
-ಶ್ರೀಕಾಂತ್ ಎನ್. ಗೌಡಸಂದ್ರ
ಡಾ। ಶರಣಪ್ರಕಾಶ್ ಪಾಟೀಲ್ ಎಂದರೆ ಸಾಮಾನ್ಯವಾಗಿ ವಿವಾದಗಳಿಗೆ ಸಿಲುಕದ ಸಂಭಾವಿತ ರಾಜಕಾರಣಿ ಎಂದೇ ಪರಿಚಿತರು. ಈ ಹೆಗ್ಗಳಿಕೆಗೆ ತಕ್ಕಂತೆಯೇ ಇದೆ ಅವರ ಬೆಳವಣಿಗೆ. ಯುವ ಕಾಂಗ್ರೆಸ್, ಜಿಲ್ಲಾ ಪಂಚಾಯಿತಿ ಹಂತದಿಂದ ರಾಜಕಾರಣ ಆರಂಭಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆರಳಲ್ಲೇ ಬೆಳೆದು ನಾಲ್ಕನೇ ಬಾರಿಗೆ ಶಾಸಕರಾದವರು. ವೈದ್ಯಕೀಯ ಪದವೀಧರರೂ ಆದ ಅವರು ಎರಡನೇ ಬಾರಿ ವೈದ್ಯಕೀಯ ಶಿಕ್ಷಣ ಖಾತೆ ಜವಾಬ್ದಾರಿ ಹೊತ್ತಿದ್ದಾರೆ. ಹೀಗೆ ಸಂಭಾವಿತ ಸಚಿವರೆನಿಸಿದ ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೆ ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮತ್ತೊಬ್ಬ ಸಚಿವರು ಹೊಯ್ ಕೈ ನಡೆಸಿದರೂ ಎಂಬ ವದಂತಿ ಹಬ್ಬಿತ್ತು. ಇದು ನಿಜವಾ? ಈವರೆಗಿನ ಇಲಾಖಾ ಸಾಧನೆಯೇನು? ಭವಿಷ್ಯದ ಯೋಜನೆ, ಯುವನಿಧಿ ಯಶಸ್ಸು ಹಾಗೂ ರಾಜಕೀಯ ಮಹತ್ವಾಕಾಂಕ್ಷೆಗಳ ಬಗ್ಗೆ 'ಕನ್ನಡಪ್ರಭ' ಜತೆ ಮುಖಾಮುಖಿಯಾಗಿದ್ದಾರೆ ವೈದ್ಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ। ಶರಣ ಪ್ರಕಾಶ್ ಪಾಟೀಲ್.
-ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗಲಾಟೆಯಾಯ್ತಂತೆ. ಸಚಿವ ಬೋಸುರಾಜು ಜತೆಗೆ ಭಿನ್ನಾಭಿಪ್ರಾಯವಿದೆಯೇ?
ಬೋಸುರಾಜು ಅವರು ಹಿರಿಯರು. ಅವರೊಂದಿಗೆ ನನಗೆ ಹೇಗೆ ಭಿನ್ನಾಭಿಪ್ರಾಯ ಇರಲು ಸಾಧ್ಯ? ಶಾಸಕರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬುದಷ್ಟೇ ನನ್ನ ಸಿದ್ಧಾಂತ.
-ಅದಕ್ಕಾಗಿಯೇ ರಾಷ್ಟ್ರೀಯ ಉತ್ಸವಗಳ ಸಮಯದಲ್ಲಿ ಮಾತ್ರ ರಾಯಚೂರಿಗೆ ಹೋಗ್ತೀರಾ? ಉಸ್ತುವಾರಿ ಸಚಿವರು ಹೀಗೆ ಮಾಡಿದರೆ ಹೇಗೆ?
ಹಾಗೇನೂ ಇಲ್ಲ. ರಾಯಚೂರು ಉಸ್ತುವಾರಿ ಸಚಿವನಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇನೆ. ರಾಯಚೂರಿನಲ್ಲಿ ಎರಡು ಜಿಟಿಟಿಸಿ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಕಿದ್ವಾಯಿ ಘಟಕ ಹೀಗೆ ಸಾಕಷ್ಟು ಕೆಲಸ ಮಾಡಿದ್ದೇವೆ.
-ವೈದ್ಯಕೀಯ ಶಿಕ್ಷಣ ಖಾತೆ ವಹಿಸಿಕೊಂಡು 22 ತಿಂಗಳಾಯ್ತು? ಏನಾದರೂ ಸುಧಾರಣೆ ಆಗಿದೆಯೇ?
2013-18ರಲ್ಲಿ ನಾವೇ ಪ್ರತಿ ಜಿಲ್ಲೆಯಲ್ಲೂ ಒಂದು ವೈದ್ಯಕೀಯ ಕಾಲೇಜು ತರಬೇಕು ಎಂಬ ನೀತಿ ಮಾಡಿದ್ದೆವು. ಅದರಂತೆ ಈಗಾಗಲೇ 22 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದ್ದೇವೆ. ಚಿಕ್ಕಬಳ್ಳಾಪುರ ಹಾಗೂ ಕನಕಪುರದಲ್ಲೂ ಮಾಡುತ್ತಿದ್ದೇವೆ. 2016ರಲ್ಲೇ ಕಲಬುರಗಿ, ಮೈಸೂರು ಹಾಗೂ ಬೆಳಗಾವಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿದ್ದೆ. ಕಳೆದ ಐದು ವರ್ಷ ಯಾವುದೇ ಪ್ರಗತಿ ಆಗಿರಲಿಲ್ಲ. ಇದೀಗ ಎಲ್ಲವನ್ನೂ ಒಂದೊಂದಾಗಿ ಪೂರ್ಣಗೊಳಿಸುತ್ತಿದ್ದೇವೆ. ಹೊಸ ಸೂಪರ್‌ಸ್ಪೆಷಾಲಿಟಿ, ಟ್ರಾಮಾ ಕೇಂದ್ರಗಳ ಮೂಲಕ ರಾಜ್ಯಾದ್ಯಂತ ಜನರಿಗೆ ಸೂಪರ್‌ಸ್ಪೆಷಾಲಿಟಿ ಚಿಕಿತ್ಸೆ ತಲುಪಿಸುವ ಮಹತ್ವದ ಕೆಲಸ ಆಗುತ್ತಿದೆ.
-ಆದರೆ ನಿಮ್ಮ ಪಕ್ಷದ ಪ್ರಭಾವಿಗಳೇ ಖಾಸಗಿ ಮೆಡಿಕಲ್ ಕಾಲೇಜು ಹೊಂದಿರುವ ತುಮಕೂರು, ದಾವಣಗೆರೆ, ಕೋಲಾರ, ಬಾಗಲಕೋಟೆ, ವಿಜಯಪುರದಲ್ಲಿ ಮಾತ್ರ ಯಾಕೆ ವೈದ್ಯಕೀಯ ಕಾಲೇಜು ಮಾಡುವುದಿಲ್ಲ?
ಹಾಗೇನೂ ಇಲ್ಲ. ಈ ಬಾರಿ ಬಾಗಲಕೋಟೆಗೆ ಮಂಜೂರು ಮಾಡಿದ್ದೇವೆ. ಉಳಿದಂತೆ ವೈದ್ಯಕೀಯ ಕಾಲೇಜು ಇಲ್ಲದ ವಿಜಯಪುರ, ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಗಳೂರು ಹಾಗೂ ಉಡುಪಿಯಲ್ಲಿ ಪಿಪಿಪಿ ಮಾದರಿಯಲ್ಲಿ ಮಾಡಬೇಕು ಎಂಬ ಉದ್ದೇಶವಿದೆ. ಈ ಬಗ್ಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ.
-ಇಲಾಖೆಗೆ ಸೂಕ್ತ ಅನುದಾನವೇ ನೀಡಿಲ್ಲ ಎಂಬ ಮಾತಿದೆಯಲ್ಲ?
ಖಂಡಿತ ಇಲ್ಲ. ಬಜೆಟ್‌ನಲ್ಲಿ (2024-25) ಘೋಷಿಸಿದ್ದ ₹375 ಕೋಟಿಗಳನ್ನು ಶೇ.100 ರಷ್ಟು ಖರ್ಚು ಮಾಡಿದ್ದೇವೆ. ಅಲ್ಲದೆ ₹300 ಕೋಟಿ ಹೆಚ್ಚುವರಿ ಹಣವನ್ನು ಮುಖ್ಯಮಂತ್ರಿಗಳು ಇಲಾಖೆಗೆ ನೀಡಿದ್ದಾರೆ. ಅದನ್ನೂ ಭಾಗಶಃ ಖರ್ಚು ಮಾಡಿದ್ದೇವೆ. ಹೀಗಾಗಿ ನಮ್ಮದು ಶೇ.100 ರಷ್ಟು ಆರ್ಥಿಕ ಸಾಧನೆ.
-ವೈದ್ಯಕೀಯ ಶಿಕ್ಷಣ ಪಡೆಯುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಂಬಿಬಿಎಸ್ ಸೀಟು ಹೆಚ್ಚಳಕ್ಕೆ ಏನು ಕ್ರಮ ಆಗಿದೆ?
ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ 50 ಸೀಟು ಹೆಚ್ಚಳ ಮಾಡಿ ಸರ್ಕಾರಿ ಕೋಟಾದಡಿಯೇ 800 ಸೀಟು ಹೆಚ್ಚಿಸಲು ಎನ್ಎಂಸಿಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಇದಲ್ಲದೆ ಸ್ನಾತಕೋತ್ತರ ವೈದ್ಯಕೀಯ ಪದವಿಯ 800 ಸೀಟು ಹೆಚ್ಚಳ ಮಾಡಲು ಮನವಿ ಮಾಡಿದ್ದೇವೆ. ಎನ್‌ಎಂಸಿ ಅನುಮತಿ ನೀಡಿದರೆ ಮುಂದಿನ ವರ್ಷದಿಂದಲೇ ಹೆಚ್ಚುವರಿ ಸೀಟುಗಳು ಲಭ್ಯವಾಗಲಿವೆ.
-ಆದರೆ ನೀಟ್ ಪರೀಕ್ಷೆಯೇ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂದು ಆರೋಪ ಮಾಡಿದ್ದೀರಿ?
ಹೌದು, ನೀಟ್ ಬಗ್ಗೆ ಕೇಂದ್ರ ಸರ್ಕಾರ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಂಡು ಬೇಜವಾಬ್ದಾರಿ ಪ್ರದರ್ಶನ ಮಾಡಿದೆ. ಕೇಂದ್ರ ನಡೆಸಿರುವ ನೀಟ್ ಪರೀಕ್ಷೆ ಪ್ರಕ್ರಿಯೆ ವಿದ್ಯಾರ್ಥಿಗಳ ವಿಶ್ವಾಸಗಳಿಸಲು ಯಶಸ್ವಿಯಾಗಿಲ್ಲ. ಕೇಂದ್ರಕ್ಕೆ ಈ ಪರೀಕ್ಷೆ ನಡೆಸುವ ಸಾಮರ್ಥ್ಯವೇ ಇಲ್ಲ.
-ಈ ಬಾರಿಯಾದರೂ ನೀಟ್ ಪರೀಕ್ಷೆ ಪ್ರಕ್ರಿಯೆ ಸುಧಾರಿಸಲಿದೆಯೇ?
ಕಾದು ನೋಡಬೇಕು. ಈ ವರ್ಷವೂ ಸರಿ ಆಗದಿದ್ದರೆ ಜನ ಸಹಿಸುವುದಿಲ್ಲ. ದೇಶಾದ್ಯಂತ ದೊಡ್ಡಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗಲಿದೆ.
-ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆಯನ್ನೇ ಮಾಡಿಲ್ಲವಲ್ಲ?
ಇದು ದೊಡ್ಡ ವಿಪರ್ಯಾಸ. ಕಳೆದ ಒಂದು ವರ್ಷ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆಯನ್ನೇ ಮಾಡಿಲ್ಲ. ಇನ್ನು ಪಿಜಿ ಕೋರ್ಸ್‌ಗಳಿಗೆ ಪರ್ಸೆಂಟೈಲ್ ಮೇಲೆ ಫಲಿತಾಂಶ ಪ್ರಕಟಿಸಿತೇ ಹೊರತು ಅಂಕಗಳನ್ನು ಬಹಿರಂಗಪಡಿಸಲೇ ಇಲ್ಲ. ಇದು ಕೇಂದ್ರ ಸರ್ಕಾರದ ಆತಂಕಕಾರಿ ಧೋರಣೆ. ಈ ಧೋರಣೆಯಿಂದ ಕೇಂದ್ರ ಹೊರ ಬರಬೇಕು.
-ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ನಿಮ್ಮ ವ್ಯಾಪ್ತಿಗೆ ಬರುತ್ತದೆ. ಆದರೆ, ಚಿಕಿತ್ಸೆ ಗುಣಮಟ್ಟ ಸುಧಾರಿಸಿಲ್ಲ ಎಂಬ ಮಾತಿದೆಯಲ್ಲ?
ನಾವು ಬಂದ ಬಳಿಕ ಖಂಡಿತ ಸುಧಾರಿಸಿದೆ. ಯಾವುದೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಜನ ತುಂಬಿ ತುಳುಕುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ಸಿಗದಿದ್ದರೆ ಜನ ಯಾಕೆ ಬರುತ್ತಾರೆ? ನಮ್ಮ ಸಾಮರ್ಥ್ಯ ಮೀರಿ ಚಿಕಿತ್ಸೆ ನೀಡುತ್ತಿದ್ದೇವೆ.
-ಹೀಗಿದ್ದರೂ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿರುವುದು ಯಾಕೆ?
ಯಾಕೆಂದರೆ ನಾವು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಿದರೂ ಕಾರ್ಯದ ಒತ್ತಡದಿಂದಾಗಿ ರೋಗಿಗಳಿಗೆ ಮುಖಾಮುಖಿ ತಿಳಿವಳಿಕೆ ಹೇಳಲು, ಕೌನ್ಸಿಲಿಂಗ್ ಮಾಡಲು ಆಗುವುದಿಲ್ಲ. ಸಂವಹನ ಕೊರತೆಯಿಂದ ರೋಗಿಗಳ ಸಂಬಂಧಿಕರಿಗೆ ಹಾಗೆ ಅನಿಸಬಹುದು. ಆದರೆ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ.
-ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆ ಹಣ ವಿಳಂಬವಾಗುತ್ತಿದೆ ಎಂಬ ಆರೋಪವಿದೆಯಲ್ಲ?
ಯುವನಿಧಿ ಅಡಿ 2.68 ಲಕ್ಷ ನೋಂದಣಿ ಆಗಿದ್ದು, 1.78 ಲಕ್ಷ ಜನರಿಗೆ ಹಣ ತಲುಪುತ್ತಿದೆ. ಉಳಿದವರು ಪದವಿ ಪೂರೈಸಿ ಆರು ತಿಂಗಳು ಪೂರ್ಣಗೊಂಡಿಲ್ಲ. ಇನ್ನು ಈ ಯುವನಿಧಿ ಫಲಾನುಭವಿಗಳಿಗೆ ಹೆಚ್ಚುವರಿ ಕೌಶಲ್ಯಗಳ ತರಬೇತಿ ನೀಡಿ ಅವರಿಗೆ ಉದ್ಯೋಗಾವಕಾಶ ಕೊಡಲು ಪ್ರಯತ್ನಿಸುತ್ತಿದ್ದೇವೆ. ಯುವನಿಧಿ ಹಣ ವಿತರಣೆ ವಿಳಂಬವಾಗುತ್ತಿದೆ ಎಂಬುದು ಸುಳ್ಳು ಆರೋಪ.
-ಮೈಕ್ರೋಫೈನಾನ್ಸ್ ದಂಧೆ ನಿಯಂತ್ರಣಕ್ಕೆ ಕಾಯ್ದೆ ಸಂಜೀವಿನಿ ಅಸ್ತ್ರವಾಗುವುದೇ?
ಅಕ್ಕ ಕ್ರೆಡಿಟ್ ಕೋ ಆಪರೇಟ್ ಸೊಸೈಟಿ ಸ್ಥಾಪಿಸಿ ಸರ್ಕಾರದಿಂದಲೇ ಸ್ವಸಹಾಯ ಸಂಘಗಳಿಗೆ ಸಾಲ ಕೊಡಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕಾಗಿ ರಾಜಸ್ಥಾನದ ಮಾದರಿ ಅಳವಡಿಸಿಕೊಳ್ಳುತ್ತಿದ್ದೇವೆ. ಜತೆಗೆ ರಾಷ್ಟ್ರೀಯ ಬ್ಯಾಂಕ್‌ಗಳನ್ನು ಲಿಂಕೇಜ್ ಮಾಡಿ ಈ ವರ್ಷ ₹3,600 ಕೋಟಿ ಸಾಲ ಕೊಡಿಸಲು ಉದ್ದೇಶಿಸಿದ್ದೇವೆ. ಕಡಿಮೆ ದರದಲ್ಲಿ ಸಾಲ ದೊರಕಿದರೆ ಅದನ್ನು ತುಂಬಾ ಉತ್ತಮವಾಗಿ ಬಳಸಿಕೊಂಡು ಜೀವನ ಸುಧಾರಣೆ ಮಾಡಿಕೊಳ್ಳುತ್ತಾರೆ. ಮೈಕ್ರೋಫೈನಾನ್ಸ್ ಹಾವಳಿಗೆ ಸಿಲುಕುವುದಿಲ್ಲ.
-ಕೆಪಿಸಿಸಿ ಅಧ್ಯಕ್ಷ ಗಾದಿ ಬದಲಾದರೆ ಲಿಂಗಾಯತರಿಗೇ ನೀಡಬೇಕು ಎಂಬ ವಾದವಿದೆ. ನೀವೂ ಲಿಂಗಾಯತ ನಾಯಕ, ಖರ್ಗೆ ಆಶೀರ್ವಾದವೂ ಇದೆ. ಈ ಹುದ್ದೆ ಬಗ್ಗೆ ಆಸಕ್ತಿ ಇದೆಯೇ?
ನನಗೆ ಪಕ್ಷ ನೀಡಿರುವ ಅವಕಾಶ ಬಿಟ್ಟು ಆಕಾಂಕ್ಷೆಗಳ ಮೇಲೆ ನಂಬಿಕೆಯಿಲ್ಲ. ಹುಚ್ಚು ಹಂಬಲಗಳೂ ಇಲ್ಲ. ಈವರೆಗೆ ಪಕ್ಷ ನೀಡಿರುವ ಜವಾಬ್ದಾರಿ ನಿಭಾಯಿಸಿದ್ದೇನೆ. ಮುಂದೆಯೂ ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸುತ್ತೇನೆ.
-ನಿಮ್ಮ ಮೇಲೆ ವಾಲ್ಮೀಕಿ ನಿಗಮ ಹಗರಣದ ಸಾಕ್ಷ್ಯ ನಾಶ ಆರೋಪ ಬಂದಿದ್ದು ಯಾಕೆ?
ನಾನು ಇಲ್ಲದಿದ್ದಾಗ ನನ್ನ ಕಚೇರಿಗೆ ಬಂದು ಯಾರೋ ಚರ್ಚೆ ಮಾಡಿದ್ದಾರೆ ಎಂಬುದು ಆರೋಪ. ತನಿಖಾ ವರದಿಯಲ್ಲೂ ನನ್ನ ಬಗ್ಗೆ ಪ್ರಸ್ತಾಪವಿಲ್ಲ. ನನ್ನ ಇಡೀ ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಬಂದು ಹೇಳಿದ್ದೇನೆ. ನಾಲ್ಕು ಬಾರಿ ಶಾಸಕ, ಎರಡು ಬಾರಿ ಸಚಿವನಾಗಿ ಜನರಿಗೆ ದ್ರೋಹ ಬಗೆಯುವ ಕೆಲಸ ನಾನು ಎಂದೂ ಮಾಡಿಲ್ಲ.
-ವೃದ್ಧ ಪೋಷಕರನ್ನು ನಿಮ್ಮ ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿದ್ದಾರೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?
ಬೆಳಗಾವಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಗತಿ ಪರಿಶೀಲನೆ ನಡೆಸುವಾಗ 150 ಮಂದಿಯನ್ನು ಚಿಕಿತ್ಸೆ ಮುಗಿದರೂ ಕರೆದುಕೊಂಡು ಹೋಗದೆ ಬಿಟ್ಟು ಹೋಗಿದ್ದಾರೆ ಎಂಬುದು ತಿಳಿದುಬಂತು. ಹೀಗಾಗಿ ಎಲ್ಲಾ ಆಸ್ಪತ್ರೆಗಳ ನಿರ್ದೇಶಕರಿಗೂ ನಿರ್ದೇಶನ ನೀಡಿ ಇಂಥ ಪ್ರಕರಣಗಳ ವಿವರ ಪಡೆದು ಅಂಥವರಿಂದ ಮಕ್ಕಳಿಗೆ ವರ್ಗಾವಣೆಯಾಗಿರುವ ಆಸ್ತಿ ಹಾಗೂ ವಿಲ್ ತಡೆ ಹಿಡಿಯುವಂತೆ ಸೂಚಿಸಿದ್ದೇನೆ.
-ಕಾನೂನಾತ್ಮಕವಾಗಿ ತಂದೆ-ತಾಯಿ ಆಸ್ತಿ ಮಕ್ಕಳಿಗೆ ಹೋಗದಂತೆ ಹೇಗೆ ತಡೆಯುತ್ತೀರಿ?
2006ರ ಕೇಂದ್ರ ಸರ್ಕಾರದ ಕಾಯ್ದೆಯಡಿ ಅವಕಾಶ ಇದೆ. ಉಪ ವಿಭಾಗಾಧಿಕಾರಿಗಳ ನೇತೃತ್ವದ ಸಮಿತಿ ಇರುತ್ತದೆ. ಅವರ ಮುಂದೆ ನಮ್ಮ ನಿರ್ದೇಶಕರು ದೂರು ನೀಡಿದರೆ ಅವರು ಆಸ್ತಿ ವರ್ಗಾವಣೆ ತಡೆ ಹಿಡಿಯುತ್ತಾರೆ.
-ಪೋಷಕರನ್ನು ಮಕ್ಕಳು ತೊರೆದಿರುವ ಎಷ್ಟು ಪ್ರಕರಣ ವರದಿಯಾಗಿವೆ?
ಈ ಬಗ್ಗೆ ಮಾಹಿತಿ ತರಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಕೇವಲ ಆಸ್ಪತ್ರೆಗಳಲ್ಲಿ ಬಿಟ್ಟಿರುವುದು ಮಾತ್ರವಲ್ಲ, ಒಟ್ಟಾರೆ ಪೋಷಕರನ್ನು ತ್ಯಜಿಸಿರುವ ಬಗ್ಗೆ 3,010 ಪ್ರಕರಣ ದಾಖಲಾಗಿವೆ. 2,000 ಪ್ರಕರಣ ಇತ್ಯರ್ಥವಾಗಿದೆ. 1,010 ಇನ್ನೂ ವಿಚಾರಣೆ ಹಂತದಲ್ಲಿವೆ.
-ಯುವಕರಿಗೆ ಉದ್ಯೋಗ ಸೃಷ್ಟಿಗೆ ಏನೆಲ್ಲ ಮಾಡಿದ್ದೀರಿ?
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಡಿ ಬೆಂಗಳೂರು, ಸೇಡಂ, ಗದಗ ಹೀಗೆ ಸಾಕಷ್ಟು ಕಡೆ ಉದ್ಯೋಗ ಮೇಳ ಮಾಡಿದ್ದೇವೆ. ಕಲಿಕೆ ಜತೆ ಕೌಶಲ್ಯ ಕಾರ್ಯಕ್ರಮದ ಅಡಿ ಕಲಿಯುವಾಗಲೇ ಪ್ರಮುಖ ಕಂಪೆನಿಗಳ ಸಹಯೋಗದಲ್ಲಿ ಕೌಶಲ್ಯ ತರಬೇತಿ ನೀಡಿ ಪದವಿ ಮುಗಿದ ತಕ್ಷಣವೇ ಕೆಲಸ ಪಡೆಯಲು ನೆರವಾಗುತ್ತಿದ್ದೇವೆ. ವಿದೇಶದಲ್ಲಿ ಉದ್ಯೋಗವಕಾಶ ಕಲ್ಪಿಸಲು ಸಹ ತರಬೇತಿ ನೀಡುತ್ತಿದ್ದೇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ