೆಲೆಯಲ್ಲೂ 3 ರೂಪಾಯಿ ಹೆಚ್ಚಳಕ್ಕೆ ಆದೇಶ ನೀಡಿತ್ತು.
Nandini Milk Price Hike: ನಂದಿನಿ ಹಾಲಿನ ದರ 3 ರೂ. ಹೆಚ್ಚಳ, ಸದ್ಯಕ್ಕೆ ಕಾಫಿ , ಟೀ ಬೆಲೆ ಹೆಚ್ಚಳ ಇಲ್ಲ
2020ರಲ್ಲಿ ಕರ್ನಾಟಕ ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿ ಹೆಚ್ಚಳ ಮಾಡಿತ್ತು. ಇದರಿಂದ 35 ರೂಪಾಯಿ ಇದ್ದ ಹಾಲು ಪ್ರತಿ ಲೀಟರ್‌ಗೆ 37 ರೂಪಾಯಿ ಆಗಿತ್ತು. ಇದೀಗ 3 ರೂಪಾಯಿ ಹೆಚ್ಚಳ ಮಾಡಿ 40 ರೂಪಾಯಿ ಮಾಡಲು ನಿರ್ಧರಿಸಲಾಗಿತ್ತು. ಈ ನಿರ್ಧಾರ ವಾಪಸ್ ಪಡೆಯಲಾಗಿದೆ. ಇದು ತಾತ್ಕಾಲಿಕ್ ತಡೆಯಾಗಿದೆ. ನವೆಂಬರ್ 20 ರಂದು ಕುರಿತು ಮಹತ್ವದ ಸಭೆ ನಡೆಸಲಾಗುತ್ತಿದೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ.
ದರ ಹೆಚ್ಚಳಕ್ಕೆ ನಡೆದಿತ್ತು ಪ್ರತಿಭಟನೆ
ಹೈನೋದ್ಯಮ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ರೈತರಿಗೆ ಪ್ರತಿ ಲೀಟರ್‌ಗೆ .5 ರೂಪಾಯಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿತ್ತು. ಪಶು ಆಹಾರದ ಬೆಲೆಯೂ ಗಗನಕ್ಕೇರಿದೆ. ಈಗ ನೀಡುತ್ತಿರುವ ಹಾಲಿನ ದರದಲ್ಲಿ ರಾಸುಗಳ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ಮಧ್ಯೆ ಪಶು ಆಹಾರದ ಬೆಲೆ ಹೆಚ್ಚಿಸಿ ರೈತರು ಪರದಾಡುವಂತೆ ಮಾಡಿದ್ದಾರೆ. ನಮ್ಮ ರಾಜ್ಯದ ಸಹಕಾರ ಹಾಲು ಉತ್ಪಾದಕರಿಗೆ ನೀಡುತ್ತಿರುವ ದರಕ್ಕೂ ಪಕ್ಕದ ರಾಜ್ಯದಲ್ಲಿ ನೀಡುತ್ತಿರುವ ಹಾಲಿನ ದರಕ್ಕೂ ಹೋಲಿಸಿದಲ್ಲಿ ಲೀಟರ್‌ಗೆ 5ರಿಂದ 10 ರ ವರೆಗೆ ಕಡಿಮೆ ಇದೆ. ವೈಜ್ಞಾನಿಕವಾಗಿ ರಾಸುಗಳ ನಿರ್ವಹಣೆಗೆ ತಗುಲುವ ವೆಚ್ಚ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ 10ರಿಂದ 15 ರೂಪಾಯಿ ನಷ್ಟಅನುಭವಿಸುವಂತಾಗಿದೆ ಎಂದು ಪ್ರತಿಭಟನೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ನಂದಿನಿ ಹಾಲಿನ ದರ ಶೀಘ್ರವೇ ಲೀ.ಗೆ ₹ 3 ಹೆಚ್ಚಳ: ಬಾಲಚಂದ್ರ ಜಾರಕಿಹೊಳಿ
ರೈತರ ಬೇಡಿಕೆಗೆ ಸ್ಪಂದಿಸಿದ್ದ ಹಾಲು ಒಕ್ಕೂಟ 5 ರೂಪಾಯಿ ಬದಲು 3 ರೂಪಾಯಿ ಏರಿಕೆಗೆ ಒಪ್ಪಿಕೊಂಡಿತ್ತು. ಇದೀಗ ಸಿಎಂ ಬೊಮ್ಮಾಯಿ ಸೂಚನೆಯಿಂದ ಮತ್ತೆ ನಿರ್ದಾರ ವಾಪಸ್ ಪಡೆಯಲಾಗಿದೆ. ಇದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದರೆ, ಗ್ರಾಹಕರಲ್ಲಿ ಸಂತಸ ಮೂಡಿಸಿದೆ.