ರಾಜ್ಯದಲ್ಲಿ ಸರ್ಕಾರದಿಂದಲೇ ಸ್ಮಾರ್ಟ್‌ ದಂಧೆ, 'ಮೀಟರ್‌' ಹೆಸರಲ್ಲಿ ಜನರಿಂದ ಹಣ ಲೂಟಿ ಮಾಡ್ತಿರೋದು ಹೇಗೆ?

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ 15,568 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕೆಟಿಟಿಪಿ ನಿಯಮ ಉಲ್ಲಂಘಿಸಿ ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಲಾಭ ಮಾಡಿಕೊಡಲಾಗಿದೆ ಎಂದು ದೂರಲಾಗಿದೆ.

Smart Meter 15500 crore scam in awarding contract In Karnataka

ಬೆಂಗಳೂರು (ಮಾ.22): ರಾಜ್ಯದಲ್ಲಿ ಎಸ್ಕಾಂಗಳು ಕೆಟಿಟಿಪಿ ನಿಯಮ ಗಾಳಿಗೆ ತೂರಿ ರಾಜಶ್ರೀ ಎಲೆಕ್ನಿಕಲ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯ ಜೇಬು ತುಂಬಿಸಲು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮತ್ತು ನಿರ್ವಹಣೆಗೆ ದುಬಾರಿ ದರ ನಿಗದಿ ಮಾಡಿವೆ. ಪರಿಣಾಮ ಎಸ್ಕಾಂಗಳು ಹಾಗೂ ಸಾರ್ವಜನಿಕರಿಗೆ ಸೇರಿದ 15,568 ಕೋಟಿ ರು. ಹಣ ಲೂಟಿಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.ತಮ್ಮ ಆಪ್ತರಲ್ಲಿ ಒಬ್ಬರಾದ ಕೆ.ಜೆ.ಜಾರ್ಜ್ ಅವರ ಮೂಗಿನ ಅಡಿಯಲ್ಲೇ ಇಷ್ಟು ಬೃಹತ್ ಹಗರಣ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮ್ಮನಿರುವುದು ಯಾಕೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ.

 

Latest Videos

ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 900 ರು. ಸಹಾಯ ಧನ ನೀಡುತ್ತದೆ. ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರ ಸಂಸ್ಥೆಗೆ ಆರಂಭದಲ್ಲಿ ಸಹಾಯಧನವಾದ 900 ರು. ಮಾತ್ರ ನೀಡಲಾಗುತ್ತದೆ. ರಾಜ್ಯದಲ್ಲಿ ಆರಂಭದಲ್ಲೇ ಗುತ್ತಿಗೆದಾರರ ಸಂಸ್ಥೆಗೆ ಸ್ಮಾರ್ಟ್ ಮೀಟರ್‌ನ ಪೂರ್ಣ ಮೊತ್ತ 8510 ರು. ಪಾವತಿಯಾಗುವಂತೆ ಮಾಡಲಾಗಿದೆ. ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರರ ಆರಂಭದಲ್ಲಿ 900 ರು. ಪಡೆದ ನಂತರ ಉಳಿದ ಸ್ಮಾರ್ಟ್ ಮೀಟರ್ ಮೊತ್ತವನ್ನು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚದಲ್ಲಿ (ಒ ಆ್ಯಂಡ್ ಎಂ) ಸೇರಿಸಿ ಪ್ರತಿ ತಿಂಗಳು 65 ರು.ನಿಂದ 90 ವರೆಗೆ 10 ವರ್ಷಗಳವರೆಗೆ ಪಡೆಯಬೇಕು.

ಅಂದರೆ ಗ್ರಾಹಕರಿಗೆ ಹೊರೆಯಾಗದಂತೆ ಈ ಮೊತ್ತ ಸಂಗ್ರಹಿಸುವ ವ್ಯವಸ್ಥೆ ರೂಪಿಸಲಾಗಿದೆ. ಆದರೆ, ರಾಜ್ಯದಲ್ಲಿ ಸ್ಮಾರ್ಟ್‌ ಮೀಟರ್‌ಗೆ ಸರಾಸರಿ 8,510 ರು. ಮೊದಲ ದಿನವೇ ಸಾರ್ವಜನಿಕರ ಜೇಬಿನಿಂದ ಕಿತ್ತುಕೊಳ್ಳುವುದು ಮಾತ್ರವಲ್ಲ. ಮೀಟರ್‌ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ ಪ್ರತಿ ತಿಂಗಳಿಗೆ 71 ರು.ಗಳಂತೆ 120 ತಿಂಗಳಿಗೆ (10 ವರ್ಷ) ಸೇರಿ ಪ್ರತಿ ಮೀಟರ್‌ಗೆ ಬರೋಬ್ಬರಿ 17,000 ರು. ಸಂಗ್ರಹಿಸಿದಂತಾಗುತ್ತದೆ. ಅಂದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪ್ರತಿ ಮೀಟರ್‌ಗೆ 9,260 ರು. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದು, ತನ್ಮೂಲಕ 10 ವರ್ಷದಲ್ಲಿ 15,568 ಕೋಟಿ ರು. ಅನ್ನು ಟೆಂಡರ್‌ದಾರರ ಜೇಬಿಗೆ ತುಂಬಲಾಗುತ್ತಿದೆ.

ಮಜಾ ಅಂದರೆ ಇಷ್ಟು ದೊಡ್ಡ ಮೊತ್ತ ಗುತ್ತಿಗೆದಾರನಿಗೆ ಸಂಪೂರ್ಣವಾಗಿ ವೈಟ್‌ ಮನಿಯಾಗಿಯೇ ಲಭಿಸುತ್ತದೆ. ಈ ರೀತಿ ಗುತ್ತಿಗೆದಾರ ಸಂಸ್ಥೆಗೆ ದೊಡ್ಡ ಮೊತ್ತದ ಲಾಭ ಮಾಡಿಕೊಟ್ಟಿರುವ ಈ ವೈಟ್‌ ಕಾಲರ್ ಹಗರಣದ ಹಿಂದೆ ಯಾವ ಕೈಗಳು ಕೆಲಸ ಮಾಡಿವೆ ಎಂಬುದು ಪತ್ತೆಯಾಗಬೇಕಾದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಮಾತ್ರವೇ ಗ್ರಾಹಕರ ಲೂಟಿ?: ಬೇರೆ ರಾಜ್ಯಗಳಲ್ಲಿ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟರೆ ರಾಜ್ಯದಲ್ಲಿ ಗ್ರಾಹಕರ ಲೂಟಿ ಮಾಡಲಾಗಿದೆ ಎಂಬುದು ಸ್ಪಷ್ಟ. ಉದಾಹರಣೆಗೆ ಕೇರಳ, ಉತ್ತರ ಪ್ರದೇಶ, ಗುಜರಾತ್, ಅಸ್ಸಾಂ ಎಲ್ಲಾ ಕಡೆಯೂ ಮೀಟರ್‌ ದರ 900 ರು. ಮಾತ್ರ ಇದೆ. ಇನ್ನು ನಿರ್ವಹಣಾ ವೆಚ್ಚವೂ ಪ್ರತಿ ತಿಂಗಳಿಗೆ 50.29 ರು.ಗಳಿಂದ 76.1 ರು. ಮಾತ್ರ ಇದೆ. ಓಡಿಶಾದಂತಹ ರಾಜ್ಯದಲ್ಲಿ ಓ ಆ್ಯಂಡ್ ಎಂ ಮೊತ್ತವನ್ನು ಕೇವಲ 5 ವರ್ಷಕ್ಕೆ ಸಂಗ್ರಹಿಸುವಂತೆ ಮಾಡುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡಲಾಗಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಿಗೆ ಹೋಲಿಸಿದರೂ ಹಿಮಾಚಲ ಪ್ರದೇಶದಲ್ಲಿ 900 ರು. ಮೀಟರ್‌ ದರ ಹಾಗೂ ನಿರ್ವಹಣೆ ದರ ಮಾಸಿಕ 68.4 ರು. ಮಾತ್ರ ಇದೆ. ತೆಲಂಗಾಣದಲ್ಲಿ 900 ರು. ಹಾಗೂ 66.5 ರು. ಇದೆ. ಆದರೆ ರಾಜ್ಯದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್‌ ಮೀಟರ್‌ಗೆ ಸರಾಸರಿ 8,510 ರು. ಸಂಗ್ರಹಿಸುವ ಜತೆಗೆ ಪ್ರತಿ ತಿಂಗಳು ಸಾಫ್ಟ್‌ವೇರ್‌ ನಿರ್ವಹಣಾ ವೆಚ್ಚ 71 ರು. ನಿಗದಿ ಮಾಡಲಾಗಿದೆ ಎಂದು ಬಿಜೆಪಿ ನಾಯಕರು ದಾಖಲೆ ಬಿಡುಗಡೆ ಮಾಡಿದ್ದಾರೆ.

ಹೆಜ್ಜೆ ಹೆಜ್ಜೆಗೂ ಲೂಟಿ-ಬಿಜೆಪಿ ಆರೋಪ: ಇದಷ್ಟೇ ಅಲ್ಲ, ರಾಜಶ್ರೀ ಎಲೆಕ್ಟ್ರಿಕಲ್ಸ್‌ಗೆ ಸ್ಮಾರ್ಟ್‌ ಮೀಟರ್‌ ಮಾರಾಟ ಮಳಿಗೆಗೆ ಪ್ರತಿ ಚದರ ಅಡಿಗೆ ಗ್ರಾಮೀಣ ಭಾಗದಲ್ಲಿ 45 ರು, ನಗರ ಪ್ರದೇಶದಲ್ಲಿ 110 ರು. ಬಾಡಿಗೆ ಎಸ್ಕಾಂಗಳೇ ಪಾವತಿಸಬೇಕು. ಅಲ್ಲದೆ, ಕಂಪೆನಿಯ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪ್ರತಿ ತಿಂಗಳು 30,159 ರು. ವೇತನವನ್ನೂ ಎಸ್ಕಾಂಗಳೇ ಪಾವತಿಸಬೇಕು. ಪ್ರತಿ ತಿಂಗಳು ನಿರ್ವಹಣಾ ಶುಲ್ಕದ ಹೆಸರಿನಲ್ಲಿ 125 ರು. ಹಾಗೂ ಸಾಫ್ಟ್‌ವೇರ್‌ ನಿರ್ವಹಣೆಗೆ 71 ರು. ಕೂಡ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಸಂಗ್ರಹಿಸಲಿದೆ.

ಕಂಬ ತಯಾರಿ ಕಂಪನಿಗೆ ಮೀಟರ್‌ ಹೊಣೆ: ಇಷ್ಟೆಲ್ಲ ಸೌಲಭ್ಯ ಪಡೆದು ಜೇಬು ತುಂಬಿಸಿಕೊಳ್ಳುತ್ತಿರುವ ಕಂಪೆನಿಗೆ ಸ್ಮಾರ್ಟ್‌ ಮೀಟರ್‌ ಉತ್ಪಾದನೆಯ ಘಟಕವೇ ಇಲ್ಲ. ವಿದ್ಯುತ್‌ ಕಂಬ ಉತ್ಪಾದನೆಯ ಈ ಕಂಪೆನಿಗೆ ಕೆಟಿಟಿಪಿ ನಿಯಮಗಳನ್ನು ಉಲ್ಲಂಘಿಸಿ ಸ್ಮಾರ್ಟ್‌ ಮೀಟರ್‌ ಪೂರೈಕೆ ಟೆಂಡರ್‌ ನೀಡಲಾಗಿದೆ. ಈ ಮೂಲಕ ಬರೋಬ್ಬರಿ 15,568 ಕೋಟಿ ರು. ಅವ್ಯವಹಾರ ನಡೆದಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

15,568 ಕೋಟಿ ರು. ಅವ್ಯವಹಾರ ಹೇಗೆ?: ರಾಜ್ಯದಲ್ಲಿ ಪ್ರತಿ ಸ್ಮಾರ್ಟ್‌ ಮೀಟರ್‌ಗೆ ಸರಾಸರಿ 8,510 ರು. ಸಂಗ್ರಹವಾಗಲಿದ್ದು, ಮೀಟರ್‌ ನಿರ್ವಹಣಾ ವೆಚ್ಚ ಪ್ರತಿ ತಿಂಗಳಿಗೆ 71 ರು.ಗಳಂತೆ 120 ತಿಂಗಳಿಗೆ (10 ವರ್ಷ) ಸೇರಿ ಪ್ರತಿ ಮೀಟರ್‌ಗೆ 17,000 ರು. ದರ ಬೀಳುತ್ತದೆ. ಆದರೆ ಬೇರೆ ರಾಜ್ಯಗಳಲ್ಲಿ ಮೀಟರ್‌ ದರ 900 ರು. ಹಾಗೂ ನಿರ್ವಹಣಾ ವೆಚ್ಚ 57 ರು. ಸೇರಿ 10 ವರ್ಷಕ್ಕೆ 7,740 ರು. ಮಾತ್ರ ಆಗುತ್ತದೆ. ಅಂದರೆ ರಾಜ್ಯದಲ್ಲಿ ಪ್ರತಿ ಮೀಟರ್‌ಗೆ 9,260 ರು. ಹೆಚ್ಚುವರಿಯಾಗಿ ಪಾವತಿಸಿದಂತಾಗಿದೆ.

ಎಸ್ಕಾಂಗಳ ವ್ಯಾಪ್ತಿಯಲ್ಲಿ ಮೊದಲ ವರ್ಷ ಅಳವಡಿಕೆ ಮಾಡುತ್ತಿರುವ 8 ಲಕ್ಷ ಮೀಟರ್‌ಗಳಿಗೆ ಪ್ರತಿ ಮೀಟರ್‌ಗೆ 9,260 ರು.ಗಳಂತೆ ಮೊದಲ ವರ್ಷವೇ ಪಾವತಿಯಾಗಲಿದೆ. ಆದರೆ ಬೇರೆ ರಾಜ್ಯಗಳಲ್ಲಿ 900 ರು. ಮಾತ್ರ ಪಾವತಿಸಿ ಉಳಿದ ಹಣವನ್ನು ಮಾಸಿಕ ಶುಲ್ಕದಲ್ಲಿ ಸಂಗ್ರಹಿಸಲಾಗುತ್ತದೆ.

8 ಲಕ್ಷ ಮೀಟರ್‌ಗಳಿಗೆ ಪ್ರತಿ ಮೀಟರ್‌ಗೆ 900 ರು. ಕಳೆದರೆ 8360 ರು. ಮೊದಲ ವರ್ಷವೇ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪೆನಿ ಪಾಲಾಗಲಿದೆ. ಈ ಹಣಕ್ಕೆ ಶೇ.12ರಷ್ಟು ಬಡ್ಡಿ ಲೆಕ್ಕ ಹಾಕಿದರೂ 10 ವರ್ಷಗಳಿಗೆ ಪ್ರತಿ ಮೀಟರ್‌ಗೆ 10,200 ರು. ಬಡ್ಡಿ ಸಂಗ್ರಹವಾಗಲಿದೆ. ಈ ಬಡ್ಡಿ ಹಣದಿಂದ 10 ವರ್ಷಗಳ ಅವಧಿಗೆ ಎಸ್ಕಾಂಗಳಿಗೆ 8,160 ಕೋಟಿ ರು. ನಷ್ಟ ಉಂಟಾಗಲಿದೆ.

ಹೀಗೆ ಮೀಟರ್‌, ನಿರ್ವಹಣಾ ಶುಲ್ಕ, ಬಡ್ಡಿ ಎಲ್ಲಾ ಸೇರಿ ಎಲ್ಲಾ ಎಸ್ಕಾಂಗಳು ಹಾಗೂ ಸಾರ್ವಜನಿಕರಿಗೆ ಬರೋಬ್ಬರಿ 15,568 ಕೋಟಿ ರು. ಹೊರೆ ಆಗಲಿದೆ. ಇದು ವ್ಯವಸ್ಥಿತ ಲೂಟಿ ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ಪದಾಧಿಕಾರಿಯೊಬ್ಬರು ಆರೋಪ ಮಾಡಿದ್ದಾರೆ.

ಕೆಟಿಟಿಪಿ ಕಾಯ್ದೆ ಸ್ಪಷ್ಟ ಉಲ್ಲಂಘನೆ: ಬೆಸ್ಕಾಂ ವ್ಯಾಪ್ತಿಯಲ್ಲೇ ರಾಜಶ್ರೀ ಎಲೆಕ್ಟ್ರಿಕಲ್ಸ್‌ ಕಂಪೆನಿಯ ಅಂದಾಜು ಟೆಂಡರ್‌ ವೆಚ್ಚ 4,800 ಕೋಟಿ ರು. ಆಗಲಿದೆ. ಆದರೆ ಟೆಂಡರ್‌ನಲ್ಲಿ 571 ಕೋಟಿ ರು. ಎಂದು ನಮೂದಿಸಿ ಬಳಿಕ 997.23 ಕೋಟಿ ರು. ಎಂದು ತಿದ್ದುಪಡಿ ಮಾಡಲಾಗಿದೆ. ಟೆಂಡರ್‌ ಒಪ್ಪಂದ ಮಾಡಿಕೊಂಡಿರುವ ಮೊತ್ತದ ಶೇ.30 ರಷ್ಟು ಹಣಕಾಸು ಸಾಮರ್ಥ್ಯ ತೋರಿಸಬೇಕು. ಅಂದರೆ 1,440 ಕೋಟಿ ರು. ಹಣ ಹೊಂದಿರುವುದಾಗಿ ಸಾಬೀತುಪಡಿಸಬೇಕಾಗಿತ್ತು. ಆದರೆ ವಾರ್ಷಿಕ ಪಾವತಿಯ ಶೇ.25ರಷ್ಟು ಎಂದು ಮಾಡಿ ಕೇವಲ 107 ಕೋಟಿ ರು. ಹಣಕಾಸು ಸಾಮರ್ಥ್ಯ ಮಾತ್ರ ಕೇಳಲಾಗಿದೆ. ಟೆಂಡರ್‌ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಿಲ್ಲ. ಆಡಳಿತ ಮಂಡಳಿಯಿಂದ ಅನುಮತಿಯನ್ನೂ ಪಡೆದಿಲ್ಲ.

ಪೈಲಟ್‌ ಯೋಜನೆ ಅನುಷ್ಠಾನ ಮಾಡಿಲ್ಲ. ಕೆಇಆರ್‌ಸಿ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ ಎಂದು ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಬೆಂಗಳೂರಿನ ಮಾಜಿ ಅಧ್ಯಕ್ಷ ಸುರೇಶ್ ಅಪ್ಪಿ ಆರೋಪಿಸಿದ್ದಾರೆ.


ಮೀಟರ್ ಹೆಸರಲ್ಲಿ ಹಣ ಲೂಟಿ ಹೇಗೆ?

  1. ಕೇಂದ್ರ ಸರ್ಕಾರದಿಂದ ಪ್ರತಿ ಸ್ಮಾರ್ಟ್ ಮೀಟರ್‌ಗೆ ನೀಡುವ ಸಹಾಯಧನ 900 ರು.
  2. ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರರಿಗೆ ಆರಂಭಿಕ ಮೊತ್ತವಾಗಿ ಈ 900 ರು. ಹಣ ಪಾವತಿ
  3. ಉಳಿದ ಮೊತ್ತ ನಿರ್ವಹಣಾ ವೆಚ್ಚವಾಗಿ ಗ್ರಾಹಕರಿಂದ 10 ವರ್ಷ ಮಾಸಿಕ 70 ರು. ಸಂಗ್ರಹ
  4. ಆದರೆ ನಮ್ಮ ರಾಜ್ಯದಲ್ಲಿ 900 ಸಬ್ಸಿಡಿ ಜತೆ ಗ್ರಾಹಕರಿಂದ ₹7610 ಸಂಗ್ರಹಿಸಿ ಪಾವತಿ
  5. ಈ ಮೂಲಕ ಆರಂಭದಲ್ಲೇ ಒಟ್ಟು 8,510 ರು. ಹಣ ಗುತ್ತಿಗೆದಾರರ ಜೇಬಿಗೆ
  6. ಮೀಟರ್, ನಿರ್ವಹಣಾ ಶುಲ್ಕ, ಬಡ್ಡಿಯಿಂದ 15,568 ಕೋಟಿ ಗ್ರಾಹಕರಿಂದ ಲೂಟಿ
vuukle one pixel image
click me!