
ಬೆಂಗಳೂರು (ಏ.09): ಪಾಕಿಸ್ತಾನದ ತಂದೆ ಮತ್ತು ಭಾರತದ ತಾಯಿಗೆ ದುಬೈನಲ್ಲಿ ಜನಿಸಿರುವ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಹೈಕೋರ್ಟ್ ನಿರಾಕರಿಸಿದೆ. ತಮಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನಲ್ಲಿ ನೆಲೆಸಿರುವ 17 ಮತ್ತು 14 ವರ್ಷದ ಇಬ್ಬರು ಪಾಕಿಸ್ತಾನದ ಅಪ್ರಾಪ್ತ ಮಕ್ಕಳು ಜಂಟಿಯಾಗಿ ತಮ್ಮ ತಾಯಿ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಆದೇಶಿಸಿದೆ.
ಪೌರತ್ವವನ್ನು ತ್ಯಜಿಸಲು 21 ವರ್ಷ ವಯಸ್ಸಾಗಬೇಕು ಎಂದು ಪಾಕಿಸ್ತಾನ ದೇಶದ ನಿಯಮವಿದೆ. ಹಾಗಾಗಿ, ಅರ್ಜಿದಾರರು ಭಾರತದ ಕಾನೂನುಗಳಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನದ ಪೌರತ್ವವನ್ನು ತ್ಯಜಿಸಿದ ಬಳಿಕವೇ ಅರ್ಜಿದಾರರು ಭಾರತದ ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ನಿರ್ದೇಶಿಸಿದೆ.
ಬಿಬಿಎಂಪಿಗೆ ಹಲವು ಹಳ್ಳಿ ಸೇರಿಸಿದ್ದಕ್ಕೆ ಈಗ ಡಾಂಬರೀಕರಣ: ಎಚ್.ಡಿ.ಕುಮಾರಸ್ವಾಮಿ
ಪ್ರಕರಣದ ವಿವರ: ಭಾರತ ಮೂಲದ ಅಮೀನಾ, ದುಬೈನಲ್ಲಿರುವ ಪಾಕಿಸ್ತಾನದ ಪ್ರಜೆ ಅಸ್ಸಾದ್ ಮಲ್ಲಿಕ್ ಎಂಬುವರನ್ನು 2002ರಲ್ಲಿ ಷರಿಯಾ ಕಾನೂನಿನ ಪ್ರಕಾರ ವಿವಾಹವಾಗಿದ್ದರು. ದಂಪತಿಗೆ ದುಬೈನಲ್ಲಿಯೇ ಇಬ್ಬರು ಮಕ್ಕಳು ಜನಿಸಿದ್ದರು. ನಂತರ ಈ ದಂಪತಿ ದುಬೈ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದಿದ್ದರು. ಜತೆಗೆ, ಮಕ್ಕಳ ಮೇಲಿನ ಹಕ್ಕನ್ನು ತಾಯಿಗೆ (ಅಮೀನಾ) ಬಿಟ್ಟುಕೊಡಲಾಗಿತ್ತು. ಈ ಮಕ್ಕಳು ದುಬೈನಲ್ಲಿ ಉದ್ಯೋಗದಲ್ಲಿದ್ದ ತಾಯಿಯೊಂದಿಗೆ ನೆಲೆಸಿದ್ದರು.
ಆದರೆ, ದುಬೈನಲ್ಲಿ ಜೀವನ ನಡೆಸಲು ಅಸಾಧ್ಯವಾದ ಕಾರಣ ಅಮೀನಾ ಅವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದ ತನ್ನ ಪೋಷಕರ ಮನೆಗೆ 2021ರಲ್ಲಿ ಹಿಂದಿರುಗಲು ನಿರ್ಧರಿಸಿದರು. ಮಕ್ಕಳು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅಲ್ಲಿಯ ಪಾಸ್‌ಪೋರ್ಟ್ ಹೊಂದಿರುವ ಕಾರಣ ಭಾರತಕ್ಕೆ ಕರೆತರಲು ಅನುಮತಿ ಕೋರಿ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದರು. ಮನವಿ ಪರಿಗಣಿಸಿದ್ದ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳು, ಪಾಕಿಸ್ತಾನದ ಪಾಸ್‌ಪೋರ್ಟನ್ನು ಹಿಂದಿರುಗಿಸಿದ ಬಳಿಕ ಅವರ ಪೌರತ್ವದ ಕುರಿತು ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಷರತ್ತು ವಿಧಿಸಿ ಮಾನವೀಯತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಭಾರತ ಬರಲು 2021ರ ಮೇ 31ರಂದು ಪಾಸ್‌ಪೋರ್ಟ್ ನೀಡಿದ್ದರು.
ದುಬೈನಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಗಳು, ಇಬ್ಬರು ಅಪ್ರಾಪ್ತರಿಗೆ ಭಾರತದ ಪೌರತ್ವ ನೀಡುವುದಕ್ಕೆ ನಮಗೆ ಅಡ್ಡಿಯಿಲ್ಲ. ಆದರೆ, ಪಾಕಿಸ್ತಾನ ಪೌರತ್ವ ಕಾಯ್ದೆ ಪ್ರಕಾರ ಪಾಕಿಸ್ತಾನದ ಪೌರತ್ವ ತ್ಯಜಿಸಬೇಕಾದರೆ 21 ವರ್ಷ ವಯಸ್ಸಾಗಿರುವುದು ಕಡ್ಡಾಯ. ಅದರಂತೆ ಮಕ್ಕಳಿಗೆ 21 ವರ್ಷ ವಯಸ್ಸಾಗುವವರೆಗೂ ಪೌರತ್ವ ತ್ಯಜಿಸಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಬಸ್ ಹತ್ತುವಾಗ ಬಿದ್ದ ವ್ಯಕ್ತಿ: ಚಕ್ರ ಹರಿದು 2 ಕಾಲು ಜಖಂ
ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಅಮೀನಾ ತನ್ನಿಬ್ಬರು ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ 2022ರ ಮೇ 5ರಂದು ಪತ್ರ ಬರೆದು ಕೋರಿದ್ದರು. ಅದಕ್ಕೆ ಕೇಂದ್ರ ಗೃಹ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಜುಲೈನಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅಮೀನಾ, ತನ್ನ ಮಕ್ಕಳಿಗೆ ಭಾರತದ ಪೌರತ್ವ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ 2022ರ ಸೆಪ್ಟೆಂಬರ್‌ನಲ್ಲಿ ಅಮೀನಾ ಮನವಿಯನ್ನು ತಿರಸ್ಕರಿಸಿ ಗೃಹ ಸಚಿವಾಲಯ ಆದೇಶಿಸಿತ್ತು. ಇದೀಗ ಹೈಕೋರ್ಟ್ ಸಹ ಅಮೀನಾ ಮತ್ತವರ ಅಪ್ರಾಪ್ತ ಮಕ್ಕಳ ಮನವಿ ತಿರಸ್ಕರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ