ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನಕ್ಕೆ 20 ವರ್ಷಗಳ ಬಳಿಕ ಮುಹೂರ್ತ ಒದಗಿಬಂದಿದ್ದು, ದಸರಾ ಹಬ್ಬದ ಬಳಿಕ ಯೋಜನೆಯ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಬೆಂಗಳೂರು (ಅ.01): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ (ಮಹದಾಯಿ) ಯೋಜನೆ ಅನುಷ್ಠಾನಕ್ಕೆ 20 ವರ್ಷಗಳ ಬಳಿಕ ಮುಹೂರ್ತ ಒದಗಿಬಂದಿದ್ದು, ದಸರಾ ಹಬ್ಬದ ಬಳಿಕ ಯೋಜನೆಯ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ. ಯೋಜನೆ ಜಾರಿ ಸಂಬಂಧ ಕೇಂದ್ರ ಜಲಶಕ್ತಿ ಇಲಾಖೆಯು ಅನುಮೋದನೆ ನೀಡಿದೆ. ಈ ಅನುಮೋದನೆಯ ಆದೇಶವು ರಾಜ್ಯ ಸರ್ಕಾರದ ಕೈ ಸೇರಬೇಕಾಗಿದೆ. ದಸರಾ ಹಬ್ಬದ ಕಾರಣ ಸರ್ಕಾರಿ ರಜೆಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಇಲಾಖೆಯು ನೀಡಿರುವ ಅನುಮೋದನೆಯ ಆದೇಶವು ಮುಂದಿನ ವಾರ ರಾಜ್ಯದ ಕೈಗೆ ಸೇರಲಿದೆ.
ಕೇಂದ್ರದ ಆದೇಶ ರಾಜ್ಯ ಸರ್ಕಾರಕ್ಕೆ ತಲುಪುತ್ತಿದ್ದಂತೆ ಯೋಜನೆಯ ಕಾಮಗಾರಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರವು ಸಜ್ಜಾಗಿದೆ. ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಈಗಾಗಲೇ ಅಂತಾರಾಜ್ಯ ನದಿ ನೀರು ವಿವಾದ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗ ಅನುಮತಿ ನೀಡಿವೆ. ಈಗ ಕೇಂದ್ರ ಜಲಶಕ್ತಿ ಸಚಿವಾಲಯವು ಸಹ ಅನುಮೋದನೆ ನೀಡಿದೆ. ಅದರ ಆದೇಶ ಮಾತ್ರ ರಾಜ್ಯ ಸರ್ಕಾರಕ್ಕೆ ತಲುಪಬೇಕಾಗಿದೆ. ಆದೇಶ ಬಂದ ನಂತರ ಕಾಮಗಾರಿ ಪ್ರಾರಂಭಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ.
ಮಹದಾಯಿ ಯೋಜನೆ: ಡಿಸೆಂಬರ್ ವೇಳೆಗೆ ಸಿಹಿ ಸುದ್ದಿ ಕೊಡ್ತೀವಿ ಎಂದ ಕಾರಜೋಳ
22 ವರ್ಷ ವಿಳಂಬ: 1980ರಲ್ಲಿ ಕಳಸಾ-ಬಂಡೂರಿ ಯೋಜನೆ ಸಿದ್ಧವಾಗಿದ್ದರೂ 2002ರಲ್ಲಿ ಗೋವಾ ಸರ್ಕಾರ ತಕರಾರು ತೆಗೆಯಿತು. ಪರಿಣಾಮ ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಆರಂಭಗೊಂಡ ಜಲವಿವಾದಕ್ಕೆ 20 ವರ್ಷಗಳ ನಂತರ ಮುಕ್ತಿ ಸಿಗುವ ಕಾಲ ಒದಗಿ ಬಂದಿದೆ. ಮಹದಾಯಿ ನದಿಯಿಂದ 3.90 ಟಿಎಂಸಿ ಅಡಿ ನೀರು ಬಳಸುವ ಬಹುನಿರೀಕ್ಷಿತ ಯೋಜನೆಯಿಂದ ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಯೋಜನೆ ಜಾರಿಗಾಗಿ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರು. ಮೀಸಲಿಟ್ಟಿದೆ.
ಹಲವು ಬದಲಾವಣೆ: ಸರ್ಕಾರವು ಯೋಜನೆಯ ಅನುಷ್ಠಾನ ಸಂಬಂಧ ಯೋಜನೆಯ ಸ್ವರೂಪದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿದೆ. 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರವು 1,677 ಕೋಟಿ ರು. ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡಿತ್ತು. ನಂತರ 1300 ಕೋಟಿ ರು.ಗೆ ವಿಸ್ತೃತ ಯೋಜನೆ ತಯಾರಿಸಿದೆ. ಅಲ್ಲದೇ, ಅರಣ್ಯ ಭೂಮಿ ಸ್ವಾಧೀನ ವಿಚಾರದಲ್ಲಿಯೂ ಅನಗತ್ಯವಾಗಿ ಭೂಮಿ ಬಳಕೆ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. 426 ಹೆಕ್ಟೇರ್ ಭೂಮಿಯ ಬದಲು 59 ಹೆಕ್ಟೇರ್‌ಗೆ ಇಳಿಸಲಾಗಿದೆ. ಅಗತ್ಯವಿರುವ ಕಡೆ ಮಾತ್ರ ಕಾಲುವೆ ನಿರ್ಮಿಸಲಾಗುವುದು ಮತ್ತು ಇತರೆಡೆಗಳಲ್ಲಿ ಪೈಪ್‌ಗಳ ಮೂಲಕ ನೀರು ತೆಗೆದುಕೊಂಡು ಹೋಗುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನಾಲೆ ನಿರ್ಮಿಸಲು ಹೆಚ್ಚು ಭೂಸ್ವಾಧೀನ ಅಗತ್ಯ ಇಲ್ಲ ಎಂದು ಹೇಳಿದ್ದರಿಂದ ಪರಿಸರ ಸಚಿವಾಲಯದಿಂದ ಅನುಮೋದನೆ ಸಿಗಲು ಸಮಸ್ಯೆಯಾಗಲಿಲ್ಲ.
ಸರ್ಕಾರದ ಯತ್ನ: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಹದಾಯಿ ಯೋಜನೆ ಜಾರಿಗೆ ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಿ ಇದ್ದ ಅಡೆತಡೆಗಳನ್ನು ನಿವಾರಣೆ ಮಾಡಲಾರಂಭಿಸಿತು. ಮುಂದಿನ ಚುನಾವಣೆಯಲ್ಲಿ ಹಿನ್ನಡೆಯಾಗಬಾರದು ಎಂಬ ದೃಷ್ಟಿಯಿಂದಲೂ ಯೋಜನೆ ಜಾರಿಯಲ್ಲಿ ತೀವ್ರ ಕಸರತ್ತು ನಡೆಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರ ಮೇಲೆ ಒತ್ತಡ ಹೇರಿ ರಾಜ್ಯದಲ್ಲಿನ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಸಿಕ್ಕಿದ್ದು ಯಾವ ಅನುಮತಿ?: ಮಹದಾಯಿ ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ತಯಾರಿಸಿ ರಾಜ್ಯ ಸರ್ಕಾರ ಸಲ್ಲಿಸಿತ್ತು. ಜಲ ನ್ಯಾಯಾಧಿಕರಣ ಹಾಗೂ ಕೇಂದ್ರ ಜಲ ಆಯೋಗ ಈ ಹಿಂದೆ ಒಪ್ಪಿಗೆ ನೀಡಿದ್ದವು. ಈಗ ಕೇಂದ್ರ ಜಲಶಕ್ತಿ ಆಯೋಗವೂ ಡಿಪಿಆರ್‌ಗೆ ಒಪ್ಪಿಗೆ ಸೂಚಿಸಿದೆ. ಆದೇಶವಷ್ಟೇ ಬಾಕಿ ಇದೆ.
ರಾಹುಲ್ ಯಾತ್ರೆ ಭರ್ಜರಿ ಆರಂಭ: ಕಾಂಗ್ರೆಸ್ಸಿಗರಿಂದ ಚುನಾವಣೆಗೆ ರಣಕಹಳೆ
ಕೇಂದ್ರ ಒಪ್ಪಿಗೆ ನೀಡಿದ್ದೇಕೆ?: ಯೋಜನೆಯ ಸ್ವರೂಪದಲ್ಲಿ ಈ ಹಿಂದಕ್ಕೆ ಹೋಲಿಸಿದರೆ ಸರ್ಕಾರ ಸಾಕಷ್ಟುಬದಲಾವಣೆ ಮಾಡಿದೆ. ಯೋಜನೆಗೆ ಬೇಕಾದ ಅರಣ್ಯ ಪ್ರದೇಶವನ್ನು 426 ಹೆಕ್ಟೇರ್‌ನಿಂದ 59 ಹೆಕ್ಟೇರ್‌ಗಿಳಿಸಿದೆ. ಅಗತ್ಯ ಇರುವ ಕಡೆ ಮಾತ್ರ ಕಾಲುವೆ ನಿರ್ಮಿಸಲು ಉದ್ದೇಶಿಸಿದೆ. ಇತರೆಡೆ ಪೈಪ್ ಮೂಲಕ ನೀರು ಒಯ್ಯುವ ಪ್ರಸ್ತಾಪವಿದೆ. ಜತೆಗೆ ಕರ್ನಾಟಕ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಕೇಂದ್ರ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಏನಿದು ಯೋಜನೆ?: ಮಹದಾಯಿಯಿಂದ 3.90 ಟಿಎಂಸಿ ನೀರು ಬಳಸಿ ಹುಬ್ಬಳ್ಳಿ-ಧಾರವಾಡ, ಗದಗ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ. ಇದಕ್ಕೆ ಸರ್ಕಾರ ಬಜೆಟ್‌ನಲ್ಲಿ 1000 ಕೋಟಿ ರು. ಮೀಸಲಿಟ್ಟಿದೆ.