*ಬೆಳಗಾವಿ ಗಲಾಟೆಗಳಿಗೆ ಪೊಲೀಸ್ ವೈಫಲ್ಯ ಕಾರಣ : ಶಾಸಕ ಪಾಟೀಲ್
*ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಎತ್ತಂಗಡಿ
*ಜಾಮೀನು ನಿರೀಕ್ಷೆಯಲ್ಲಿದ್ದ ಎಂಇಎಸ್ ಪುಂಡರಿಗೆ ನಿರಾಸೆ!
*ಬಂಧಿತ 38 ಆರೋಪಿಗಳ ಜಾಮೀನು ಅರ್ಜಿ ವಜಾ
ಬೆಳಗಾವಿ (ಜ.1): ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ ವೇಳೆ ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ರಾಜಕೀಯ ನಾಯಕರು, ಸಿನಿ ತಾರೆಯರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲೇ ಎಂಇಎಸ್ ಬ್ಯಾನ್ ಮಾಡಬೇಕೆಂದು ಕನ್ನಡ ಪರ ಸಂಘನೆಗಳು ಪಟ್ಟು ಹಿಡಿದಿವೆ. ಈ ಮಧ್ಯೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ವರ್ಗಾವಣೆಗೆ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ನೂತನ ಪೊಲೀಸ್ ಆಯುಕ್ತರಾಗಿ ಆಗಿ ಡಾ.ಬೋರಲಿಂಗಯ್ಯ ನೇಮಕೊಂಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ನಡೆಸಿತ್ತು. ಮಹಾಮೇಳ ಹೆಸರಿನಲ್ಲಿ ಎಂಇಎಸ್ ಭಾಷಾ ಕಿಚ್ಚು ಹೊತ್ತಿಸಿತ್ತು. ಕಲ್ಲು ತೂರಾಟ, ರಾಯಣ್ಣ ಮೂರ್ತಿ ಭಗ್ನ ಪ್ರಕರಣ ಸಂಬಂಧಿಸಿದಂತೆ 38 ಜನರು ಬಂಧನ ಆಗಿತ್ತು. ಅದರೆ ಬೆಳಗಾವಿಯಲ್ಲಿ ನಡೆದ ಎಲ್ಲಾ ಗಲಾಟೆಗಳಿಗೆ ಪೊಲೀಸ್ ವೈಫಲ್ಯವೇ ಕಾರಣ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಆರೋಪಿಸಿದ್ದರು.
ಜಾಮೀನು ನಿರೀಕ್ಷೆಯಲ್ಲಿದ್ದ ಎಂಇಎಸ್ ಪುಂಡರಿಗೆ ನಿರಾಸೆ!
ಬೆಂಗಳೂರಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಡಿ.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು ಹಾಗೂ ಸರ್ಕಾರಿ ವಾಹನಗಳನ್ನೇ ಟಾರ್ಗೇಟ್ ಮಾಡಿ ಕಲ್ಲೆಸೆದು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಈವರೆಗೂ 38 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 11 ಆರೋಪಿಗಳು ತಲೆಮರಿಸಿಕೊಂಡು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಜಾಮೀನು ಕೋರಿ ಬೆಳಗಾವಿಯ ನ್ಯಾಯಾಲಯಕ್ಕೆ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.
ಆದರೆ ಈಗ ಎಂಇಎಸ್ ಮುಖಂಡ ಶುಭಂ ಶೆಳ್ಕೆ, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ್ ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಆಗಿದೆ. ಎಂಇಎಸ್ ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿ 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯ ತಿರಸ್ಕರಿಸಿದೆ. ಹಾಗಾಗಿ ಬೆಳಗಾವಿಯಲ್ಲಿ ಪುಂಡಾಟಿಕೆ ಪ್ರದರ್ಶಿಸಿದ್ದ ಎಂಇಎಸ್ ಪುಂಡರಿಗೆ ಜೈಲೇ ಗತಿಯಾಗಿದೆ. ಇನ್ನು 22 ಆರೋಪಿಗಳ ಬಂಧನಕ್ಕೆ ಬೆಳಗಾವಿ ಪೊಲೀಸರು ಬಲೆ ಬೀಸಿದ್ದಾರೆ. .
"ಆರೋಪಿಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಉದ್ದೇಶದಿಂದ ದೊಂಬಿ, ಗಲಾಟೆ ಮಾಡಿದ್ದಾರೆ , ಸಮಾಜಘಾತುಕ ಕೃತ್ಯವೆಸಗಿದ್ದು ಜಾಮೀನಿಗೆ ಅರ್ಹರಲ್ಲ, ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕೊಲೆ ಯತ್ನದ ಗಂಭೀರ ಆರೋಪ ಇದೆ' ಎಂದು ಕರ್ನಾಟಕ ಸರ್ಕಾರ ಪರ ಸರ್ಕಾರಿ ಅಭಿಯೋಜಕ ಕಿರಣ್ ಪಾಟೀಲ್ ವಾದ ಮಂಡಿಸಿದ್ದರು. ಈ ಬೆನ್ನಲ್ಲೇ ಬೆಳಗಾವಿಯ 8ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ಈಗ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ. ನ್ಯಾಯಾಧೀಶ ಹೇಮಂತ ಕುಮಾರ್ ಎಂಇಎಸ್ ಪುಂಡರ ಜಾಮೀನು ಅರ್ಜಿ ತಿರಸ್ಕರಿಸಿದ್ದಾರೆ.
ಎಂಇಎಸ್ ನಿಷೇಧಕ್ಕಾಗಿ ಕನ್ನಡ ಪರ ಸಂಘಟನೆಗಳ ರ‍್ಯಾಲಿ
ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಶುಕ್ರವಾರ ನಗರದ ಟೌನ್‌ಹಾಲ್‌ನಿಂದ ಪ್ರತಿಭಟನಾ ರ‍್ಯಾಲಿ ನಡೆಸಿದವು. ಮುಖ್ಯಮಂತ್ರಿಗಳ ಮನವಿ ಮೇರೆಗೆ ಕರ್ನಾಟಕ ಬಂದ್ ಕೈಬಿಟ್ಟು ಬೆಂಗಳೂರಿನಲ್ಲಿ ರ‍್ಯಾಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಹೋರಾಟಗಾರರಾದ ಸಾ.ರಾ.ಗೋವಿಂದು, ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಟೌನ್‌ಹಾಲ್ ಕನ್ನಡ ಒಕ್ಕೂಟಗಳ ಕಾರ್ತಕರ್ತರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದರು. ರಾಜ್ಯದ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಎಂಇಎಸ್ ಮತ್ತು ಶಿವಸೇನೆ ವಿರುದ್ಧ ಧಿಕ್ಕಾರ ಕೂಗಿದರು. ರಾರಯಲಿ ಆರಂಭವಾಗುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಖಂಡರನ್ನು ವಶಕ್ಕೆ ಪಡೆದರು. ಪ್ರತಿಭಟನಾ ಸ್ಥಳದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹಾಜರಿದ್ದರು.
ರ‍್ಯಾಲಿ ಆರಂಭಕ್ಕೂ ಮುನ್ನ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿಗಳ ಮಾತಿಗೆ ಬೆಲೆ ಕೊಟ್ಟು ಬಂದ್ ಮುಂದೂಡಿದ್ದೇವೆ. ಬೊಮ್ಮಾಯಿ ಅವರ ಮೇಲೆ ನಮಗೆ ಭರವಸೆ ಇದೆ. ಎಂಇಎಸ್ ನಿಷೇಧ ಮಾಡದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಆಗ ಮುಖ್ಯಮಂತ್ರಿ ಕರೆದರೂ ನಾವು ಹೋಗುವುದಿಲ್ಲ. ಜನವರಿ 22ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದೇವೆ ಎಂದರು.
ಇದನ್ನೂ ಓದಿ:
1) Crime Prevention: ಸೈಕಲ್ ಏರಿ ಅಪರಾಧಗಳ ಬಗ್ಗೆ ಅರಿವು ಮೂಡಿಸಿದ ಮೈಸೂರು ಪೊಲೀಸ್ ಕಮೀಷನರ್!
2) Rowdy Shot in Bengaluru: ಎಸ್‌ಐಗೆ ಚಾಕು ಇರಿದಿದ್ದ ರೌಡಿಗೆ ಗುಂಡೇಟಿನ ಪಾಟ!
3) Basvaraj Bommai Loses Cool: ಬಾಸಿಸಂ ಬಿಡಿ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಸಿಎಂ ಕ್ಲಾಸ್!