Belagavi: ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

By Gowthami K  |  First Published Dec 1, 2022, 7:27 PM IST

ನಾಡಧ್ವಜ ಬಗ್ಗೆ ಅವಾಚ್ಯವಾಗಿ ನಿಂದಿಸಿ ವಿದ್ಯಾರ್ಥಿಯನ್ನು ಬೂಟಗಾಲಿಂದ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ಒದ್ದಿದ್ದಾರೆ ಎಂದು  ವಿದ್ಯಾರ್ಥಿ ಆರೋಪ ಮಾಡಿದ್ದು, ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ರವೀಂದ್ರ ಗಡಾದಿ  ಬುದ್ದಿವಾದ ಹೇಳಿದ್ದೇವೆ ಹಲ್ಲೆ ಮಾಡಿಲ್ಲ ಎಂದಿದ್ದಾರೆ.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಡಿ.1): ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಿನ್ನೆ ಸಂಜೆ ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಘಟನೆ ಬಳಿಕ ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಟಿಳಕವಾಡಿ ಠಾಣೆಗೆ ಕರೆದುಕೊಂಡು ಹೋದ ವೇಳೆ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಭರಮಣಿ ಹಲ್ಲೆ ಮಾಡಿದ್ದಾರೆ ಎಂದು ಪಿಯುಸಿ ವಿದ್ಯಾರ್ಥಿ ಗಂಭೀರ ಆರೋಪ ಮಾಡಿದ್ದಾನೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಹಲ್ಲೆಗೊಳಗಾದ ವಿದ್ಯಾರ್ಥಿ, 'ನಿನ್ನೆ ಕಾಲೇಜು ಫೆಸ್ಟ್ ನಡೆಯುತ್ತಿತ್ತು. ಕನ್ನಡ ಧ್ವಜ ಹಿಡಿದು ಡ್ಯಾನ್ಸ್ ಮಾಡುವ ವೇಳೆ ಐದಾರು ಹುಡುಗರು ಹಲ್ಲೆ ಮಾಡಲು ಶುರು ಮಾಡಿದರು. ಬಳಿಕ ಸ್ಥಳಕ್ಕೆ ಬಂದ ಬೌನ್ಸರ್‌ಗಳು‌ ಎಲ್ಲರನ್ನೂ ಕಳಿಸಿದರು. ಆಗ ನಾನು ಕನ್ನಡಪರ ಸಂಘಟನೆಯವರಿಗೆ ಮಾಹಿತಿ ನೀಡಿದೆ. ಅವರು ಬಂದು ಪ್ರಾಂಶುಪಾಲರ ಜೊತೆ ಮಾತನಾಡಿದರು. ಆಗ ದೂರು ಕೊಡಲು ನಿರ್ಧರಿಸಿದೆವು. ಪೊಲೀಸರು ದೂರು ನೀಡ್ತಿಯಾ ಅಂತಾ ಕೇಳಿದಾಗ ನಾನು ಹೂಂ ಎಂದೆ. ಆಗ ನನ್ನ ಹಾಗೂ ನನ್ನ ಸ್ನೇಹಿತನ ಜೀಪ್‌ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ನಿಲ್ಲಿಸಿದರು‌.

Tap to resize

Latest Videos

ಹತ್ತು ನಿಮಿಷ ಬಳಿಕ ಎಸಿಪಿ ಸರ್ ಬಂದು ಹೆದರಿಸಿದರು‌. ನಿನ್ನ ಭವಿಷ್ಯ ಹಾಳಾಗುತ್ತೆ. ನಿಮ್ಮ ತಂದೆ ತಾಯಿಯ ಹೆಸರು ಕೆಡಿಸುತ್ತಿಯಾ ಎಂದು ಕಪಾಳಮೋಕ್ಷ ಮಾಡಿದರು‌. ಬಳಿಕ ಡಿಸಿಪಿ ತಮ್ಮ ಚೇಂಬರ್ ಗೆ ಕರೆದೊಯ್ದು ಅವಾಚ್ಯ ಶಬ್ದಗಳಿಂದ ಬೈಯ್ದರು. ಬಳಿಕ ಡಿಸಿಪಿ ನನ್ನ ಕಪಾಳಮೋಕ್ಷ ಮಾಡಿ ಬೂಟಗಾಲಿಂದ ಒದ್ದರು‌‌‌. ಇದೇನೇ ಮಾಡೋದು ಇದ್ದರು ಕಾಲೇಜು ಒಳಗೆ ಮಾಡಬೇಡಿ ಹೊರಗೆ ಮಾಡಿ. ಕನ್ನಡ ಬಾವುಟ ಬಗ್ಗೆಯೂ ಅವಾಚ್ಯವಾಗಿ ಮಾತನಾಡಿದರು. ಬಳಿಕ ರಾತ್ರಿ ಆಸ್ಪತ್ರೆಗೆ ಹೋಗಿ ಎಂಎಲ್‌ಸಿ ಮಾಡಿಸಿದೆ. ನನ್ನದೇನು ತಪ್ಪಿಲ್ಲ ಹುಡುಗರಿಂದಲೂ ಹಲ್ಲೆಗೊಳಗಾದೆ ಬಳಿಕ ಪೊಲೀಸರಿಂದಲೂ ಹಲ್ಲೆಗೊಳಗಾದೆ' ಎಂದು ತಿಳಿಸಿದ್ದಾನೆ.

ಮಧ್ಯರಾತ್ರಿ ಜಿಲ್ಲಾಸ್ಪತ್ರೆಗೆ ತೆರಳಿ ಎಂಎಲ್‌ಸಿ ಮಾಡಿಸಿದ ವಿದ್ಯಾರ್ಥಿ
ಇನ್ನು ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಕರ್ನಾಟಕ ವಿಜಯ ಸೇನೆ ಬೆಳಗಾವಿ ಜಿಲ್ಲಾ ಯುವಘಟಕ ಅಧ್ಯಕ್ಷ ಸಂಪತ್‌ಕುಮಾರ್ ಜೊತೆ ಬಿಮ್ಸ್ ಆಸ್ಪತ್ರೆಗೆ ತೆರಳಿದ ವಿದ್ಯಾರ್ಥಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆಯಾಗಿದೆ ಎಂದು ಎಂಎಲ್‌ಸಿ(Medico Legal Case) ಮಾಡಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡಪರ ಹೋರಾಟಗಾರ ಸಂಪತ್‌ಕುಮಾರ್ ದೇಸಾಯಿ, 'ಈ ಘಟನೆ ಇಡೀ ಕರ್ನಾಟಕವೇ ತಲೆತಗ್ಗಿಸುವಂತದ್ದು. ನಮಗೆ ರಕ್ಷಣೆ ಕೊಡುವವರು ಪೊಲೀಸರು. ಕನ್ನಡ ಹೋರಾಟಗಾರರನ್ನು ಠಾಣೆಗೆ ಕರೆದೊಯ್ದು ಕೂರಿಸೋದು ಸಾಮಾನ್ಯವಾಗಿತ್ತು. ಆದ್ರೆ ಅದು ಜನಸಾಮಾನ್ಯರಿಗೂ ತಟ್ಟುತ್ತಿದೆ ಅಂತಾ ಬೇಜಾರಾಗುತ್ತಿದೆ. ದೂರು ಪಡೆಯುತ್ತೇವೆ ಎಂದು ಠಾಣೆಗೆ ಕರೆದೊಯ್ದು ಕನ್ನಡ ಬಾವುಟ ಬಗ್ಗೆ ಅವಾಚ್ಯವಾಗಿ ಮಾತನಾಡಿ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಹಾಗೂ ಗೃಹ ಸಚಿವರಿಗೆ ಆಗ್ರಹಿಸುತ್ತೇವೆ. ಬೆಳಗಾವಿ ರಾಜಕಾರಣಿಗಳಿಗೆ ಕೇವಲ ಮರಾಠಿ ಮತ ಬ್ಯಾಂಕ್ ಮುಖ್ಯವಾಗಿದೆ. ಹೀಗಾಗಿ ಅವರೂ ತುಟಿ ಬಿಚ್ಚುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುದ್ದಿವಾದ ಹೇಳಿದ್ದೇವೆ ಹಲ್ಲೆ ಮಾಡಿಲ್ಲ ಎಂದ ಡಿಸಿಪಿ
ಇನ್ನು ಘಟನೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗುತ್ತಿದ್ದಂತೆ ಮೊದಲು ವಾಟ್ಸಪ್ ಮೂಲಕ ಮಾಧ್ಯಮ ಪ್ರಕಟಣೆ ಹೊರಡಿಸಿದ ಡಿಸಿಪಿ ರವೀಂದ್ರ ಗಡಾದಿ, 'ಗಲಾಟೆ ಮಾಡಿದವರು ಕನ್ನಡ ಭಾಷಿಕ ವಿದ್ಯಾರ್ಥಿಗಳೇ, ಎಲ್ಲರೂ ಅಪ್ರಾಪ್ತರಾಗಿದ್ದರಿಂದ ಕರೆದು ವಿಚಾರಣೆ ಮಾಡಲಾಗುವುದು. ಸದ್ಯ ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಿದರು. ಬಳಿಕ ಮತ್ತೊಂದು ಮಾಧ್ಯಮ ಪ್ರಕಟಣೆ ಹೊರಡಿಸಿದ ಡಿಸಿಪಿ ರವೀಂದ್ರ ಗಡಾದಿ, 'ವಿದ್ಯಾರ್ಥಿಗಳನ್ನು ಠಾಣೆಗೆ ಕರೆಯಿಸಿ ಯಾವುದೇ ಭಾಷಾ ವಿವಾದ ತರಬೇಡಿ ಎಂದು ಬುದ್ದಿವಾದ ಹೇಳಿದ್ದೇವೆ. ಹೊರತಾಗಿ ಯಾವುದೇ ರೀತಿ ಹಲ್ಲೆ ಮಾಡಿಲ್ಲ. ವಿದ್ಯಾರ್ಥಿಗಳನ್ನು ವಿಚಾರಿಸಲಾಗಿ ಡ್ಯಾನ್ಸ್ ಮಾಡುವಾಗ ಕಾಲು ತುಳಿದಾಡಿಕೊಂಡು ಒಬ್ಬರಿಗೊಬ್ಬರು ರೊಚ್ಚಿಗೆದ್ದು ಈ ಘಟನೆ ನಡೆದಿದೆ' ಎಂದು ಸಮಜಾಯಿಷಿ ನೀಡಿದ್ದಾರೆ.

ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳ ಕಿಚ್ಚು
ಇನ್ನು ಯಾವಾಗ ವಿದ್ಯಾರ್ಥಿ ಪೊಲೀಸರು ಸಹ ಹಲ್ಲೆ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದನೋ ಕನ್ನಡಪರ ಸಂಘಟನೆಗಳು ಆಕ್ರೋಶಗೊಂಡವು. ಬೆಳಗಾವಿಯ ಗೋಗಟೆ ಕಾಲೇಜಿಗೆ ಮುತ್ತಿಗೆ ಹಾಕಿ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಕ್ರಮ ಆಗಬೇಕೆಂದು ಆಗ್ರಹಿಸಿ ಹೋರಾಟ ಶುರು ಮಾಡಿದರು. ಟಿಳಕವಾಡಿಯ ಆರ್ ಪಿಡಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಕರ್ನಾಟಕ ವಿಜಯ ಸೇನೆ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಟಿಳಕವಾಡಿ ಆರ್ ಪಿಡಿ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ದೂರು ನೀಡಲು ಹೋದ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಳಿಕ ಆರ್ ಪಿಡಿ ವೃತ್ತದಿಂದ ಗೋಗಟೆ ಪದವಿಪೂರ್ವ ಕಾಲೇಜುವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕಾಲೇಜು ಕ್ಯಾಂಪಸ್ ನುಗ್ಗಲು ಯತ್ನಿಸಿದರು. ನಾಡಧ್ವಜ ಪ್ರದರ್ಶಿಸಿದ ವಿದ್ಯಾರ್ಥಿ ಮೇಲೆ ಪೊಲೀಸರು ಹಲ್ಲೆ ನಡೆಸಿದರೂ ಬೆಳಗಾವಿ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು. ನಂತರ ಗೋಗಟೆ ಕಾಲೇಜಿನವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಕಾಲೇಜು ಗೇಟ್ ಹಾರಿ ಕಾಲೇಜಿಗೆ ನುಗ್ಗಲು ಯತ್ನಿಸಿದರು. 

ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಈ ವೇಳೆ ಪೊಲೀಸರು ಹೋರಾಟಗಾರರ ಮಧ್ಯೆ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಬಾರದು ಅಂತಾ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಐವತ್ತಕ್ಕೂ ಅಧಿಕ ಹೋರಾಟಗಾರರನ್ನ ವಶಕ್ಕೆ ಪಡೆದರು. ಇದೆ ವೇಳೆ ಕಾರ್ಯಕರ್ತನೋರ್ವ ಮುಖ್ಯ ದ್ವಾರದ ಮೇಲೆ ಹತ್ತಿ ಕನ್ನಡ ಬಾವುಟ ಕಟ್ಟಿದ್ರೇ ಮತ್ತೋರ್ವ ಕಾರ್ಯಕರ್ತ ಪೊಲೀಸ್ ವಾಹನದ ಮೇಲೆ ಏರಿ ಕನ್ನಡ ಬಾವುಟ ಹಾರಿಸಿ ಕನ್ನಡಪರ ಜೈಘೋಷಣೆ ಕೂಗಿದ. ಬಳಿಕ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದರು. ಈ ಕುರಿತು ಪ್ರತಿಕ್ರಿಯಿಸಿದ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕಿದ್ದ ಪೊಲೀಸರು ದೌರ್ಜನ್ಯ ಎಸಗಿದ್ದು ಖಂಡನೀಯ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡ್ತಿದ್ದ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ!

ಕಾಲೇಜು ಪ್ರಾಂಶುಪಾಲರಿಂದಲೂ ಮಾಧ್ಯಮ ಪ್ರಕಟಣೆ
ಕನ್ನಡ ಬಾವುಟ ಹಿಡಿದು ಡ್ಯಾನ್ಸ್ ಮಾಡಿದ್ದ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ಪ್ರಕರಣ ವಿಚಾರವಾಗಿ ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. 'ಗೋಗಟೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಂತರಿಕ ಶಾಲಾ ಮಟ್ಟದ ವಿದ್ಯಾರ್ಥಿಗಳಿಗೆ ಜಿನೋಸಿಸ್ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಿ.29 ಹಾಗೂ 30ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಬಹುಮಾನ ವಿತರಣಾ ಕಾರ್ಯಕ್ರಮ ಡಿ‌.30ರ ಸಂಜೆ 4.30ರಿಂದ ರಾತ್ರಿ 8ರವರೆಗೆ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅನುಚಿತ ಘಟನೆ ನಡೆದಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗ ತುರ್ತಾಗಿ ಸ್ಪಂದಿಸಿರುತ್ತಾರೆ. ಘಟನೆ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿಯವರು ತಿಳಿಸಿರುತ್ತಾರೆ' ಎಂದು ಪ್ರಾಂಶುಪಾಲರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

Belagavi: ಕರ್ನಾಟಕಕ್ಕೆ ಸೇರಲು ನಡೆದಿದೆ ನಿರಂತರ ಹೋರಾಟ

ಒಟ್ಟಾರೆಯಾಗಿ ಪೊಲೀಸರ ವರ್ತನೆ ವಿರುದ್ಧ ಗಡಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು ಗೃಹಸಚಿವರು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಿ ಎಂದು ಆಗ್ರಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಇಲಾಖೆ ಮುಂದೆ ಯಾವ ಕ್ರಮಕ್ಕೆ ಮುಂದಾಗುತ್ತೆ ಕಾದು ನೋಡಬೇಕು.

click me!