
ಬೆಂಗಳೂರು (ಡಿ.18): ಇಡೀ ರಾಜ್ಯದ ಎಲ್ಲ ಆಡಳಿತ ಶಕ್ತಿ ಕೇಂದ್ರವೇ ಬೆಳಗಾವಿಗೆ ರವಾನೆಯಾಗಿ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗಿತ್ತು. ಹೀಗಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರನ್ನು 12 ಜನ ಗಂಡಸರು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ನಡೆದಿತ್ತು. ಇದನ್ನು ಪಕ್ಷಗಳು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡು ಆರೋಪ ಪ್ರತ್ಯಾರೋಪ ಮಾಡಿಕೊಂಡವು. ಆದರೆ, ನ್ಯಾಯ, ಮಹಿಳಾ ಗೌರವ ಹಾಗೂ ಮಾನವೀಯತೆಯನ್ನು ಎತ್ತಿಹಿಡಿಯುವ ಹೈಕೋರ್ಟ್, ಬೆಳಗಾವಿಯ ಮಹಿಳಾ ದೌರ್ಜನ್ಯದ ಬಗ್ಗೆ ಸ್ವಯಂಕೃತವಾಗಿ (ಸುಮೊಟೊ) ಕೇಸ್ ದಾಖಲಿಸಿಕೊಂಡು ವಿಚಾರಣೆಯನ್ನು ಮಾಡಿದೆ. ಈ ವೇಳೆ ನ್ಯಾಯಮೂರ್ತಿಗಳು ಎಲ್ಲ ಹಂತದಲ್ಲಿಯೂ ಮಹಿಳಾ ಗೌರವ ಎತ್ತಿಹಿಡಿಯುವ ಮೂಲಕ ನಾಡಿನ ಜನತೆಗೆ ನ್ಯಾಯಾಲಯದ ಮೇಲಿನ ಗೌರವವನ್ನೂ ಹೆಚ್ಚುವಂತೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಹಿಳೆ ವಿವಸ್ರ್ತಗೊಳಿಸಿ ಹಲ್ಲೆ ಪ್ರಕರಣದ ಬಗ್ಗೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸುಮೊಟೋ ಅರ್ಜಿಯನ್ನು ಸೋಮವಾರ ವಿಚಾರಣೆ ಮಾಡಲಾಗಿದ್ದು, ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಖುದ್ದು ಹಾಜರಾಗಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಪಿ.ಬಿ. ವರಾಳೆ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಲ್ಲಿ ವಿಚಾರಣೆ ಮಾಡಲಾಯಿತು. ಪೊಲೀಸ್ ಆಯುಕ್ತರಿಂದ ಪ್ರಕರಣದ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಲಾಗಿದ್ದು, ತನಿಖೆ ಹಾಗೂ ಮಹಿಳೆಗೆ ಚಿಕಿತ್ಸೆ ಮಾಹಿತಿ ನೀಡಿದ್ದಾರೆ. ಜೊತೆಗೆ, ಸೈಕ್ಯಾಟ್ರಿಸ್ಟ್ ವೈದ್ಯರಿಂದ ಮಹಿಳೆಗೆ ಕೌನ್ಸಿಂಗ್ ಕೂಡ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣ: ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
ನ್ಯಾಯಮೂರ್ತಿಗಳು: ಮಹಿಳೆಯ ಮೇಲೆ ಅಮಾನವೀಯ ಘಟನೆ ನಡೆಯುವಾಗ ಯಾರೂ ಮಹಿಳೆಗೆ ಸಹಾಯ ಮಾಡಲೇ ಇಲ್ವಾ?
ಪೊಲೀಸ್ ಅಧಿಕಾರಿ: ಒಬ್ಬ ವ್ಯಕ್ತಿ ಮಹಿಳೆಗೆ ಸಹಾಯ ಕ್ಕೆ ಬಂದಿದ್ದಾನೆ. ಅವರೇ ಮೊದಲು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.ಬೆಳಗಿನ ಜಾವ 3.50ಕ್ಕೆ ಒಬ್ಬ ಅನಾಮಿಕ 121 ಗೆ ಕರೆ ಮಾಡಿದ್ದನು. 4 ಗಂಟೆಗೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಈ ವೇಳೆ 12 ಆರೋಪಿಗಳ ಪೈಕಿ ಒಬ್ಬ ಮಾತ್ರ ತಲೆಮರೆಸಿಕೊಂಡಿದ್ದು, ಉಳಿದ ಎಲ್ಲಾ ಆರೋಪಿಗಳನ್ನ ಬಂಧಿಸಲಾಗಿದೆ.
ನ್ಯಾಯಮೂರ್ತಿಗಳು: ಗ್ರಾಮ ಪಂಚಾಯಿತಿ ಅಧಿಕಾರಿಗಳು, ಚುನಾಯಿತರು ಈ ಘಟನೆಯಲ್ಲಿ ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ? ಈ ಘಟನೆ ಪೊಲಿಟಿಸೈಸ್ (ರಾಜಕೀಯವಾಗಿ ಬಳಕೆ) ಆಗಿದ್ಯಾ.?
ಪೊಲೀಸ್ ಅಧಿಕಾರಿ: ಇಲ್ಲ.. ಈ ಘಟನೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಆಗಿಲ್ಲ.
ನ್ಯಾಯಮೂರ್ತಿಗಳು: ಈ ಘಟನೆಯಲ್ಲಿ ಗ್ರಾಮಸ್ಥರ ಪ್ರತಿಕ್ರಿಯೆ ಹೇಗಿತ್ತು.? ಕೇವಲ ವೀಕ್ಷಕರಾಗಿದ್ದಾರಾ? ತನಿಖೆಯಲ್ಲಿ ಸಹಕಾರ ಇದ್ಯಾ.? ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂಬ ಕಾರಣಕ್ಕೆ ಗ್ರಾಮಸ್ಥರ ಪ್ರತಿಕ್ರಿಯೆ ಹೇಗಿದೆ. ಜನರಲ್ಲಿ ಕಾನ್ಫಿಡೆನ್ಸ್ ತುಂಬುವ ನಿಟ್ಟಿನಲ್ಲಿ ಏನ್ ಮಾಡ್ತಾ ಇದ್ದೀರಿ.? ಎಂದು ಪ್ರಶ್ನಿಸಿ ಗ್ರಾಮಸ್ಥರಲ್ಲಿ ಭರವಸೆ ಮೂಡಿಸುವ ನಿಟ್ಠಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಬೇಕು ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದರು.
ಇನ್ನು ಮಹಿಳೆಗೆ ಕೌನ್ಸೆಲಿಂಗ್ ಮಾಡುತ್ತಿದ್ದ ವೈದ್ಯರನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ಮಾಡಿದ ನ್ಯಾಯಮೂರ್ತಿಗಳು ತಮ್ಮ ಚೇಂಬರ್‌ಗಳಿಂದಲೇ ವೈದ್ಯರನ್ನು ಕೆಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಈ ವಿಡಿಯೋ ಕಾನ್ಫೆರೆನ್ಸಿಂಗ್ ಅನ್ನು ಅತ್ಯಂತ ಗುಪ್ತವಾಗಿ ನಡೆಸಲಾಗಿದ್ದು, ಮಹಿಳೆಯ ಮನಸ್ಥಿತಿ, ಗಾಯದ ಚಿಕಿತ್ಸೆ ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆದು ಮಹಿಳಾ ಗೌರವವನ್ನು ಎತ್ತಿ ಹಿಡಿದಿದ್ದಾರೆ. ವೈದ್ಯರ ವಿಚಾರಣೆಯನ್ನು ನಡೆಸಿ ಮಾಹಿತಿ ಪಡೆದ ನ್ಯಾಯಮೂರ್ತಿಗಳು, ಪುನಃ ಪೊಲೀಸರನ್ನು ವಿಚಾರಣೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಮಲ್ಲೇಶ್ವರಂ ಕೆಸಿ ಜನರಲ್ ಆಸ್ಪತ್ರೆ ಎಡವಟ್ಟು; ಜಗತ್ತಿಗೆ ಬರುವ ಮುಂಚೆಯೇ ಕಣ್ಣು ಮುಚ್ಚಿದ ಕಂದಮ್ಮ!
ನ್ಯಾಯಮೂರ್ತಿಗಳು: ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಲಾಗಿದ್ಯಾ?
ಪೊಲೀಸ್ ಅಧಿಕಾರಿ: ಹೌದು, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ.
ನ್ಯಾಯಮೂರ್ತಿಗಳು: ಸಂತ್ರಸ್ತ ಮಹಿಳೆ ಹಾಗೂ ಕುಟುಂಬ ಗೌರವಯುತವಾಗಿ ಜೀವನ ಮಾಡಲಿಕ್ಕೆ ಮಹಿಳೆಗೆ ಭೂಮಿ ನೀಡಲಾಗಿದ್ಯಾ?
ಪೊಲೀಸ್ ಅಧಿಕಾರಿ: ಮಹಿಳೆಗೆ ಸರ್ಕಾರದ ವತಿಯಿಂದ 2 ಎಕರೆ ಭೂಮಿಯನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ.
ನ್ಯಾಯಮೂರ್ತಿಗಳು: ಡಿಸೆಂಬರ್ 30ರ ಒಳಗಾಗಿ ಭೂಮಿ ನೀಡುವ ಪ್ರಕ್ರಿಯೆ ಮುಗಿಯಬೇಕು. ಭೂಮಿ, ಹಣಕಾಸು ನೀಡುವ ಯೋಜನೆ ಸರಿಯಾಗಿದೆ. ಈ ಯೋಜನೆ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ನಕಲಿ ಪ್ರಕರಣಗಳ ಬಗ್ಗೆ ಎಚ್ಚರಿಕೆ ಇಡಬೇಕು ಎಂದು ನ್ಯಾಯಮೂರ್ತಿ ದೀಕ್ಷಿತ್ ಅವರು ಸೂಚನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ