ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಸಂಪರ್ಕ

Published : Aug 01, 2023, 02:43 PM ISTUpdated : Aug 01, 2023, 02:45 PM IST
ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಸಂಪರ್ಕ

ಸಾರಾಂಶ

ಬೆಂಗಳೂರಿನಲ್ಲಿ ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಸೇರಿದಂತೆ ಇನ್ನೂ ಹಲವರೊಂದಿಗೆ ಸಂಪರ್ಕವಿರುವುದು ತನಿಖೆಯಿಂಧ ತಿಳಿದುಬಂದಿದೆ ಗೊತ್ತಾಗಿದೆ

ಬೆಂಗಳೂರು (ಆ.1): ಇತ್ತೀಚೆಗೆ ನಗರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಶಂಕಿತ ಉಗ್ರರಿಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಸೇರಿದಂತೆ ಇನ್ನೂ ಹಲವರೊಂದಿಗೆ ಸಂಪರ್ಕವಿರುವುದು ಗೊತ್ತಾಗಿದೆ. ಹೀಗಾಗಿ ಇವರ ಸಂಪರ್ಕ ಜಾಲ ಭೇದಿಸುವ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಐವರು ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬಗ್ಗೆ ಕೇಂದ್ರೀಯ ತನಿಖಾ ಸಂಸ್ಥೆಗಳ ಹಾಗೂ ಇತರೆ ರಾಜ್ಯಗಳ ಪೊಲೀಸರೊಂದಿಗೆ ಸಿಸಿಬಿ ಪೊಲೀಸರು ಸಂಪರ್ಕದಲ್ಲಿದ್ದಾರೆ. ಅಲ್ಲಿನ ಘಟನೆಗಳ ಬಗ್ಗೆ ಮಾಹಿತಿ ಪಡೆದು ಸಮಗ್ರವಾಗಿ ತನಿಖೆ ಮಾಡುತ್ತಿದ್ದಾರೆ ಎಂದರು.

ಶಂಕಿತ ಉಗ್ರರ ಮನೆಗಳಲ್ಲಿ ಸಿಕ್ಕ ಸ್ಫೋಟಕಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಶೀಘ್ರದಲ್ಲೇ ವರದಿ ಕೈ ಸೇರಲಿದೆ. ಇನ್ನು ಬಂಧಿತ ಶಂಕಿತ ಉಗ್ರರು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸಂಪರ್ಕಕ್ಕೆ ಇರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಯಾವುದೇ ವದಂತಿ ಹಬ್ಬಿಸಬಾರದು. ಶಂಕಿತರು ಯಾವ ಸ್ಥಳಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಮಾಹಿತಿಯನ್ನು ಭದ್ರತೆ ದೃಷ್ಟಿಯಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎನ್‌ಐಎ ತನಿಖೆ ವೇಳೆ ಶಾಕ್, ಮಂಗ್ಳೂರು ಕುಕ್ಕರ್‌ ಬಾಂಬ್‌ ಕಿಂಗ್‌ಪಿನ್‌ ಬೆಳಗಾವಿ ಲಷ್ಕರ್‌ ಉಗ್ರ!

ವಿದೇಶಿ ಮೂಲದ ಗ್ರೆನೇಡ್‌: ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಕ್ಕೆ ಸಜ್ಜಾಗಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ (ಎಲ್‌ಇಟಿ)ದ ಐವರು ಶಂಕಿತ ಉಗ್ರರ ಬಳಿ ಪತ್ತೆಯಾದ ಗ್ರೆನೇಡ್‌ಗಳು ವಿದೇಶಿ ಮೂಲದ ಕಂಪನಿ ಉತ್ಪಾದಿತ ಗ್ರೆನೇಡ್‌ಗಳಾಗಿವೆ ಎಂಬ ಮಹತ್ವದ ಸಂಗತಿ ಸಿಸಿಬಿ ತನಿಖೆಯಲ್ಲಿ ಈಗಾಗಲೇ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಭದ್ರಪ್ಪ ಲೇಔಟ್‌ನಲ್ಲಿರುವ ಬಂಧಿತ ಶಂಕಿತ ಉಗ್ರ ಜಾಹೀದ್‌ ತಬ್ರೇಜ್‌ ಮನೆ ಮೇಲೆ ದಾಳಿ ನಡೆಸಿ ನಾಲ್ಕು ಜೀವಂತ ಹ್ಯಾಂಡ್‌ ಗ್ರೆನೇಡ್‌ಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಈ ಗ್ರೆನೇಡ್‌ಗಳ ಮೂಲ ತಪಾಸಣೆ ನಡೆಸಿ ವರದಿ ನೀಡುವಂತೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಸಿಸಿಬಿ ಅಧಿಕಾರಿಗಳು ಕಳುಹಿಸಿದ್ದರು. ಪ್ರಾಥಮಿಕ ವರದಿಯಲ್ಲಿ ಗ್ರೆನೇಡ್‌ಗಳು ಸ್ಥಳೀಯವಾಗಿ ತಯಾರಾಗಿಲ್ಲ. ವಿದೇಶ ಮೂಲದ ಕಂಪನಿಗಳು ಉತ್ಪಾದಿತ ಗ್ರೆನೇಡ್‌ಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ‘ನಮ್ಮ ತನಿಖೆಯಲ್ಲಿ ಕೂಡ ಅವುಗಳು ಫಾರಿನ್‌ ಮೇಡ್‌ ಗ್ರೆನೇಡ್‌ಗಳು ಎಂಬುದು ಗೊತ್ತಾಗಿದೆ’ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದರು.

ಇನ್ನು ಹೆಬ್ಬಾಳ ಸಮೀಪದ ಸುಲ್ತಾನ್‌ ಪಾಳ್ಯದ ಶಂಕಿತ ಉಗ್ರ ಸೈಯದ್‌ ಸುಹೇಲ್‌ ಖಾನ್‌ ಮನೆಯಲ್ಲಿ 7 ನಾಡ ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್‌, ಡ್ಯಾಗರ್‌ ಹಾಗೂ 12 ಮೊಬೈಲ್‌ ಜಪ್ತಿಯಾಗಿದ್ದವು. ಮತ್ತೊಬ್ಬ ಶಂಕಿತ ಉಗ್ರ ಜಾಹೀದ್‌ ಮನೆಯಲ್ಲಿ ಪತ್ತೆಯಾದ ಗ್ರೆನೇಡ್‌ಗಳು ಕೂಡ ಫಾರಿನ್‌ ಮೇಡ್‌ ಗ್ರೆನೇಡ್‌ಗಳಾಗಿವೆ.

ಬಗೆದಷ್ಟು ಬಯಲಾಗ್ತಿದೆ ‘ಉಗ್ರ’ರ ನಂಟಿನ ಜಾಲ: ಬೆಂಗಳೂರಲ್ಲಿ ಅಡಗಿ ಕುಳಿತ್ತಿದ್ದಾರಾ ಮತ್ತಷ್ಟು ಶಂಕಿತರು..?

ಜುನೈದ್‌ ಮೂಲಕ ಗ್ರೆನೇಡ್‌ ರವಾನೆ:
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಎಲ್‌ಇಟಿ ಶಂಕಿತ ಉಗ್ರ, ಆರ್‌.ಟಿ.ನಗರದ ಮಹಮ್ಮದ್‌ ಜುನೈದ್‌ ಮೂಲಕವೇ ಆತನ ಸಂಪರ್ಕದಲ್ಲಿದ್ದ ಬಂಧಿತ ಐವರು ಶಂಕಿತ ಉಗ್ರರಿಗೆ ಗ್ರೆನೇಡ್‌ಗಳು, ಪಿಸ್ತೂಲ್‌ ಹಾಗೂ ಗುಂಡುಗಳು ರವಾನೆಯಾಗಿದ್ದವು. ಪಾಕಿಸ್ತಾನದ ಲಷ್ಕರ್‌ ಕಮಾಂಡರ್‌ಗಳ ಜತೆ ನೇರ ಸಂಪರ್ಕದಲ್ಲಿ ಜುನೈದ್‌ ಇದ್ದಾನೆ. 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಕೇರಳ ಮೂಲದ ಲಷ್ಕರ್‌ ಶಂಕಿತ ಉಗ್ರ ನಸೀರ್‌ ಮೂಲಕವೇ ಪಾಕಿಸ್ತಾನದ ಕಮಾಂಡರ್‌ಗಳ ನಂಟು ಜುನೈದ್‌ಗೆ ಲಭ್ಯವಾಗಿದೆ. ಹೀಗಾಗಿ ಜುನೈದ್‌ ಮುಂದಿಟ್ಟು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟಿಸಲು ಲಷ್ಕರ್‌ ಸಂಚು ನಡೆಸಿತ್ತು ಎಂದು ಮೂಲಗಳು ಹೇಳಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ