ಭದ್ರಾ ಮೇಲ್ದಂಡೆ ಕಾಮಗಾರಿ ವೇಗ ಹೆಚ್ಚಿಸಿ: ಸಚಿವ ರಮೇಶ್‌ ಜಾರಕಿಹೊಳಿ ಸೂಚನೆ

Kannadaprabha News   | Asianet News
Published : May 13, 2020, 11:15 AM IST
ಭದ್ರಾ ಮೇಲ್ದಂಡೆ ಕಾಮಗಾರಿ ವೇಗ ಹೆಚ್ಚಿಸಿ: ಸಚಿವ ರಮೇಶ್‌ ಜಾರಕಿಹೊಳಿ ಸೂಚನೆ

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ನಿಖರವಾದ ಲಿಖಿತ ದೂರುಗಳು ಬಂದಲ್ಲಿ ಅವುಗಳ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ತರೀಕೆರೆ(ಮೇ.13): ಬಯಲುಸೀಮೆಯ ಕೆರೆಗಳಿಗೆ ನೀರು ತುಂಬಿಸುವುದರೊಂದಿಗೆ ಆ ಭಾಗದಲ್ಲಿ ಅಂರ್ತಜಲ ಹೆಚ್ಚಿಸಿ ಕುಡಿಯುವ ನೀರು ಸೇರಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿಯ ವೇಗವನ್ನು ಹೆಚ್ಚಿಸಿ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚಿಸಿದರು.

ಅಜ್ಜಂಪುರ ತಾಲೂಕಿನ ಭದ್ರಾ ಮೇಲ್ದಂಡೆಯ ವೈ-ಜಂಕ್ಷನ್‌ ಕಾಮಗಾರಿ ಹಾಗೂ ಹನಿ ನೀರಾವರಿ ಯೋಜನೆಯ ಪಂಪ್‌ಹೌಸ್‌, ಭದ್ರಾ ಚಾನಲ್‌ನ ರೈಲ್ವೆ ಕ್ರಾಸಿಂಗ್‌ ಕಾಮಗಾರಿ, ಟೀ ನರಸೀಪುರದ ಪಂಪ್‌ಹೌಸ್‌ ಹಾಗೂ ಬೆಟ್ಟತಾವರೆಕೆರೆಯ ಹತ್ತಿರದ ಜಾಕ್ವೆಲ್‌ ಕಾಮಗಾರಿಯನ್ನು ಮಂಗಳವಾರ ವೀಕ್ಷಣೆ ನಡೆಸಿ ಅವರು ಮಾತನಾಡಿದರು.

ಬಯಲು ಸೀಮೆ ಭಾಗದ ಜನರಿಗೆ ಕುಡಿಯುವ ನೀರು ಸೇರಿ ಕೃಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ತುಂಗಾ ನದಿಯಿಂದ 17.4 ಟಿಎಂಸಿ ಹಾಗೂ ಭದ್ರಾದಿಂದ 12.5 ಟಿಎಂಸಿ ನೀರು ಸೇರಿ ಒಟ್ಟು 29.9 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

ಈ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಡ್ಡಿಯಾಗಿರುವ ಭೂ ಸ್ವಾಧೀನ ಪ್ರಕ್ರಿಯೆ, ರೈಲ್ವೆ ಕ್ರಾಸಿಂಗ್‌ ಸೇತುವೆ ಕಾಮಗಾರಿ ಸೇರಿ ಮತ್ತಿತರ ಅಡಚಣೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿ ಕಾಮಗಾರಿ ವೇಗ ಹೆಚ್ಚಿಸಲಾಗುವುದು. ಈಗಿರುವ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರತಿನಿಧಿಗಳು ಹಾಗೂ ರೈತರೊಂದಿಗೆ ಚರ್ಚಿಸಿ, ಬಗೆಹರಿಸಲಾಗುವುದು ಎಂದು ಹೇಳಿದರು.

ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನಲ್ಲಿ 20,150 ಹೆಕ್ಟರ್‌ ಜಮೀನಿನ ಹನಿ ನೀರಾವರಿ ಯೋಜನೆ ಹಾಗೂ 79 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ. ಇದರಿಂದಾಗಿ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ನಿಖರವಾದ ಲಿಖಿತ ದೂರುಗಳು ಬಂದಲ್ಲಿ ಅವುಗಳ ಆಧಾರದ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕ ಡಿ.ಎಸ್‌.ಸುರೇಶ್‌ ಮಾತನಾಡಿ, ಕಳೆದ 10 ವರ್ಷಗಳ ಹಿಂದೆಯೇ ಈ ಕಾಮಗಾರಿಯನ್ನು ಪ್ರಾರಂಬಿಸಲಾಗಿದೆ. ಆದರೆ, ಈ ಯೋಜನೆಯ ಕಾಮಗಾರಿಗಳು ಕುಂಠಿತಗೊಂಡಿದೆ. ಇದರ ವೇಗವನ್ನು ಹೆಚ್ಚಿಸಲು ಸಚಿವರ ಗಮನಕ್ಕೆ ತರಲಾಗಿದೆ ಎಂದರು. ಇದೇ ವೇಳೆ ರೈತರು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ವಿತರಿಸಲಾಗುತ್ತಿರುವ ಪರಿಹಾರದ ಹಣ ಬಹಳ ಕಡಿಮೆಯಾಗಿದೆ. ಚಾನಲ್‌ನ ಎರಡು ಬದಿಗಳಲ್ಲಿ ಮಣ್ಣು ಕುಸಿತ ಆಗುತ್ತಿದೆ. ಇದರಿಂದಾಗಿ ಅನಾನುಕೂಲವಾಗುತ್ತಿದೆ. ಈ ಸಮಸ್ಯೆ ಬಗ್ಗೆ ಒತ್ತು ನೀಡಬೇಕೆಂದು ಸಚಿವರ ಗಮನಕ್ಕೆ ತಂದರು.

ಇದೇ ಸಂದರ್ಭದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿಶೇಖರ್‌, ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣ್‌ ರಾವ್‌ ಪೇಶ್ವೆ, ಮುಖ್ಯ ಎಂಜಿನಿಯರ್‌ ರಾಘವನ್‌, ಅಧೀಕ್ಷಕ ಎಂಜಿನಿಯರ್‌ ವೇಣುಗೋಪಾಲ್‌, ಕಾರ್ಯಪಾಲಕ ಎಂಜಿನಿಯರ್‌ ಸುರೇಶ್‌ ಉಪಸ್ಥಿತರಿದ್ದರು.

ಫೆಬ್ರವರಿಗೆ ಕಾಲುವೆಗಳಲ್ಲಿ ನೀರು

2021ರ ಫೆಬ್ರವರಿ ವೇಳೆಗೆ ಭದ್ರಾ ಮೇಲ್ದಂಡೆ ಕಾಲುವೆಗಳಲ್ಲಿ ನೀರು ಹರಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಬೆಟ್ಟದಾವರೆಕೆರೆ ಬಳಿಯ ಭದ್ರಾ ಮೇಲ್ದಂಡೆ ಯೋಜನೆಯ ಪಂಪ್‌ಹೌಸ್‌-2 ಕಾಲುವೆ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌-19ನಿಂದ ಇಲಾಖೆಯ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಲಾಕ್‌ಡೌನ್‌ ಸಡಿಲಗೊಂಡಿದೆ. ಕಾಮಗಾರಿ ಆರಂಭಗೊಂಡಿದ್ದು, ಭದ್ರಾ ಮೇಲ್ದಂಡೆ ಕಾಲುವೆಗಳಲ್ಲಿ ಫೆಬ್ರವರಿ ವೇಳೆಗೆ ನೀರು ಹರಿಸಲಾಗುವುದು ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ