ಪಿಎಫ್‌ಐನ ಮಿತ್ತೂರಿನ ತರಬೇತಿ ಕೇಂದ್ರಕ್ಕೆ ಬೀಗ: ಪ್ರವೀಣ್‌, ಶರತ್‌ ಹತ್ಯೆಗೆ ಇಲ್ಲೇ ಸ್ಕೆಚ್‌?

By Govindaraj SFirst Published Oct 1, 2022, 7:18 AM IST
Highlights

ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದಿಂದಾಗಿ ಕೇಂದ್ರ ಸರ್ಕಾರದಿಂದ ಐದು ವರ್ಷ ಕಾಲ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ವು ಬಂಟ್ವಾಳದ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ ಅನ್ನು ಕರಾವಳಿಯಲ್ಲಿ ಶಾಂತಿ ಕದಡುವ ಕೃತ್ಯಗಳಿಗೆ ಸಂಚು ರೂಪಿಸುವ ಕಾರಸ್ಥಾನವಾಗಿ ಮಾಡಿಕೊಂಡಿರುವುದು ಇದೀಗ ಬಯಲಾಗಿದೆ.

ಮಂಗಳೂರು (ಅ.01): ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದಿಂದಾಗಿ ಕೇಂದ್ರ ಸರ್ಕಾರದಿಂದ ಐದು ವರ್ಷ ಕಾಲ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ವು ಬಂಟ್ವಾಳದ ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್‌ ಅನ್ನು ಕರಾವಳಿಯಲ್ಲಿ ಶಾಂತಿ ಕದಡುವ ಕೃತ್ಯಗಳಿಗೆ ಸಂಚು ರೂಪಿಸುವ ಕಾರಸ್ಥಾನವಾಗಿ ಮಾಡಿಕೊಂಡಿರುವುದು ಇದೀಗ ಬಯಲಾಗಿದೆ. ಪ್ರವೀಣ್‌ ನೆಟ್ಟಾರು ಮತ್ತಿತರ ಹಿಂದೂ ಕಾರ್ಯಕರ್ತರ ಹತ್ಯೆಗೆ ಇಲ್ಲೇ ಸ್ಕೆಚ್‌ ಹಾಕಿರುವ ಶಂಕೆ ಹಿನ್ನೆಲೆಯಲ್ಲಿ ಈ ಕಮ್ಯುನಿಟಿ ಹಾಲ್‌ ಅನ್ನು ಯಾವುದೇ ಕ್ಷಣದಲ್ಲಿ ಸೀಜ್‌ ಮಾಡಲು ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ.

ಪಿಎಫ್‌ಐ ಸಂಘಟನೆ ಬಂಟ್ವಾಳ, ಪುತ್ತೂರು, ಸುಳ್ಯದ ಕೆಲ ಅಜ್ಞಾತ ಪ್ರದೇಶಗಳಲ್ಲಿ ಯುವಕರಿಗೆ ಉಗ್ರ ತರಬೇತಿ ನೀಡುತ್ತಿದ್ದ ಬಗ್ಗೆ ಕೇಂದ್ರ ತನಿಖಾ ತಂಡ(ಎನ್‌ಐಎ) ಹಿಂದೆಯೇ ಮಾಹಿತಿ ಕಲೆ ಹಾಕಿತ್ತು. ಅದರಂತೆ ಸೆ.7ರಂದು ದಾಳಿ ನಡೆಸಿದ ಎನ್‌ಐಎ ತಂಡ ಫ್ರೀಡಂ ಕಮ್ಯುನಿಟಿ ಹಾಲ್‌ನ ಒಬ್ಬ ಟ್ರಸ್ಟಿಯನ್ನು ಬಂಧಿಸಿತ್ತು. ಈ ವೇಳೆ ಇನ್ನಿಬ್ಬರು ನಾಪತ್ತೆಯಾಗಿದ್ದರು. ಈ ಹಾಲ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಐಎ ತಂಡ, ಹಾಲ್‌ನಿಂದ ಅಗತ್ಯ ದಾಖಲೆ ಪತ್ರ, ಕಂಪ್ಯೂಟರ್‌ ಹಾರ್ಡ್‌ಡಿಸ್ಕ್‌ ವಶಕ್ಕೆ ಪಡೆದಿತ್ತು. ಅದೇ ದಿನ ಹಾಲ್‌ನ ಟ್ರಸ್ಟಿಗಳಾದ ಅಯೂಬ್‌ ಮತ್ತು ಮಸೂದ್‌ ಅಗ್ನಾಡಿ ಮನೆಗೂ ದಾಳಿ ನಡೆಸಿ ಹಾಲ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಎನ್‌ಐಎ ಮತ್ತಷ್ಟುಮಾಹಿತಿ ಸಂಗ್ರಹಿಸಿತ್ತು.

ಸಿಲಿಕಾನ್ ಸಿಟಿಯ 5 ಪಿಎಫ್‌ಐ ಕಚೇರಿಗಳಿಗೆ ಖಾಕಿ ಬೀಗ: ಆಯುಕ್ತರ ಆದೇಶದಂತೆ ಕಾರ್ಯಾಚರಣೆ

ಹತ್ಯೆಗಳಿಗೆ ಇಲ್ಲಿಂದಲೇ ಸ್ಕೆಚ್‌?: 2007ರಲ್ಲಿ ಆರಂಭವಾದ ಈ ಹಾಲ್‌ನಲ್ಲಿ ಇಲ್ಲಿಯವರೆಗೆ ಸಾಕಷ್ಟು ಯುವಕರಿಗೆ ಉಗ್ರ ತರಬೇತಿ ನೀಡಲಾಗಿದೆ ಎಂಬ ಆರೋಪವಿದೆ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಕೋರರಿಗೂ ಇಲ್ಲೇ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ. ಜತೆಗೆ, ರಾಜ್ಯಾದ್ಯಂತ ತೀವ್ರ ಆಕ್ರೋಶ ಸೃಷ್ಟಿಸಿದ್ದ ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ, ಬಿ.ಸಿ.ರೋಡ್‌ನ ಶರತ್‌ ಮಡಿವಾಳ ಹತ್ಯೆಗೂ ಇಲ್ಲೇ ಸ್ಕೆಚ್‌ ಹಾಕಲಾಗಿತ್ತು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಸಿಕ್ಕಿತ್ತು ಎಂದು ಹೇಳಲಾಗಿದೆ.

ನಿಷೇಧದ ಬೆನ್ನಲ್ಲೇ ಪಿಎಫ್‌ಐಗೆ ಬೀಗ: ಕರ್ನಾಟಕದಲ್ಲಿ 30, ದೇಶದಲ್ಲಿ 6 ಕಡೆ ಬಂದ್‌

ಪ್ರವೀಣ್‌ ನೆಟ್ಟಾರು ಹತ್ಯೆಗೂ ಮುನ್ನ ಈ ಹಾಲ್‌ನಲ್ಲಿ ಪಿಎಫ್‌ಐ ಸಂಘಟನೆ ಸಭೆ ನಡೆಸಿದ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು. ಇದೇ ಕಾರಣಕ್ಕೆ ಈ ಹಾಲ್‌ಗೆ ಎನ್‌ಐಎ ದಾಳಿ ನಡೆಸಿತ್ತು. ಈ ಹಾಲ್‌ನಲ್ಲಿ ಗುಪ್ತವಾಗಿ ಸಭೆಗಳು ನಡೆಯುತ್ತಿದ್ದವು. ಸಭೆ ನಡೆಯುವಾಗ ಪೊಲೀಸರು ಹಾಗೂ ಅಪರಿಚಿತರಿಗೆ ಹಾಲ್‌ ಹತ್ತಿರಕ್ಕೂ ಸುಳಿಯಲು ಅವಕಾಶ ಇರುತ್ತಿರಲಿಲ್ಲ. ಪಿಎಫ್‌ಐ ತಂಡಗಳು ಆ ಸಂದರ್ಭದಲ್ಲಿ ಹೊರಗಿನವರ ಮೇಲೆ ಕಣ್ಗಾವಲು ಇಡುತ್ತಿದ್ದರು ಎಂಬ ಮಾಹಿತಿ ಇದೆ. ಶನಿವಾರದೊಳಗೆ ಈ ಹಾಲ್‌ ಅನ್ನು ಸೀಜ್‌ ಮಾಡಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!