ಆರ್.ಡಿ.ಪಾಟೀಲ್ ಬ್ಯಾಂಕ್ ಖಾತೆಗೆ ಹಣ ಜಮೆ, ಮೋಸ ಹೋದ ಅಭ್ಯರ್ಥಿಯಿಂದ ಸಿಐಡಿಗೆ ದೂರು?
ಆನಂದ್ ಎಂ. ಸೌದಿ
ಯಾದಗಿರಿ(ಆ.21): 545 ಪಿಎಸೈ ಹುದ್ದೆಗಳಷ್ಟೇ ಅಲ್ಲ, ನಡೆಯಬೇಕಿರುವ 402 ಪಿಎಸೈ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಿಐಡಿಗೆ ಬಲವಾದ ಸಾಕ್ಷ್ಯ ದೊರಕಿದೆ ಎನ್ನಲಾಗಿದೆ. 545 ಪಿಎಸೈ ಅಕ್ರಮದ ಆರೋಪಿ, ಬಂಧಿತ ಆರ್.ಡಿ. ಪಾಟೀಲ್ ಹೆಸರಿನ ಬ್ಯಾಂಕ್ ಖಾತೆಗೆ 20 ಲಕ್ಷ ರು.ಗಳ ಹಣ ಜಮೆ ಮಾಡಿದ ಎನ್ನಲಾದ ಬ್ಯಾಂಕ್ ರಸೀದಿಯೊಂದು ಇದೀಗ ಸಿಐಡಿ ಕಣ್ಣಿಗೆ ಬಿದ್ದಿದ್ದು, ಹಣ ಕೊಟ್ಟು ಮೋಸ ಹೋದ ಅಭ್ಯರ್ಥಿಯೊಬ್ಬ ಈ ವಿಚಾರವಾಗಿ ಸಿಐಡಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
undefined
ಕಲಬುರಗಿಯ ಆಕ್ಸಿಸ್ ಬ್ಯಾಂಕಿನ ಆರ್.ಡಿ.ಪಾಟೀಲ್ ಎಂಬ ಖಾತೆಗೆ (ಖಾತೆ ಸಂಖ್ಯೆ:916010079018482) ಫೆ.15 ರಂದು 20 ಲಕ್ಷ ರು.ಗಳ ಹಣವನ್ನು ಪಂಜಾಬ್ ನ್ಯಾಶನಲ್ ಬ್ಯಾಂಕಿನ ಮೂಲಕ ಜಮೆ ಮಾಡಲಾಗಿದೆ. ಆದರೆ ಜಮೆ ಮಾಡಿದ ಅಭ್ಯರ್ಥಿಯ ಯಾರು ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ. ಫೆಬ್ರವರಿ ಕೊನೆಯ ವಾರದಲ್ಲಿ 402 ಹುದ್ದೆಗಳ ಲಿಖಿತ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, 545 ಹುದ್ದೆಗಳ ಪಿಎಸೈ ಅಕ್ರಮದ ಆರೋಪ ಹಾಗೂ ಮತ್ತಿತರೆ ಕಾರಣಗಳಿಂದಾಗಿ 402 ಹುದ್ದೆಗಳ ಲಿಖಿತ ಪರೀಕ್ಷೆ ಈವರೆಗೂ ನಡೆದಿಲ್ಲ.
PSI Recruitment Scam: ಪಿಎಸ್‌ಐ ಹಗರಣ ಲೋಕಾಯುಕ್ತಕ್ಕೆ?, ಭ್ರಷ್ಟರಿಗೆ ನಡುಕ
ಕನ್ನಡಪ್ರಭ ಪ್ರಕಟಿಸಿದ್ದ ವರದಿ
545 ಹುದ್ದೆಗಳ ಪಿಎಸೈ (ಸಿವಿಲ್) ನೇಮಕಾತಿ ಪರೀಕ್ಷೆ 2021ರ ಅ.3ರಂದು ನಡೆದು, 2022ರ ಜ.18ರಂದು ತಾತ್ಕಾಲಿಕ ಆಯ್ಕೆ ನೇಮಕಾತಿ ಪಟ್ಟಿಪ್ರಕಟಗೊಂಡಿತ್ತು. ಈ ನಂತರದಲ್ಲಿ 402 ಹುದ್ದೆಗಳಿಗಾಗಿ ಲಿಖಿತ ಪರೀಕ್ಷೆ ನಡೆಯಲಿತ್ತು. 545 ಹುದ್ದೆಗಳ ಆಯ್ಕೆಪಟ್ಟಿಯಲ್ಲಿ ಹೆಸರು ಗಿಟ್ಟಿಸದವರು, ಮುಂಬರುವ 402 ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾಗಲು ಮಧ್ಯವರ್ತಿಗಳು ಲಕ್ಷಾಂತರ ರುಪಾಯಿಗಳ ‘ವ್ಯವಹಾರ’ಕ್ಕಿಳಿದಿದ್ದರು. ಇಂತಹುದ್ದೊಂದು ಅಕ್ರಮದ ಬಗ್ಗೆ ಕನ್ನಡಪ್ರಭ ಫೆ.3ರಂದು ಮತ್ತು ಏ.23 ರಂದು ವಿಶೇಷ ವರದಿ ಗಮನ ಸೆಳೆದಿತ್ತು.
ಅಭ್ಯರ್ಥಿ ಹಾಗೂ ಮಧ್ಯವರ್ತಿ ಎನ್ನಲಾದ ವ್ಯಕ್ತಿಗಳಿಬ್ಬರ ನಡುವಿನ ಸಂಭಾಷಣೆಯ ಧ್ವನಿಮುದ್ರಿಕೆ (ಆಡಿಯೋ)ದಲ್ಲಿ ಅಕ್ರಮದಲ್ಲಿ ದೊಡ್ಡ ದೊಡ್ಡವರ ಶಾಮೀಲಾದ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಮಾಜಿ ಸಚಿವ, ಚಿತ್ತಾಪುರ ಹಾಲಿ ಶಾಸಕ ಪ್ರಿಯಾಂಕ ಖರ್ಗೆ ಈ ಆಡಿಯೋ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, 402 ರ ತನಿಖೆಗೂ ಆಗ್ರಹಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
545ರಲ್ಲಿ ಪಾಸು ಮಾಡಿಸಿದವರ ಹೆಸರುಗಳ ಉದಾಹರಿಸಿ 402 ರಲ್ಲೂ ನೇಮಕ ಮಾಡಿಸುವ ಭರವಸೆ ನೀಡಲಾಗುತ್ತಿತ್ತು. ಇದರಲ್ಲಿ ಮೊದಲ ಕಂತಾಗಿ 20 ಲಕ್ಷ ರು.ಗಳ ಹಣ ನೀಡಲಾಗುತ್ತಿದೆ ಎಂಬ ಆರೋಪಗಳು ಪ್ರತಿಧ್ವನಿಸಿದ್ದವು.