BBMP: ಬೀದಿ ನಾಯಿಗೆ ಅನ್ನ ಹಾಕಲು ತೆರಿಗೆದಾರರ ಹಣ, ಪೋಷಣೆಗೆ ₹2 ಕೋಟಿ, ಸಂತಾನಹರಣ ಚಿಕಿತ್ಸೆಗೆ ₹12 ಕೋಟಿ!

Published : Mar 20, 2025, 06:58 AM IST
BBMP: ಬೀದಿ ನಾಯಿಗೆ ಅನ್ನ ಹಾಕಲು ತೆರಿಗೆದಾರರ ಹಣ, ಪೋಷಣೆಗೆ ₹2 ಕೋಟಿ, ಸಂತಾನಹರಣ ಚಿಕಿತ್ಸೆಗೆ ₹12 ಕೋಟಿ!

ಸಾರಾಂಶ

ಬೀದಿ ನಾಯಿಗಳಿಗೆ ಆಹಾರ ನೀಡಲು ಬಿಬಿಎಂಪಿ ಮುಂದಾಗಿದ್ದು, ತೆರಿಗೆದಾರರ ಹಣವನ್ನು ಬಳಸಲು ಯೋಜನೆ ರೂಪಿಸಿದೆ. ಈ ಯೋಜನೆಯ ಹಿಂದೆ ಕಮಿಷನ್ ಪಡೆಯುವ ಹುನ್ನಾರವಿದೆ ಎಂಬ ಆರೋಪ ಕೇಳಿಬಂದಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು (ಮಾ.20) : ಬೀದಿನಾಯಿಗಳ ಹಾವಳಿಯಿಂದ ಕಂಗೆಟ್ಟ ಜನತೆಯ ವಿರೋಧ ಲೆಕ್ಕಿಸದೆ ಖಾಸಗಿ ಸಹಭಾಗಿತ್ವದಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿ ಸತ್ಕರಿಸಲು ಆರಂಭಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಮುಂಬರುವ ಸಾಲಿನಲ್ಲಿ ತೆರಿಗೆದಾರರ ಕೋಟ್ಯಂತರ ಹಣ ವೆಚ್ಚ ಮಾಡಿ ಕಾರ್ಯಕ್ರಮ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೇ ಬಿಬಿಎಂಪಿಯ ಪಶುಪಾಲನಾ ವಿಭಾಗವು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿರುವ ಬೀದಿ ನಾಯಿಗಳಿಗೆ ಆಹಾರ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಆಗ ಬಿಬಿಎಂಪಿಯಿಂದ ಯಾವುದೇ ಹಣ ವೆಚ್ಚ ಮಾಡುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿತ್ತು. ಆ ಬಳಿಕ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮ ವಿಸ್ತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಎಷ್ಟರ ಮಟ್ಟಿಗೆ ಬೀದಿ ನಾಯಿಗಳಿಗೆ ಆಹಾರ ಹಾಕಲಾಗುತ್ತಿದೆ ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.

ಇದೆಲ್ಲದರ ನಡುವೆಯೇ ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ ತಯಾರಿ ಕಾರ್ಯ ನಡೆಯುತ್ತಿದ್ದು, ಬಜೆಟ್‌ನಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವುದಕ್ಕೆಂದು ತೆರಿಗೆದಾರರ ಹಣ ಮೀಸಲಿಡುವುದಕ್ಕೆ ಮುಂದಾಗಿದ್ದಾರೆ.

ಬೀದಿ ನಾಯಿಗಳ ದಾಳಿಗೆ ಒಳಗಾದವರು ಈ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದರೂ, ಬಿಬಿಎಂಪಿಯ ಅಧಿಕಾರಿಗಳ ಈ ಶ್ವಾನ ಊಟೋಪಚಾರ ಸತ್ಕಾರದ ಹಿಂದೆ ಕಮಿಷನ್‌ ಹೊಡೆಯುವ ಹುನ್ನಾರವಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿವೆ. ಏಕೆಂದರೆ, ಶ್ವಾನಗಳಿಗೆ ಆಹಾರ ಹಾಕುವುದಕ್ಕೆ ಮುಂದಿನ ವರ್ಷ ₹2 ಕೋಟಿ ವೆಚ್ಚ ಮಾಡುವುದಕ್ಕೆ ಮುಂದಾಗಿದ್ದು, ಪಾಲಿಕೆಯ 225 ವಾರ್ಡ್‌ನಲ್ಲಿ ಒಟ್ಟು 1 ಸಾವಿರ ಸ್ಥಳದಲ್ಲಿ ಬೀದಿ ನಾಯಿಗೆ ಆಹಾರ ಹಾಕುವುದಕ್ಕೆ ಸ್ಥಳ ನಿಗದಿ ಪಡಿಸುವುದು, ತಲಾ ಒಂದು ಸ್ಥಳದಲ್ಲಿ ಕನಿಷ್ಠ 5 ರಂತೆ 5 ಸಾವಿರ ಬೀದಿ ನಾಯಿಗೆ ಆಹಾರ ಹಾಕುವುದು. ಊಟ ಹಾಕಲು ಬಟ್ಟಲು, ನಾಯಿಗೆ ಹಾಕುವ ಸ್ಥಳ ಎಂಬ ಫಲಕ ಸಹ ಅಳವಡಿಸುವುದಕ್ಕೆ ನಿರ್ಧರಿಸಲಾಗಿದೆ.

ಇದನ್ನೂ ಓದಿ: ADR Report: ಡಿಕೆ ಶಿವಕುಮಾರ್‌ ದೇಶದ ನಂ.2 ಶ್ರೀಮಂತ ಶಾಸಕ; ಟಾಪ್‌ - 10 ರಲ್ಲಿ ರಾಜ್ಯದ ನಾಲ್ವರು ಶಾಸಕರು!

ಅಧಿಕಾರಿಗಳ ದ್ವಂದ್ವ ನೀತಿ:

ಬೀದಿ ನಾಯಿಗಳನ್ನು ಪೋಷಣೆ ಮಾಡುವುದಕ್ಕೆ ₹2 ಕೋಟಿ ವೆಚ್ಚದ ಯೋಜನೆ ಸಿದ್ದಪಡಿಸಿದರೆ, ಅದೇ ಬೀದಿ ನಾಯಿ ಸಂತಾನಹರಣ ಚಿಕಿತ್ಸೆಗೆ ₹12 ಕೋಟಿ, ಸಾಮೂಹಿಕ ಲಸಿಕೆಗೆ ₹4 ಕೋಟಿ, ಸಂತಾನಹರಣ ಕೇಂದ್ರ ಸ್ಥಾಪನೆಗೆ ₹7.5 ಕೋಟಿ, ಸಂಯುಕ್ತ ಲಸಿಕೆ ಖರೀದಿಗೆ ₹5 ಕೋಟಿ, ಆಕ್ರಮಣಕಾರಿ ಬೀದಿ ನಾಯಿಗಳ ವೀಕ್ಷಣ ಕೇಂದ್ರ ಸ್ಥಾಪನೆಗೆ ₹50 ಲಕ್ಷ, ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣಕ್ಕೆ ₹60 ಲಕ್ಷ ವೆಚ್ಚ ಮಾಡುವುದಕ್ಕೆ ಬೇಡಿಕೆ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಒಂದು ಕಡೆ ಬೀದಿ ನಾಯಿಗಳ ಫೋಷಣೆಗೂ ಹಣ ವೆಚ್ಚ ಮಾಡುವುದು. ಮತ್ತೊಂದು ಕಡೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಕೋಟಿ ಕೋಟಿ ರು. ವೆಚ್ಚ ಮಾಡಲಾಗುತ್ತದೆ. ಒಟ್ಟಿನಲ್ಲಿ ಬೀದಿ ನಾಯಿಗಳ ಹೆಸರಿನಲ್ಲಿ ಬಿಬಿಎಂಪಿಯು ಕೋಟ್ಯಾಂತರ ರು. ವೆಚ್ಚ ಮಾಡುವುದಕ್ಕೆ ಯೋಜನೆ ರೂಪಿಸಿಕೊಂಡಿದ್ದಾರೆ.

₹60 ಕೋಟಿಗೆ ಹೆಚ್ಚಾದ ಬೇಡಿಕೆ

ಬಿಬಿಎಂಪಿಯ ಪಶುಪಾಲನೆ ವಿಭಾಗಕ್ಕೆ ಪ್ರತಿ ವರ್ಷ ₹20 ಕೋಟಿವರೆಗೆ ಅನುದಾನ ನೀಡಲಾಗುತ್ತದೆ. ಈ ಬಾರಿ ಬಿಬಿಎಂಪಿಯ ಪಶುಪಾಲನೆ ವಿಭಾಗವೂ ಬೀದಿ ನಾಯಿಗಳ ಹೆಸರಿನಲ್ಲಿ ಹಲವು ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ಯೋಜನೆ ಸಿದ್ಧಪಡಿಸಿಕೊಂಡು 2025-26ನೇ ಸಾಲಿನಲ್ಲಿ ₹60 ಕೋಟಿ ಅನುದಾನ ನೀಡುವಂತೆ ಮುಖ್ಯ ಆಯುಕ್ತರಿಗೆ ಬೇಡಿಕೆ ಸಲ್ಲಿಸಲಾಗಿದೆ.

ಸಮುದಾಯ ಪ್ರಾಣಿ ಚಿಕಿತ್ಸಾಲಯಬಿಬಿಎಂಪಿಯ ವ್ಯಾಪ್ತಿಯಲ್ಲಿ ಪ್ರಾಣಿ ಪಕ್ಷಿಗಳ ಚಿಕಿತ್ಸೆಗೆ ಸರ್ಕಾರದ ಚಿಕಿತ್ಸಾಲಯ ಇರಲಿಲ್ಲ. ಈ ಹಿಂದೆ ಸರ್ಕಾರ ಪಶುಸಂಗೋಪನೆ ಇಲಾಖೆ ನಡೆಯುತ್ತಿದ್ದ ಚಿಕಿತ್ಸಾಲಯಗಳಿ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟ ಮೇಲೆ ಮುಚ್ಚಿವೆ. ಹೀಗಾಗಿ, ಬಿಬಿಎಂಪಿಯ 2025-26ನೇ ಸಾಲಿನ ಬಜೆಟ್‌ನಲ್ಲಿ ಪಾಲಿಕೆಯ 8 ವಲಯದಲ್ಲಿ ತಲಾ ಒಂದು ಸಮುದಾಯ ಪ್ರಾಣಿ ಚಿಕಿತ್ಸಾಲಯ ಸ್ಥಾಪಿಸುವುದಕ್ಕೆ ಚಿಂತನೆ ನಡೆಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್