
ಬೆಂಗಳೂರು (ಆ.21): ಅಡಿಕೆ ಮೇಲಿನ ಜಿಎಸ್‌ಟಿ ರದ್ದುಗೊಳಿಸಿ ಆಮದು ಅಡಿಕೆಯ ಅಬಕಾರಿ ಸುಂಕ ಹೆಚ್ಚಿಸಲು ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುವಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿದೇಶಿ ಅಡಿಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ.110ರಷ್ಟುಕಡಿಮೆ ಮಾಡಿ, ನಾಡಿನ ರೈತರು ಬೆಳೆಯುವ ಅಡಿಕೆ ಮೇಲಿನ ಜಿಎಸ್‌ಟಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ. ಹಿಂದಿನ ಕಾಂಗ್ರೆಸ್ ಸರ್ಕಾರ, ಕೊಳೆರೋಗದಿಂದ ಕಂಗಾಲಾದ, ಮತ್ತಿತರ ಸಮಸ್ಯೆಗಳಿಗೆ ಸಿಲುಕಿದ್ದ ಅಡಿಕೆ ಬೆಳೆಗಾರರಿಗೆ 40 ಕೋಟಿ ರು. ಪರಿಹಾರ ನೀಡಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಡಿಕೆ ಸುಲಿಯುವ ಯಂತ್ರ, ಸಂಸ್ಕರಣಾ ಯಂತ್ರ ಮತ್ತು ಘಟಕಗಳಿಗೆ ಸೇರಿದಂತೆ ಇನ್ನಿತರೆ ಅಗತ್ಯಗಳಿಗೆ ಸಬ್ಸಿಡಿ ನೀಡಿತ್ತು ಎಂದು ಹೇಳಿದ್ದಾರೆ.
ಮಲೆನಾಡು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ತೆರಳಿದ್ದಾಗ ಮಲೆನಾಡಿನ ರೈತರು ಮತ್ತು ಅಡಿಕೆ ಬೆಳೆಗಾರರು ತಮ್ಮನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅಡಿಕೆ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತ್ತಿದೆ. ಸಾಲದ್ದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಿಕೆ ಗೊನೆಗಳು ನೆಲೆಕಚ್ಚುತ್ತಲೇ ಇವೆ. ಇದರಿಂದ ಸಣ್ಣ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಮಟ್ಟದ ಬೆಳೆಗಾರರ ಆದಾಯ ಅಷ್ಟಕಷ್ಟೆಎನ್ನುವಂತಾಗಿದೆ. ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ಅಡಿಕೆಯ ಮೇಲೆ ಜಿಎಸ್‌ಟಿ ಹೆಚ್ಚಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಈ ಹಿಂದೆ ಅಡಿಕೆಯ ಕನಿಷ್ಠ ಆಮದು ದರ 110 ರು. ಇದ್ದಾಗ ಕ್ವಿಂಟಾಲ್ ಅಡಿಕೆ ಬೆಲೆ ಸರಾಸರಿ 75 ಸಾವಿರ ರು. ಇತ್ತು. ಈಗ ಕನಿಷ್ಠ ಆಮದು ದರ 251ರು. ಇದೆ. ಆದರೂ ಅಡಿಕೆ ಬೆಲೆ ಕ್ವಿಂಟಾಲ್‌ಗೆ 50 ಸಾವಿರ ರು.ಗೆ ಕುಸಿದಿದೆ. ಇದಕ್ಕೆ ಕಾರಣ ವ್ಯಾಪಕ ಅಡಿಕೆ ಕಳ್ಳ ಸಾಗಣೆ, ಸರ್ಕಾರಿ ಒಡೆತನದ ಬಂದರುಗಳು ಅದಾನಿ ಮುಂತಾದ ಖಾಸಗಿ ಒಡೆತನಕ್ಕೆ ಹೋದ ಬಳಿಕ ಅಡಿಕೆ ಕಳ್ಳ ಸಾಗಣೆ ಹೆಚ್ಚಾಗಿದ್ದು, ಪ್ರತಿ ವರ್ಷ ಸರ್ಕಾರಕ್ಕೆ ಸುಮಾರು 15 ಸಾವಿರ ಕೋಟಿ ರು. ತೆರಿಗೆ ನಷ್ಟವಾಗುತ್ತಿದೆ ಎನ್ನುವ ವರದಿಗಳಿವೆ.
26ರಂದು ಸಿದ್ದರಾಮಯ್ಯ ಕೊಡಗಿಗೆ ಬರಲಿ ನೋಡೋಣ: ಬೋಪಯ್ಯ
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಪ್ರಚಾರಕ್ಕೆಂದು ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಲೆನಾಡಿನಲ್ಲಿ ಅಡಿಕೆ ಸಂಶೋಧನಾ ಕೇಂದ್ರ ತೆರೆಯುವುದಾಗಿ ಹೇಳಿ ಹೋದವರು ಇವತ್ತಿಗೂ ಈ ವಿಚಾರದ ಬಗ್ಗೆ ಗಮನ ಹರಿಸಿಲ್ಲ. ತೀರ್ಥಹಳ್ಳಿಯವರೇ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಡಿಕೆ ಸಮಸ್ಯೆ ಬಗೆಹರಿಸುವ ಟಾಸ್ಕ್ ಪೋರ್ಸ್ ಅಧ್ಯಕ್ಷರೇ ಆಗಿದ್ದಾರೆ. ಆದರೆ, ಈ ಟಾಸ್‌್ಕಪೋರ್ಸ್ ಸಭೆಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಬೆಳೆಗಾರರ ಸಮಸ್ಯೆಗಳೂ ಇತ್ಯರ್ಥವಾಗುತ್ತಿಲ್ಲ. ಮಲೆನಾಡಿನ ಯುವಕರು ಇವುಗಳ ಬಗ್ಗೆ ಧ್ವನಿ ಎತ್ತುವುದನ್ನು ಬಿಟ್ಟು ತಮ್ಮ ಬದುಕಿಗೆ ಸಂಬಂಧವೇ ಇಲ್ಲದ ಸಾವರ್ಕರ್ ವಿಚಾರದಲ್ಲಿ ರಂಪಾಟ ಮಾಡುತ್ತಾ ತಮ್ಮ ಬದುಕನ್ನು ಬಲಿ ಕೊಡುತ್ತಿರುವುದು ಬಹಳ ದುಃಖದ ಸಂಗತಿ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ