
ಬಳ್ಳಾರಿ (ಅ.04): ನಾನು ಸಂಪೂರ್ಣವಾಗಿ ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕಳೆದ ಹದಿನಾಲ್ಕು ತಿಂಗಳಿನಿಂದಲೂ ನಾನು ಬಳ್ಳಾರಿಯಲ್ಲಿಯೇ ಇದ್ದೇನೆ. ಆದರೆ, ಕೋರ್ಟ್ ವಾದ ನಡೆಯುವ ವೇಳೆ ನಾನು ಬಳ್ಳಾರಿಯಲ್ಲಿರುವಂತಿಲ್ಲ ಎಂದು ಸಿಬಿಐನವರು ಆಕ್ಷೇಪ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.
ದಸರಾ ಹಿನ್ನೆಲೆಯಲ್ಲಿ ನಗರದ ಶ್ರೀಕನಕ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಬಿಐ ಆಕ್ಷೇಪಕ್ಕೆ ನಮ್ಮ ವಕೀಲರು ವಾದ ಮಾಡಿ, ‘ರೆಡ್ಡಿ ಮಗಳಿಗೆ ಹೆರಿಗೆ ಆಗಿದ್ದು, ಈ ಸಂದರ್ಭದಲ್ಲಿ ಬಳ್ಳಾರಿಯಲ್ಲಿರಲು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ. ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಬಲವಾದ ನಂಬಿಕೆ ಇದೆ. ನನಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಜನಾರ್ಧನ ರೆಡ್ಡಿ ಪುತ್ರನ ಸಿನಿಮಾ ಅಪ್‌ಡೇಟ್; ಕಿರೀಟಿ ಮೊದಲ ಚಿತ್ರದ ಟೈಟಲ್ ಏನು, ಯಾವಾಗ ರಿಲೀಸ್?
ನನ್ನ ವಿರುದ್ಧ ಪ್ರಕರಣ ದಾಖಲಿಸಿ ಹನ್ನೆರಡು ವರ್ಷಗಳಾದವು. ಆದರೆ, ಸರಿಯಾಗಿ ಕೇಸ್ ನಡೆಯುತ್ತಿಲ್ಲ. ಪ್ರತಿದಿನ ಟ್ರಯಲ್ ನಡೆಸುವಂತೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಆದಷ್ಟುಮೂರ್ನಾಲ್ಕು ತಿಂಗಳಲ್ಲಿಯೇ ನನ್ನ ಪ್ರಕರಣವನ್ನು ಇತ್ಯರ್ಥಗೊಳಿಸಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದೇನೆ. ಕಳೆದ ಹನ್ನೆರಡು ವರ್ಷಗಳಿಂದಲೂ ಕೋರ್ಟ್, ದೇವಸ್ಥಾನ, ಕುಟುಂಬ ಬಿಟ್ಟರೆ ಏನೂ ನೋಡಿಕೊಳ್ಳುತ್ತಿಲ್ಲ. ಹೀಗಾಗಿಯೇ ಪ್ರಕರಣ ಇತ್ಯರ್ಥಕ್ಕೆ ಕೋರ್ಟ್‌ಗೆ ಅರ್ಜಿ ಹಾಕಿರುವೆ ಎಂದು ತಿಳಿಸಿದರು.
ನನ್ನ ಕೊನೆ ಉಸಿರು ಇರುವ ವರೆಗೂ ಬಳ್ಳಾರಿಯಲ್ಲಿಯೇ ಇರಬೇಕು. ನಾನು ಬೆಂಗಳೂರಿನಲ್ಲಿಯೇ ಇದ್ದು ಐಷಾರಾಮಿ ಜೀವನ ನಡೆಸಬಹುದು. ಆದರೆ, ನಾನು ಬಳ್ಳಾರಿಯಲ್ಲಿರಬೇಕು ಎಂದು ಇಷ್ಟಪಡುತ್ತೇನೆ. ಹೀಗಾಗಿಯೇ ಆದಷ್ಟುಶೀಘ್ರ ಪ್ರಕರಣ ಇತ್ಯರ್ಥ ಮಾಡಿಕೊಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದೇನೆ. ನನ್ನ ಹುಟ್ಟು, ಬೆಳವಣಿಗೆ ಆಗಿದ್ದು ಬಳ್ಳಾರಿಯಲ್ಲಿಯೇ. ಹೀಗಾಗಿ ನಾನು ಇಲ್ಲಿಯೇ ಇರಲು ಇಷ್ಟಪಡುವೆ ಎಂದು ತಿಳಿಸಿದರು. ನಾನು ಬಳ್ಳಾರಿಯಲ್ಲಿಯೇ ಇದ್ದು ಹೊರಗಡೆ ಕಾಣಿಸುತ್ತಿಲ್ಲ ನಿಜ. ನಾನು ಮತ್ತು ನನ್ನ ಕುಟುಂಬ ಜತೆ ಹೆಚ್ಚು ಸಮಯ ಕಳೆಯುತ್ತಿರುವೆ. ನನ್ನ ಸಹೋದರ ಸೋಮಶೇಖರ ರೆಡ್ಡಿ ಹಾಗೂ ಸ್ನೇಹಿತ ಬಿ. ಶ್ರೀರಾಮುಲು ಹೊರಗಡೆ ಓಡಾಡುತ್ತಿದ್ದಾರೆ. ನಾನು ಸಮಯ ಬಂದಾಗ ಹೊರಗಡೆ ಬರುವೆ ಎಂದರು.
ರಾಜಕೀಯ ಮರು ಪ್ರವೇಶ ಕುರಿತು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸದ ರೆಡ್ಡಿ, ‘ಬಳ್ಳಾರಿ ದುರ್ಗಮ್ಮ ದೇವಿ ಯಾವ ರೀತಿ ದಾರಿ ತೋರಿಸುತ್ತಾಳೋ ಹಾಗೆ ನಡೆದುಕೊಳ್ಳುತ್ತೇನೆ. ನನಗೆ ನಂಬಿಕೆ ಇದೆ. ಆದಷ್ಟುಬೇಗ ರಾಜಕೀಯ ಹಾದಿಗೆ ಬರುತ್ತೇನೆ ನೋಡ್ತಾ ಇರಿ ಎಂದರು. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಶ್ರೀಕನಕ ದುರ್ಗಮ್ಮ ದೇವಿಗೆ ಹರಕೆ ಮಾಡಿಕೊಂಡಿದ್ದೆ. ಹೀಗಾಗಿ ವಿಶೇಷ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡುತ್ತಿರುವೆ ಎಂದು ತಿಳಿಸಿದರು.
ಮುದ್ದಿನ ನಾಯಿಯೊಂದಿಗೆ '777 ಚಾರ್ಲಿ' ಸಿನಿಮಾ ನೋಡಿದ ಜನಾರ್ದನ ರೆಡ್ಡಿ!
ಮಗ ಕಿರೀಟಿ ಸಿನಿಮಾ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ನಿರ್ಧರಿಸಿದ್ದಾನೆ. ಈಗಾಗಲೇ ಸಿನಿಮಾ ಶೂಟಿಂಗ್ ಶೇ. 70ರಷ್ಟು ಭಾಗ ಮುಗಿದಿದೆ. ಮೂರು ಭಾಷೆಗಳಲ್ಲಿ ‘ಜ್ಯೂನಿಯರ್’ ಸಿನಿಮಾ ಬರಲಿದ್ದು, ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು. ಕಾಂಗ್ರೆಸ್‌ನ ಭಾರತ ಐಕ್ಯತಾ ಯಾತ್ರೆಗೆ ಪ್ರತಿಕ್ರಿಯಿಸಿ, ಯಾರು ಎಷ್ಟೇ ಪಾದಯಾತ್ರೆ ಮಾಡಲಿ. ಯಾರಿಗೆ ಅಧಿಕಾರ ನೀಡಬೇಕು ಎಂಬುದನ್ನು ದೇವರೇ ನಿರ್ಧರಿಸಬೇಕು ಎಂದರು. ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ