* ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ವಿವಾದ
* ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿ
* ಕಾಲೇಜಿನಲ್ಲಿ ಹಿಜಾಬ್ ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳಿಸಿ
ಹುಬ್ಬಳ್ಳಿ, (ಫೆ.01): ಕಾಲೇಜಿನಲ್ಲಿ ಹಿಜಾಬ್(Hijab) ಧರಿಸುವವರಿಗೆ TC ಕೊಟ್ಟು, ಒದ್ದು ಮನೆಗೆ ಕಳಿಸಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Muthalik) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು(ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುವ ಚರ್ಚೆಯೇ ಇಲ್ಲ. ಎಲ್ಲರೂ ಸಮವಸ್ತ್ರವನ್ನ ಹಾಕಿಕೊಳ್ಳಬೇಕು. ಅದರಲ್ಲಿ ಯಾವುದೇ ಜಾತಿ ಇರಲ್ಲ. ಈ ರೀತಿಯ ಬಂಡತನ ಟೆರರಿಸ್ಟ್ ಮಟ್ಟಿಗೆ ತೆಗೆದುಕೊಂಡು ಹೋಗುತ್ತೆ. ಇದು ಶಾಲೆಯೋ ಅಥವಾ ಧಾರ್ಮಿಕ ಕೇಂದ್ರವೋ? ನಿಮ್ಮ ಸ್ವಾತಂತ್ರ್ಯ ಕೇವಲ ನಿಮ್ಮ ಮನೆಯಲ್ಲಿರಲಿ. ಸಮವಸ್ತ್ರದಲ್ಲೇ ಬರಬೇಕು. ಇದಕ್ಕೆ ಆಗಲ್ಲ ಎನ್ನುವವರಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಬೇಕು ಎಂದು ಆಕ್ರೋಶ ಹೊರಹಾಕಿದರು.
Hijab ಧರಿಸೋದು ಮೂಲಭೂತ ಹಕ್ಕೆಂದು ಘೋಷಿಸಿ: ಹೈಕೋರ್ಟ್ ಮೆಟ್ಟಿಲೇರಿದ ಉಡುಪಿ ವಿದ್ಯಾರ್ಥಿನಿ
ಪ್ರತ್ಯೇಕತೆ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ. ಚಿಂತಾಮಣಿ ಶಾಲೆಯ ಕೊಠಡಿಯಲ್ಲಿ ನಮಾಜ್ ಮಾಡಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಬಹಳ ಮೀನಮೇಷ ಎಣಿಸುತ್ತಿದೆ. ಇದನ್ನ ಹಾಗೇ ಬಿಡುವುದಾದರೆ ಅವರು ಮುಂದಿನ ದಿನ ಅಪಾಯಕಾರಿಗಳಾಗುತ್ತಾರೆ ಎಂದರು.
ರೈಲ್ವೆ ಸ್ಟೇಷನ್ನಲ್ಲಿ ನಮಾಜ್ಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಹುಬ್ಬಳ್ಳಿಯಲ್ಲೇ ಬಾಂಬ್ಗಳು ಸಿಕ್ಕರೂ ಇನ್ನೂ ಅವರನ್ನ ಹಿಡಿಯೋಕೆ ಸರ್ಕಾರಕ್ಕೆ ಆಗಿಲ್ಲ. ಹಿಜಾಬ್ ಅನ್ನೋದು ಇಲ್ಲಿಯವರೆಗೂ ಹೋಗಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಜಾಬ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ
ಹಿಜಾಬ್ಗಾಗಿ ಮುಸ್ಲಿಂ ವಿದ್ಯಾರ್ಥಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ವಾದ ಮಾಡಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಉಡುಪಿಯ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಸಂವಿಧಾನದಡಿ ಧಾರ್ಮಿಕ ಹಕ್ಕುಗಳನ್ನು ನೀಡಲಾಗಿದೆ. ಹಿಜಾಬ್ ಧರಿಸುವುದೂ ಧಾರ್ಮಿಕ ಹಕ್ಕಿನ ಭಾಗ ಆಗಿದೆ. ಆದರೆ ಹಿಜಾಬ್ ಧರಿಸಲು ಕಾಲೇಜು ಅನುಮತಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಮನವಿ ಮಾಡಿದ್ದಾರೆ.
ಉಡುಪಿಯ ಸರ್ಕಾರಿ ಮಹಿಳಾ ಕಾಲೇಜು ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸೋಮವಾರ ಕಾಲೇಜಿನಲ್ಲಿ ಸಭೆ ನಡೆಸಲಾಗಿತ್ತು. ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರು ಕಾಲೇಜಿನ ಆಡಳಿತ ಮಂಡಳಿ, ಡಿಡಿಪಿಯು ಸಭೆಯಲ್ಲಿ ಭಾಗಿ ಆಗಿದ್ದರು. ಒಂದೂವರೆ ತಿಂಗಳುಗಳ ಕಾಲ ಈ ವಿವಾದ ನಡೆಯಿತು. ಹಿಜಾಬ್ ಧರಿಸದೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ ಇದೆ. ಕಾಲೇಜಿಗೆ ಬರದಿದ್ದರೆ ಆನ್ಲೈನ್ ಕ್ಲಾಸ್ ಅವಕಾಶ ಮಾಡಲಾಗಿದೆ. ಇನ್ನು ವಿದ್ಯಾರ್ಥಿಗಳು ಹೆಸರಿಗಾಗಿ ಹಠ ಮಾಡುವುದು ಸರಿಯಲ್ಲ. ಹಿಜಾಬ್ಗೆ ನಮ್ಮ ವಿರೋಧ ಇಲ್ಲ ಅದು ಇಸ್ಲಾಂನ ಪದ್ಧತಿ. ಶರಿಯತ್ ಆಧಾರಿತ ರಾಷ್ಟ್ರ ಬೇರೆ, ಪ್ರಜಾಪ್ರಭುತ್ವ ರಾಷ್ಟ್ರ ಬೇರೆ. ಭಾರತದಲ್ಲಿ ಸರ್ಕಾರದ ಆದೇಶ ಪಾಲಿಸಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ ಹೇಳಿಕೆ ನೀಡಿದ್ದರು.
ಐವರು ಹಿಜಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಂತದಲ್ಲಿ ಹಿಜಾಬ್ಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಸರಕಾರ, ಸಮಿತಿ ತೀರ್ಮಾನ ಮಾಡಿದಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ಬರಬೇಕು. ಎಲ್ಲಾ ವಿಚಾರಗಳನ್ನು ಪೋಷಕರಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ತರಗತಿಯಲ್ಲಿ ಹಿಜಾಬ್ ಧರಿಸಿ ಪಾಠ ಕೇಳುವ ಅವಕಾಶ ಇಲ್ಲ. ಮನೆಯ ಪುರುಷರ ಜೊತೆ ಮಾತನಾಡಿ ತೀರ್ಮಾನ ಎಂದು ಪೋಷಕರು ಹೇಳಿದ್ದಾರೆ. ಹಿಜಾಬ್ ತೆಗೆದು ಕ್ಲಾಸಿಗೆ ಬರುವುದಾದರೆ ನಾಳೆಯಿಂದ ಬನ್ನಿ. ನಾಳೆಯಿಂದ ಯಾವುದೇ ಕಾಲೇಜು ಆವರಣದಲ್ಲಿ ಗೊಂದಲ ನಿರ್ಮಾಣಕ್ಕೆ ಅವಕಾಶವಿಲ್ಲ. ಮಾಧ್ಯಮ, ಸಂಘಸಂಸ್ಥೆ, ಸಂಘಟನೆಗೆ ಪ್ರವೇಶ ಇಲ್ಲ ಎಂದು ತಿಳಿಸಲಾಗಿತ್ತು.
ಎರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಕಾಲೇಜಿನ ಬೇರೆ ಮಕ್ಕಳಿಂದ ಪೋಷಕರಿಂದ ದೂರುಗಳು ಬಂದಿವೆ. ಮನವಿ ಕೊಡುವುದಿದ್ದರೆ ಡಿಸಿಗೆ ಕೊಡಿ ಕಾಲೇಜಿಗೆ ಯಾರೂ ಬರುವಂತಿಲ್ಲ. ಶಿಸ್ತು ಪಾಲಿಸುವವರು ಕಾಲೇಜಿಗೆ ಬರಬಹುದು ಇನ್ನು. ಗೊಂದಲಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಭಟ್ ಹೇಳಿಕೆ ನೀಡಿದ್ದರು.