ಸರ್ಕಾರದ ನಿಯಂತ್ರಣಕ್ಕೆ ರೇಸ್‌ ಕೋರ್ಸ್‌?

By Web DeskFirst Published Nov 29, 2018, 9:20 AM IST
Highlights

ಕುದುರಿಗಳಿಗೆ ಉದ್ದೀಪನ ಮದ್ದು ನೀಡಿದ್ದ ಹಿನ್ನೆಲೆಯಲ್ಲಿ ಬಿಟಿಸಿ ಮೇಲೆ ನಿಗಾ ವಹಿಸಲು ಉಸ್ತುವಾರಿ ಸಮಿತಿ ರಚಿಸಲು ಸಿಐಡಿ ಶಿಫಾರಸು ಮಾಡಿದೆ. ಆದರೀಗ ಸಮಿತಿ ರಚನೆ ಸಂಬಂಧ ಸರ್ಕಾರವು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ.

ಬೆಂಗಳೂರು[ನ.29]: ರೇಸ್‌ ಗೆಲ್ಲಲು ಬೆಟ್ಟಿಂಗ್‌ದಾರರ ಹಾಟ್‌ ಫೇವರಿಟ್‌ ಕುದುರೆ ‘ಕ್ವೀನ್‌ ಲತೀಫಾ’ಗೆ ಉದ್ದೀಪನಾ ಮದ್ದು ನೀಡಿದ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರು ಟಫ್‌ರ್‍ ಕ್ಲಬ್‌ (ಬಿಟಿಸಿ)ನ ಆಡಳಿತ ಮಂಡಳಿಗೆ ಮೂಗುದಾರ ಹಾಕಲು ‘ಉಸ್ತುವಾರಿ ಸಮಿತಿ’ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಅಪರಾಧ ತನಿಖಾ ದಳವು (ಸಿಐಡಿ) ಮಹತ್ವದ ಶಿಫಾರಸು ಮಾಡಿದೆ.

ಈ ಸಮಿತಿಗೆ ಮುಖ್ಯಸ್ಥರು ಮತ್ತು ಸದಸ್ಯರ ನೇಮಕ ಮತ್ತು ಸಮಿತಿ ಕಾರ್ಯನಿರ್ವಹಣೆ ಸೇರಿದಂತೆ ಇನ್ನಿತರ ಆಡಳಿತಾತ್ಮಕ ನಿರ್ಧಾರವು ಸರ್ಕಾರದ ವಿವೇಚನೆಗೆ ಸೇರಿದ್ದಾಗಿದೆ. ಆದರೆ ಸ್ವಾಯತ್ತ ಸಂಸ್ಥೆಯಂತಿರುವ ಬಿಟಿಸಿ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸಲು ಪ್ರಭಾರ ಸಮಿತಿ ಅಗತ್ಯವಿದೆ ಎಂದು ತನ್ನ ವಿಚಾರಣಾ ವರದಿಯಲ್ಲಿ ಸಿಐಡಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಉಸ್ತುವಾರಿ ಸಮಿತಿ ಮಾತ್ರವಲ್ಲದೆ ಪರವಾನಿಗೆ ನವೀಕರಣ, ಕ್ಲಬ್‌ನ ಮೂಲಭೂತ ಸೌಲಭ್ಯಗಳು ಹಾಗೂ ಸ್ವಚ್ಛತೆ ಬಗ್ಗೆ ಸಹ ಕ್ರಮ ಜರುಗಿಸಬೇಕಿದೆ. ಕೆಲವು ನ್ಯೂನತೆಗಳ ನಿವಾರಣೆಗೆ ಕಠಿಣ ನಿಲುವು ತಾಳಬೇಕು. ಅಲ್ಲದೆ ಬಿಟಿಸಿ ನಿಯಮಾವಳಿಗಳಿಗೆ ಸಹ ತಿದ್ದುಪಡಿ ಮಾಡಬೇಕಿದೆ ಎಂದು ಸರ್ಕಾರಕ್ಕೆ ಸಿಐಡಿ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದೆ ಎಂದು ಗೊತ್ತಾಗಿದೆ.

ಇತ್ತ ಸಿಐಡಿ ವರದಿ ಸ್ವೀಕರಿಸಿರುವ ರಾಜ್ಯ ಸರ್ಕಾರವು, ಸಮಿತಿ ರಚನೆ ಕುರಿತು ನಿರ್ಧಾರ ತೆಗೆದುಕೊಳ್ಳಲು ಅಡಕತ್ತರಿಗೆ ಸಿಲುಕಿದೆ. ಇದರ ಪರಿಣಾಮ ಸಿಐಡಿ ವರದಿಯೂ ಸರ್ಕಾರದ ಕಡತಗಳ ರಾಶಿಯಲ್ಲಿ ಕಣ್ಮರೆಯಾಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಈ ನಿಲುವಿಗೆ ಬಿಟಿಸಿಯಲ್ಲಿ ಕೆಲವು ಪ್ರಭಾವಿಗಳ ಒತ್ತಡವು ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಉದ್ದೀಪನಾ ಮದ್ದು ತಂದ ಆಪತ್ತು:

ಕಳೆದ 2017ರ ಮಾಚ್‌ರ್‍ನಲ್ಲಿ ನಡೆದ ರೇಸ್‌ನಲ್ಲಿ ಗೆಲುವು ಸಾಧಿಸಿದ್ದ ಕ್ವೀನ್‌ ಲತೀಫಾ, ರಫಾ ಹಾಗೂ ಕ್ವಾಸಿರ್‌ ಹೆಸರಿನ ಕುದುರೆಗಳ ಮಿಂಚಿನ ಓಟ ನೋಡಿ ಬಾಜಿದಾರರಿಗೆ ಅಚ್ಚರಿ ಮೂಡಿಸಿತ್ತು. ಅಂದು ರೇಸ್‌ ಗೆಲ್ಲುವ ದುರುದ್ದೇಶದಿಂದಲೇ ಕ್ವೀನ್‌ ಲತೀಫಾಗೆ ಉದ್ದೀಪನಾ ಚುಚ್ಚು ಮದ್ದು ನೀಡಲಾಗಿದೆ ಎಂದು ಆರೋಪಿಸಿ ಕ್ಲಬ್‌ನ ಆಡಳಿತ ಮಂಡಳಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಚಂದ್ರಶೇಖರ್‌ ದೂರು ನೀಡಿದ್ದರು. ಬಳಿಕ ಈ ಪ್ರಕರಣದ ತನಿಖೆ ನಡೆಸಿದ ಸಿಐಡಿ, ಕ್ಲಬ್‌ನ ಸಿಇಓ ಸೇರಿದಂತೆ ಏಳು ಜನರ ವಿರುದ್ಧ ಕೋರ್ಟ್‌ಗೆ 700 ಪುಟಗಳ ಆರೋಪ ಪಟ್ಟಿಸಲ್ಲಿಸಿತ್ತು.

ಉದ್ದೀಪನಾ ಮದ್ದು ನೀಡಿಕೆ ವಿವಾದ ಬೆಳಕಿಗೆ ಬಂದಾಗಲೇ ಬಿಟಿಸಿ ಆಡಳಿತ ಮಂಡಳಿಯ ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕ ಶ್ರೀಕಾಂತ್‌ ಅವರು ಕ್ಲಬ್‌ನ ಅವ್ಯವಸ್ಥೆಗಳ ಕುರಿತು ವಿಚಾರಣೆ ನಡೆಸುವಂತೆ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಫ್‌ಐಆರ್‌ ಆಧರಿಸಿ ತನಿಖೆ ಜೊತೆಗೆ ಅಲ್ಲಿನ ಸಮಸ್ಯೆಗಳ ಸುಧಾರಣೆಗೆ ಸಹ ವಿಚಾರಣೆ ನಡೆಸಿ ಪ್ರತ್ಯೇಕ ವರದಿ ನೀಡುವಂತೆ ಸಿಐಡಿಗೆ ಆದೇಶಿಸಿತು. ಅದರಂತೆ ವಿಚಾರಣೆ ನಡೆಸಿದ ಸಿಐಡಿ, ಈಗ ಕ್ಲಬ್‌ಗೆ ಉಸ್ತುವಾರಿ ಸಮಿತಿ ರಚನೆಗೆ ಬಹುಮುಖ್ಯವಾದ ಶಿಫಾರಸು ಮಾಡಿದೆ.

ಐಎಎಸ್‌, ಐಪಿಎಸ್‌ ಅಧಿಕಾರಿ ಮಟ್ಟದಲ್ಲಿ ಸಮಿತಿ

ಸ್ವಾಯತ್ತ ಸಂಸ್ಥೆಯಂತೆ ಆಡಳಿತ ಮಂಡಳಿ ರಚಿಸಿಕೊಂಡಿರುವ ಬಿಟಿಸಿ, ತನ್ನ ಕಾರ್ಯನಿರ್ವಹಣೆಗೆ ತನ್ನದೇ ನಿಯಮಾವಳಿ ರೂಪಿಸಿಕೊಂಡಿದೆ. ಅಲ್ಲಿನ ಚಟುವಟಿಕೆಗಳು ನೇರವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಉದ್ದೀಪನಾ ಮದ್ದು ನೀಡಿಕೆ ಆರೋಪ ಬಂದಾಗಲೂ ಕ್ಲಬ್‌, ಆ ಬಗ್ಗೆ ತನಿಖೆಗೆ ಪೊಲೀಸರಿಗೆ ದೂರು ದಾಖಲಿಸುವುದಿಲ್ಲ. ಆದರೆ ಆರೋಪ ಕುರಿತು ತನ್ನ ಪಶುವೈದ್ಯರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಪಡೆದು ಆಂತರಿಕವಾಗಿಯೇ ವಿಚಾರಣೆ ನಡೆಸುವ ಪದ್ಧತಿ ಇದೆ ಎಂದು ಸಿಐಡಿ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಹೀಗಾಗಿ ಕ್ವೀನ್‌ ಲತೀಫಾ ಕುದುರೆಗೆ ಉದ್ದೀಪನಾ ಚುಚ್ಚು ಮದ್ದು ನೀಡಿಕೆ ಆರೋಪ ಕೇಳಿ ಬಂದ ಕೂಡಲೇ ಪೊಲೀಸರಿಗೆ ಕ್ಲಬ್‌ ದೂರು ನೀಡಿರಲಿಲ್ಲ. ಈ ರೀತಿಯ ಕ್ಲಬ್‌ನ ನೀತಿಗಳು ಬಾಜಿದಾರರಲ್ಲಿ ಅನುಮಾನಗಳ ಹುಟ್ಟಿಗೆ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಬಿಟಿಸಿ ಆಡಳಿತ ಮುಕ್ತವಾಗಬೇಕಾದರೆ ಸರ್ಕಾರದ ನಿಯಂತ್ರಣ ಅಗತ್ಯವಿದೆ. ಹಿರಿಯ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ ಮಟ್ಟದಲ್ಲಿ ಅಧಿಕಾರಿಗಳ ಉಸ್ತುವಾರಿ ಸಮಿತಿ ರಚಿಸಬೇಕು. ಈ ಸಮಿತಿಯು ಕಾಲಕಾಲಕ್ಕೆ ಕ್ಲಬ್‌ನ ಚಟುವಟಿಕೆಗಳ ಕುರಿತು ಪರಾಂಬರಿಸಿ ಸರ್ಕಾರದ ಗಮನಕ್ಕೆ ತರಬೇಕು. ಏನಾದರೂ ವ್ಯತ್ಯಾಸಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಅಧಿಕಾರವು ಸಮಿತಿಗೆ ನೀಡಬೇಕು. ಹಾಗೆ ಮೂಲಭೂತ ಸಮಸ್ಯೆಗಳ ಕುರಿತು ಬಿಬಿಎಂಪಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕಿದೆ ಎಂದು ಸಿಐಡಿ ತಿಳಿಸಿದೆ.

click me!