ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಜಡಿಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ನದಿ ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಕೆರೆಗಳೂ ಕೋಡಿಹರಿದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆಹಾನಿ ಸಂಭವಿಸಿದೆ.
ಬೆಂಗಳೂರು (ಸೆ.06): ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದೀಚೆಗೆ ಸುರಿಯುತ್ತಿರುವ ಜಡಿಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅನೇಕ ನದಿ ತೊರೆಗಳು ತುಂಬಿ ಹರಿಯುತ್ತಿರುವುದರೊಂದಿಗೆ ಕೆರೆಗಳೂ ಕೋಡಿಹರಿದಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ, ಬೆಳೆಹಾನಿ ಸಂಭವಿಸಿದೆ. ಮಾತ್ರವಲ್ಲದೆ ಮಳೆ ಸಂಬಂಧಿ ಕಾರಣಗಳಿಗೆ ಮೂವರು ಬಲಿಯಾಗಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.
ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಜನರು ಮನೆಯಿಂದ ಹೊರಗೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ ಎಲ್ಲೂ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಇನ್ನು ವಿಜಯಪುರ, ಬಾಗಲಕೋಟೆ ಮತ್ತು ಕೊಡಗು ಜಿಲ್ಲೆಗಳ ಕೆಲವೆಡೆ ಸಾಧಾರಣ ಮತ್ತು ತುಂತುರು ಮಳೆಯಾಗಿದೆ.
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರಿ ಮಳೆ, ಈ ಜಿಲ್ಲೆಗಳಲ್ಲಿ ವರುಣನ ಆರ್ಭಟ
ವಿವಿಧೆಡೆ 3 ಸಾವು: ತುಮಕೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಕೋಡಿ ಬಿದ್ದ ತುಂಬಾಡಿ ಕೆರೆ ನೀರು ಮಲಪನಹಳ್ಳಿ ಸೇತುವೆ ಮೇಲೆ ಹರಿದ ಪರಿಣಾಮ ಮಿನಿ ಟೆಂಪೋ ಕೊಚ್ಚಿ ಹೋಗಿದ್ದು ಅದರಲ್ಲಿದ್ದ ಒಬ್ಬ ನೀರುಪಾಲಾಗಿದ್ದಾನೆ. ಮತ್ತೊಬ್ಬ ಈಜಿ ದಡ ಸೇರಿದ್ದಾನೆ. ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಸಮೀಪದ ಮಲ್ಲೋರಹಟ್ಟಿಯಲ್ಲಿ ಸಿಡಿಲಿಗೆ ಕುರಿಗಾಹಿಯೊಬ್ಬ ಮೃತಪಟ್ಟಿದ್ದಾನೆ. ಚಾಮರಾಜನಗರ ಜಿಲ್ಲೆಯಲ್ಲೂ ಸುರಿದ ಮಹಾಮಳೆಗೆ ಮನೆಗೋಡೆ ಕುಸಿದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಘಟನೆ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಮನೆಗೆ ಸಿಡಿಲು ಬಡಿದು ನಾಲ್ವರು ಗಾಯಗೊಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಅರ್ಕಾವತಿ ನದಿ ಪ್ರದೇಶಗಳಲ್ಲಿ ನದಿ ಪಾತ್ರದ ಗ್ರಾಮಗಳಲ್ಲಿ ಅಲರ್ಚ್ ಘೋಷಿಸಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಜಯಮಂಗಲಿ ನದಿ ಉಕ್ಕಿ ಹರಿಯುತ್ತಿದ್ದು ಚನ್ನಸಾಗರ ಗ್ರಾಮಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಹಾಗೂ ಕಡೂರು ತಾಲೂಕುಗಳ ಬಯಲುಸೀಮೆಯಲ್ಲಿ ಭಾರೀ ಮಳೆಯಾಗಿದ್ದು ಸಾರಗೋಡು, ಹುಯಿಗೆರೆ ಸುತ್ತಮುತ್ತ ಒಂದೇ ಗಂಟೆಯಲ್ಲಿ 130 ಮಿ.ಮೀ. ಮಳೆಯಾಗಿದೆ ಎಂದು ಹೇಳಲಾಗುತ್ತಿದ. ಮೈಸೂರು ನಗರದ ಸುಪರ್ಣ ಬಡಾವಣೆ ಜಲಾವೃತವಾಗಿದ್ದು ಅನೇಕ ಮನೆಗಳಿಗೆ ನೀರು ನುಗ್ಗಿದೆ.
ಕಲ್ಯಾಣ ಮಂಟಪಕ್ಕೆ ನೀರು: ಚಾಮರಾಜನಗರದಲ್ಲಿ ಕಲ್ಯಾಣ ಮಂಟಪವೊಂದಕ್ಕೆ ನದಿಯಂತೆ ನೀರು ಹರಿದಿದ್ದು ಮದುವೆ ಮನೆ ನೀರಿನಮನೆಯಾಗಿ ಬದಲಾಗಿದೆ. ಅಡುಗೆ ಕೋಣೆಗೆ ನೀರು ನುಗ್ಗಿ ತರಕಾರಿಗಳೆಲ್ಲಾ ತೇಲುತ್ತಿರುವ ದೃಶ್ಯ ವೈರಲಾಗಿದೆ.
ಗೋಕಾಕ ಅಸ್ತವ್ಯಸ್ತ: ಬೆಳಗಾವಿ ಜಿಲ್ಲೆಯ ಗೋಕಾಕ ನಗರ ಮತ್ತು ಆಸುಪಾಸಿನ 3 ಗ್ರಾಮಗಳ ಒಟ್ಟಾರೆ 350ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ ಜನರು ನೀರಿನ ರಭಸ ಕಂಡು ಹೊರಗೆ ಓಡಿ ಬಂದಿದ್ದಾರೆ. ಈ ಭಾಗದ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಅಲ್ಲದೇ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳು ಮತ್ತು ಗೋಕಾಕ ಕೊಣ್ಣೂರು ರಸ್ತೆ ಡಾಂಬರು ಮಳೆಯ ನೀರಿನ ರಭಸಕ್ಕೆ ಕೊಚ್ಚಿಹೋಗಿವೆ.
ವಿವಿಧೆಡೆ ಹಲವರ ರಕ್ಷಣೆ: ಮಹಾಮಳೆಯಲ್ಲಿ ಸಿಲುಕಿದ್ದ ಹಲವರು ಪ್ರಾಣಾಪಾಯದಿಂದ ಬಚಾವಾದ ಹಲವು ಘಟನೆಗಳು ವಿವಿಧೆಡೆಯಿಂದ ವರದಿಯಾಗಿವೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಸೇತುವೆ ಮೇಲೆ ಹರಿಯುತ್ತಿದ್ದ ದಾಸಾಲುಕುಂಟೆ ಕೆರೆ ಕೋಡಿ ನೀರಿನ ಪ್ರವಾಹದಲ್ಲಿ ಬಸ್ಸೊಂದು ಸಿಲುಕಿ ಡ್ರೈವರ್ ಪರದಾಡಿದ ಘಟನೆ ನಡೆದಿದೆ. ಈ ವೇಳೆ 30ಕ್ಕೂ ಅಧಿಕ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಪಾರಾಗಿದ್ದಾರೆ. ಬಳಿಕ ಸ್ಥಳೀಯರೇ ಟ್ರ್ಯಾಕ್ಟರ್ ಬಳಸಿ ಬಸ್ ಅನ್ನು ನೀರಿನಿಂದ ಹೊರತೆಗೆದಿದ್ದಾರೆ.
ಮಳೆಯಿಂದಾಗಿ ಭಾರೀ ನಷ್ಟ: ಬೆಂಗ್ಳೂರಿಂದ ಐಟಿ ಕಂಪನಿಗಳ ಗುಳೆ ಎಚ್ಚರಿಕೆ..!
ಇನ್ನು ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಕೆರೆ ಕೋಡಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಸಿದ್ದಯ್ಯನಪುರ ಗ್ರಾಮದ ಇಬ್ಬರು ಬೈಕ್ ಸವಾರರನ್ನು ಅಲ್ಲಿದ್ದವರು ರಕ್ಷಿಸಿದ್ದಾರೆ. ಬೈಕ್ ನೀರುಪಾಲಾಗಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಸಿರಿಯ ಮತ್ತು ವೀರಪ್ಪ ಎಂಬಿಬ್ಬರು ರೈತರು ನೀರಿನಲ್ಲಿ ಸಿಲುಕಿಕೊಂಡಿದ್ದಾಗ ಸ್ಥಳೀಯರು ಹಗ್ಗದ ಸಹಾಯದಿಂದ ಹಳ್ಳ ದಾಟಿಸಿದ್ದಾರೆ. ಹನೂರು ಬಳಿ ವ್ಯಕ್ತಿಯೊಬ್ಬರು ತನ್ನ ಮಗಳ ಜೊತೆ ಹೋಗುತ್ತಿದ್ದಾಗ ಹಳ್ಳದಲ್ಲಿ ಬೈಕ್ ಸಿಲುಕಿ ಪರದಾಡಿ ಕೊನೆಗೇ ಅಪಾಯದಿಂದ ಬಚಾವಾಗಿದ್ದಾರೆ.