*5 ದಿನದ ಕಲಾಪ ಎಷ್ಟುಮೌಲ್ಯಾಧಾರಿತವಾಗಿತ್ತು?
*ಟಿಎ, ಡಿಎ ಪಡೆಯಲು ಕಲಾಪಕ್ಕೆ ಹೋಗಬೇಕಷ್ಟೆ
*ಆದಾಗ್ಯೂ ಮಂಗಳವಾರದಿಂದ ಕಲಾಪಕ್ಕೆ ಹೋಗುವೆ
*ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಪ್ರಶ್ನೆ
ಬೆಂಗಳೂರು (ಡಿ. 21): ವಿಧಾನ ಮಂಡಲದ ಅಧಿವೇಶನಕ್ಕೆ (Belagavi Assembly Session) ಹೋಗಿ ಏನು ಮಾಡಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ( H D Kumaraswamy) ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಐದು ದಿನ ಕಲಾಪ ನಡೆದಿದೆ. ಕಲಾಪ ಅದೆಷ್ಟುಮೌಲ್ಯಾಧಾರಿತವಾಗಿತ್ತು? ಒಂದು ದಿನ ಬೈರತಿ ಬಸವರಾಜು ಪ್ರಕರಣ ಇಟ್ಟುಕೊಂಡು ಬಾವಿಗೆ ಇಳಿದರು. ಇನ್ನೊಂದು ದಿನ ಸಂಡೂರು ತಹಸೀಲ್ದಾರ್ ವಿಷಯ ಇಟ್ಟುಕೊಂಡು ಇಡೀ ದಿನದ ಕಲಾಪವನ್ನು ವ್ಯರ್ಥ ಮಾಡಿದರು. ಮತ್ತೊಂದು ದಿನ ಮಾಜಿ ಸ್ಪೀಕರ್ ಹೇಳಿಕೆಗೆ ಕಲಾಪ ಬಲಿ ಆಯಿತು.
ಕಲಾಪದಲ್ಲಿ ಏನು ಚರ್ಚೆ ಆಯಿತು? ಇದನ್ನೆಲ್ಲ ಕೇಳಲಿಕ್ಕೆ ನೋಡಲಿಕ್ಕೆ ಹೋಗಬೇಕಿತ್ತಾ ನಾನು? ಟಿಎ, ಡಿಎ ಬಿಲ್ ಕ್ಲೈಮ್ ಮಾಡಿಕೊಳ್ಳಲು ಹೋಗಬೇಕು ಅಷ್ಟೇ ಎಂದರು. ಆದರೂ ಬೆಳಗಾವಿಗೆ ಹೋಗುತ್ತೇನೆ. ಮಂಗಳವಾರ ಮತ್ತು ಬುಧವಾರ ನಾನು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಮತ್ತು ಸಮಸ್ಯೆಗಳ ಮಾತನಾಡುತ್ತೇನೆ ಎಂದರು.
ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ತಪ್ಪೇನಲ್ಲ!
ಮಂಗಳವಾರ ನಾನು ಅಧಿವೇಶನಕ್ಕೆ ಹೋಗುತ್ತೇನೆ. ಸದನಕ್ಕೆ ಬೇಕಿಲ್ಲದ ವಿಷಯಗಳಿಗೆ ಮಹತ್ವ ಕೊಡುವ ವ್ಯಕ್ತಿ ನಾನಲ್ಲ. ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಕೊರೋನಾ ಬಗ್ಗೆ ಸರ್ಕಾರಕ್ಕೆ ಗುಣಾತ್ಮಕ ಸಲಹೆ ನೀಡಿದ್ದೆ. ಅದು ಎಷ್ಟರ ಮಟ್ಟಿಗೆ ಜಾರಿ ಆಗಿದೆಯೋ ಗೊತ್ತಿಲ್ಲಗುರುವಾರ ಮತ್ತೆ ನಾನು ಬಿಡದಿಗೆ ವಾಪಸ್ ಬರಬೇಕಿದೆ. ಅಲ್ಲಿ ಪಟ್ಟಣ ಪಂಚಾಯತಿ ಚುನಾವಣೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: karnataka leadership change ಸುವರ್ಣಸೌಧ ಕಾರಿಡಾರ್‌ನಲ್ಲೂ ಸಿಎಂ ಬದಲಾವಣೆ ಚರ್ಚೆ: ಸುಳಿವು ನೀಡಿದ ಕಾಂಗ್ರೆಸ್ ನಾಯಕ!
ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ತಪ್ಪೇನಲ್ಲ. ಹೃದಯ ಇದ್ದವರಿಗೆ ಮಾತ್ರ ಅವರ ಭಾವನೆ ಅರ್ಥವಾಗುತ್ತದೆ. ಬೇರೆಯವರಿಗೆ ಅದು ಅರ್ಥ ಆಗಲ್ಲ. ಶಿಗ್ಗಾಂವಿಯಲ್ಲಿ ಅವರು ನಾಲ್ಕು ಚುನಾವಣೆಗಳನ್ನು ಸತತವಾಗಿ ಗೆದ್ದಿದ್ದಾರೆ. ಜನ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಭಾವನೆಗಳು ಸಹಜ. ಭಾವನಾತ್ಮಕ ವ್ಯಕ್ತಿಗಳಿಗೆ ಮಾತ್ರ ಅದು ಅರ್ಥವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಒಂದು ವಾರ ಅಧಿವೇಶನ ವಿಸ್ತರಿಸಲು ಸಿಎಂ, ಸ್ಪೀಕರ್‌ಗೆ ಸಿದ್ದು ಪತ್ರ
ಪ್ರಸ್ತುತ ಡಿಸೆಂಬರ್ 24ರವರೆಗೆ ನಿಗದಿಯಾಗಿರುವ ರಾಜ್ಯ ವಿಧಾನ ಮಂಡಲ ಅಧಿವೇಶನವನ್ನು ಕನಿಷ್ಠ ಪಕ್ಷ ಇನ್ನೂ ಒಂದು ವಾರ ವಿಸ್ತರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಅವರು, ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ 10 ದಿನಗಳ ಕಾಲದ ಅಧಿವೇಶನ ನಡೆಯುತ್ತಿದೆ.
ಇದನ್ನೂ ಓದಿ: Belagavi Violence ಎಂಇಎಸ್ ನಿಷೇಧಿಸದಿದ್ದರೆ ಕರ್ನಾಟಕ ಬಂದ್, ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ ಕನ್ನಡ ಸಂಘಟನೆ!
ಅಧಿವೇಶನದಲ್ಲಿ ಪ್ರವಾಹ, ಅತಿವೃಷ್ಟಿ, ಉತ್ತರ ಕರ್ನಾಟಕದ ನೀರಾವರಿ ವಿಷಯ, ಕೃಷಿ ಬಿಕ್ಕಟ್ಟು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳು, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ ಮತ್ತಿತರ ಚರ್ಚಿಸಬೇಕಾಗಿದೆ. ಆದರೆ, ಅಧಿವೇಶನ ನಡೆಯುವ ಸಂದರ್ಭದಲ್ಲೇ ದುರುದ್ದೇಶಪೂರ್ವಕವಾಗಿ ಕೆಲವು ದುಷ್ಟಶಕ್ತಿಗಳು ಪ್ರತಿಮೆಗೆ ಹಾನಿ ಮಾಡುವ, ನಾಡ ಧ್ವಜ ಸುಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿವೆ ಎಂದಿದ್ದಾರೆ.