‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಕೊಡಮಾಡುವ 2022ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ತಮಿಳು ಭಾಷೆಯ ಹಿರಿಯ ಸಾಹಿತಿ ಇಮಯಮ್ (ವಿ.ಅಣ್ಣಾಮಲೈ) ಭಾಜನರಾಗಿದ್ದಾರೆ.
ಬೆಂಗಳೂರು (ನ.25): ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಕೊಡಮಾಡುವ 2022ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ತಮಿಳು ಭಾಷೆಯ ಹಿರಿಯ ಸಾಹಿತಿ ಇಮಯಮ್ (ವಿ.ಅಣ್ಣಾಮಲೈ) ಭಾಜನರಾಗಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಪ್ರತಿಷ್ಠಾನದ ಹಂಗಾಮಿ ಅಧ್ಯಕ್ಷ ಬಿ.ಎಲ್.ಶಂಕರ್ ಅವರು, ತಮಿಳು ಸಾಹಿತ್ಯದ ಶ್ರೀಮಂತಿಕೆ ಹಾಗೂ ಸತ್ವವನ್ನು ತಮ್ಮ ಮಹತ್ವದ ಕೃತಿಗಳ ಮೂಲಕ ಹೆಚ್ಚಿಸಿದ ಸಾಹಿತಿ ಇಮಯಮ್ ಅವರನ್ನು ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಆಯ್ಕೆ ಸಮಿತಿ ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನವಾದ ಡಿಸೆಂಬರ್ 29ರಂದು ಇಮಯಮ್ ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ಐದು ಲಕ್ಷ ರು.ನಗದು ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮತ್ತು ರಾಜ್ಯದ ಸಚಿವರುಗಳು ಹಾಗೂ ಹಿರಿಯ ಸಾಹಿತಿಗಳು ಆಗಮಿಸಲಿದ್ದಾರೆ ಎಂದು ಹೇಳಿದರು.
ತೆರೆಮೇಲೆ ರತನ್ ಟಾಟಾ ಬಯೋಪಿಕ್; ರಾಷ್ಟ್ರ ಪ್ರಶಸ್ತಿ ವಿಜೇತ ಡೈರೆಕ್ಟರ್ ಆಕ್ಷನ್ ಕಟ್
ನಾಡಿನ ಹಿರಿಯ ಸಾಹಿತಿ ದೇವನೂರು ಮಹಾದೇವ, ಕೇರಳದ ಡಾ.ಕೆ.ಸಚ್ಚಿದಾನಂದನ್, ಆಂಧ್ರದ ಪಿ.ಸತ್ಯವತಿ ಸೇರಿದಂತೆ ವಿವಿಧ ರಾಜ್ಯಗಳ 12 ಮಂದಿ ಸಾಹಿತಿಗಳಿಗೆ ಈವರೆಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈವರೆಗೂ ದಕ್ಷಿಣ ಭಾರತದ ತಮಿಳು ಸಾಹಿತಿಗಳಿಗೆ ಪ್ರಶಸ್ತಿ ಕೊಟ್ಟಿರಲಿಲ್ಲ ಎಂದು ತಿಳಿಸಿದರು. ಹೀಗಾಗಿ ಪ್ರತಿಷ್ಠಾನದ ನಿಕಟಪೂರ್ವ ಅಧ್ಯಕ್ಷ ನಾಡೋಜ ಪ್ರೊ.ಹಂಪನಾ, ಕಡಿದಾಳ್ ಪ್ರಕಾಶ್, ಮದರಾಸು ವಿವಿಯ ಡಾ.ತಮಿಳ್‌ಸೆಲ್ವಿ, ಕ್ರೈಸ್ಟ್ ವಿವಿಯ ನಿವೃತ್ತ ತಮಿಳು ಪ್ರಾಧ್ಯಾಪಕ ಡಾ.ಕೃಷ್ಣಸ್ವಾಮಿ, ಸಾಹಿತ್ಯ ಅಕಾಡೆಮಿಯ ನಿವೃತ್ತ ಕಾರ್ಯದರ್ಶಿ ಡಾ.ಅಗ್ರಹಾರ ಕೃಷ್ಣಮೂರ್ತಿ ಅವರನ್ನೊಳಗೊಂಡ ಸಮಿತಿ ಇಮಯಮ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿತು ಎಂದು ತಿಳಿಸಿದರು.
undefined
ಸಾಧನೆಯ ಶ್ರೇಯಾಂಕ ಆಧರಿಸಿ ವಿವಿಧ ಠಾಣೆಗಳಿಗೆ ಪ್ರಶಸ್ತಿ ವಿತರಿಸಿದ Dharwad ಜಿಲ್ಲಾ ಪೊಲೀಸ್ ಇಲಾಖೆ
ಇಮಯಮ್ ಪರಿಚಯ: ಇಮಯಮ್ ಅವರು 1994ರಲ್ಲಿ ರಚಿಸಿದ ಮೊದಲ ಕೃತಿ ‘ಕೋವೇರು ಕಝದೈಗಲ್’ಗೆ ‘ಅಗ್ನಿ ಅಕ್ಷರ’ ಪ್ರಶಸ್ತಿಯೂ ದೊರೆತಿದೆ. ಈ ಕೃತಿ ‘ಬೀಸ್ಟ್ ಆಫ್ ಬರ್ಡನ್’ ಎಂದು ಇಂಗ್ಲಿಷ್‌ಗೂ ಅನುವಾದಗೊಂಡಿದೆ. 2012ರಲ್ಲಿ ರಚಿಸಿದ ಪೆತ್ತವನ್ ಕಾದಂಬರಿಯು ಮೊದಲ ಮೂರು ತಿಂಗಳಲ್ಲೇ ಐದು ಮುದ್ರಣಗೊಂಡು ಜಯಪ್ರಿಯವಾಗಿದೆ. ಇದಲ್ಲದೆ ಅವರ ಹಲವು ಕೃತಿಗಳು ಇಂಗ್ಲಿಷ್, ಫ್ರೆಂಚ್ ಭಾಷೆಗೂ ಅನುವಾದಗೊಂಡಿದ್ದು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿವೆ. ಈವರೆಗೂ ಅವರು 15 ಕೃತಿಗಳನ್ನು ರಚಿಸಿದ್ದು 6 ಇಂಗ್ಲಿಷ್‌ಗೆ, ತಲಾ ಒಂದೊಂದು ಕನ್ನಡ, ತೆಲುಗು, ಮಲಯಾಳಂ ಮತ್ತು ಫ್ರೆಂಚ್ ಭಾಷೆಗೆ ಅನುವಾದಗೊಂಡಿವೆ.