ರಾಜ್ಯದಲ್ಲಿ ಮಾರಾಟವಾಗುವ ಹಾಲು, ಮೊಸರಿನಲ್ಲಿ ಶೇ.82ರಷ್ಟುಸಿಂಹಪಾಲನ್ನು ಕೆಎಂಎಫ್ (ನಂದಿನಿ) ಹೊಂದಿದೆ. ಬೆಳಗಾವಿ, ಹುಬ್ಬಳ್ಳಿಯಲ್ಲಿ 7 ವರ್ಷದಿಂದ ಅಮುಲ್ ಹಾಲು ಮಾರಾಟಕ್ಕೆ ಯತ್ನಿಸುತ್ತಿದ್ದರೂ 500 ಲೀಟರ್ ಕೂಡ ದಾಟಿಲ್ಲ.
ಬೆಂಗಳೂರು (ಏ.09): ‘ರಾಜ್ಯದಲ್ಲಿ ಮಾರಾಟವಾಗುವ ಹಾಲು, ಮೊಸರಿನಲ್ಲಿ ಶೇ.82ರಷ್ಟುಸಿಂಹಪಾಲನ್ನು ಕೆಎಂಎಫ್ (ನಂದಿನಿ) ಹೊಂದಿದೆ. ಬೆಳಗಾವಿ, ಹುಬ್ಬಳ್ಳಿಯಲ್ಲಿ 7 ವರ್ಷದಿಂದ ಅಮುಲ್ ಹಾಲು ಮಾರಾಟಕ್ಕೆ ಯತ್ನಿಸುತ್ತಿದ್ದರೂ 500 ಲೀಟರ್ ಕೂಡ ದಾಟಿಲ್ಲ. ನಾವು ಹೊರ ರಾಜ್ಯಗಳಲ್ಲೇ ನಿತ್ಯ 7 ಲಕ್ಷ ಲೀಟರ್‌ನಷ್ಟುನಂದಿನಿ ಹಾಲು ಮಾರುತ್ತಿದ್ದೇವೆ. ಹೀಗಾಗಿ ನಂದಿನಿ ಬ್ರ್ಯಾಂಡ್‌ಗೆ ಅಮುಲ್ ಪ್ರವೇಶದಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಸ್ಪಷ್ಟಪಡಿಸಿದ್ದಾರೆ.
‘ನಂದಿನಿ ಬ್ರ್ಯಾಂಡ್ 26 ಲಕ್ಷ ಗ್ರಾಮೀಣ ರೈತ ಕುಟುಂಬ, ಕೋಟ್ಯಂತರ ಗ್ರಾಹಕರಿಂದ ಗಟ್ಟಿಯಾಗಿ ನೆಲೆಯೂರಿದೆ. ಬೆಂಗಳೂರಿನಲ್ಲಿ ಮಾರಾಟವಾಗುವ 33 ಲಕ್ಷ ಲೀಟರ್ ಹಾಲಿನಲ್ಲಿ 26 ಲಕ್ಷ ಲೀಟರ್ ನಂದಿನಿ ಹಾಲು ಮಾರಾಟವಾಗುತ್ತಿದೆ. ಹೆರಿಟೇಜ್, ದೊಡ್ಲ ಸೇರಿದಂತೆ ಉಳಿದ 18 ಖಾಸಗಿ ಹಾಲಿನ ಡೈರಿಗಳಿಂದ 6-7 ಲಕ್ಷದಷ್ಟುಹಾಲು ಮಾತ್ರ ಮಾರಾಟವಾಗುತ್ತಿದೆ. ಹೀಗಾಗಿ ನಂದಿನಿ ಬ್ರ್ಯಾಂಡ್‌ಗೆ ಏನೂ ವ್ಯತ್ಯಾಸ ಆಗುವುದಿಲ್ಲ. ಕೆಎಂಎಫ್‌ಗೆ ಪೈಪೋಟಿ ಎದುರಿಸುವ ಶಕ್ತಿ ಇದೆ’ ಎಂದು ನಿಷ್ಠುರವಾಗಿಯೇ ನುಡಿದಿದ್ದಾರೆ.
8ನೇ ಬಾರಿ ಪ್ರಧಾನಿ ಮೋದಿ ಮೈಸೂರಿಗೆ: ಬಂಡೀಪುರದಲ್ಲಿಂದು ಟೈಗರ್ ಸಫಾರಿ
ಅಮುಲ್ (ಜಿಸಿಎಂಎಂಎಫ್) ಆನ್‌ಲೈನ್ ಮೂಲಕ ರಾಜ್ಯದಲ್ಲಿ ಹಾಲು, ಮೊಸರು ಮಾರಾಟಕ್ಕೆ ಮುಂದಾಗಿರುವ ವಿವಾದದ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಅವರು, ‘26 ಲಕ್ಷ ಗ್ರಾಮೀಣ ರೈತ ಕುಟುಂಬಗಳಿಂದ ನಿತ್ಯ 80ರಿಂದ 85 ಲಕ್ಷ ಲೀಟರ್ ಹಾಲು ಸಂಗ್ರಹಿಸಿ 160ಕ್ಕೂ ಹೆಚ್ಚು ವಿವಿಧ ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ರಾಜ್ಯದ ಜನತೆಗೆ 40 ವರ್ಷದಿಂದ ಕೆಎಂಎಫ್ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ನಿತ್ಯ 1 ಕೋಟಿಗೂ ಅಧಿಕ ಲೀಟರ್ ಹಾಲು ಸಂಗ್ರಹ ಗುರಿ ಹೊಂದಿದ್ದೇವೆ. ಇದರ ನಡುವೆ ಅಮುಲ್ ಆನ್‌ಲೈನ್‌ನಲ್ಲಿ ಹಾಲು ಮಾರಾಟಕ್ಕೆ ಮುಂದಾಗಿರುವುದರಿಂದ ನಂದಿನಿ ಬ್ರ್ಯಾಂಡ್‌ಗೆ ಯಾವುದೇ ಧಕ್ಕೆ ಇಲ್ಲ. ಗುಣಮಟ್ಟ, ಸ್ಪರ್ಧಾತಕ ಬೆಲೆಯೇ ನಮ್ಮ ಭರವಸೆ’ ಎಂದು ಹೇಳಿದರು.
15 ರು. ಹೆಚ್ಚು ನೀಡಿ ಖರೀದಿಸುತ್ತಾರಾ: ಕೆಎಂಎಫ್ ಈಗಾಗಲೇ ನಿತ್ಯ 2.5 ಲಕ್ಷ ಲೀಟರ್ ಹಾಲನ್ನು ಆನ್‌ಲೈನ್ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದೆ. ಈಗಾಗಲೇ 18 ಖಾಸಗಿ ಡೈರಿಗಳ ಪೈಪೋಟಿಯನ್ನು ಮೆಟ್ಟಿನಿಂತಿದ್ದೇವೆ. ಬೆಂಗಳೂರಿನಲ್ಲಿ ಅಮುಲ್ ನೀಡುವ ಹಾಲಿನ ದರ ಲೀಟರ್‌ಗೆ 54 ರು. ಇರಲಿದೆ. ಅದೇ ಹಾಲು ನಂದಿನಿ 39 ರು.ಗೆ ನೀಡಲಿದೆ. ತಾಜಾ ಹಾಲು 15 ರು. ಕಡಿಮೆಗೆ ನೀಡುವ ನಂದಿನಿ ಬಿಟ್ಟು ಅಮುಲ್ ಅನ್ನು ಜನರು ಖರೀದಿ ಮಾಡುತ್ತಾರಾ?’ ಎಂದು ಪ್ರಶ್ನಿಸಿದರು.
‘ನಮಗೆ ನಂದಿನಿ ಬ್ರ್ಯಾಂಡ್ ಮೇಲೆ ಅಭಿಮಾನ ಇರುವಂತೆ ಗುಜರಾತ್, ಉತ್ತರ ಭಾರತದವರಿಗೆ ಅಮುಲ್ ಜತೆ ನಂಟಿದೆ. ಅವರು ಖರೀದಿಸಬಹುದಲ್ಲಾ?’ ಎಂಬ ಪ್ರಶ್ನೆಗೆ, ‘ರಾಜ್ಯದಲ್ಲಿ ಅವರ ಜನಸಂಖ್ಯೆ ಎಷ್ಟಿದೆ. ಇನ್ನು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದ 18 ಡೈರಿಗಳು ನಮ್ಮ ಬೆಂಗಳೂರಿನಲ್ಲಿ ಹಾಲು ಮಾರಾಟ ಮಾಡುತ್ತಿವೆ. ಕಾಸ್ಮೊಪಾಲಿಟನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಈಗಲೂ ನಂದಿನಿ ಶೇ.82 ರಷ್ಟುಮಾರುಕಟ್ಟೆಷೇರು ಉಳಿಸಿಕೊಂಡಿದ್ದು ಹೇಗೆ? ಅವರೂ ಸಹ ನಂದಿನಿಯನ್ನೇ ಬಳಸುವುದರಿಂದ ಅಲ್ಲವೇ?’ ಎಂದು ಪ್ರಶ್ನಿಸಿದರು.
ಹೊರ ರಾಜ್ಯದಲ್ಲಿ 7 ಲಕ್ಷ ಲೀ. ಹಾಲು ಮಾರಾಟ: ‘ನಾವು ಸಹ ಮಹಾರಾಷ್ಟ್ರದ ಮುಂಬೈ, ಪುಣೆ, ಸೊಲ್ಲಾಪುರ, ನಾಗಪುರ, ಹೈದರಾಬಾದ್, ಚೆನ್ನೈ ಮತ್ತು ಗೋವಾದಲ್ಲಿ ಪ್ರತಿ ನಿತ್ಯ 7 ಲಕ್ಷಕ್ಕೂ ಅಧಿಕ ಲೀಟರ್ ಹಾಲು, ಮೊಸರನ್ನು ಮಾರಾಟ ಮಾಡುತ್ತಿದ್ದೇವೆ. ಇಂತಹ ಸಂಸ್ಥೆಯ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಕಿವಿಗೊಡದೆ ಎಂದಿನಂತೆ ನಂದಿನಿ ಹಾಲು, ಹಾಲಿನ ಉತ್ಪನ್ನಗಳನ್ನು ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು.
ನಟ ಸುದೀಪ್ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ: ಸತೀಶ್ ಜಾರಕಿಹೊಳಿ
ಬೆಂಗಳೂರಿನಲ್ಲಿ ಅಮುಲ್ ಹಾಲಿನ ದರ ಲೀಟರ್‌ಗೆ 54 ರು. ಇರಲಿದೆ. ಅದೇ ಹಾಲು ನಂದಿನಿ 39 ರು.ಗೆ ನೀಡಲಿದೆ. ತಾಜಾ ಹಾಲು 15 ರು. ಕಡಿಮೆಗೆ ನೀಡುವ ನಂದಿನಿ ಬಿಟ್ಟು ಜನರು ಅಮುಲ್ ಖರೀದಿ ಮಾಡುತ್ತಾರಾ? ಕೆಎಂಎಫ್ ಕೂಡ ನಿತ್ಯ 2.5 ಲಕ್ಷ ಲೀಟರ್ ಹಾಲನ್ನು ಆನ್‌ಲೈನ್ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದೆ.
- ಬಿ.ಸಿ.ಸತೀಶ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ