ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ| ಇಂದಿನಿಂದ ರೈತ ಸಂಘ, ಎಪಿಎಂಸಿ ವರ್ತಕರಿಂದ ಪ್ರತಿಭಟನೆ| ಎಂಎನ್‌ಸಿಗಳಿಗೆ ಅನುಕೂಲ| ಸಾವಿರಾರು ಮಂದಿ ಬೀದಿಗೆ: ಆತಂಕ
ಬೆಂಗಳೂರು(ಮೇ.13): ರೈತರಿಗೆ ಮಾರಕವಾಗುವ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲವಾಗುವ ಎಪಿಎಂಸಿ ಖಾಸಗೀಕರಣಗೊಳಿಸುವ ಸಂಬಂಧ ಸುಗ್ರೀವಾಜ್ಞೆ ತರಲು ಮುಂದಾಗಿದೆ ಎಂದು ಆಪಾದಿಸಿ, ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು, ಎಪಿಎಂಸಿ ವರ್ತಕರು ಬುಧವಾರದಿಂದ (ಮೇ 13) ರಾಜ್ಯಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿವೆ.
ರಾಜ್ಯದ ಎಲ್ಲ ಎಪಿಎಂಸಿ ವರ್ತಕರು ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ, ಹಾಗೆಯೇ ರಾಜ್ಯ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ವಿರೋಧ ವ್ಯಕ್ತಪಡಿಸಲಿದ್ದಾರೆ. ನಂತರದ ದಿನಗಳಲ್ಲಿ ಹಂತ ಹಂತವಾಗಿ ಹೋರಾಟವನ್ನು ಇನ್ನಷ್ಟುತೀವ್ರಗೊಳಿಸಲು ಉದ್ದೇಶಿಸಿದ್ದಾರೆ.
ಕೇಂದ್ರದಿಂದ ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ: ಮಾಜಿ ಸಿಎಂ ಸಿದ್ದು ಕಿಡಿ
ಕೇಂದ್ರ ಸರ್ಕಾರ ಎಪಿಎಂಸಿಗಳನ್ನು ಖಾಸಗೀಕರಣಗೊಳಿಸುವ ಕಾಯ್ದೆ ಜಾರಿಗೆ ತರುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಿದ ಬೆನ್ನಲ್ಲೇ ಖಾಸಗೀಕರಣಗೊಳಿಸುವ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಹೊಸ ಕಾಯ್ದೆ ಅನುಷ್ಠಾನಗೊಂಡರೆ ರಾಜ್ಯದಲ್ಲಿರುವ ಸುಮಾರು 177 ಎಪಿಎಂಸಿಯನ್ನು ಅವಲಂಬಿಸಿರುವ ನೂರಾರು ಕುಟುಂಬಗಳ ಸಾವಿರಾರು ಮಂದಿ ಬೀದಿಗೆ ಬರಲಿದ್ದಾರೆ. ರೈತರು, ವರ್ತಕರು ಸಂಕಷ್ಟಕ್ಕೆ ಬೀಳಲಿದ್ದಾರೆ ಎಂದು ಯಶವಂತಪುರ ಎಪಿಎಂಸಿ ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ರೈತರು ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್‌ನಲ್ಲೇ ಮಾರಾಟ ಮಾಡಬೇಕು ಎಂಬ ನಿಯಮವಿದೆ. ಈ ಕಾಯ್ದೆ ಪ್ರಕಾರ ರೈತರ ಬಳಿ ಟ್ರೇಡ್ ಕಾರ್ಡ್ ಇರಲಿ ಅಥವಾ ಇಲ್ಲದಿರಲಿ ಉತ್ಪನ್ನ ಖರೀದಿಸುತ್ತಾರೆ. ಹಳೆಯ ಕಾಯ್ದೆಯಲ್ಲಿ ರೈತರ ಪರವಾದ ಸಾಕಷ್ಟುನಿಯಮಗಳು ಇವೆ. ಆದರೆ ಈ ಕಾಯ್ದೆಗೆ ತಿದ್ದುಪಡಿ ತಂದರೆ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಬಹುದು ಎಂಬುದಾಗಿದೆ. ಇದು ನೆಪ ಮಾತ್ರವಾಗಿದ್ದು ರೈತರ ಮುಖವಾಡವಿಟ್ಟು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಕಾನೂನು ರೂಪಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯದ ಉನ್ನತ ಅಧಿಕಾರಿಗಳು ಕಾರ್ಪೊರೇಟ್ ಲಾಬಿಗೆ ಮಣಿಯುತ್ತಿದ್ದಾರೆ ಎಂದು ಎಫ್‌ಕೆಸಿಸಿಐ ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾರಂಭಿಕ ಹೋರಾಟ:
ಎಪಿಎಂಸಿ ವರ್ತಕರು ಸಂಸ್ಕರಿಸಿದ ಸರಕುಗಳನ್ನು ಶೇ.1.5ರಷ್ಟುಮಾರುಕಟ್ಟೆಶುಲ್ಕ(ಸೆಸ್) ಪಾವತಿಸಿ ಸರ್ಕಾರದ ನಿಯಮಗಳಂತೆ ಮಾರಾಟ ಮಾಡುತ್ತಾರೆ. ಆದರೆ ಎಪಿಎಂಸಿ ಹಿತಕ್ಕೆ ಧಕ್ಕೆ ತರಲು ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರಕ್ಕೆ ಯಾವುದೇ ಸೆಸ್ ಕಟ್ಟದೆ ಸಂಸ್ಕರಿಸಿದ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಮಾರಾಟ ಮಾಡಲು ಸಿದ್ಧತೆ ನಡೆಸಿವೆ. ಈ ಸಂಬಂಧ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಮುಂದಿನ ಸಚಿವ ಸಂಪುಟದಲ್ಲಿ ರಾಜ್ಯ ಸರ್ಕಾರದಿಂದ ಸುಗ್ರೀವಾಜ್ಞೆ ಹೊರಡಿಸಲು ತರಾತುರಿ ನಡೆಸಲಾಗುತ್ತಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಪಿಎಂಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ತಿರಸ್ಕಾರ!
ಎಪಿಎಂಸಿ ಖಾಸಗೀಕರಣ ವಿರೋಧಿಸಿ ಮೇ 13ರಿಂದಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಖಾಸಗೀಕರಣ ಪ್ರಕ್ರಿಯೆ ನಿಲ್ಲಿಸುವಂತೆ ಪತ್ರ ಬರೆಯುವ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ಚಿಂತನೆ ರಾಜ್ಯ ಸರ್ಕಾರದಲ್ಲ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ಬಗ್ಗೆ ಚಿಂತನೆ ನಡೆಸಲಾಗಿದ್ದು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ.
- ಎಸ್.ಟಿ.ಸೋಮಶೇಖರ್, ಸಹಕಾರ ಸಚಿವರು
ಕಾಯ್ದೆಯಲ್ಲೇನಿದೆ?
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಪ್ರಮುಖವಾಗಿ ಹಾಲಿ ಮಾರುಕಟ್ಟೆಗಳ ಮೇಲೆ ಎಂಪಿಎಂಸಿಗೆ ಇರುವ ನಿಯಂತ್ರಣ ಇಲ್ಲದಂತಾಗುತ್ತದೆ. ರೈತರು ಸಹ ಎಪಿಎಂಸಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತರದೇ ಖಾಸಗಿಯವರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುತ್ತದೆ. ನಿರ್ದಿಷ್ಟಪಡಿಸಿದ ಕೃಷಿ ಉತ್ಪನ್ನಗಳನ್ನು ಯಾರು ಎಲ್ಲಿ ಬೇಕಾದರೂ ಖರೀದಿಸುವ ಹಾಗೂ ಮಾರಾಟ ಮಾಡಲು ಈ ತಿದ್ದುಪಡಿ ಅವಕಾಶ ಮಾಡಿಕೊಡುತ್ತದೆ.ರೈತರು ತಮ್ಮ ಉತ್ಪನ್ನಗಳನ್ನು ಮನೆ ಬಾಗಿಲಿಗೆ ಮಾರಾಟ ಮಾಡುವಂತಹ ಅವಕಾಶವನ್ನು ಸಹ ಕಲ್ಪಿಸಲಿದೆ.
ಈವರೆಗಿನ ಕಾಯ್ದೆ ಪ್ರಕಾರ ರೈತರು ಕಡ್ಡಾಯವಾಗಿ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗುತ್ತಿತ್ತು. ಅಲ್ಲದೇ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುವ ವ್ಯಾಪಾರಿಗಳು ಕೃಷಿ ಉತ್ಪನ್ನಗಳ ಪ್ರಮಾಣಕ್ಕೆ ಅನುಗುಣವಾಗಿ ಸೆಸ್ ಕಟ್ಟುತ್ತಿದ್ದರು. ಇದರಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಬರುತ್ತಿತ್ತು. ಈಗ ಈ ಮೊತ್ತ ಕಡಿಮೆಯಾಗಲಿದೆ.