
ಕಲಬುರಗಿ (ಜೂ.12): ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ದಿವ್ಯಾ ಹಾಗರಗಿ ಸೇರಿದಂತೆ 8 ಮಂದಿಯ ಜಾಮೀನು ಅರ್ಜಿಯು ಮೂರನೇ ಬಾರಿಯೂ ವಜಾಗೊಂಡಿದೆ. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.
ದಿವ್ಯಾ ಹಾಗರಗಿ, ಆರ್.ಡಿ.ಪಾಟೀಲ ಸಹೋದರ ಮಹಾಂತೇಶ ಡಿ.ಪಾಟೀಲ, ಅಭ್ಯರ್ಥಿ ಶ್ರೀಧರ ಪವಾರ, ಪರೀಕ್ಷಾ ಮೇಲ್ವಿಚಾರಕರಾದ ಅರ್ಚನಾ ಹೊನಗೇರಿ, ಸಾವಿತ್ರಿ ಕಾಬಾ, ಆಶ್ರಯದಾತ ಕಾಳಿದಾಸ, ಮಲ್ಲಿಕಾರ್ಜುನ ಮೇಳಕುಂದಿ, ಅಕ್ರಮಕ್ಕೆ ಸಹಾಯ ಮಾಡಿರುವ ಶರಣಬಸಪ್ಪ ಇವರೆಲ್ಲರ ಜಾಮೀನು ಅರ್ಜಿ ವಜಾ ಮಾಡಿ ಕಲಬುರಗಿಯ ಒಂದನೇಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಹೇಮಾವತಿ ಆದೇಶಿಸಿದ್ದಾರೆ. ಹೀಗಾಗಿ ದಿವ್ಯಾ ಸೇರಿ 8 ಜನರಿಗೆ ಇನ್ನೂ ಜೈಲೇ ಗತಿ ಎಂಬಂತಾಗಿದೆ. ಸಿಐಡಿ ಪರವಾಗಿ ಸರಕಾರಿ ಅಭಿಯೋಜಕ ನರಸಿಂಹಲು ಎಸ್.ಆರ್ ವಾದ ಮಂಡಿಸಿದ್ದರು. ಈ ಎಲ್ಲಾ ಆರೋಪಿಗಳು ಕಳೆದ 2 ತಿಂಗಳಿಂದ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಪಿಎಸ್‌ಐ ಅಕ್ರಮ: ಆರ್‌ಡಿಪಿ ಬಲಗೈ ಬಂಟರ ಕೊಡುಗೆಯೇ ಅಪಾರ..!
ಮೊದಲ ರ‍್ಯಾಂಕ್ ಪಡೆದಿದ್ದ ಜೆಡಿಎಸ್ ಮುಖಂಡನ ಪುತ್ರನ ಬಂಧನ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಮೊದಲ ರ‍್ಯಾಂಕ್ ಪಡೆದಿದ್ದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಜುಟ್ಟನಹಳ್ಳಿಯ ಜೆಡಿಎಸ್ ಮುಖಂಡರೊಬ್ಬರ ಪುತ್ರ ಜೆ.ಕುಶಾಲ್ ಕುಮಾರ್ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬೆಂಗಳೂರಿನ ಹಲಸೂರು ಸಮೀಪದ ಸೇಂಟ್ ಆನ್ಸ್ ಕಾಲೇಜಿನ ಕೇಂದ್ರದಲ್ಲಿ ಕುಶಾಲ್ ಪರೀಕ್ಷೆ ಬರೆದಿದ್ದು, ಒಎಂಆರ್ ಶೀಟ್ ತಿದ್ದುಪಡಿ ಮಾಡಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ ಆರೋಪವಿದೆ. ಈ ಸಂಬಂಧ ಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಆತನನ್ನು ಮಂಗಳವಾರ ಸಿಐಡಿ ಬಂಧಿಸಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಪೊಲೀಸರು, ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಎಲ್ಲ ಅಭ್ಯರ್ಥಿಗಳ ಒಎಂಆರ್ ಶೀಟ್ ಹಾಗೂ ಕಾರ್ಬನ್ ಒಎಂಆರ್ ಶೀಟ್‌ಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ಪರಿಶೀಲನೆ ವೇಳೆ ಕುಶಾಲ್ ಒಂಎಂಆರ್ ಶೀಟ್ ಕೂಡ ತಿದ್ದುಪಡಿಯಾಗಿರುವುದು ದೃಢಪಟ್ಟಿದೆ. ಈ ಮಾಹಿತಿ ಆಧರಿಸಿ ಮಾಗಡಿ ತಾಲೂಕಿನ ಜುಟ್ಟನಹಳ್ಳಿಯಲ್ಲಿರುವ ಆತನ ಮನೆಯಿಂದಲೇ ಆರೋಪಿಯನ್ನು ವಶಕ್ಕೆ ಪಡೆದು ಕರೆತರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
PSI Recruitment Scam; ವಿವಾದಕ್ಕೆ ಕಾರಣವಾಗಿದ್ದ ಅಭ್ಯರ್ಥಿ ದರ್ಶನ್ ಗೌಡ ಸೇರಿ ಮೂವರು ಅರೆಸ್ಟ್
2ನೇ ಪತ್ರಿಕೆಯಲ್ಲಿ 137 ಅಂಕ: ಮಾಗಡಿ ತಾಲೂಕಿನ ಪ್ರಭಾವಿ ಜೆಡಿಎಸ್ ಮುಖಂಡ ಹಾಗೂ ಪ್ರಗತಿ ಪರ ರೈತ ಜುಟ್ಟನಹಳ್ಳಿ ಜಯರಾಮ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಕ್ರಿಯವಾಗಿದ್ದಾರೆ. ಅವರು ತಾ.ಪಂ. ಮಾಜಿ ಸದಸ್ಯರು ಸಹ ಆಗಿದ್ದಾರೆ. ಜಯರಾಮ್ ಅವರಿಗೆ ಇಬ್ಬರು ಮಕ್ಕಳಿದ್ದು, ಕುಶಾಲ್ ಹಿರಿಯ ಪುತ್ರನಾಗಿದ್ದಾನೆ. ಪಿಎಸ್‌ಐ ಆಗುವ ಕನಸು ಕಂಡಿದ್ದ ಕುಶಾಲ್, ಬೆಂಗಳೂರಿನ ವಿಜಯನಗರದ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಸಹ ಪಡೆದಿದ್ದ. ಇತ್ತ ಮಗನ ಕನಸು ಈಡೇರಿಸಲು ಮುಂದಾದ ಜಯರಾಮ್, ತಮ್ಮ ಪ್ರಭಾವ ಬಳಸಿ ಮಗನಿಗೆ ಪಿಎಸ್‌ಐ ಹುದ್ದೆ ಕೊಡಿಸಲು ಯತ್ನಿಸಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ