
ಮೈಸೂರು (ಸೆ.03): ನಾಡ ದೇವತೆ ಚಾಮುಂಡೇಶ್ವರಿ ದೇವಾಲಯದ ಒಳಭಾಗದಲ್ಲಿ ಫೋಟೋಗ್ರಫಿ ಹಾಗೂ ದೇವಾಲಯದ ಒಳಗೆ ಮೊಬೈಲ್ ಬಳಕೆ ನಿಷೇಧ ಮಾಡಲಾಗುತ್ತದೆ. ಚಾಮುಂಡಿ ಬೆಟ್ಟ ಮತ್ತಷ್ಟು ಆಕರ್ಷಣೀಯವಾಗಿಸಲಾಗುತ್ತದೆ. ಜೊತೆಗೆ, ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲಾಗುವದು. ಆದರೆ, ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟ, ದೇವಿ ಕೆರೆ, ನಂದಿ ಪ್ರದೇಶಗಳನ್ನು ಮುಂದಿನ 5 ವರ್ಷಗಳಲ್ಲಿ ಅಭಿವೃದ್ಧಿ ಮಾಡಲು ಮಾಸ್ಟರ್ ಪ್ಲಾನ್ ತಯಾರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ ರೋಪ್ ವೇ ಯೋಜನೆ ಹಳೆಯ ಚಿಂತನೆಯಾಗಿದೆ. ಪರಿಸರವಾದಿಗಳ ವಿರೋಧದಿಂದ ಹಾಗೇಯೆ ನಿಂತು ಹೋಗಿದೆ. ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿಗೂ ಕ್ರಮವಹಿಸಲಾಗುವುದು. ಚಾಮುಂಡಿ ಬೆಟ್ಟದಲ್ಲಿ ಯಾವುದೇ ವಸ್ತ್ರ ಸಂಹಿತೆ ಜಾರಿ ಮಾಡುವುದಿಲ್ಲ. ಇನ್ನು ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ನೀಡಲಾಗಿದೆ. ಮತ್ತೊಂದೆಡೆ, ದೇವಾಲಯದ ಆಸ್ತಿ ಸರ್ವೆ, ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ಪ್ರಾಧಿಕಾರ ಕಾಯ್ದೆಯಿಂದ ರಾಜಮನೆತನ ಕಡೆಗಣನೆ: ಇಂಚಿಂಚು ಮಾಹಿತಿ ಬಿಚ್ಚಿಟ್ಟ ರಾಣಿ ಪ್ರಮೋದಾ ದೇವಿ!
ಕೇಂದ್ರ ಸರ್ಕಾರದ ಪ್ರಸಾದ ಯೋಜನೆ ಜಾರಿ ಮಾಡಬೇಕು. ಈ ಯೋಜನೆ ಬೇಕಾದ ಹೆಚ್ಚುವರಿ 60 ಕೋಟಿ ರೂ. ಹಣ ಪ್ರಾಧಿಕಾರ ಭರಿಸಲಿದೆ. 5 ಸಮೂಹ ದೇವಾಲಯಗಳ ಜೀರ್ಣೋದ್ಧಾರ ಮಾಡಲಾಗುವುದು. ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ, ಗಾಯತ್ರಿ ಅಮ್ಮನವರ ದೇವಾಲಯ, ಕೋಟೆ ಆಂಜನೇಯ ದೇವಾಲಯ, ಭುವನೇಶ್ವರಿ ದೇವಾಲಯ, ವರಹಾಸ್ವಾಮಿ ದೇವಾಲಯ ಜೀರ್ಣೋದ್ಧಾರ ಮಾಡಲಾಗುವುದು. ದೇವಾಲಯ ಒಳಭಾಗದಲ್ಲಿ ಫೋಟೋಗ್ರಫಿ ನಿಷೇಧ ಮಾಡಲಾಗುವುದು. ದೇವಾಲಯದ ಒಳಗೆ ಮೊಬೈಲ್ ಬಳಕೆ ನಿಷೇಧಿಸಲಾಗುವುದು. ಇನ್ನು ಚಾಮುಂಡೇಶ್ವರಿ ದೇವಾಲಯದ ಸಿಬ್ಬಂದಿಗಳಿಗೆ ವೈದ್ಯಕೀಯ ಸೌಲಭ್ಯ ಮಾಡಲಾಗುವುದು. ಶಾಶ್ವತ ಸಿಬ್ಬಂದಿಯ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಚಾಮುಂಡಿ ಬೆಟ್ಟ ಮತ್ತಷ್ಟು ಆಕರ್ಷಣೀಯವಾಗಬೇಕು. ದಾಸೋಹ ಭವನದಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲಾಗುವುದು. ರುಚಿಕರ ಊಟ ವಿತರಣೆಗೆ ಕ್ರಮವಹಿಸಲಾಗಿದೆ. ದಾಸೋಹ ಭವನ ಅಭಿವೃದ್ಧಿಗೆ ಶೀಘ್ರದಲ್ಲೇ ಕ್ರಮವಹಿಸಲಾಗುವುದು. ಚಾಮುಂಡಿ ಬೆಟ್ಟದ ಪ್ರಾಧಿಕಾರದಲ್ಲಿ ದುಡ್ಡಿಗೆ ಕೊರತೆ ಇಲ್ಲ. 162 ಕೋಟಿ ರೂ. ನಿಶ್ಚಿತ ಠೇವಣಿ ಇದೆ. ಪ್ರತಿವರ್ಷ ಆದಾಯ ಬರುತ್ತಿದೆ. ಖರ್ಚು ಮಾಡಿಯೂ ಆದಾಯ ಉಳಿಯುತ್ತಿದೆ. 2023-24ರಲ್ಲಿ 49.64 ಕೋಟಿ ರೂ. ಆದಾಯ. ಖರ್ಚು 21 ಕೋಟಿ ರೂ. ಆದರೆ 28.18 ಕೋಟಿ ರೂ. ಉಳಿತಾಯ ಆಗಲಿದೆ. ಪ್ರತಿವರ್ಷ ಭಕ್ತರು ಹೆಚ್ಚಾಗುತ್ತಿದ್ದಾರೆ, ಆದಾಯ ಹೆಚ್ಚುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.
ನಮ್ ಶಾಲೇಲಿ ಟೀಚರ್ ಇಲ್ಲ, ನಿವೇ ಪಾಠ ಮಾಡಿ ಎಂದು ಬಿಇಒ ಕಚೇರಿಗೆ ಬಂದ ಮಕ್ಕಳು!
ಪ್ರಾಧಿಕಾರದ ಉದ್ದೇಶ: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆದಿದೆ. ಹಿಂದಿನ ಸಮಿತಿ ಕ್ಷೇತ್ರ ಅಭಿವೃದ್ಧಿ ಹಾಗೂ ಭಕ್ತರಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡ್ತಿತ್ತು. ಮಹದೇಶ್ವರ ಬೆಟ್ಟದ ರೀತಿ ಚಾಮುಂಡೇಶ್ವರಿ ಕ್ಷೇತ್ರಕ್ಕೂ ಪ್ರಾಧಿಕಾರ ರಚನೆ ಮಾಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಆಗಬೇಕಿದೆ. ಚಾಮುಂಡೇಶ್ವರಿ ಕ್ಷೇತ್ರ ಹಾಗೂ ಕ್ಷೇತ್ರಕ್ಕೆ ಸೇರಿದ ದೇವಾಲಯಗಳ ಅಭಿವೃದ್ಧಿ ಪ್ರಾಧಿಕಾರದ ಉದ್ದೇಶವಾಗಿದೆ. ಭಕ್ತರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಉದ್ದೇಶ ಹೊಂದಿದೆ. ಈ ಹಿಂದೆ ಬಸ್ ಸ್ಟ್ಯಾಂಡ್, ಪಾರ್ಕಿಂಗ್ ಹಾಗೂ ಸ್ಟಾಲ್‌ಗಳನ್ನ ನಿರ್ಮಾಣ ಮಾಡಲಾಗಿತ್ತು. ಬಾಕಿಯಿರುವ ಯೋಜನೆಗಳು ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದೆ, ಕೂಡಲೇ ಬಗೆಹರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ