60 ವರ್ಷ ಮೇಲ್ಪಟ್ಟವರು ಮಾತ್ರವಲ್ಲ, ಈ ರೋಗ ಲಕ್ಷಣಗಳಿದ್ದವರೂ ಮಾಸ್ಕ್ ಧರಿಸಬೇಕು!

By Sathish Kumar KHFirst Published Dec 18, 2023, 5:03 PM IST
Highlights

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು, ಹೃದರ ಸಂಬಂಧಿ ಕಾಯಿಲೆ ಹಾಗೂ ದೀರ್ಘಾವಧಿ ರೋಗಗಳಿಂದ ಬಳಲುವವರು ಮಾಸ್ಕ್ ಬಳಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.18):
ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ ಎನ್ನುವ ಆತಂಕ ಬೇಡ. 60 ವರ್ಷ ಮೇಲ್ಪಟ್ಟವರು, ಹೃದರ ಸಂಬಂಧಿ ಕಾಯಿಲೆ ಹಾಗೂ ದೀರ್ಘಾವಧಿ ರೋಗಗಳಿಂದ ಬಳಲುವವರು ಮಾಸ್ಕ್ ಬಳಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ಸಭೆ ನಡೆಸಿ ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚಿಸಿದ್ದೇವೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಎಲ್ಲೆಡೆ ಹೆಚ್ಚು ಟೆಸ್ಟಿಂಗ್ ಮಾಡುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರೋರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಶೀತ, ಜ್ವರ, ಕೆಮ್ಮು ಅಥವಾ ಉಸಿರಾಟದ ತೊಂದರೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

ರಾಜ್ಯದ ಎಲ್ಲಾ ಆಸ್ಪತ್ರೆಗಳನ್ನ ಸನ್ನದ್ಧವಾಗಿರಲು ಸೂಚಿಸಲಾಗಿದೆ. ಅಗತ್ಯವಿರುವ ಬೆಡ್, ಪಿಪಿಇ ಕಿಟ್, ಆಕ್ಸಿಜನ್ ಸಿದ್ಧಮಾಡಲಾಗಿದೆ. ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಶೀತ, ಜ್ವರ ಕೆಮ್ಮು ಇರುವವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಪಾಸಿಟಿವ್ ಬಂದರೆ ಮಾತ್ರ ನಿಷೇಧ ಮಾಡಬಹುದು. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ದೇಶದ ಹೊಸ ಕೋವಿಡ್‌ ಕೇಸ್‌ಗಳಲ್ಲಿ ಕೇರಳದಲ್ಲೇ ಶೇ. 90ರಷ್ಟು ಪತ್ತೆ: ಇಲ್ಲಿ ಮಾಸ್ಕ್‌ ಕಡ್ಡಾಯ!

ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಹೋಗಿ ಬರುತ್ತಿದ್ದು ಕಡ್ಡಾಯವಾಗಿ ಅವರು ಮಾಸ್ಕ್ ಧರಿಸುವುದು ಒಳ್ಳೆಯದು. ಸದ್ಯಕ್ಕೆ ಯಾವುದೇ ಕಾರಣಕ್ಕೂ ಯಾವುದೇ ಬಂದ್ ಅಥವಾ ಯಾವುದೇ ಸಭೆ ಸಮಾರಂಭ ಅಥವಾ ಗುಂಪುಗೂಡುವಂತಹ ಕಾರ್ಯಕ್ರಮಗಳನ್ನು ನಿಷೇಧಿಸುವ ಚಿಂತನೆ ಇಲ್ಲ. ಕೋವಿಡ್ ಟೆಸ್ಟ್ ಜಾಸ್ತಿ ಮಾಡಲಾಗುವುದು. ಒಂದು ವೇಳೆ ಪ್ರಕರಣಗಳು ಜಾಸ್ತಿ ಕಂಡುಬಂದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಪರಿಶೀಲನೆ ಮಾಡಲಾಗುವುದು ಎಂದರು.

ಮಂಡ್ಯದಲ್ಲಿ ನಡೆದ ಭ್ರೂಣಹತ್ಯೆ ಮತ್ತು ರಾಜ್ಯದಲ್ಲಿನ ನಕಲಿ ಕ್ಲಿನಿಕ್ಗಳ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ ಹಲವರ ಬಂಧನವಾಗಿದೆ. ಈ ಬಗ್ಗೆ ಕಾನೂನು ಬದಲಾವಣೆ ತರಲು ಚರ್ಚೆ ನಡೆಸಲಾಗುತ್ತಿದೆ. ಹೊಸಕೋಟೆಯಲ್ಲೂ ಆಸ್ಪತ್ರೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಭ್ರೂಣಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ. ಅಲ್ಲದೆ ನಕಲಿ ವೈದ್ಯರು, ನಕಲಿ ಕ್ಲಿನಿಕ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕೇರಳದಲ್ಲಿ ದೇಶದ ಮೊದಲ ಕೋವಿಡ್ JN.1 ವೈರಸ್ ಪ್ರಕರಣ ಪತ್ತೆ, ಅಲರ್ಟ್ ಘೋಷಣೆ!

ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್  ಮಾತನಾಡಿ, ಈಗಾಗಲೇ ಕೇರಳ ಹಾಗೂ ಕೊಡಗು ಚೆಕ್ ಪೋಸ್ಟ್ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಕೇರಳದೊಂದಿಗೆ ಕೊಡಗು ಜಿಲ್ಲೆ ಗಡಿ ಹಂಚಿಕೊಂಡಿದ್ದು, ಮಾಕುಟ್ಟ, ಕುಟ್ಟ ಹಾಗೂ ಕರಿಕೆ ಚೆಕ್ ಪೋಸ್ಟ್ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ರೋಗ ಲಕ್ಷಣಗಳು ಕಂಡು ಬಂದರೆ ಅಂತಹವರಿಗೆ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ ಈ ಹಿಂದೆ ಕೋವಿಡ್ ಚಿಕಿತ್ಸೆಗಾಗಿ ಮಾಡಿಕೊಂಡಿದ್ದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

click me!