
ಮೈಸೂರು (ಜೂ.12): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಮೈಸೂರಿನ ಕಲಾಮಂದಿರದಲ್ಲಿ ವಕೀಲರ ಸಂಘ ಪ್ರಸ್ತುತಪಡಿಸಿದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ವೀಕ್ಷಿಸಿದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್ ಮತ್ತು ಶಾಸಕ ಜಿ.ಟಿ.ದೇವೇಗೌಡ ನಾಟಕ ಪ್ರದರ್ಶನ ಉದ್ಘಾಟಿಸಿದರು. ಈ ನಾಟಕವನ್ನು ಸಿದ್ದರಾಮಯ್ಯ ಅವರೊಂದಿಗೆ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸಹ ವೀಕ್ಷಿಸಿದರು. ನಾಟಕ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸ್ವಲ್ಪ ಹೊತ್ತು ಕೂತು ನಾಟಕ ನೋಡಿದೆ.
ಬಹಳ ಖುಷಿಯಾಯ್ತು. ಹಿಂದೆ ಲಾಯರ್ ಆಗಿದ್ದಾಗ ಎಲ್ಲಾ ಕಡೆ ಹೋಗಿ ನಾಟಕ ನೋಡ್ತಿದ್ದೆ. ನಾನು ಲಾ ಕಾಲೇಜಿನಲ್ಲಿದ್ದಾಗ ಸಾಮಾಜಿಕ ನಾಟಕ ಮಾಡಿದ್ದೆ. ಯಮ ಧರ್ಮರಾಯನ ಸನ್ನಿಧಿ ಎಂಬ ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ. ಅದಕ್ಕೆ ನಾನು ಡಾಕ್ಟರ್ ಆಗಲಿಲ್ಲ ಎಂದು ಚಟಾಕಿ ಹಾರಿಸಿದರು. ಪೌರಾಣಿಕ ನಾಟಕಗಳಿಂದಲೇ ಡಾ. ರಾಜಕುಮಾರ್, ಎನ್‌ಟಿಆರ್ ಅಂತವರು ದೊಡ್ಡ ದೊಡ್ಡ ಕಲಾವಿದರಾದರು. ಇತ್ತೀಚೆಗೆ ಪೌರಾಣಿಕ ನಾಟಕಗಳ ಬಗ್ಗೆ ಆಸಕ್ತಿ ಕಮ್ಮಿಯಾಗ್ತಿದೆ. ಆಸಕ್ತಿ ಬರುವ ಹಾಗೆ ಮಾಡಬೇಕು. ಈಗ ವಕೀಲರ ಸಂಘದವರು ಪ್ರಾಕ್ಟೀಸ್ ಮಾಡಿ ನಾಟಕ ಮಾಡಿದ್ದಾರೆ. ಅದೇ ರೀತಿ ಎಲ್ಲರೂ ನಾಟಕ ಮಾಡುವ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್ ಶಾಸಕರಿಗೆ ಪತ್ರ!
ಆರ್‌ಎಸ್‌ಎಸ್‌ಗೆ ದಲಿತರನ್ನೇಕೆ ಮುಖ್ಯಸ್ಥರನ್ನಾಗಿ ಮಾಡಿಲ್ಲ: ಆರ್‌ಎಸ್‌ಎಸ್ ಜನ್ಮ ತಾಳಿ 97 ವರ್ಷ ಆಯಿತು. ಈ ವರೆಗೂ ದಲಿತರು, ಹಿಂದುಳಿದವರನ್ನು ಅದರ ಮುಖ್ಯಸ್ಥ(ಸರಸಂಘಚಾಲಕ) ಮಾಡಿಲ್ಲ. ಈ ಪ್ರಶ್ನೆಯನ್ನೇ ನಾನು ಚಲುವಾದಿ ನಾರಾಯಣ ಸ್ವಾಮಿ ಅವರನ್ನು ಕೇಳಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಈ ಮೂಲಕ ನಾರಾಯಣಸ್ವಾಮಿ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಈಗ ಸಾಂಸ್ಕೃತಿಕ ಭಯೋತ್ಪಾದನೆ ಮಾಡುತ್ತಿದೆ. ಪಠ್ಯ ಪುಸ್ತಕ ವಿಚಾರದಲ್ಲಿ ಈ ರೀತಿ ಮಾಡುತ್ತಿದ್ದಾರೆ. ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ ಎಂದು ಕಿಡಿಕಾರಿದರು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಈ ಸಲ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ನಮ್ಮ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಧಾರವಾಡ, ಹಾವೇರಿಯಲ್ಲಿ ಪ್ರಚಾರ ನಡೆಸುತ್ತಿದ್ದೇನೆ ಎಂದರು.
ಸಿದ್ದರಾಮಯ್ಯಗೆ ಆರ್‌ಎಸ್‌ಎಸ್ ಪುಸ್ತಕ ಕಳುಹಿಸುವೆ: ಸಿ.ಟಿ.ರವಿ
ಪಿಎಸ್‌ಐ ಅಭ್ಯರ್ಥಿಗಳ ಮನವಿ: ಇದೇ ವೇಳೆ ಪಿಎಸ್‌ಐ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಯಾವುದೇ ಕಾರಣಕ್ಕೂ ಮರುಪರೀಕ್ಷೆಗೆ ಅವಕಾಶ ಮಾಡಿಕೊಡಬೇಡಿ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿ ಎಂದು ಒತ್ತಾಯಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಜತೆಗೆ ಸರ್ಕಾರ ಚೆಲ್ಲಾಟ ಆಡುತ್ತಿದೆ. ಪಿಎಸ್‌ಐ ಹಗರಣದ ಬಗ್ಗೆ ಒಂದು ಕಡೆ ತನಿಖೆ ನಡೆಯುತ್ತಿದೆ. ಹೀಗಿರುವಾಗ ಮರು ಪರೀಕ್ಷೆಗೆ ಆದೇಶ ಮಾಡಿದ್ದು ಏಕೆ? ಸಿಐಡಿ ಈಗಾಗಲೇ ನಮ್ಮನ್ನು ವಿಚಾರಣೆ ಮಾಡಿದೆ. ಇನ್ನೂ ಹತ್ತು ತನಿಖಾ ಸಂಸ್ಥೆಗಳು ನಮ್ಮನ್ನು ವಿಚಾರಣೆ ಮಾಡಲಿ. ತಪ್ಪಿತಸ್ಥರಿಗೆ ಶಿಕ್ಷಯಾಗಲಿ, ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡಲಿ. ನಾವು ಕಾನೂನು ಹೋರಾಟಕ್ಕೂ ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿದ್ದರಾಮಯ್ಯ, ಸರ್ಕಾರದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ