ರಾಷ್ಟ್ರಪತಿ, ಕೇಂದ್ರ ಸಚಿವರ ಭೇಟಿಯಾದ ಸಿಎಂ ಬೊಮ್ಮಾಯಿ

By Kannadaprabha NewsFirst Published Dec 1, 2022, 10:30 AM IST
Highlights

ರಾಜ್ಯದ ನೀರಾವರಿ, ರಸ್ತೆ ಯೋಜನೆಗಳ ಕುರಿತು ಶೇಖಾವತ, ಗಡ್ಕರಿ ಜತೆ ಸಿಎಂ ಬೊಮ್ಮಾಯಿ ಚರ್ಚೆ

ನವದೆಹಲಿ(ಡಿ.01): ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌, ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಮೊದಲಿಗೆ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿ ವಿವಿಧ ಯೋಜನೆಗಳ ಕುರಿತು ಚರ್ಚಿಸಿದ ಬೊಮ್ಮಾಯಿ, ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬರಬೇಕಿರುವ ತೀರುವಳಿ(ಬಾಕಿ)ಗಳನ್ನು ಶೀಘ್ರ ಒದಗಿಸುವಂತೆ ಆಗ್ರಹಿಸಿದರು.

ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ, ಕಳಸಾ ಬಂಡೂರಿ ಯೋಜನೆ ಹಾಗೂ ಮೇಕೆದಾಟು ಯೋಜನೆಗಳು ಮಾತುಕತೆ ವೇಳೆ ಚರ್ಚೆಗೆ ಬಂತು. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜಲಜೀವನ್‌ ಮಿಷನ್‌ ಯೋಜನೆ ತೀವ್ರಗತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಜಲಶಕ್ತಿ ಸಚಿವರಿಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಶೀಘ್ರ ನಿರ್ಧಾರ: ಸಿಎಂ ಬೊಮ್ಮಾಯಿ

ಬೈಪಾಸ್‌ ರಸ್ತೆ ಕುರಿತು ಚರ್ಚೆ: ಆ ಬಳಿಕ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಬೊಮ್ಮಾಯಿ ಅವರು ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆ ಅಗಲೀಕರಣ ಕುರಿತು ಚರ್ಚೆ ನಡೆಸಿದರು. ಇದರ ಮಧ್ಯೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು.

ಕೇಂದ್ರ ಸಚಿವರಾದ ಭಗವಂತ್‌ ಖೂಬಾ, ಪ್ರಹ್ಲಾದ್‌ ಜೋಶಿ, ರಾಜ್ಯದ ಸಚಿವ ಶಂಕರ್‌ ಪಾಟೀಲ್‌ ಮುನೇಕೊಪ್ಪ, ಸಚಿವ ಗೋವಿಂದ ಕಾರಜೋಳ ಅವರು ಮುಖ್ಯಮಂತ್ರಿಗೆ ಸಾಥ್‌ ನೀಡಿದರು.

ನಾರಿಮನ್‌ ಭೇಟಿಯಾದ ಸಿಎಂ: 

ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಿರಿಯ ನ್ಯಾಯವಾದಿ ಫಾಲಿ ಎಸ್‌. ನಾರಿಮನ್‌ ಅವರನ್ನೂ ಭೇಟಿಯಾಗಿ ಕೆಲಕಾಲ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಸೌಜನ್ಯದ ಭೇಟಿಯಾಗಿತ್ತು. ರಾಜ್ಯಕ್ಕೆ ಐದು ದಶಕಗಳ ಕಾಲ ಸೇವೆ ಸಲ್ಲಿಸಿರುವ ನಾರಿಮನ್‌ ಅವರು ಕರ್ನಾಟಕದ ನೀರಿನ ಹಿತರಕ್ಷಣೆ ಮಾಡಿದ್ದಾರೆ. ಈಗಲೂ ಅವರ ಸಲಹೆ ಸೂಚನೆಗಳಿಗೆ ಮೌಲ್ಯ ಇದೆ. ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆ, ಎಸ್‌.ಆರ್‌.ಬೊಮ್ಮಾಯಿ, ಎಚ್‌.ಡಿ.ದೇವೇಗೌಡರ ಕಾಲದಲ್ಲಿ ಅವರು ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದರು. ಇದೊಂದು ಸೌಜನ್ಯದ ಭೇಟಿಯಾಗಿದ್ದು ಅವರಿಗೆ ಧನ್ಯವಾದ ಹೇಳಲು ಬಂದಿದ್ದೇನೆ. ಗಡಿ, ಜಲ ವಿವಾದದ ಬಗ್ಗೆ ಯಾವುದೇ ವಿಶೇಷ ಚರ್ಚೆ ಮಾಡಿಲ್ಲ ಎಂದು ಹೇಳಿದರು.
 

click me!